
ಬೆಳಗ್ಗೆ ಬೇಗನೆ ಏಳುವುದು ಅಂದರೆ, ಕೆಲವರಿಗೆ ಇಷ್ಟ. ಹಲವರಿಗೆ ಕಷ್ಟ. ನಾನು ನೈಟ್ ಔಲ್, ಬೆಳಗ್ಗೆ ಬೇಗ ಏಳೋದು ಮಾತ್ರ ಸಾಧ್ಯವಾಗಲ್ಲ, ರಾತ್ರಿ ಅಂದರೆ ನಂಗಿಷ್ಟ ಅನ್ನೋರು ನೀವಾಗಿರಬಹುದು. ಆದರೆ, ಇನ್ನೂ ಕೆಲವರಿಗೆ ಬೆಳಗ್ಗೆ ಬೇಗನೆದ್ದು ರಾತ್ರಿ ಬೇಗನೆ ಮಲಗಿದರೇನೇ ಸಮಾಧಾನ. ಬೆಳಗ್ಗೆ ಎದ್ದು, ವಾಕ್ ಮಾಡುವುದೋ, ಸೈಕ್ಲಿಂಗ್, ರನ್ನಿಂಗ್ ಜಾಗಿಂಗ್, ಜಿಮ್ ಹೀಗೆ ಹಲವು ಆಸಕ್ತಿಯ ಫಿಟ್‌ನೆಸ್ ಮಂತ್ರಗಳಿಗೆ ಅಡ್ಜಸ್ಟ್ ಮಾಡಿಕೊಂಡವರು ಅನೇಕರು. ಇನ್ನೂ ಕೆಲವರಿಗೆ, ಬೆಳಗ್ಗೆ ಸೊಂಪಾದ ನಿದ್ದೆ ಮಾಡದಿದ್ದರೆ ನೆಮ್ಮದಿ ಇಲ್ಲ. ಸೂರ್ಯ ನೆತ್ತಿಗೇರಿದರೂ ಸೋಮಾರಿಯಂತೆ ಹಾಸಿಗೆ ಬಿಟ್ಟೇಳಲು ಮನಸ್ಸಾಗದವರೂ ಇದ್ದಾರೆ. ರಾತ್ರಿಯಿಡೀ, ಫೋನ್, ಸಿನೆಮಾ ಅಂತ ನೋಡಿ ತಡವಾಗಿ ನಿದ್ದೆ ಮಾಡಿ ಬೆಳಗ್ಗೆ ಏಳಲು ಸಾಧ್ಯವಾಗದವರೂ ಇನ್ನೊಂದು ಕಡೆ. ಇನ್ನೂ ಕೆಲವರಿಗೆ ಬೆಳಗ್ಗೆ ಬ್ಲಾಂಕೆಟ್ ಒಳಗೆ ತೂರಿಕೊಂಡು ಸುಖನಿದ್ರೆ ಮಾಡುವುದೇ ಹಿತವಾದ ಅನುಭವ. ಚಳಿಗಾಲವಾದರಂತೂ ಕತೆ ಮುಗಿದಂತೆ. ಕೆಲಸವಿಲ್ಲದ ರಜಾ ದಿನಗಳಲ್ಲಂತೂ ಹತ್ತು ಗಂಟೆಯಾದರೂ ಹಾಸಿಗೆಯಿಂದೇಳಲು ಮನಸ್ಸೇ ಆಗದು.
ಹಿರಿಯರು ಬೆಳಗ್ಗೆ ಬೇಗ ಏಳುವುದನ್ನು ಒಳ್ಳೆಯ ಅಭ್ಯಾಸ ಎಂದೇ ಹೇಳುತ್ತಲೇ ಬಂದಿದ್ದಾರೆ. ಪುರಾಣ, ಯೋಗ ಇತ್ಯಾದಿಗಳೂ ಇದನ್ನೇ ಪುಷ್ಟೀಕರಿಸುತ್ತವೆ. ವೈದ್ಯರೂ ಕೂಡಾ ಇದನ್ನೇ ಹೇಳುತ್ತಾರೆ. ಆಚಾರ್ಯ ಚಾಣಕ್ಯ ಕೂಡ ಇದನ್ನೇ ಹೇಳುತ್ತಾರೆ. ಬೆಳಗ್ಗೆ ಬೇಗನೆದ್ದರೆ, ಆರೋಗ್ಯವೂ ಸೇರಿದಂತೆ ಅನೇಕ ಲಾಭಗಳು ನಮ್ಮದಾಗುತ್ತವೆ. ಹಾಗಾದರೆ ಬನ್ನಿ, ಬೆಳಗ್ಗೆ ಬೇಗನೆ ಏಳುವುದರಿಂದ ಏನೆಲ್ಲ ಲಾಭಗಳಿವೆ ಎಂಬುದನ್ನು ನೋಡೋಣ.
1) ಸಂಜೆಯ ವ್ಯಾಯಾಮಗಳಿಗಿಂತ ಬೆಳಗ್ಗೆ ಬೇಗನೆದ್ದು ವ್ಯಾಯಾಮ ಮಾಡುವುದು ಯಾವಾಗಲೂ ಸೂಕ್ತ. ದೇಹಕ್ಕೆ ಎದ್ದ ಕೂಡಲೇ ವ್ಯಾಯಾಮದ ಬೇಕಾಗುತ್ತದೆ. ಆದರೆ, ಸಂಜೆಯ ಹೊತ್ತು ದೇಹವನ್ನು ನಿಧಾನವಾಗಿ ರಿಲ್ಯಾಕ್ಸ್ ಮಾಡಿಸಬೇಕು. ಅದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಬೆಳಗ್ಗಿನಿಂದ ಸಂಜೆಯವರೆಗೆ ಕೆಲಸಗಳನ್ನು ಮಾಡಿ, ಕೊನೆಗೆ ಕೆಲಸಗಳನ್ನು ಕಡಿಮೆ ಮಾಡ್ತಾ ನಂತರ ರಿಲ್ಯಾಕ್ಸ್ ಮಾಡುವುದು, ನಿದ್ದೆ ಮಾಡುವುದು ನಿತ್ಯದ ಕಾಯಕವಾಗಬೇಕೇ ಹೊರತು, ಬೆಳಗ್ಗೆ ಲೇಟಾಗಿ ಎದ್ದು, ಬೇಕೋ ಬೇಡ್ವೋ ಅಂತ ಆಫೀಸಿಗೆ ಹೋಗಿ ಬಂದ ಮೇಲೆ ಜಿಮ್‌ಗೆ ಹೋಗಿ ದೇಹವನ್ನು ಇನ್ನೂ ದಂಡಿಸುವುದು ಒಳ್ಳೆಯದಲ್ಲ. ಆಯುರ್ವೇದ ಕೂಡಾ ಇದನ್ನೇ ಹಳುತ್ತದೆ. ದಿನವೂ ಬೇಗನೆದ್ದು, ಕನಿಷ್ಟ ಅರ್ಧ ಗಂಟೆಯಾದರೂ ವ್ಯಾಯಾಮಕ್ಕೆ ಸಮಯ ನೀಡುವುದರಿಂದ ಆರೋಗ್ಯದಲ್ಲಿ ಒಳ್ಳೆಯ ಬದಲಾವಣೆ ಕಾಣಬಹುದು.
2) ನೀವು ಚುರುಕಾಗಬೇಕೋ, ಹಾಗಿದ್ದರೆ ಬೆಳಗ್ಗೆ ಬೇಗ ಏಳಿ. ಬೇಗನೆದ್ದು ವ್ಯಾಯಾಮ ಮಾಡಿ ಶಿಸ್ತಿನಿಂದ ಕಚೇರಿ ಕೆಲಸಗಳನ್ನು ಆರಂಭಿಸಿದಾಗ ಬದುಕಿನಲ್ಲೂ ಶಿಸ್ತು ಬರುತ್ತದೆ. ಬುದ್ಧಿಯೂ ಚುರುಕಾಗುತ್ತದೆ. ಕೆಲಸದಲ್ಲಿ ಲವಲವಿಕೆಯೂ ಹೆಚ್ಚಾಗುತ್ತದೆ.
3) ಬೆಳಗ್ಗಿನ ಸೂರ್ಯನ ಬೆಳಕು ಚರ್ಮವನ್ನು ಸರ್ಶಿಸುವ ಸುಖವೇ ಒಂದು ಅನುಭೂತಿ. ಆರೋಗ್ಯಕರವಾದ ವಿಟಮಿನ್ ಡಿ ನೈಸರ್ಗಿಕವಾಗಿ ಸೂರ್ಯನ ಮೂಲದಿಂದ ಪಡೆಯಲು ಸಾಧ್ಯವಾಗುತ್ತದೆ.
Chanakya Niti: ಈ 6 ಸ್ಥಳಗಳಿಗೆ ಎಂದಿಗೂ ಭೇಟಿ ನೀಡಬಾರದು ಅಂತಾರೆ ಚಾಣಕ್ಯ!
4) ಬೆಳಗ್ಗೆ ಬೇಗನೆ ಏಳುವುದರಿಂದ ಮಾನಸಿಕವಾಗಿ ಲಾಭವಿದೆ. ಬೇಗನೆದ್ದು, ಹೊರಗೆ ಸ್ವಲ್ಪ ಹೊತ್ತು ವಾಕ್ ಮಾಡಿ ಬಂದರೆ, ಪಕ್ಷಿಗಳ ಚಿಲಿಪಿಲಿ, ಪ್ರಕೃತಿಯ ತಂಗಾಳಿ ಇತ್ಯಾದಿಗಳಿಂದ ಮನಸ್ಸು ಉಲ್ಲಸಿತವಾಗುತ್ತದೆ. ಕೆಲಸ ಮಾಡಲು ಮಾನಸಿಕ ಚುರುಕುತನವೂ ಹೆಚ್ಚಾಗುತ್ತದೆ. ಮಾನಸಿಕವಾಗಿ ಸಾಮರ್ಥ್ಯ ಹೆಚ್ಚಾಗುತ್ತದೆ. ಮನಸ್ಸಿಗೆ ಸುಖ, ನೆಮ್ಮದಿ ಸಿಗುತ್ತದೆ.
5) ನಿತ್ಯವೂ ಯಾವ ಕೆಲಸಗಳನ್ನು ಮಾಡಿ ಮುಗಿಸಬೇಕು ಎಂಬುದರ ಬಗ್ಗೆ ಪಕ್ವತೆ ಬರುತ್ತದೆ. ಹಾಗೂ ಅಂದುಕೊಂಡ ಹಾಗೆ ಕೆಲಸಗಳನ್ನು ಮಾಡಿ ಮುಗಿಸಲು ಸಾಧ್ಯವಾಗುತ್ತದೆ. ಫೋಕಸ್ ಹೆಚ್ಚಾಗುತ್ತದೆ.
6) ದೇಹದ ಪಚನಕ್ರಿಯೆ ಚುರುಕುಗೊಳ್ಳುತ್ತದೆ. ಇದರಿಂದ ಒಟ್ಟು ಆರೋಗ್ಯದಲ್ಲಿ ಬದಲಾವಣೆ ಕಾಣುತ್ತದೆ.
7) ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮಲ್ಲಿ ನೆಮ್ಮದಿ, ಸಂತೋಷ ಹೆಚ್ಚಾಗುತ್ತದೆ. ಇಡೀ ದಿನ ಉಲ್ಲಸಿತರಾಗಿ, ಖುಷಿಯಿಂದ ಇರಲು ಸಾಧ್ಯವಾಗುತ್ತದೆ. ಜೊತೆಗೆ ರಾತ್ರಿ ದೇಹ ಬಳಸಿ ಸೊಂಪಾದ ನಿದ್ದೆಯೂ ಬರುತ್ತದೆ. ರಾತ್ರಿ ಸುಖವಾದ ನಿದ್ದೆ, ಹಗಲು ಚುರುಕಾಗಿ ಕೆಲಸಗಳು, ಇದಕ್ಕಿಂತ ಹೆಚ್ಚು ಬದುಕಿನಲ್ಲಿ ಇನ್ನೇನು ಬೇಕು?
ಚಾಣಕ್ಯ ನೀತಿ: ಪುರುಷ ಯಾವಾಗ ಸ್ತ್ರೀಯ ಮೋಹಪಾಶದಲ್ಲಿ ಸಿಲುಕಿ ಹಾಳಾಗೋದು ಹೇಗೆ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.