ಕಣ್ಣುಗಳಿಂದ ಕೊರೋನಾ ಹರಡಬಹುದಾ?

By Suvarna NewsFirst Published Mar 16, 2020, 3:38 PM IST
Highlights

ಕೆಮ್ಮಿನಿಂದ, ಸೀನುವುದರಿಂದ ಕೊರೋನಾ ಹರಡುತ್ತದೆ ಎಂಬುದು ತಿಳಿದ ವಿಷಯ. ಆದರೆ ಕಣ್ಣುಗಳಿಂದಲೂ ಕೊರೋನಾ ಹರಡುವ ಸಾಧ್ಯತೆ ಇದೆಯೇ? ಒಂದು ವೇಳೆ ಇದೆ ಅಂತಾದರೆ ಲಕ್ಷಣಗಳೇನಿರುತ್ತದೆ, ನಾವೆಲ್ಲರೂ ಯಾವೆಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?

ಡಾ.ಸಂಜನಾ ವತ್ಸ

ಕನ್ಸಲ್ಟೆಂಟ್‌ ಆಫ್ತಾಮೊಲಾಜಿಸ್ಟ್‌

ಎಲ್ಲೆಲ್ಲೂ ಕೋವಿಡ್‌19 ಭೀತಿ. ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಎಲ್ಲಿ ತಮಗೆ ಸೋಂಕು ತಗುಲಬಹುದೋ ಅನ್ನುವ ಭಯ. ಈ ಆತಂಕವನ್ನು ನಿರಾಧಾರ ಎನ್ನುವ ಹಾಗಿಲ್ಲ. ಏಕೆಂದರೆ ಎಷ್ಟೇ ಹುಷಾರಾಗಿದ್ದರೂ ಸೂಕ್ಷ್ಮ ಲೋಪವೊಂದರಿಂದ ಇದು ಹರಡುವ ಸಾಧ್ಯತೆ ಇದೆ.

ಕೊರೋನಾ ಎಂಬುದು ಲ್ಯಾಟಿನ್‌ ಪದ. ಇದರರ್ಥ ಕಿರೀಟ. ತನ್ನ ಮೇಲ್ಮೈನಲ್ಲಿ ಕಿರೀಟ ರೂಪದಲ್ಲಿ ಸ್ಪೈಕ್‌ಗಳ ಸರಣಿ ಇರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಈ ವೈರಸ್‌ ಹರಡುವಲ್ಲಿ ಕಣ್ಣುಗಳು ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದು ಹಲವರಿಗೆ ತಿಳಿದಿಲ್ಲದ ವಿಚಾರ. ಕೆಮ್ಮು, ಸೀನುವಾಗ ಸಿಡಿಯುವ ಹನಿಗಳಿಂದ ಇದು ಹರಡುತ್ತದೆ. ಜೊತೆಗೆ ಸೋಂಕು ತಗುಲಿದ ವ್ಯಕ್ತಿಯನ್ನು ಮುಟ್ಟಿದ ನಂತರ ತಮ್ಮ ಕಣ್ಣುಗಳು/ಮೂಗು/ಬಾಯಿಯನ್ನು ಮುಟ್ಟಿಕೊಂಡಾಗ ಈ ಸೋಂಕು ಹರಡಬಹುದು.

ಲಸಿಕೆ ಸೃಷ್ಟಿಸೋಕೆ ಹೋಗಿ ಮಹಾಮಾರಿ ಸೃಷ್ಟಿಸಿತ್ತಾ ಚೀನಾ ಮತ್ತು ಅಮೆರಿಕ?

ಕಂಜಕ್ಟಿವೈಟೀಸ್‌ ಅಥವಾ ಮದ್ರಾಸ್‌ ಐ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ. ಇದು ಕೊರೋನಾದ ಬಂದಿರುವ ಸೂಚನೆ ಇರಬಹುದು.

ಕಾಂಜಂಕ್ಟಿವಿಟಿಸ್‌ ಅಥವಾ ಮದ್ರಾಸ್‌ ಐ ಲಕ್ಷಣಗಳು:

ಕಣ್ಣಿನಲ್ಲಿ ಕೆಂಪು, ನೀರು ತುಂಬಿಕೊಳ್ಳುವುದು, ತುರಿಕೆ, ನೋವು, ಕಣ್ಣಲ್ಲಿ ಹೀಚು ಅಥವಾ ಡಿಸ್‌ಚಾಜ್‌ರ್‍ ಮತ್ತು ಫೋಟೋಫೋಬಿಯಾ. ಸೋಂಕುಪೀಡಿದ ಕಣ್ಣಿನಿಂದ ಡಿಸ್‌ಚಾಜ್‌ರ್‍ ಆಗುತ್ತಿದ್ದರೆ ಅದು ಕೊರೋನಾದ ಲಕ್ಷಣವೂ ಇರಬಹುದು. ಈ ಸ್ರವಿಸುವಿಕೆ ಇನ್ನೊಬ್ಬರಿಗೆ ತಾಗಿದರೆ ಅವರಿಗೂ ಸೋಂಕು ಹರಡಬಹುದು. ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಇತ್ತೀಚೆಗೆ ವಿದೇಶ ಪ್ರವಾಸ ಮಾಡಿ ಬಂದಿರುವವರು ಕಂಜಕ್ಟಿವೈಟೀಸ್‌ ಮತ್ತು ಉಸಿರಾಟದ ತೊಂದರೆಯಂತಹ ಲಕ್ಷಣಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.

ವೈರಸ್‌ ಸೋಂಕಿನಿಂದ ಹೀಗಾಗಿರಬಹುದು

ಕೊರೋನಾವೈರಸ್‌ ಕಂಜಕ್ಟಿವಾ ಮೇಲೆ ಪರಿಣಾಮ ಬೀರಬಹುದು. ಇದು ಕಣ್ಣು ರೆಪ್ಪೆಗಳ ಒಳಭಾಗದ ಅಂಗಾಂಶ ಲೈನಿಂಗ್‌ನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಕಂಜಕ್ಟಿವೈಟಿಸ್‌ ಈ ರೋಗದ ಮೊಟ್ಟಮೊದಲ ಲಕ್ಷಣವಾಗಬಹುದು. ಇದು ಹೆಚ್ಚಾದಾಗ ನೇತ್ರ ತಜ್ಞರು ಪರೀಕ್ಷೆ ನಡೆಸುವ ಮೂಲಕ ರೋಗಿಯಲ್ಲಿ ಕೊರೋನಾ ವೈರಸ್‌ ಹರಡಿದೆಯೇ ಎಂಬುದನ್ನು ಪರೀಕ್ಷಿಸುತ್ತಾರೆ.

ನಾವು ಈ ಥರದ ಸಮಸ್ಯೆ ಕಂಡುಬಂದವರ ಬಳಿ ಓಡಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕು. ಈ ಸಮಸ್ಯೆ ಬಂದವರು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯಕೀಯ ಸಲಹೆಗಳನ್ನು ಪಡೆಯಬೇಕು. ಉಸಿರಾಟದ ತೊಂದರೆಯಂಥಾ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ತಜ್ಞ ಕಣ್ಣಿನ ವೈದ್ಯರನ್ನು ಸಂಪರ್ಕಿಸಿದರೆ ನಿಮಗೆ ಸೋಂಕು ಹಬ್ಬಿರುವ ಬಗ್ಗೆ ಖಚಿತತೆ ಸಿಗುತ್ತದೆ.

ಕೊರೋನಾ ವೈರಸ್‌ ಹೇಗೆ ಹರಡುತ್ತದೆ? ಇದರ ಲಕ್ಷಣಗಳೇನು?

ಯಾವೆಲ್ಲ ಮುನ್ನೆಚ್ಚರಿಕೆಗಳು?

ಮೊದಲ ಮತ್ತು ಅತ್ಯಂತ ಪ್ರಮುಖ ಅಂಶವೆಂದರೆ, ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಡಿ. ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಕೊಡಿ. ಇದರಿಂದ ಕೊರೋನಾ ವೈರಸ್‌ ಅಥವಾ ಇತರೆ ಯಾವುದೇ ವೈರಲ್‌ ಸೋಂಕುಗಳಿಂದ ರಕ್ಷಣೆ ಪಡೆಯಲು ಸಾಧ್ಯ.

- ಸಾರ್ವಜನಿಕ ಸ್ಥಳಗಳಲ್ಲಿ ಹೋಗುವಾಗ ಎನ್‌95/ಸರಳ ಸರ್ಜಿಕಲ್‌ ಮಾಸ್ಕ್‌ ಧರಿಸಿ

- ತಂಪಾದ ಪಾನೀಯ ಅಥವಾ ತಣ್ಣನೆಯ ಆಹಾರ ಪದಾರ್ಥಗಳ ಬಳಕೆ ಬೇಡ.

- ಆದಷ್ಟೂಬಿಸಿ ನೀರು ಮತ್ತು ಬಿಸಿ ಆಹಾರ ಪದಾರ್ಥಗಳನ್ನು ಸೇವಿಸಿ

- ನೀರು ಕುಡಿಯುತ್ತಲೇ ಇರಿ. ದೇಹ ಹೈಡ್ರೇಟ್‌ ಆಗಲಿ.

- ಕೈಗಳಿಗೆ ಧೂಳು ಹಿಡಿದಿದ್ದರೆ, ಆ ಕೈಗಳಿಂದ ಮುಖ, ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಬೇಡಿ.

- ಆಗಿಂದಾಗ್ಗೆ ಕೈಗಳನ್ನು ಸೋಪು ಮತ್ತು ನೀರಿನಲ್ಲಿ ಕನಿಷ್ಠ 20 ಸೆಕೆಂಡುಗಳ ಕಾಲ ತೊಳೆಯಿರಿ.

- ಆಲ್ಕೋಹಾಲ್‌ಯುಕ್ತ ಸ್ಯಾನಿಟೈಸರ್‌ ಬಳಸಿ.

- ಕಣ್ಣುಗಳ ರಕ್ಷಣೆಗೆ ಗಾಗಲ್ಸ್‌ ಅನ್ನು ಬಳಸಿ.

- ಆರೋಗ್ಯ ರಕ್ಷಣೆಯಲ್ಲಿ ತೊಡಗಿಕೊಂಡವರು ವೈದ್ಯಕೀಯ ಮಾಸ್ಕ್‌ ಧರಿಸಬೇಕು, ಗಾಗಲ್‌ ಹಾಕಿರಬೇಕು ಮತ್ತು ಮುಖಕ್ಕೆ ರಕ್ಷಾಕವಚ ಧರಿಸಬೇಕು. ಇದರಿಂದ ಸೋಂಕು ಪೀಡಿತ ರೋಗಿಯಿಂದ ಸೋಂಕು ಹರಡದಂತೆ ರಕ್ಷಣೆ ಪಡೆಯಬಹುದಾಗಿದೆ.

ಕೊರೋನಾ ಸಮಸ್ಯೆಗೆ ಈವರೆಗೆ ಲಸಿಕೆಯಾಗಲಿ/ವೈರಲ್‌ ನಿರೋಧಕ ಚಿಕಿತ್ಸೆ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸೋಂಕಿನ ಲಕ್ಷಣಗಳನ್ನು ಗಮನಿಸುವುದು ಮತ್ತು ಅದಕ್ಕೆ ಪೂರಕವಾದ ಚಿಕಿತ್ಸೆಗಳನ್ನು ನೀಡುವುದೊಂದೇ ಮಾರ್ಗ. ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯನ್ನು ಕೂಡಲೇ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವುದು ಅತ್ಯುತ್ತಮ ಮಾರ್ಗ.

click me!