Health Tips: ರಾತ್ರಿ ಕಾಣಿಸಿಕೊಳ್ಳುವ ಬೆರಳಿನ ನೋವಿಗೆ ಕಾರಣವೇನು? ಪರಿಹಾರ ಹೇಗೆ?

By Suvarna News  |  First Published Jun 8, 2023, 10:41 AM IST

ಅನೇಕರಿಗೆ ರಾತ್ರಿ ಸರಿಯಾಗಿ ನಿದ್ರೆ ಬರೋದಿಲ್ಲ. ಇದಕ್ಕೆ ನಾನಾ ಕಾರಣವಿದೆ. ಅದ್ರಲ್ಲಿ ಕೈ, ಬೆರಳು ನೋವು ಕೂಡ ಒಂದು. ಕೇಳೋಕೆ ಕ್ಷುಲ್ಲಕ ಎನ್ನಿಸಿದ್ರೂ ಈ ಬೆರಳು ನೋವು ವಿಪರೀತ ಸಮಸ್ಯೆ ನೀಡೋದು ಸುಳ್ಳಲ್ಲ.
 


ರಾತ್ರಿಯ ವೇಳೆ ನಿದ್ರೆಯ ಭಂಗಿ ಸರಿಯಾಗಿಲ್ಲ ಎಂದಾದರೆ ಶರೀರದ ಅಥವಾ ಕೈಗಳ ನೋವು ಕಾಣಿಸಿಕೊಳ್ಳುವುದು ಸಹಜ. ಇನ್ನು ಕೆಲವರಿಗೆ ಹಗಲಿನ ಕೆಲಸದ ಒತ್ತಡ ರಾತ್ರಿ ಕೈಗಳ ನೋವಿಗೆ ಕಾರಣವಾಗುತ್ತದೆ. ಕೈ ಅಥವಾ ಶರೀರದಲ್ಲಿನ ನೋವು ಸಾಮಾನ್ಯ ಸಂಗತಿಯಾದರೂ ಕೈ ಬೆರಳುಗಳ ನೋವು ವಿರಳವಾಗಿದೆ. ಇಂದು ಅನೇಕ ಮಂದಿ ಬೆರಳಿನ ನೋವಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರಿಂದ ಅವರ ನಿದ್ರೆಗೆ  ಭಂಗವಾಗುತ್ತಿದೆ.

ಕೈ ಅಥವಾ ಕೈ ಬೆರಳುಗಳಲ್ಲಿ ನೋವು (Pain) ಕಾಣಿಸಿಕೊಂಡರೆ ಅದು ನರಗಳ ಸಮಸ್ಯೆಯಾಗಿರಬಹುದು. ಇದರ ಹೊರತಾಗಿ ಯಾವುದಾದರೂ ಪೆಟ್ಟು, ಗಾಯ, ಬ್ಯಾಕ್ಟೀರಿಯಾ ಇನ್ಫೆಕ್ಷನ್ ಅಥವಾ ವೈರಲ್ (viral) ಇನ್ಫೆಕ್ಷನ್ ಕಾರಣದಿಂದ ಕೈ ಬೆರಳುಗಳಲ್ಲಿ ಜುಮುಗುಡುವಿಕೆ, ಸುಡುವಿಕೆ ಅಥವಾ ನೋವು ಕಾಣಿಸಬಹುದು. ಕೈ ಬೆರಳಿನಲ್ಲಿ ಉಂಟಾಗುವ ಇಂತಹ ಸಮಸ್ಯೆಗಳಿಗೆ ಕಾರಣ ಹಾಗೂ ಅದಕ್ಕೆ ಪರಿಹಾರ ಇಲ್ಲಿದೆ.

Latest Videos

undefined

ಬಿಸಿಲಿದ್ದರೆ ಟೈಟ್ ಜೀನ್ಸ್ ಧರಿಸೋ ಬಗ್ಗೆ ಯೋಚನೇನೂ ಮಾಡ್ಬೇಡಿ.. ಯಾಕ್ ಗೊತ್ತಾ?

ಈ ಕಾರಣದಿಂದ ರಾತ್ರಿ (Night) ಕೈನಲ್ಲಿ ಕಾಣಿಸುತ್ತೆ ನೋವು : 

ವಿಟಮಿನ್ ಕೊರತೆ: ವಿಟಮಿನ್ ಬಿ12 ಕೊರತೆಯಿಂದಾಗಿ ಶರೀರದಲ್ಲಿ ರಕ್ತಹೀನತೆ ಉಂಟಾಗುತ್ತದೆ. ರಕ್ತಹೀನತೆಯಿಂದಾಗಿ ನರಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದಲೇ ರಾತ್ರಿಯ ಸಮಯದಲ್ಲಿ ಕೈ ಬೆರಳುಗಳ ನೋವು ಕಾಣಿಸಿಕೊಳ್ಳುತ್ತದೆ. ವಿಟಮಿನ್ ಕೊರತೆಯಿಂದ ಶರೀರದ ಕಾರ್ಯಚಟುವಟಿಕೆಯಲ್ಲಿ ಬದಲಾವಣೆಗಳಾಗುತ್ತದೆ.

ಡಯಾಬಿಟೀಸ್: ಮಧುಮೇಹಿಗಳು ಅನೇಕ ಶಾರೀರಿಕ ಸಮಸ್ಯೆಯನ್ನು ಅನುಭವಿಸುತ್ತಾರೆ. ಮಧುಮೇಹ ಸಮಸ್ಯೆ ಹೊಂದಿರುವ ಹೆಚ್ಚಿನ ಜನರಿಗೆ ರಾತ್ರಿ ಮಲಗಿದಾಗ ಕೈ ಬೆರಳುಗಳಲ್ಲಿ ನೋವುಂಟಾಗುತ್ತದೆ. ವ್ಯಕ್ತಿಯ ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುವುದರಿಂದ ನರಗಳ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.

Women Health : ಐವಿಎಫ್ ಮಾಡಿಸಿಕೊಂಡ್ರೆ ಹೆಣ್ಣನ್ನು ಕಾಡ್ಬಹುದು ಈ ಸಮಸ್ಯೆ

ಸ್ವಯಂ ನಿರೋಧಕ ಖಾಯಿಲೆ: ಕೆಲವು ಸ್ವಯಂ ನಿರೋಧಕ ಖಾಯಿಲೆಗಳಿಂದಲೂ ನರಗಳ ಸಮಸ್ಯೆಗಳು ಎದುರಾಗುತ್ತದೆ. ಲೂಪಸ್, ರುಮಟಾಯ್ಡ್ ಸಂಧಿವಾತ, ದೀರ್ಘಕಾಲದ ಉರಿಯೂತ, ಡಿಮೈಲಿನೇಟಿಂಗ್ ಪಾಲಿನ್ಯೂರೋಪತಿ ಸಿಂಡ್ರೋಮ್ ಗಳು ಕೂಡ ಬೆರಳಿನಲ್ಲಿ ಸುಡುವಿಕೆ ಮತ್ತು ನೋವನ್ನು ಉಂಟುಮಾಡಬಹುದು.

ಸ್ಕೆಲೆರೋಸಿಸ್: ಮಲ್ಟಿಪಲ್ ಸ್ಕ್ಲೆರೋಸಿಸ್ ಮೆದುಳಿನ ಆನುವಂಶಿಕ ಅಸ್ವಸ್ಥತೆಯಾಗಿದೆ. ಇದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಇದರಿಂದ ರಾತ್ರಿಯ ಸಮಯದಲ್ಲಿ ಬೆರಳುಗಳ ಸುಡುವಿಕೆ, ಜುಮ್ಮೆನಿಸುವಿಕೆ ಸಮಸ್ಯೆ ಎದುರಾಗಬಹುದು.

ಸೋಂಕಿನಿಂದ ಕೈ ಬೆರಳುಗಳ ನೋವು: ಎಚ್ಐವಿ, ಏಡ್ಸ್, ಎಪ್ಸ್ಟೀನ್-ಬಾರ್ ಹರ್ಪಿಸ್ ಸಿಂಪ್ಲೆಕ್ಸ್, ಲೈಮ್ ಖಾಯಿಲೆ, ಸರ್ಪಸುತ್ತು, ಸೈಟೊಮೆಗಾಲೊ ವೈರಸ್ ನಂತಹ ಸೋಂಕುಗಳನ್ನು ಮೊದಲೇ ಹೊಂದಿದ ವ್ಯಕ್ತಿಗಳಿಗೆ ರಾತ್ರಿ ಮಲಗುವಾಗ ಕೈ ಮತ್ತು ಕಾಲಿನ ಬೆರಳುಗಳಲ್ಲಿ ಉರಿ ಮತ್ತು ಜುಮ್ಮೆನಿಸುವ ಅನುಭವ ಆಗುತ್ತದೆ.

ಕೈ ಬೆರಳುಗಳ ನೋವಿಗೆ ಇಲ್ಲಿದೆ ಪರಿಹಾರ: ರಾತ್ರಿಯಲ್ಲಿ ನಿದ್ರೆ ಅಡ್ಡಿ ಉಂಟುಮಾಡುವ ಕೈಗಳ ನೋವನ್ನು ನಿರ್ಲಕ್ಷ ಮಾಡದೇ ವೈದ್ಯರನ್ನು ಭೇಟಿಯಾಗಿ ವೈದ್ಯರ ಸಹಾಯದಿಂದ ಚಿಕಿತ್ಸೆ ಪಡೆಯಬೇಕು. ಅದರ ಜೊತೆಗೆ ಮನೆಯಲ್ಲಿಯೇ ಕೆಲವು ಸುಲಭ ವಿಧಾನಗಳನ್ನು ಕೂಡ ಅನುಸರಿಸಬಹುದು. ಇದರಿಂದಲೂ ಕೂಡ ಬೆರಳುಗಳ ನೋವನ್ನು ಶಮನಗೊಳಿಸಬಹುದು. ಹಾಗೆ ಮನೆಯಲ್ಲೇ ನೀವು ಅನುಸರಿಸಬಹುದಾದ ಕೆಲವು ಕ್ರಮಗಳು ಇಲ್ಲಿವೆ.

• ರಾತ್ರಿ ಮಲಗುವ ಸಮಯದಲ್ಲಿ ಕೈಗಳ ಮೇಲೆ ಯಾವುದೇ ಒತ್ತಡವನ್ನು ಹಾಕಬೇಡಿ. ಕುತ್ತಿಗೆ ಮತ್ತು ಬೆನ್ನುಮೂಳೆಗೆ ಆಧಾರವಾಗುವಂತೆ ಮೃದುವಾದ ದಿಂಬನ್ನು ಬಳಸಿ.
• ವಿಟಮಿನ್ ಕೊರತೆಯಿಂದ ದೂರವಿರಲು ಪೌಷ್ಠಿಕ ಆಹಾರಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಿ ಹಾಗೂ ಹಣ್ಣುಗಳನ್ನು ಸೇವಿಸಿ.
• ಕೈಗಳಿಗೆ ರಕ್ತ ಸಂಚಲನ ಸರಿಯಾಗಿ ನಡೆಯಲು ವ್ಯಾಯಾಮ ಮಾಡಿ.
• ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುವಂತ ಆಹಾರಗಳನ್ನು ಸೇವಿಸಬೇಡಿ. ಅಂತಹ ಆಹಾರದಿಂದ ರಾತ್ರಿಯ ವೇಳೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರಿಕೆಯಾಗಿ ಬೆರಳುಗಳಲ್ಲಿ ನೋವು ಕಾಣಿಸಬಹುದು.

click me!