ಹೊಟ್ಟೆಯ ಫ್ಯಾಟ್ ಕರಗಿಸುವುದರಿಂದ ಹಿಡಿದು ರಾತ್ರಿಯ ನಿದ್ರೆ ನಿಯಮಿತವಾಗುವಂತೆ ಮಾಡುವವರೆಗೆ ಚಹಾದ ಪ್ರಯೋಜನಗಳು ಬಹಳಷ್ಟು.
ತೂಕ ಇಳಿಸಲು ಕಸರತ್ತು ಮಾಡುವವರ ಸಂಖ್ಯೆ ಕಡಿಮೆ ಏನಿಲ್ಲ. ತೂಕ ಇಳಿಸಲು ಹೊಸ ಹೊಸ ದಾರಿಗಳನ್ನು ಜನ ಕಂಡುಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೊಂದು ಸೋಡಾ ಸೇವನೆ ಬಿಟ್ಟು ಗ್ರೀನ್ ಟೀಯಂಥ ಆರೋಗ್ಯಕರ ಪೇಯಗಳ ಮೊರೆ ಹೋಗುವುದು. ಆದರೆ ತೂಕ ಇಳಿಸಲು ಕೇವಲ ಗ್ರೀನ್ ಟೀ ಅಲ್ಲ, ಇನ್ನೂ ಹಲವಾರು ರೀತಿಯ ಟೀಗಳು ಸಹಾಯಕ್ಕೆ ಬರುತ್ತವೆ. ಲಾಕ್‌ಡೌನ್‌ನ ಈ ಸಮಯದಲ್ಲಿ ಟೀಯ ಹೊಸ ಹೊಸ ರುಚಿಗಳನ್ನು ಸವಿಯುತ್ತಲೇ ತೂಕವನ್ನೂ ಇಳಿಸಿ.
ಇಷ್ಟಕ್ಕೂ ಟೀ ಕೇವಲ ತೂಕ ಇಳಿಸಲು ಸಹಾಯ ಮಾಡುವುದಷ್ಟೇ ಅಲ್ಲ, ಹಲವಾರು ಆರೋಗ್ಯ ಲಾಭಗಳನ್ನು ತಂದುಕೊಡುತ್ತದೆ. ಹೊಟ್ಟೆಯ ಫ್ಯಾಟ್ ಕರಗಿಸುವುದರಿಂದ ಹಿಡಿದು ರಾತ್ರಿಯ ನಿದ್ರೆ ನಿಯಮಿತವಾಗುವಂತೆ ಮಾಡುವವರೆಗೆ ಚಹಾದ ಪ್ರಯೋಜನಗಳು ಬಹಳಷ್ಟು. ನಿಮ್ಮ ಅಗತ್ಯ ಹಾಗೂ ರುಚಿಗೆ ತಕ್ಕಂತೆ ಯಾವ ಟೀ ನಿಮಗೆ ಹೆಚ್ಚು ಸೂಟ್ ಆಗುತ್ತದೆ ಎಂದು ಪ್ರಯೋಗಿಸಿ ನೋಡಿ.
undefined
ಗ್ರೀನ್ ಟೀ
ತಾನು ಕೊಡುವ ಆರೋಗ್ಯ ಲಾಭಗಳಿಂದಾಗಿ ಗ್ರೀನ್ ಟೀ ಅತ್ಯುತ್ತಮ ಪೇಯ. ಬಹುತೇಕ ತೂಕ ಇಳಿಸುವ ಪ್ರಾಡಕ್ಟ್‌ಗಳಲ್ಲಿ ಗ್ರೀನ್ ಟೀಯನ್ನು ಬಳಸಲಾಗಿರುತ್ತದೆ. ಪ್ರತಿದಿನ ಗ್ರೀನ್ ಟೀ ಸೇವಿಸುವುದರಿಂದ ಮೆಟಾಬಾಲಿಸಂ ಹೆಚ್ಚಿ ತೂಕ ಇಳಿಸಬಹುದು ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಗ್ರೀನ್ ಟೀ ಕುಡಿವವರು ಕುಡಿಯದವರಿಗಿಂತ ಒಂದೇ ಅವಧಿಯಲ್ಲಿ ಮೂರೂವರೆ ಕೆಜಿಗಳಷ್ಟು ಹೆಚ್ಚು ತೂಕವನ್ನು ಇಳಿಸುತ್ತಾರೆ ಎಂದು ಜಪಾನ್‌ನ ಅಧ್ಯಯನ ವರದಿ ತಿಳಿಸಿದೆ.
ಸಂಶೋಧನೆಗಳ ಪ್ರಕಾರ, ಗ್ರೀನ್ ಟೀಯು ದೇಹದ ಫ್ಯಾಟ್ ಕೋಶಗಳಿಗೆ ಫ್ಯಾಟ್ ಬಿಡುಗಡೆ ಮಾಡುವಂತೆ, ಅದನ್ನು ಎನರ್ಜಿಯಾಗಿ ಕನ್ವರ್ಟ್ ಮಾಡುವಂತೆ ಸಿಗ್ನಲ್ ನೀಡುತ್ತವಂತೆ. ವರ್ಕೌಟ್‌ಗೂ ಮುನ್ನ ಗ್ರೀನ್ ಟೀ ಕುಡಿಯುವುದು ಉತ್ತಮ ಅಭ್ಯಾಸ.
ಗೋಲ್ಡನ್ ಟೀ
ಪ್ರಕೃತಿ ನೀಡಿದ ಅತ್ಯುತ್ತಮ ಔಷಧೀಯ ವಸ್ತುಗಳಲ್ಲಿ ಅರಿಶಿನವೂ ಒಂದು. ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಮೈಕ್ರೋಬಿಯಲ್ ಹಾಗೂ ಥರ್ಮೋಜೆನಿಕ್ ಗುಣಗಳನ್ನು ಹೊಂದಿರುವ ಅರಿಶಿನ ಅನೇಕ ಕಾಯಿಲೆಗಲಿಗೆ ಮದ್ದು. ಜೊತೆಗೆ, ಇದರಲ್ಲಿರುವ ಕುರ್ಕುಮಿನ್ ವೇಗವಾಗಿ ತೂಕ ಇಳಿಯುವಂತೆ ಮಾಡುತ್ತದೆ. ಹಾಗಾಗಿ ಅರಿಶಿನ ಬಳಸಿ ತಯಾರಿಸುವ ಗೋಲ್ಡನ್ ಟೀ ತೂಕ ಇಳಿಕೆಗೆ ಸಹಕಾರಿ. ಕರಿಮೆಣಸಿನ ಜೊತೆ ಸೇವಿಸಿದಾಗ ಕುರ್ಕುಮಿನ್ನನ್ನು ದೇಹವು ಚೆನ್ನಾಗಿ ಸೆಳೆದುಕೊಳ್ಳುತ್ತದೆ. ಹಾಗಾಗಿ, ಕಾಯಿಹಾಲು, ಅರಿಶಿನ, ಶುಂಠಿ, ದಾಲ್ಚೀನಿ ಮತ್ತು ಪೆಪ್ಪರ್ ಪೌಡರ್ ಬಳಸಿ ಗೋಲ್ಡನ್ ಟೀ ತಯಾರಿಸಿ ಸೇವಿಸಿ. ಕಾಯಿಹಾಲಿನಲ್ಲಿರುವ ಹೆಲ್ದೀ ಫ್ಯಾಟ್ ಅರಿಶಿನವನ್ನು ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಕೊಂಬುಚಾ ಟೀ
ಬ್ಯಾಕ್ಟೀರಿಯಾ ಹಾಗೂ ಯೀಸ್ಟ್ ಬಳಸಿ ಹುದುಗು ಬರಿಸುವ ವಿಧಾನದ ಮೂಲಕ ತಯಾರಿಸುವ ಟೀ ಇದು. ಇದರ ಬಹಳಷ್ಟು ಆರೋಗ್ಯ ಲಾಭಗಳಲ್ಲಿ ಬಿ ವಿಟಮಿನ್ಸ್, ಗ್ಲುಕುರೋನಿಕ್ ಆ್ಯಸಿಡ್ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ಕೆಲಸ ಮಾಡುತ್ತವೆ. ಕೊಂಬುಚದಲ್ಲಿರುವ ಪ್ರೊಬಯೋಟಿಕ್ ಬ್ಯಾಕ್ಟೀರಿಯಾ ಹಾಗೂ ಅಸಿಟಿಕ್ ಆ್ಯಸಿಡ್ ದೇಹದಲ್ಲಿ ಹಸಿವನ್ನು ಕಡಿಮೆ ಮಾಡುವ ಹಾರ್ಮೋನ್‌ಗಳ ಬಿಡುಗಡೆ ಮಾಡಿಸುವ ಜೊತೆಗೆ, ಹೊಟ್ಟೆಯಲ್ಲಿ ಹೆಲ್ದೀ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ.
ಪೆಪ್ಪರ್‌ಮಿಂಟ್ ಟೀ
ತೂಕ ನಿಯಂತ್ರಿಸಲು ಅಡ್ಡಿ ಬರುವುದೇ ಆಗಾಗ ಸ್ಟೀಟ್, ಉಪ್ಪು, ಫ್ಯಾಟಿ ಆಹಾರ ತಿನ್ನುವ ಬಯಕೆ. ಇಂಥ ಕ್ರೇವಿಂಗ್‌ಗಳನ್ನು ಗುಡಿಸಿ ಹಾಕುತ್ತದೆ ಪೆಪ್ಪರ್‌ಮಿಂಟ್ ಟೀ. ಇದರ ಪರಿಮಳವೇ ಜಂಕ್ ಫುಡ್ ಕ್ರೇವಿಂಗ್ಸ್ ಇಳಿಸಬಲ್ಲದು ಎನ್ನುತ್ತವೆ ಅಧ್ಯಯನಗಳು. ತೂಕ ಇಳಿಸುವ ಜೊತೆಗೆ ಪೆಪ್ಪರ್‌ಮಿಂಟ್ ಆತಂಕ ಹಾಗೂ ಒತ್ತಡ ಮಣಿಸಲೂ ಸಹಾಯಕ.
ಊಲಾಂಗ್ ಟೀ
ಬ್ಲ್ಯಾಕ್ ಡ್ರಾಗನ್ ಟೀ ಎಂದೂ ಕರೆಸಿಕೊಳ್ಳುವ ಇದು ಗ್ರೀನ್ ಟೀಯಲ್ಲಿರುವ ಕ್ಯಾಟಿಚಿನ್ ಹೊಂದಿದೆ. ಇವು ದೇಹವು ಫ್ಯಾಟ್ ಬ್ರೇಕ್ ಮಾಡಲು ಸೂಚನೆ ನೀಡುತ್ತವೆ. ಇದರಿಂದ ಎನರ್ಜಿ ಮಟ್ಟ ಹೆಚ್ಚಾಗುತ್ತದೆ ಹಾಗೆಯೇ ಫ್ಯಾಟ್ ಕರಗುವ ವೇಗ ಕೂಡಾ.
ವೈಟ್ ಟೀ
ಇತರೆ ಟೀಗಳಂಥಲ್ಲದೆ ವೈಟ್ ಟೀಯನ್ನು ಕೊಯ್ದ ಬಳಿಕ ಸೂರ್ಯನ ಬಿಸಿಲಲ್ಲಿ ಒಣಗಿಸಲಾಗುತ್ತದೆ. ನಂತರವಷ್ಟೇ ಪ್ಯಾಕ್ ಮಾಡಲಾಗುತ್ತದೆ. ಹಾಗಾಗಿ, ಇದರಲ್ಲಿ ಇತರೆಲ್ಲ ಪ್ರೋಸೆಸ್ಡ್ ಟೀಗಳಿಗಿಂತ ಹೆಚ್ಚು ಕ್ಯಾಟೆಚಿನ್ ಹಾಗೂ ಪಾಲಿಫಿನಾಲ್ ಇರುತ್ತವೆ. ಇವು ದೇಹದಲ್ಲಿ ಹೊಸ ಫ್ಯಾಟ್ ಸೆಲ್ ಉತ್ಪತ್ತಿಯಾಗದಂತೆ ನೋಡಿಕೊಳ್ಳುತ್ತವೆ. ಇದರೊಂದಿಗೆ ಮೆಟಾಬಾಲಿಸಂ ಕೂಡಾ ವೇಗಗೊಳಿಸುತ್ತದೆ. ಹಾಗಾಗಿ, ತೂಕ ಇಳಿಕೆ ಬಹುಬೇಗ ಸಾಧ್ಯವಾಗುತ್ತದೆ.