
ಸಾಮಾನ್ಯವಾಗಿ ಕೂದುಲುದುರುವಿಕೆಯೂ ಅನೇಕರನ್ನು ಖಿನ್ನತೆಗೆ ದೂಡುತ್ತದೆ. ಕೂದಲುದುರುವುದು ಬ್ರೇಕಪ್‌ಗಿಂತಲೂ ಹೆಚ್ಚು ನೋವು ನೀಡುತ್ತದೆ ಎಂದು ಹಾಸ್ಯಮಯವಾಗಿ ಅನೇಕರು ಹೇಳಿಕೊಂಡಿರುವುದನ್ನು ನೀವು ಕೇಳಿರಬಹುದು. ವಾಯುಮಾಲಿನ್ಯ ಪೌಷ್ಠಿಕಾಂಶದ ಕೊರತೆ ಹಾಗೂ ಇನ್ನೂ ಅನೇಕ ಆರೋಗ್ಯ ಸಮಸ್ಯೆಯ ಕಾರಣಗಳಿಂದಾಗಿ ಹರೆಯದ ಹುಡುಗರು ಕೂಡ ಸಣ್ಣ ವಯಸ್ಸಿನಲ್ಲೇ ಕೂದಲು ಕಳೆದುಕೊಂಡು ಬಾಧೆ ಪಡುತ್ತಾರೆ. ಇನ್ನು ಹೆಣ್ಣು ಮಕ್ಕಳ ಗೋಳು ಹೇಳುವುದೇ ಬೇಡ, ಸ್ನಾನ ಮಾಡುವಾಗ ಒಂದು ರಾಶಿ, ತಲೆ ಬಾಚುವಾಗ ಒಂದು ರಾಶಿ ಹೀಗೆ ತಲೆಗಿಂತ ಹೆಚ್ಚು ಕೂದಲು ಓಡಾಡುವ ನೆಲದಲ್ಲೇ ಕಾಣಿಸಿಕೊಂಡು ಮಾನಸಿಕ ಭಾದೆ ನೀಡುತ್ತದೆ. ಬಿದ್ದ ರಾಶಿ ರಾಶಿ ಕೂದಲನ್ನು ಸಂಗ್ರಹಿಸಿ ಚೌರಿ (ಉದುರಿ-ಕೂದಲಿನಿಂದ ಮಾಡುವ ನಕಲಿ ಜೆಡೆ) ಮಾಡಬಹುದೇನೋ ಅನ್ನುವಷ್ಟು ಕೂದಲು ಉದುರುವುದರಿಂದ ಇಂದು ಹೇರ್ ಆಯಿಲ್ ಕಂಪನಿಗಳು, ಶ್ಯಾಂಪು ಕಂಪನಿಗಳು ಕೋಟ್ಯಾಂತರ ದುಡ್ಡು ಮಾಡುತ್ತಿರುವುದು ಸುಳ್ಳಲ್ಲ.
ಹೀಗಿರುವಾಗ ತಲೆಯ ಸಂಪೂರ್ಣ ಕೂದಲು ಉದುರಿ ಹೋಗುವಂತಹ ಕಾಯಿಲೆಯಾದ ಅಲೋಪೆಸಿಯಾ ಕಾಯಿಲೆಯಿಂದ ಬಳಲುತ್ತಿದ್ದ ಹುಡುಗಿಯೊಬ್ಬಳು ತನ್ನ ಮದುವೆ ದಿನ ಯಾವುದೇ ವಿಗ್ ಧರಿಸದೇ ಕೇವಲ ಬೋಳು ತಲೆಯಲ್ಲೇ ಮದುವೆಯಾಗುವ ಮೂಲಕ ದಿಟ್ಟತನ ಪ್ರದರ್ಶಿಸಿದ್ದಾಳೆ. ಈಕೆಯ ಈ ಧೈರ್ಯಶಾಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಈಕೆ ಮದುವೆಯ ಶುಭಾಶಯಗಳನ್ನು ತಿಳಿಸುವುದರ ಜೊತೆಗೆ ಆಕೆಯ ಧೈರ್ಯಶಾಲಿ ನಡೆಗೆ ಭಾವುಕರಾಗಿದ್ದಾರೆ.
ಸಾಮಾನ್ಯವಾಗಿ ಯಾವ ಹೆಣ್ಣು ಮಕ್ಕಳು ಕೂಡ ತಮ್ಮ ಬೋಳು ತಲೆಯನ್ನು ತೋರಿಸುವುದಕ್ಕೆ ಇಷ್ಟಪಡುವುದಿಲ್ಲ, ಆದರೆ ಇಲ್ಲಿ ಈ ವಧು ತಮ್ಮ ಮದುವೆ ದಿನವೂ ಕೂಡ ವಿಗ್ ಧರಿಸಲು ಬಯಸದೇ ತಮ್ಮ ಬೋಳು ತಲೆಯನ್ನು ಪ್ರದರ್ಶಿಸುವ ಧೈರ್ಯ ಮಾಡಿದ್ದು, ಸೌಂದರ್ಯಕ್ಕಿರುವ ಮಾನದಂಡಗಳಿಗೆ ಮರುವ್ಯಾಖ್ಯಾನ ಬರೆದಿದ್ದಾರೆ. ಅಂದಹಾಗೆ ನೀಹರ್ ಸಚ್ದೇವ್ ಎಂಬ ಅಮೆರಿಕಾದ ಆದರೆ ಭಾರತೀಯ ಮೂಲದ ಕಂಟೆಂಟ್ ಕ್ರಿಯೇಟರ್ ಈ ಸಾಹಸ ಮಾಡಿದ ವಧು.
ಅವರ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಅವರು ಎಲ್ಲಾ ವಧುಗಳಂತೆ ಕೆಂಪು ಲೆಹೆಂಗಾ ಧರಿಸಿ ತನ್ನ ವರಿಸುವ ವರನತ್ತ ಹೆಜ್ಜೆ ಹಾಕುತ್ತಿದ್ದಾರೆ. 40 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. 'ನಿಮ್ಮ ಮದುವೆಯ ದಿನದಂದು ನೀವು ಎಚ್ಚರಗೊಂಡು ನಿಮ್ಮ ಮೇಲೆ ಬೆಳಗುತ್ತಿರುವ ಸೂರ್ಯನನ್ನು ನೋಡುವ, ನಿಮ್ಮನ್ನು ಸ್ವಾಗತಿಸುವ ಎಲ್ಲಾ ಬೆಳಕಿನಿಂದ ಪ್ರತಿಧ್ವನಿಸುವ ಆ ಜೀವಿತಾವಧಿಯ ಕ್ಷಣ.' ಎಂದು ಬರೆದುಕೊಂಡು ಅವರು ತಮ್ಮ ಮದುವೆಯ ವೀಡಿಯೋವನ್ನು ಶೇರ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಅನೇಕರು ಅವರಿಗೆ ಶುಭ ಹಾರೈಸಿದ್ದಾರೆ. ಅನೇಕರು ಇದು ಬೋಲ್ಡ್ & ಬ್ಯೂಟಿಫುಲ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಅಲೋಪೆಸಿಯಾ ಎಂದರೇನು?
ಅಲೋಪೆಸಿಯಾ ಎಂದರೆ ಕೂದಲು ಉದುರುವಿಕೆ ಸಮಸ್ಯೆಯಾಗಿದ್ದು, ನೆತ್ತಿಯ ಮೇಲೆ ಅಥವಾ ನಿಮ್ಮ ಇಡೀ ದೇಹದ ಮೇಲಿನ ಕೂದಲು ಉದುರಬಹುದು. ಇದು ತಾತ್ಕಾಲಿಕ ಅಥವಾ ಶಾಶ್ವತವಾಗಿರಬಹುದು. ಇದು ಆನುವಂಶಿಕತೆ, ಹಾರ್ಮೋನುಗಳ ಬದಲಾವಣೆಗಳು, ವೈದ್ಯಕೀಯ ಪರಿಸ್ಥಿತಿಗಳು ಅಥವಾ ವಯಸ್ಸಾಗುವಿಕೆ ಸಾಮಾನ್ಯ ಭಾಗದ ಪರಿಣಾಮವೂ ಆಗಿರುತ್ತದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.