ನಾವು ಪರ್ಫೆಕ್ಟ್ ಅಲ್ಲ, ಹಾಗಾಗಿ ಬ್ಯಾಡ್ಮಿಂಟನ್ ಆಟದ ಸಹವಾಸಕ್ಕೆ ಹೋಗಲ್ಲ ಎನ್ನುವವರು ನೀವಾಗಿದ್ರೆ ಇನ್ಮುಂದೆ ನಿಮ್ಮ ಆಲೋಚನೆ ಬದಲಿಸಿ. ನೀವು ಸ್ಪರ್ಧೆಗಾಗಿ, ಪ್ರಶಸ್ತಿಗಾಗಿ ಬ್ಯಾಡ್ಮಿಂಟನ್ ಆಡ್ಬೇಡಿ. ಆರೋಗ್ಯ ಕಾಪಾಡಿಕೊಳ್ಳೋಕೆ ಬ್ಯಾಟ್ ಹಿಡಿಯೋದು ಕಲಿರಿ.
ಬ್ಯಾಡ್ಮಿಂಟನ್ ಒಂದು ಅದ್ಭುತ ಹಾಗೂ ಪ್ರಸಿದ್ಧ ಆಟ. ಪ್ರಪಂಚದಾದ್ಯಂತ ಬ್ಯಾಡ್ಮಿಂಟನ್ ಆಡುವ ಲಕ್ಷಾಂತರ ಜನರಿದ್ದಾರೆ. ಭಾರತದಲ್ಲಿಯೂ ಅನೇಕರು ಪ್ರತಿ ದಿನ ಬ್ಯಾಡ್ಮಿಂಟನ್ ಆಡ್ತಾರೆ. ಪಿವಿ ಸಿಂಧು, ಸೈನಾ ನೆಹ್ವಾಲ್ ಸೇರಿದಂತೆ ಪ್ರಸಿದ್ಧ ಆಟಗಾರರು ಭಾರತದ ಕೀರ್ತಿ ಪತಾಕೆಯನ್ನು ವಿಶ್ವದಲ್ಲಿ ಹಾರಿಸಿದ್ದಾರೆ. ಬ್ಯಾಡ್ಮಿಂಟನ್ನು ಬಹುತೇಕರು ಆಟವಾಗಿ ನೋಡ್ತಾರೆ. ಆದ್ರೆ ಇದು ತಪ್ಪು. ಬ್ಯಾಡ್ಮಿಂಟನ್ ಬರೀ ಆಟವಲ್ಲ. ಅದು ದೇಹಕ್ಕೆ ಪ್ರಯೋಜನ ನೀಡುವ ಒಂದು ವ್ಯಾಯಾಮ. ನಿತ್ಯ ನೀವು ಬ್ಯಾಡ್ಮಿಂಟನ್ ಆಡುವ ಮೂಲಕ ದೇಹಕ್ಕೆ ಅಗತ್ಯ ವ್ಯಾಯಾಮ ನೀಡಬಹುದು. ಈ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಾವಿಂದು ಬ್ಯಾಡ್ಮಿಂಟನ್ ನಿಂದ ಆಗುವ ಲಾಭಗಳ ಬಗ್ಗೆ ನಿಮಗೆ ಹೇಳ್ತೇವೆ.
ಸಮ್ಮರ್ ವೆಕೇಷನ್‌ನಲ್ಲಿ ತೂಕ ಹೆಚ್ಚಾಗೋ ಭಯಾನ? ಈ ಹಾಲಿಡೇ ವರ್ಕೌಟ್ ಮಾಡಿ
undefined
ಬ್ಯಾಡ್ಮಿಂಟನ್ (Badminton) ನಿಂದ ಇದೆ ಇಷ್ಟೆಲ್ಲ ಲಾಭ :
ಹೃದಯ (Heart) ಆರೋಗ್ಯವಾಗಿರಬೇಕೆಂದ್ರೆ ಬ್ಯಾಡ್ಮಿಂಟನ್ ಆಡಿ : ಬ್ಯಾಡ್ಮಿಂಟನ್ ಆಡುವುದರಿಂದ ಹೃದಯ ಆರೋಗ್ಯಕರವಾಗಿರುತ್ತದೆ. ಇದು ಅಪಧಮನಿಗಳಲ್ಲಿ ರಕ್ತ (blood) ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ನಿರ್ಬಂಧಿಸಿದ ಅಪಧಮನಿಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಬ್ಯಾಡ್ಮಿಂಟನ್ ಆಡುವುದರಿಂದ ಹೃದಯದ ಸ್ನಾಯುಗಳು ಬಲಗೊಳ್ಳುತ್ತವೆ. ಹೃದಯ ಸಕ್ರಿಯವಾಗಿರುತ್ತದೆ.
ತೂಕ ಕಡಿಮೆ ಮಾಡೋಕೆ ಬ್ಯಾಡ್ಮಿಂಟನ್ : ದೇಹದಲ್ಲಿ ಸಂಗ್ರಹವಾಗುವ ಹೆಚ್ಚುವರಿ ಕೊಬ್ಬನ್ನು ಕರಗಿಸುವ ಕೆಲಸವನ್ನು ಬ್ಯಾಡ್ಮಿಂಟನ್ ಮಾಡುತ್ತದೆ. ಇದು ಕಾರ್ಡಿಯೋ ವ್ಯಾಯಾಮವಾಗಿದೆ. ಇದ್ರಿಂದ ಸ್ನಾಯುಗಳು ಸಕ್ರಿಯವಾಗಿರುತ್ತವೆ. ನಿಯಮಿತವಾಗಿ ಕೇವಲ ಒಂದು ಗಂಟೆ ಬ್ಯಾಡ್ಮಿಂಟನ್ ಆಡುವುದರಿಂದ ದೇಹದ 480 ಕ್ಯಾಲೊರಿ ಬರ್ನ್ ಆಗುತ್ತದೆ. ತೂಕ ಇಳಿಸಿಕೊಳ್ಳಬೇಕು ಎನ್ನುವವರು ನಿತ್ಯ ಬ್ಯಾಡ್ಮಿಂಟನ್ ಆಡಿದ್ರೆ ಸಾಕು.
Health tips: ಅಧಿಕ ರಕ್ತದೊತ್ತಡದ ರೋಗಿಗಳು ಈ ವ್ಯಾಯಾಮ ಮಾಡಬಾರದು
ಚಯಾಪಚಯ ಶಕ್ತಿ ಹೆಚ್ಚಳ : ಜೀರ್ಣಕ್ರಿಯೆ ಸರಿಯಾಗಿ ಆದ್ರೆ ಆರೋಗ್ಯಕರವಾಗಿರಬಹುದು. ಜೀರ್ಣಕ್ರಿಯೆ ಸರಿಯಾಗಿ ಆಗ್ಬೇಕೆಂದ್ರೆ ಚಯಾಪಚಯ ಕ್ರಿಯೆ ಮುಖ್ಯ. ಬ್ಯಾಡ್ಮಿಂಟನ್ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇದಲ್ಲದೆ ಬ್ಯಾಡ್ಮಿಂಟನ್ ಆಡೋದ್ರಿಂದ ದೇಹ ಬೆವರುತ್ತದೆ. ಬೆವರಿನ ಮೂಲಕ ವಿಷ ದೇಹದಿಂದ ಹೊರಹೋಗುತ್ತದೆ.
ಮೂಳೆಗಳ ಬಲಕ್ಕೆ ಬ್ಯಾಡ್ಮಿಂಟನ್ : ಈಗಿನ ಜನರು ಬಿಸಿಲಿನಲ್ಲಿರಲು ಇಷ್ಟಪಡುವುದಿಲ್ಲ. ಇದ್ರಿಂದ ಅವರ ದೇಹದಲ್ಲಿ ವಿಟಮಿನ್ ಡಿ ಕೊರತೆ ಕಾಡುತ್ತದೆ. ಮೂಳೆಗಳು ದುರ್ಬಲಗೊಳ್ಳುತ್ತವೆ. ನೀವು ಬ್ಯಾಡ್ಮಿಂಟನ್ ಆಡಿದರೆ ನಿಮ್ಮ ಮೂಳೆ ಬಲಗೊಳ್ಳುತ್ತದೆ. ಕ್ಯಾಲ್ಸಿಯಂ ಹೀರಿಕೊಳ್ಳುವ ದೇಹದ ಸಾಮರ್ಥ್ಯ ಹೆಚ್ಚಾಗುತ್ತದೆ.
ನಿದ್ರಾಹೀನತೆಗೆ ಮುಕ್ತಿ : ನಿದ್ರೆ ಸಮಸ್ಯೆಯಿರುವವರು ಪ್ರತಿ ದಿನ ಒಂದು ಗಂಟೆ ಬ್ಯಾಡ್ಮಿಂಟನ್ ಆಡ್ಬೇಕು ಎನ್ನುತ್ತಾರೆ ತಜ್ಞರು. ಇದ್ರಿಂದ ದೇಹ ದಣಿಯುವ ಕಾರಣ ನಿದ್ರೆ ಸಹಜವಾಗಿ ಬರುತ್ತದೆ.
ಮೆದುಳು, ಯಕೃತ್ತಿನ ಆರೋಗ್ಯದಲ್ಲಿ ಸುಧಾರಣೆ : ಮೆದುಳಿನ ಜೊತೆಗೆ ಯಕೃತ್ತು, ಮೂತ್ರಪಿಂಡದ ಆರೋಗ್ಯ ಬಹಳ ಮುಖ್ಯ. ಬ್ಯಾಡ್ಮಿಂಟನ್ ಆಡೋದ್ರಿಂದ ದೇಹದಲ್ಲಿ ರಕ್ತದ ಹರಿವು ಉತ್ತಮವಾಗಿರುತ್ತದೆ. ಇದರಿಂದಾಗಿ ಸಾಕಷ್ಟು ಪ್ರಮಾಣದ ಆಮ್ಲಜನಕಯುಕ್ತ ರಕ್ತವು ಈ ಅಂಗಗಳನ್ನು ತಲುಪುತ್ತದೆ. ಈ ಕಾರಣದಿಂದಾಗಿ ಈ ಅಂಗಗಳು ದೀರ್ಘಕಾಲದವರೆಗೆ ಆರೋಗ್ಯಕರವಾಗಿರುತ್ತವೆ.
ಮಾನಸಿಕ ಒತ್ತಡ ಮತ್ತು ಆತಂಕದಿಂದ ಮುಕ್ತಿ : ಒತ್ತಡದ ಜೀವನ ಈಗಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಬ್ಯಾಡ್ಮಿಂಟನ್ ಒತ್ತಡ ಹಾಗೂ ಆತಂಕ ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಬ್ಯಾಡ್ಮಿಂಟನ್ ಆಡುವ ವೇಳೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ನಾವು ಸಕ್ರಿಯವಾಗಿರುತ್ತೇವೆ. ಎಲ್ಲಿ, ಯಾವಾಗ ಬ್ಯಾಟ್ ಬೀಸಬೇಕು ಎನ್ನುವ ಬಗ್ಗೆ ನೀವು ಆಲೋಚನೆ ಮಾಡುವ ಕಾರಣ ಉಳಿದ ಒತ್ತಡ ನಿಮ್ಮನ್ನು ಕಾಡುವುದಿಲ್ಲ. ದೈಹಿಕ ಚಟುವಟಿಕೆ ವೇಗವಾಗಿ ನಡೆಯೋದ್ರಿಂದ ಮೆದುಳಿಗೆ ಆಮ್ಲಜನಕಯುಕ್ತ ರಕ್ತದ ಹರಿವು ಹೆಚ್ಚಾಗುತ್ತದೆ. ಇದು ಮೆದುಳಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.