
ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದೀರಾ? ಸಾಕಷ್ಟು ಯತ್ನ ನಡೆಸುತ್ತಿದ್ದರೂ ನೀವು ನಿರೀಕ್ಷಿಸಿದಷ್ಟು ತೂಕ ಇಳಿಕೆ ಆಗುತ್ತಿಲ್ಲವೇ? ಹಾಗಾದ್ರೆ ನೀವೂ ಎಲ್ಲರ ಹಾಗೆ ಈ ಕೆಲವು ತಪ್ಪುಗಳನ್ನು ಮಾಡುತ್ತಿದ್ದಿರಬಹುದು. ಹೀಗಾಗಿಯೇ ನಿರೀಕ್ಷಿತ ವೇಗದಲ್ಲಿ ತೂಕ ಕಡಿಮೆ ಆಗದೆ ಇರಬಹುದು. ಸಾಮಾನ್ಯವಾಗಿ ಎಲ್ಲರೂ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿ ಕೆಲ ತಪ್ಪುಗಳನ್ನು ಮಾಡುತ್ತಾರೆ. ಅದರಿಂದಾಗಿ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ಅಂತಹ ತಪ್ಪುಗಳನ್ನು ನೀವೂ ಮಾಡಬೇಡಿ. ಅವುಗಳ ಬಗ್ಗೆ ಅರಿತುಕೊಂಡು ಸುಧಾರಿಸಿಕೊಳ್ಳಿ. ಆ ಬಳಿಕ, ನೀವು ಅಂದುಕೊಂಡಷ್ಟು ತೂಕ ಇಳಿಸಲು ಸಾಧ್ಯವಾಗುತ್ತದೆ. ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ರುಜಾತಾ ದಿವೇಕರ್ ಅವರು ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ತೂಕ ಇಳಿಕೆಯ ಪ್ರಯತ್ನ ಸಮಗ್ರವಾಗಿರಬೇಕು. ಸಾಮಾನ್ಯವಾಗಿ ಎಲ್ಲರೂ ತೂಕ ಇಳಿಸುವುದನ್ನಷ್ಟೇ ದೊಡ್ಡ ಗುರಿಯನ್ನಾಗಿ ಮಾಡಿಕೊಳ್ಳುತ್ತಾರೆ. ಆದರೆ, ರುಜಾತಾ ಅವರ ಪ್ರಕಾರ, ತೂಕ ಇಳಿಸುವ ಜತೆಗೆ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಆಗ ಮಾತ್ರ ದೇಹ ಸರಿಯಾದ ಪ್ರಮಾಣದಲ್ಲಿ ಇರಲು ಸಾಧ್ಯವಾಗುತ್ತದೆ. ಸೊಂಟದ ಸುತ್ತಳತೆ ಪೃಷ್ಟ ಭಾಗದ ಸುತ್ತಳತೆಗಿಂತ ಹತ್ತು ಇಂಚು ಕಡಿಮೆ ಇರುವುದು ಆರೋಗ್ಯಕರ. ಈ ಮಾದರಿಯಲ್ಲೇ ತೂಕ ಇಳಿಸಲು ಯತ್ನ ನಡೆಸಿ ಎಂದು ಸಲಹೆ ನೀಡಿದ್ದಾರೆ. ಹಾಗೆಯೇ, ಈ ಕೆಳಗಿನ ಕೆಲವು ತಪ್ಪುಗಳನ್ನು ಮಾಡಬಾರದು.
• ಹಿಂದಿನ ಪ್ರಯತ್ನದೊಂದಿಗೆ ಹೋಲಿಕೆ ಬೇಡ
ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಮುಂದಾಗುವ ಜನ ಆಗಾಗ್ಗೆ ಪ್ರಯತ್ನ ನಡೆಸುವುದು, ಮಧ್ಯದಲ್ಲಿ ಗ್ಯಾಪ್ ನೀಡುವುದು ಅಥವಾ ಬೇಸತ್ತು ಹೋಗುವುದು ಕಂಡುಬರುತ್ತದೆ. ಅಂದರೆ, ಮೊದಲಿನ ಒಂದೆರಡು ಪ್ರಯತ್ನಗಳಲ್ಲಿ ಅವರು ಸೋತಿರುತ್ತಾರೆ. ಆದರೆ, ಈ ಬಾರಿ ಹಿಂದಿನ ಯಾವುದೇ ಅನುಭವದೊಂದಿಗೆ ಇದನ್ನು ಹೋಲಿಕೆ ಮಾಡಬೇಡಿ. ಇದರಿಂದ ಹತಾಶೆ ಉಂಟಾಗಬಹುದು. ಆಗ ದೇಹದಲ್ಲಿ ಒತ್ತಡ ಹೆಚ್ಚಿ ತೂಕ ಇಳಿಕೆ ಆಗದೇ ಹೋಗಬಹುದು. ತೂಕ ಇಳಿಕೆ ಆರೋಗ್ಯಕರ ವಿಧಾನದಲ್ಲಿ ಇರಬೇಕು.
ಈ ರೊಟ್ಟಿ ತಿಂದ್ರೆ ಕಡಿಮೆಯಾಗುತ್ತೆ ತೂಕ
• ಫಲಿತಾಂಶ ವಿಳಂಬವಾದರೆ ನಿಮ್ಮನ್ನು ನೀವು ದೂಷಿಸಿಕೊಳ್ಳುವುದು ಸಲ್ಲದು
ಕೆಲವರು ಫಲಿತಾಂಶ ಬರಲು ತುಸು ವಿಳಂಬವಾದರೆ ತಮ್ಮನ್ನು ತಾವೇ ದೂಷಿಸಿಕೊಳ್ಳಲು ಆರಂಭಿಸುತ್ತಾರೆ. ಈ ಗುಣವನ್ನು ಬಿಟ್ಟುಬಿಡಬೇಕು. ನೀವು ಅನುಸರಿಸುತ್ತಿರುವ ವಿಧಾನದಲ್ಲಿ ಏನಾದರೂ ದೋಷ ಇರಬಹುದು. “ಇದೊಂದು ಬಾರಿ, ಇದೊಂದು ಸಲ’ ಎನ್ನುತ್ತ ಏನಾದರೂ ತಿನ್ನುತ್ತಿರಬಹುದು. ಪದೇ ಪದೆ ತಿನ್ನುವ ಚಟ ಇರಬಹುದು. ಒಟ್ಟಿನಲ್ಲಿ ನೀವು ಅನುಸರಿಸುತ್ತಿರುವ ವಿಧಾನವನ್ನು ಪರಾಮರ್ಶೆ ಮಾಡಬೇಕೇ ವಿನಾ ನಿಮ್ಮಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನಿಮ್ಮನ್ನೇ ನೀವು ಬೈದುಕೊಳ್ಳಬಾರದು.
• ತೂಕ ಇಳಿಸಿಕೊಳ್ಳಲು ಗಡಿಬಿಡಿ ಬೇಡ
ಯಾವುದೇ ಹೊಸತನ್ನು ಸ್ವೀಕರಿಸಲು ನಮ್ಮ ದೇಹ 12 ವಾರಗಳ ಸಮಯ ತೆಗೆದುಕೊಳ್ಳುತ್ತದೆ. ಆಹಾರದ ಬದಲಾವಣೆ, ವ್ಯಾಯಾಮ ಇತ್ಯಾದಿ ದೇಹಕ್ಕೆ ಹೊಂದಾಣಿಕೆ ಆಗಲು ಸಮಯ ಬೇಕಾಗುತ್ತದೆ. ಹೀಗಾಗಿ, ಕೇವಲ ಒಂದೆರಡು ತಿಂಗಳಲ್ಲಿ ತೂಕ ಇಳಿಕೆ ಆಗುವುದು ಸುಲಭವಲ್ಲ. ಗಡಿಬಿಡಿಗೆ ಬೀಳಬೇಡಿ.
• ತೂಕ ಇಳಿಕೆಯ ಪ್ರಕ್ರಿಯೆಯನ್ನು ಶಿಕ್ಷೆಯನ್ನಾಗಿ ನೋಡಬೇಡಿ
ತೂಕ ಇಳಿಸಿಕೊಳ್ಳುವುದು ನಿಮ್ಮದೇ ಆರೋಗ್ಯಕ್ಕಾಗಿ. ಹೀಗಾಗಿ ಅದನ್ನು ಶಿಕ್ಷೆಯನ್ನಾಗಿ ನೋಡಬೇಡಿ. ಅತಿಯಾದ ವ್ಯಾಯಾಮವೂ ಬೇಡ. ನಡಿಗೆ, ಅರ್ಧ ಗಂಟೆಯ ವ್ಯಾಯಾಮ ಸಾಕು. ಹಾಗೆಯೇ ನಿದ್ರೆಯನ್ನು ಕಡೆಗಣಿಸಬೇಡಿ.
ತೂಕ ಇಳಿಸಿಕೊಳ್ಳಲು ಈರುಳ್ಳಿ ಬೆಸ್ಟ್ ಮದ್ದು
• ಅಂತರ್ಜಾಲದಿಂದ ಡಯೆಟ್ ಪ್ಲಾನ್ ಆಯ್ಕೆ ಬೇಡ
ತುಂಬ ಜನ ಈ ತಪ್ಪನ್ನು ಮಾಡುತ್ತಾರೆ. ನೀವು ಸೂಕ್ತ ಡಯೆಟಿಷಿನ್ ಮೂಲಕವೇ ಅಹಾರದ ಸೇವನೆ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಇದಕ್ಕಾಗಿ ಅಂತರ್ಜಾಲದ ಮಾಹಿತಿಯನ್ನು ಆಧರಿಸಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.