ಉಸಿರಾಡುವ ವಿಷಗಾಳಿಗೂ ಆತ್ಮ*ತ್ಯೆಗೂ ಇದೆ ಸಂಬಂಧ? ಸಂಶೋಧನೆಯಲ್ಲಿ ಬೆಚ್ಚಿಬೀಳೀಸುವ ಸತ್ಯ ಬಯಲು

Published : Sep 18, 2026, 08:18 PM IST
Air Pollution

ಸಾರಾಂಶ

ವಾಯುಮಾಲಿನ್ಯ ಕೇವಲ ಶ್ವಾಸಕೋಶದ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಸಂಬಂಧಿಸಿರಬಹುದು ಎಂದು ಕ್ವೀನ್ಸ್ ಯೂನಿವರ್ಸಿಟಿ ಬೆಲ್ಫಾಸ್ಟ್‌ನ ಹೊಸ ಅಧ್ಯಯನ ಸೂಚಿಸಿದೆ. 29 ಅಧ್ಯಯನಗಳ ವಿಶ್ಲೇಷಣೆಯಲ್ಲಿ PM2.5, PM10 ಮತ್ತು NO₂ ಮಾಲಿನ್ಯಕ್ಕೂ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಗಮನಾರ್ಹ ಸಂಬಂಧ ಕಂಡುಬಂದಿದೆ.

ಉಸಿರಾಡುವ ಗಾಳಿಗೂ ಆತ್ಮಹತ್ಯೆಗೂ ಇದೆ ಸಂಬಂಧ

ಸಾಮಾನ್ಯವಾಗಿ ವ್ಯಕ್ತಿಯ ಮಾನಸಿಕ ಒತ್ತಡ, ಕುಟುಂಬದ ಸಮಸ್ಯೆಗಳು, ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಕಾರಣಗಳು ಆತ್ಮಹತ್ಯೆಯಂತಹ ಆಲೋಚನೆಗಳಿಗೆ ಕಾರಣವಾಗಬಹುದು. ಆದರೆ ಬ್ರಿಟನ್‌ನ ಕ್ವೀನ್ಸ್ ಯೂನಿವರ್ಸಿಟಿ ಬೆಲ್ಫಾಸ್ಟ್‌ನ ಸಂಶೋಧಕರು ನಡೆಸಿದ ಹೊಸ ಅಧ್ಯಯನವು ವಾಯುಮಾಲಿನ್ಯ ಮತ್ತು ಇಂತಹ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳ ನಡುವಿನ ಸಂಬಂಧದ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಈ ಅಧ್ಯಯನವನ್ನು Journal of Epidemiology & Community Healthನಲ್ಲಿ ಪ್ರಕಟಿಸಲಾಗಿದೆ. ಸಂಶೋಧಕರು 2010ರಿಂದ 2024ರ ನಡುವೆ ಪ್ರಕಟವಾದ ವಿವಿಧ ಅಧ್ಯಯನಗಳನ್ನು ಪರಿಶೀಲಿಸಿದ್ದು, ಒಟ್ಟು 45 ಅಧ್ಯಯನಗಳನ್ನು ವಿಮರ್ಶೆಗೆ ಒಳಪಡಿಸಲಾಗಿದೆ. ಈ ಪೈಕಿ 29 ಅಧ್ಯಯನಗಳ ಮಾಹಿತಿಯನ್ನು ಒಟ್ಟುಗೂಡಿಸಿ ವಿಶ್ಲೇಷಣೆ ನಡೆಸಲಾಗಿದೆ.

ಯಾವ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ?

ವಾಯುಮಾಲಿನ್ಯ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಕ್ವೀನ್ಸ್ ಯೂನಿವರ್ಸಿಟಿ ಬೆಲ್ಫಾಸ್ಟ್‌ನ ಸಾರ್ವಜನಿಕ ಆರೋಗ್ಯ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಗಾಳಿ, ನೀರು, ಶಬ್ದ ಮತ್ತು ಬೆಳಕಿನ ಮಾಲಿನ್ಯಗಳು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಸಂಶೋಧಕರು ಪರಿಶೀಲಿಸಿದ್ದಾರೆ. ಅಧ್ಯಯನದಲ್ಲಿ ಮುಖ್ಯವಾಗಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಸಂಶೋಧನೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ವಿವಿಧ ದೇಶಗಳು ಮತ್ತು ಪ್ರದೇಶಗಳಲ್ಲಿನ ಮಾಹಿತಿಯನ್ನು ಒಳಗೊಂಡ ಅಧ್ಯಯನಗಳನ್ನು ಪರಿಶೀಲಿಸಲಾಗಿದೆ.

ಯಾವ ಮಾಲಿನ್ಯಕಾರಕಗಳು ಹೆಚ್ಚು ಆತಂಕಕಾರಿ?

ಸಂಶೋಧನೆಯಲ್ಲಿ PM2.5 ಮತ್ತು PM10 ಎಂಬ ಅತಿ ಸಣ್ಣ ಕಣಗಳ ಜೊತೆಗೆ ನೈಟ್ರೋಜನ್ ಡೈಆಕ್ಸೈಡ್ (NO₂) ಕುರಿತು ವಿಶೇಷ ಗಮನ ಹರಿಸಲಾಗಿದೆ. ಅಧ್ಯಯನದ ಸಂಯೋಜಿತ ವಿಶ್ಲೇಷಣೆಯ ಪ್ರಕಾರ, PM2.5 ಮತ್ತು PM10ಗೆ ಅಲ್ಪಾವಧಿಯಲ್ಲಿ ಒಡ್ಡಿಕೊಳ್ಳುವುದು ಹಾಗೂ PM2.5 ಮತ್ತು NO₂ಗೆ ದೀರ್ಘಾವಧಿಯಲ್ಲಿ ಒಡ್ಡಿಕೊಳ್ಳುವುದರಿಂದ ಆತ್ಮಹತ್ಯೆಗೆ ಸಂಬಂಧಿಸಿದ ಘಟನೆಗಳು, ಪ್ರಯತ್ನಗಳು ಮತ್ತು ಗಂಭೀರ ಆಲೋಚನೆಗಳು ಬರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದರ ಜೊತೆಗೆ ಸಲ್ಫರ್ ಡೈಆಕ್ಸೈಡ್ (SO₂), ಓಜೋನ್ (O₃) ಮತ್ತು ಶಬ್ದ ಮಾಲಿನ್ಯಕ್ಕೂ ಇಂತಹ ಸಮಸ್ಯೆಗಳೊಂದಿಗೆ ಸಂಬಂಧ ಇರಬಹುದೆಂಬ ಸೂಚನೆ ಅಧ್ಯಯನದಲ್ಲಿ ಕಂಡುಬಂದಿದೆ. ಆದರೆ ನೀರು ಮತ್ತು ಬೆಳಕಿನ ಮಾಲಿನ್ಯದ ಬಗ್ಗೆ ಲಭ್ಯವಿರುವ ಸಾಕ್ಷ್ಯಗಳು ಸ್ಪಷ್ಟವಾಗಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ಮೆದುಳಿನ ಮೇಲೂ ಪರಿಣಾಮ ಬೀರುತ್ತದೆಯೇ?

ವಾಯುಮಾಲಿನ್ಯದಲ್ಲಿರುವ ಕೆಲವು ಅಂಶಗಳು ದೇಹದಲ್ಲಿ ದೀರ್ಘಕಾಲದ ಉರಿಯೂತ ಮತ್ತು ನರಗಳಿಗೆ ಹಾನಿಯಂತಹ ಪರಿಣಾಮಗಳನ್ನು ಉಂಟುಮಾಡಬಹುದು. ಇಂತಹ ಬದಲಾವಣೆಗಳು ಮೆದುಳಿನ ಕಾರ್ಯವೈಖರಿ, ಮನಸ್ಥಿತಿ ಮತ್ತು ಒತ್ತಡವನ್ನು ಎದುರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಇದಲ್ಲದೆ, ಆರ್ಸೆನಿಕ್, ಸೀಸ ಮತ್ತು ಲಿಥಿಯಂನಂತಹ ಅಂಶಗಳಿಂದ ಕಲುಷಿತವಾದ ನೀರು ಹಾಗೂ ಪರಿಸರದ ಶಬ್ದವೂ ನರಮಂಡಲ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಧ್ಯಯನ ಪರಿಶೀಲಿಸಿದೆ.

ಯುವಕರಿಗೂ ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ ಪ್ರತಿ ವರ್ಷ 7.2 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 15ರಿಂದ 29 ವರ್ಷದ ಯುವಕರಲ್ಲಿ ಇದು ಪ್ರಮುಖ ಸಾವಿನ ಕಾರಣಗಳಲ್ಲಿ ಒಂದಾಗಿದೆ ಎಂದು ವರದಿ ತಿಳಿಸುತ್ತದೆ. ಮಾಲಿನ್ಯವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲು ಅಸಾಧ್ಯ. ಆದರೆ ಇದರಿಂದಲೂ ಮಾನಸಿಕ ಸಮಸ್ಯೆ ಸಾಧ್ಯತೆ ಇದೆ. ಹೀಗಾಗಿ ವಾಯುಮಾಲಿನ್ಯವನ್ನು ಕೇವಲ ಶ್ವಾಸಕೋಶ ಮತ್ತು ಹೃದಯದ ಆರೋಗ್ಯದ ಸಮಸ್ಯೆಯಾಗಿ ನೋಡದೆ, ಮಾನಸಿಕ ಆರೋಗ್ಯದ ಮೇಲೂ ಅದರ ಸಂಭವನೀಯ ಪರಿಣಾಮಗಳನ್ನು ಪರಿಗಣಿಸುವ ಅಗತ್ಯವಿದೆ ಎಂದು ಸಂಶೋಧಕರು ಒತ್ತಿಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Gut cleanse foods: ಕರುಳಿನಲ್ಲಿ ಶೇಖರಣೆಯಾದ ಹಳೇ ಕೊಳೆಯನ್ನು ಹೊರಹಾಕುವ 10 ಸೂಪರ್ ಆಹಾರಗಳಿವು!
ಲೇಟ್ ನೈಟ್ ಹೊಟ್ಟೆ ಬಿರಿಯುವಷ್ಟು ಊಟ ಮಾಡ್ತೀರಾ? ಹಾಗಿದ್ರೆ ನಿಮ್ಮನ್ನು ಆ ದೇವ್ರೇ ಕಾಪಾಡ್ಬೇಕು..!