ಚಳಿಗಾಲದ ಆಹಾರದಲ್ಲಿ ಎಳ್ಳು ಸೇರಿಸಿಕೊಳ್ಳಿ: ಆಧುನಿಕ ಕಾಲಕ್ಕೆ ಪುರಾತನ ಪರಿಹಾರ!

Published : Jan 09, 2026, 07:37 PM IST
Add Sesame Seeds to Winter Diet Ancient Remedy for Modern Health Needs

ಸಾರಾಂಶ

ಚಳಿಗಾಲದಲ್ಲಿ ದೇಹಕ್ಕೆ ವಿಶೇಷ ಪೋಷಣೆಯ ಅಗತ್ಯವಿರುತ್ತದೆ. ಈ ಸಮಯದಲ್ಲಿ ಸಾಂಪ್ರದಾಯಿಕವಾಗಿ ಬಳಸುವ ಎಳ್ಳು, ದೇಹಕ್ಕೆ ಶಾಖ, ಶಕ್ತಿ ನೀಡಿ, ಕೀಲು ನೋವು, ಚರ್ಮದ ಶುಷ್ಕತೆ ಮತ್ತು ದುರ್ಬಲ ರೋಗನಿರೋಧಕ ಶಕ್ತಿಯಂತಹ ಸಮಸ್ಯೆ ಎದುರಿಸಲು ಸಹಾಯ ಮಾಡುತ್ತದೆ. ಈ ಕಾಲೋಚಿತ ಸೂಪರ್‌ಫುಡ್ ಅನ್ನು ನಿರ್ಲಕ್ಷಿಸಬಾರದು..

  • ಸುಪರ್ಣಾ ಮುಖರ್ಜಿ, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟಿಕ್ಸ್

ಚಳಿಗಾಲ ಆರಂಭವಾಗಿದೆ. ಈ ಸಲದ ಚಳಿಗಾಲದಲ್ಲಿ ಚಳಿ ಸ್ವಲ್ಪ ಜಾಸ್ತಿಯೇ ಇದೆ. ಸಾಮಾನ್ಯವಾಗಿ ಚಳಿಗಾಲ ಆರಂಭವಾಗುತ್ತಿದ್ದಂತೆ ತಾಪಮಾನ ಕಡಿಮೆಯಾಗುತ್ತದೆ ಮತ್ತು ಮಾನವನ ದೇಹದಲ್ಲಿ ಜೈವಿಕ ಬದಲಾವಣೆಗಳು ನಡೆಯುತ್ತವೆ. ವೈದ್ಯಕೀಯ ಪೋಷಣಾ ಶಾಸ್ತ್ರದ ಪ್ರಕಾರ, ಚಳಿಗಾಲವು ಕೇವಲ ಋತುಮಾನದ ಬದಲಾವಣೆ ಮಾತ್ರವಲ್ಲ, ಇದು ದೇಹದ ಆಂತರಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಚಯಾಪಚಯ ಕ್ರಿಯೆಯ ಶಾಖ ಅಥವಾ 'ಜಠರಾಗ್ನಿ'ಯನ್ನು ತೀವ್ರಗೊಳಿಸಬೇಕಾದ ಸಮಯ. ಇಂದಿನ ಆಧುನಿಕ ಕೃಷಿ ಪದ್ಧತಿಯಿಂದಾಗಿ ಈ ಹಿಂದೆ ಚಳಿಗಾಲದಲ್ಲಿ ಮಾತ್ರ ದೊರೆಯುತ್ತಿದ್ದ ಹಣ್ಣು-ತರಕಾರಿಗಳು ಎಲ್ಲಾ ಕಾಲದಲ್ಲೂ ಸಿಗುತ್ತವೆ. ಆದರೆ ಪ್ರಕೃತಿಯ ನಿಯಮ ಮೀರಿ ಇವುಗಳನ್ನು ಸೇವಿಸುತ್ತಿರುವ ಕಾರಣಕ್ಕೆ ನಾವು ಬೆಲೆ ತೆರಬೇಕಾಗಿ ಬಂದಿದೆ.

ಭಾರತದ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಗಮನಿಸಿದರೆ, ಚಳಿಗಾಲದ ಆಗಮನವು ಎಳ್ಳಿನ ಸುಗ್ಗಿಯೊಂದಿಗೆ ಪ್ರಾರಂಭವಾಗುತ್ತದೆ. ಎಳ್ಳು ಕೇವಲ ಅಲಂಕಾರಿಕ ಪದಾರ್ಥವಲ್ಲ, ಈ ಪುಟ್ಟ ಬೀಜದಲ್ಲಿ ಚಳಿಗಾಲದ ಸಮಸ್ಯೆಗಳನ್ನು ಎದುರಿಸುವ ಪೌಷ್ಟಿಕಾಂಶದ ನಿಧಿಯೇ ಅಡಗಿದೆ. ಜನವರಿಯಲ್ಲಿ ಆಚರಿಸಲಾಗುವ ಮಕರ ಸಂಕ್ರಾಂತಿ, ಲೋಹ್ರಿ ಮತ್ತು ಪೊಂಗಲ್ ಹಬ್ಬಗಳಲ್ಲಿ ಎಳ್ಳನ್ನು ಬಳಸುವುದು ಕೇವಲ ಆಚರಣೆ ಸುಲುವಾಗಿ ಮಾತ್ರವೇ ಅಲ್ಲ, ಅದೊಂದು ಹಳೆಯ ಕಾಲದ 'ಆರೋಗ್ಯ ಪಾಲನಾ' ಪದ್ಧತಿಯಾಗಿದೆ.

ಶಾಖ ಒದಗಿಸುವ ಶಕ್ತಿ ಕೇಂದ್ರ

ಎಳ್ಳು ಉತ್ತಮ ಗುಣಮಟ್ಟದ ಫ್ಯಾಟಿ ಆಸಿಡ್ಸ್ ಮತ್ತು ಪ್ರೋಟೀನ್‌ಗಳ ಮೂಲವಾಗಿದೆ. ಚಳಿಗಾಲದಲ್ಲಿ ದೇಹವು ಹೆಚ್ಚಿನ ಶಾಖವನ್ನು ಉತ್ಪಾದಿಸಲು ಹೆಚ್ಚು ಶಕ್ತಿಯನ್ನು ವ್ಯಯಿಸುತ್ತದೆ. ಹಾಗಾಗಿ ಎಳ್ಳು ಸೇವಿಸಿದರೆ ಎಳ್ಳಿನಲ್ಲಿರುವ ಅಪರೂಪದ ಫ್ಯಾಟಿ ಆಸಿಡ್ಸ್ ದೇಹಕ್ಕೆ ನಿರಂತರ ಶಕ್ತಿಯನ್ನು ನೀಡುತ್ತವೆ. ಇದು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಆಲಸ್ಯ ಮತ್ತು ಜಡತ್ವವನ್ನು ನಿವಾರಿಸುತ್ತದೆ.

ಎಳ್ಳಿನಲ್ಲಿರುವ 'ಸೀಸಮಿನ್' ಮತ್ತು 'ಸೀಸಮೋಲಿನ್' ಎಂಬ ಸಂಯುಕ್ತಗಳು ಬಲಿಷ್ಠ ಉತ್ಕರ್ಷಣ ನಿರೋಧಕ (ಆಂಟಿ ಆಕ್ಸಿಡೆಂಟ್) ಗುಣಗಳನ್ನು ಹೊಂದಿವೆ. ಬೆಲ್ಲದೊಂದಿಗೆ ಎಳ್ಳನ್ನು ಸೇವಿಸುವುದರಿಂದ (ಉದಾಹರಣೆಗೆ ಸಿಹಿ ಪೊಂಗಲ್ ಅಥವಾ ಎಳ್ಳು-ಬೆಲ್ಲ), ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾಗುತ್ತದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಿ, ರಕ್ತಕ್ಕೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ ಮತ್ತು ಕೀಲುಗಳನ್ನು ಬೆಚ್ಚಗಿಡುತ್ತದೆ. ಎಳ್ಳಿನಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕವು ಚಳಿಗಾಲದಲ್ಲಿ ಹೆಚ್ಚಾಗುವ ಕೀಲು ನೋವು ಮತ್ತು ಬೆನ್ನಿನ ಬಿಗಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚರ್ಮ ಒಣಗುವ ವಿರುದ್ಧ ರಕ್ಷಣೆ

ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆ ಇರುವುದರಿಂದ ಚರ್ಮ ಮತ್ತು ಉಸಿರಾಟದ ನಾಳಗಳು ಒಣಗುತ್ತವೆ. ಎಳ್ಳಿನಲ್ಲಿರುವ ನೈಸರ್ಗಿಕ ತೈಲಗಳು ದೇಹಕ್ಕೆ ಒಳಗಿನಿಂದ 'ಲೂಬ್ರಿಕೇಶನ್' ಅಥವಾ ಮೃದುತ್ವವನ್ನು ನೀಡುತ್ತವೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಆರೋಗ್ಯಕರ ಕೊಬ್ಬಿನ ಕೊರತೆಯಾದಾಗ ಚರ್ಮ ಒಣಗುವುದು ಮತ್ತು ತುರಿಕೆ ಉಂಟಾಗುವುದು ಇತ್ಯಾದಿ ಸಮಸ್ಯೆ ಉಂಟಾಗುತ್ತದೆ. ಅಷ್ಟೇ ಅಲ್ಲದೆ, ಎಳ್ಳು ಕೀಲುಗಳ ನಡುವಿನ ದ್ರವ ಸರಿಯಾಗಿರುವಂತೆ ನೋಡಿಕೊಳ್ಳುವ ಮೂಲಕ ಮೂಳೆಗಳ ಘರ್ಷಣೆಯನ್ನು ತಪ್ಪಿಸುತ್ತದೆ.

ರೋಗನಿರೋಧಕ ಶಕ್ತಿಯ ರಕ್ಷಾಕವಚವಾಗಿ ಹಬ್ಬಗಳು

ಮಕರ ಸಂಕ್ರಾಂತಿಯ ಸಮಯದಲ್ಲಿ ಚಳಿಗಾಲದ ಶುಷ್ಕತೆ ಗರಿಷ್ಠ ಮಟ್ಟದಲ್ಲಿರುತ್ತದೆ. ಈ ಸಮಯದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸುವುದರಿಂದ ದೇಹಕ್ಕೆ ಹೆಚ್ಚಿನ ಖನಿಜಗಳ ಅಗತ್ಯವಿರುತ್ತದೆ. ಎಳ್ಳಿನಲ್ಲಿರುವ ಸತು, ಸೆಲೆನಿಯಮ್ ಮತ್ತು ಮೆಗ್ನೀಸಿಯಮ್ ರೋಗನಿರೋಧಕ ಜೀವಕೋಶಗಳ ಉತ್ಪಾದನೆಗೆ ಬಹಳ ಮುಖ್ಯ. ವಿಟಮಿನ್ ಮಾತ್ರೆಗಳು ಇಲ್ಲದ ಕಾಲದಲ್ಲೇ ಈ ಹಬ್ಬದ ಆಹಾರಗಳು ನಮ್ಮನ್ನು ಕಾಲೋಚಿತ ಜ್ವರಗಳಿಂದ ರಕ್ಷಿಸುತ್ತಿದ್ದವು.

ಚಳಿಗಾಲದಲ್ಲಿ ಇಂತಹ ಆರೋಗ್ಯಕರ ಕೊಬ್ಬಿನಾಂಶದ ಕೊರತೆಯು ಚರ್ಮದಲ್ಲಿ ಬಿರುಕುಗಳು ಉಂಟಾಗಲು ಕಾರಣವಾಗುತ್ತದೆ. ಇದರಿಂದ ಚರ್ಮವು ಒಣಗುವುದು ಮತ್ತು ತುರಿಕೆ ಉಂಟಾಗುತ್ತದೆ. ಎಳ್ಳು ಚರ್ಮದಲ್ಲಿ ತೇವಾಂಶವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಇದು ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ನೆರವಾಗುತ್ತದೆ. ಏಕೆಂದರೆ ಮೂಗಿನ ಮಾರ್ಗದಲ್ಲಿರುವ ಒಣ ಲೋಳೆಯ ಪೊರೆಗಳು ಗಾಳಿಯಲ್ಲಿರುವ ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ತಡೆಯುವಲ್ಲಿ ವಿಫಲವಾಗುತ್ತವೆ, ಇದರಿಂದ ಸೋಂಕುಗಳು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಕೀಲುಗಳ ನಡುವಿನ ಘರ್ಷಣೆಯನ್ನು ತಡೆಯಲು ಎಳ್ಳು ಸಹಾಯ ಮಾಡುತ್ತದೆ. ಚಳಿಯಿಂದಾಗಿ ಕೀಲುಗಳಲ್ಲಿನ ದ್ರವವು ಕುಗ್ಗಬಹುದು, ಆದರೆ ಎಳ್ಳಿನಲ್ಲಿರುವ ತಾಮ್ರ ಮತ್ತು ಕ್ಯಾಲ್ಸಿಯಂ ಅಂಶಗಳು ಮೂಳೆಯ ಸಾಂದ್ರತೆ ಮತ್ತು ಕೀಲುಗಳ ಆರೋಗ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇವು ಚಳಿಗಾಲದ ನೋವುಗಳ ವಿರುದ್ಧ ಪೌಷ್ಟಿಕಾಂಶದ 'ರಕ್ಷಾಕವಚ'ವಾಗಿ ಕಾರ್ಯನಿರ್ವಹಿಸುತ್ತವೆ.

ಮಾನವರಿಗೆ ರಕ್ಷಣೆ ಒದಗಿಸುವ ಹಬ್ಬಗಳು

ಸೂರ್ಯನ ಪಥ ಬದಲಾವಣೆ ಅನ್ನುವುದು ಮಕರ ಸಂಕ್ರಾಂತಿಯ ಸಂಕೇತ. ಆದರೆ ಈ ಬದಲಾವಣೆ ನಡೆಯುವುದು ಚಳಿಗಾಲದ ಶುಷ್ಕತೆ ಗರಿಷ್ಠ ಮಟ್ಟದಲ್ಲಿದ್ದಾಗ. ರೋಗನಿರೋಧಕ ಶಕ್ತಿ ಅತ್ಯಂತ ಕಡಿಮೆ ಇರುವ ಈ ಸಮಯದಲ್ಲಿ, ದೇಹಕ್ಕೆ ಅಗತ್ಯವಿರುವ ಹೆಚ್ಚಿನ ಖನಿಜಾಂಶಗಳನ್ನು ಎಳ್ಳು ಸೇವನೆಯ ಸಂಪ್ರದಾಯವು ಒದಗಿಸುತ್ತದೆ. ಜನವರಿಯ ಈ ಸುಗ್ಗಿ ಹಬ್ಬಗಳು ವರ್ಷದ 'ರೀಸೆಟ್ ಬಟನ್'ನಂತೆ ಕಾರ್ಯನಿರ್ವಹಿಸುತ್ತವೆ. ಈ ಹಬ್ಬಗಳಲ್ಲಿ ತಯಾರಿಸುವ ಆಹಾರಗಳ ಮೂಲಕ ಸತು, ಸೆಲೆನಿಯಮ್ ಮತ್ತು ಮೆಗ್ನೀಸಿಯಮ್ ದೇಹಕ್ಕೆ ಸೇರುತ್ತವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಟಿ-ಜೀವಕೋಶಗಳ ಉತ್ಪಾದನೆಗೆ ಬಹಳ ಮುಖ್ಯ. ವಿಟಮಿನ್ ಮಾತ್ರೆಗಳ ಪರಿಚಯವೇ ಇಲ್ಲದ ಕಾಲದಿಂದಲೂ ಇಂತಹ ಆಹಾರ ಪದ್ಧತಿಗಳು ನಮ್ಮನ್ನು ಕಾಲೋಚಿತ ಜ್ವರಗಳಿಂದ ರಕ್ಷಿಸುತ್ತಾ ಬಂದಿವೆ.

"ಬಿಸಿಯಾದ" ಆಹಾರಗಳನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ?

ಋತುಮಾನಕ್ಕೆ ಅನುಗುಣವಾಗಿ ಹಿರಿಯರು ಸೂಚಿಸಿದ ಆಹಾರ ಪದ್ಧತಿಗಳನ್ನು ನಾವು ನಿರ್ಲಕ್ಷಿಸಿದರೆ ನಮ್ಮ ದೇಹಕ್ಕೆ ಏನಾಗುತ್ತದೆ ಗೊತ್ತೇ? ಸಾಮಾನ್ಯವಾಗಿ ಈಗ ಹವಾನಿಯಂತ್ರಿತ ಕಚೇರಿಗಳು ಮತ್ತು ಸಂಸ್ಕರಿಸಿದ ತಂಪು ಆಹಾರಗಳನ್ನು ಬಳಸುವ ಇಂದಿನ ಜಗತ್ತಿನಲ್ಲಿ, ಅನೇಕ ಜನರು ತಮ್ಮ ನೈಸರ್ಗಿಕ ಜೈವಿಕ ಕ್ರಿಯೆಗಳಿಂದ ದೂರವಾಗುತ್ತಿದ್ದಾರೆ. ಚಳಿಗಾಲದಲ್ಲಿ ದೇಹಕ್ಕೆ ಉಷ್ಣತೆ ನೀಡುವ ಮತ್ತು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಎಳ್ಳಿನಂತಹ ಆಹಾರಗಳನ್ನು ಸೇವಿಸುವುದಿಲ್ಲ. ಅದರಿಂದ ಏನೇನಾಗಬಹುದು ಅನ್ನುವುದು ಇಲ್ಲಿದೆ;

1. ಚಯಾಪಚಯ ಕ್ರಿಯೆಯ ಕುಂಠಿತ

ಧಾನ್ಯಗಳಲ್ಲಿ ಅಡಗಿರುವ ಶಾಖೋತ್ಪನ್ನ ಮಾಡುವ ಕೊಬ್ಬಿನಾಂಶ ದೇಹಕ್ಕೆ ಸಿಗದಿದ್ದಾಗ, ದೇಹವು ಶಕ್ತಿಯನ್ನು ಉಳಿಸಲು ತನ್ನ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರ ಪರಿಣಾಮವಾಗಿ ನಿರಂತರ ಆಯಾಸ, ಉತ್ಸಾಹದ ಕೊರತೆ ಕಾಡುತ್ತದೆ ಮತ್ತು ಚಳಿಗಾಲದ ತಿಂಗಳುಗಳಲ್ಲಿ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಕಷ್ಟವಾಗಬಹುದು. ಚಳಿಗಾಲದಲ್ಲಿ ನಾವು ಈಗಾಗಲೇ ಸ್ವಲ್ಪ ಸೋಮಾರಿಗಳಾಗಿರುತ್ತೇವೆ ಮತ್ತು ಬೆಚ್ಚಗಿನ ಹೊದಿಕೆಯನ್ನು ಹೆಚ್ಚು ಇಷ್ಟಪಡುತ್ತೇವೆ. ಅಂತಹ ಸಮಯದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಳ್ಳು ಒಂದು ಉತ್ತಮ ಆಹಾರವಾಗಿದೆ.

2. ಮೂಳೆ ಮತ್ತು ಖನಿಜಾಂಶಗಳ ಸವಕಳಿ

ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆ ಇರುವುದರಿಂದ ದೇಹದಲ್ಲಿ ವಿಟಮಿನ್ ಡಿ ಪ್ರಮಾಣ ಕಡಿಮೆಯಾಗುತ್ತದೆ. ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ವಿಟಮಿನ್ ಡಿ ಅತ್ಯಗತ್ಯ. ಇದರ ಕೊರತೆಯಾದಾಗ ದೇಹವು ರಕ್ತದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ಸರಿದೂಗಿಸಲು ಮೂಳೆಗಳಿಂದ ಕ್ಯಾಲ್ಸಿಯಂ ಅನ್ನು ಎಳೆದುಕೊಳ್ಳಲು ಪ್ರಾರಂಭಿಸುತ್ತದೆ. ಎಳ್ಳು ಸಸ್ಯಜನ್ಯ ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದ್ದು, ಮೂಳೆಗಳ ಈ ಸವಕಳಿಯನ್ನು ತಡೆಯಲು ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಡಿಗೆ ಮಾತ್ರೆಗಳನ್ನು ಅವಲಂಬಿಸುವ ಬದಲು, ಪ್ರತಿದಿನ ಕನಿಷ್ಠ 30 ಗ್ರಾಂ ಎಳ್ಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

3. ಜೀರ್ಣಕ್ರಿಯೆ ನಿಧಾನವಾಗುವುದು

ತಣ್ಣನೆಯ ಹವಾಮಾನವು ನೈಸರ್ಗಿಕವಾಗಿ ಜೀರ್ಣಾಂಗವ್ಯೂಹವನ್ನು ಸಂಕುಚನಗೊಳಿಸುತ್ತದೆ, ಇದು ಮಲಬದ್ಧತೆ ಅಥವಾ ನಿಧಾನಗತಿಯ ಜೀರ್ಣಕ್ರಿಯೆಗೆ ದಾರಿ ಮಾಡಿಕೊಡುತ್ತದೆ. ಎಳ್ಳಿನಲ್ಲಿರುವ ಹೆಚ್ಚಿನ ನಾರಿನಂಶವು ಜೀರ್ಣಾಂಗ ವ್ಯವಸ್ಥೆಯು ಸರಾಗವಾಗಿ ಕೆಲಸ ಮಾಡಲು ಅಗತ್ಯವಾದ ಮೃದುತ್ವವನ್ನು ನೀಡುತ್ತದೆ. ಇದು ದೇಹದಲ್ಲಿ ವಿಷಕಾರಿ ಅಂಶಗಳು ಸಂಗ್ರಹವಾಗುವುದನ್ನು ತಡೆದು, ಚರ್ಮದ ಸಮಸ್ಯೆಗಳು ಉಂಟಾಗದಂತೆ ಮತ್ತು ಶಕ್ತಿ ಕುಂದದಂತೆ ನೋಡಿಕೊಳ್ಳುತ್ತದೆ.

ನಮ್ಮ ಆರೋಗ್ಯ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರಗಳು ಹೆಚ್ಚಾಗಿ ಅತ್ಯಂತ ಸರಳವಾದ ಪದಾರ್ಥಗಳಲ್ಲೇ ಅಡಗಿರುತ್ತವೆ ಎಂಬುದಕ್ಕೆ ಎಳ್ಳು ಒಂದು ಪ್ರಬಲ ಉದಾಹರಣೆ. ನಮ್ಮ ಚಳಿಗಾಲದಲ್ಲಿ ಆಚರಿಸುವ ಹಬ್ಬದ ಆಚರಣೆಗಳು ಭೂಮಿಯ ಕಠಿಣ ಹವಾಮಾನಕ್ಕೆ ಅನುಗುಣವಾಗಿ ನಮ್ಮ ದೇಹದ ರಸಾಯನಶಾಸ್ತ್ರವನ್ನು ಸರಿಹೊಂದಿಸುವ ಅತ್ಯಂತ ಬುದ್ಧಿವಂತ ಮತ್ತು ವೈಜ್ಞಾನಿಕ ಮಾರ್ಗಗಳಾಗಿವೆ. ಚಳಿಗಾಲದ ಅತ್ಯುತ್ತಮ 'ಸೂಪರ್ ಫುಡ್' ಆದ ಎಳ್ಳನ್ನು ಬಳಸುವ ಮೂಲಕ, ನಮ್ಮ ದೇಹಕ್ಕೆ ಚಳಿಯಿಂದ ರಕ್ಷಣೆ ನೀಡಲು ಅಗತ್ಯವಿರುವ ನಿಖರವಾದ ಉಷ್ಣತೆಯನ್ನು ನಾವು ಒದಗಿಸಬಹುದು.

ಇಂತಹ ಕಾಲಕ್ಕೆ ತಕ್ಕ ಆಹಾರ ಪದ್ಧತಿಗಳನ್ನು ನಾವು ಕೈಬಿಟ್ಟರೆ, ನಮಗೆ ನಾವೇ ಒಂದು ರೀತಿಯ ಅನ್ಯಾಯ ಮಾಡಿದಂತೆ. ಇದರ ಪರಿಣಾಮವಾಗಿ ದೇಹದಲ್ಲಿ ಜಡತ್ವ, ಶುಷ್ಕತೆ ಕಾಣಿಸಿಕೊಳ್ಳುವುದಲ್ಲದೆ, ಚಳಿಗಾಲದ ಕಾಯಿಲೆಗಳಿಗೆ ನಾವು ಸುಲಭವಾಗಿ ತುತ್ತಾಗುತ್ತೇವೆ.

ಆದರೆ, ಈ ಸಂಪ್ರದಾಯವನ್ನು ಆಚರಿಸುವುದು ನಾವು ನಮ್ಮ ಪೂರ್ವಜರ ಭಾರಿ ಜ್ಞಾನಕ್ಕೆ ಸಲ್ಲಿಸುವ ಗೌರವವಾಗಿದೆ. ಚಳಿಗಾಲದ ತಿಂಗಳುಗಳಲ್ಲಿ ಎಳ್ಳನ್ನು ಸೇವಿಸುವುದು ಕೇವಲ ರುಚಿಗಾಗಿ ಅಲ್ಲ; ಅದು ನಮ್ಮ ದೇಹದ ಒಳಗಿನ 'ಜಠರಾಗ್ನಿ'ಯನ್ನು ಪೋಷಿಸುವ ಮತ್ತು ನಾವು ಚಳಿಗಾಲದಲ್ಲಿ ಉತ್ಸಾಹದಿಂದ ಬದುಕುವಂತೆ ಮಾಡುವ ಒಂದು ದಾರಿಯಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods for Fatty Liver: ದಿನಾ ಈ 4 ಡ್ರೈ ಫ್ರೂಟ್ಸ್ ತಿಂದ್ರೆ ನಿಮ್ಮ ಲಿವರ್ ಆರೋಗ್ಯ ಸೂಪರ್ ಆಗಿರುತ್ತೆ
'ಸೊಂಟದ ವಿಷ್ಯ'ವೇ ಫಿಟ್‌ನೆಸ್‌ ಮಂತ್ರ ಎಂಬ ಸೀಕ್ರೆಟ್ ಬಯಲು ಮಾಡಿದ 'ಮೈನೆ ಪ್ಯಾರ್ ಕಿಯಾ' ಸುಂದರಿ ಭಾಗ್ಯಶ್ರೀ!