ದಿನಕ್ಕೆ ಅಷ್ಟು ನೀರು ಕುಡೀರಿ, ಇಷ್ಟು ನೀರು ಕುಡೀರಿ ಅಂತಾರೆ, ಭರ್ತಿ ನೀರು ಕುಡಿದೋನ ಕಥೆ ಏನಾಗಿತ್ತು?

By Suvarna News  |  First Published Jul 21, 2023, 3:22 PM IST

ನೀರಿಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಪ್ರತಿ ದಿನ ಮೂರು ಲೀಟರ್ ನೀರು ಕುಡಿಯಬೇಕೆಂದು ವೈದ್ಯರು ಸಲಹೆ ನೀಡ್ತಾರೆ. ನೀರಿನ ಸೇವನೆ ಕೂಡ ಮಿತಿಯಲ್ಲಿರಬೇಕು. ಎಷ್ಟೇ ನೀರು ಕುಡಿದ್ರೂ ಬಾಯಾರಿಕೆ ಹೋಗ್ತಿಲ್ಲ ಎಂದಾದ್ರೆ ವೈದ್ಯರ ಭೇಟಿ ಅನಿವಾರ್ಯ. 
 


ದೇಹಕ್ಕೆ ನೀರು ಬಹಳ ಅವಶ್ಯಕ. ನೀರು ಕುಡಿಯೋದ್ರಿಂದ ದೇಹ ಹೈಡ್ರೇಟ್ ಆಗಿರುತ್ತದೆ. ನೀರಿನಿಂದಲೇ ದೇಹದ ಅನೇಕ ಕ್ರಿಯೆಗಳು ಸರಾಗವಾಗಿ ನಡೆಯುತ್ತದೆ. ಅದರಲ್ಲೂ ಬೇಸಿಗೆಯಲ್ಲಂತೂ ಮೈ ಹೆಚ್ಚು ಬೆವರುವುದರಿಂದ ನೀರನ್ನು ಹೆಚ್ಚು ಹೆಚ್ಚು ಕುಡಿಯಬೇಕು. ನಾವು ದೇಹಕ್ಕೆ ಅಗತ್ಯವಿದ್ದಷ್ಟು ನೀರು ಪೂರೈಸಿದಾಗ ಮೂತ್ರದ ಮೂಲಕ ದೇಹದ ಅನೇಕ ವಿಷಗಳು ಹೊರಹೋಗುತ್ತವೆ.

ನೀರು (Water) ನ್ನು ಹೆಚ್ಚು ಕುಡೀಬೇಕು ನಿಜ.. ಆದರೆ ಯಾವುದೇ ಆಗಲೀ ಅದು ಅತಿಯಾದಾಗ ಅಥವಾ ಮಿತಿಮೀರಿದಾಗ ಅದರಿಂದ ನಮ್ಮ ಶರೀರ (Body) ಕ್ಕೆ ಹಾನಿ ತಪ್ಪಿದ್ದಲ್ಲ. ಹಾಗೆಯೇ ನೀರು ಕೂಡ ದೇಹದಲ್ಲಿ ಅತಿಯಾಗಬಾರದು. ಕಡಿಮೆ ನೀರನ್ನು ಕುಡಿಯೋದ್ರಿಂದ ಹೇಗೆ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆಯೋ ಹಾಗೆಯೇ ಹೆಚ್ಚು ನೀರು ಕುಡಿದಾಗಲೂ ಅನೇಕ ಸಮಸ್ಯೆಗಳು ಎದುರಾಗುತ್ತವೆ. ನಾವು ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದಾಗ ಮೂತ್ರಪಿಂಡ (Kidney), ಯಕೃತ್ತು ಮುಂತಾದ ಅಂಗಗಳ ಮೇಲೆ ಹೆಚ್ಚು ಒತ್ತಡ (Stres) ಬೀಳುತ್ತದೆ. ಇದರಿಂದ ಆ ಅಂಗಗಳು ಹಾನಿಗೊಳಗಾಗಬಹುದು. ಇಂಗ್ಲೆಂಡ್ ನಲ್ಲಿರುವ ಒಬ್ಬ ವ್ಯಕ್ತಿ ಕೂಡ ನೀರನ್ನು ಅತಿಯಾಗಿ ಕುಡೀತಿದ್ದ. ಅವನು ಅಷ್ಟು ನೀರು ಕುಡಿಯಲು ಕಾರಣವೇನು, ಅವನಿಗೆ ಏನಾಗಿತ್ತು ಎಂಬ ಮಾಹಿತಿ ಇಲ್ಲಿದೆ.

Latest Videos

undefined

HEALTH TIPS: ಮಲೆನಾಡಲ್ಲಿ ಬೆಳಗ್ಗೆ ತುಪ್ಪ, ಬೆಲ್ಲದ ಜೊತೆ ತಿಂಡಿ ತಿನ್ನೋದ್ಯಾಕೆ ಗೊತ್ತಾ?

ದಿನಕ್ಕೆ 10 ಲೀಟರ್ ನೀರು ಕುಡಿಯುವ ಈತನಿಗೆ ಆಗಿದ್ದೇನು ಗೊತ್ತಾ? : ಇಂಗ್ಲೆಂಡಿನ ನಿವಾಸಿಯಾಗಿರುವ ಜೋನಾಥನ್ ಪ್ಲಮರ್ ಎನ್ನುವವನಿಗೆ ಬಾಯಾರಿಕೆ ನೀಗುತ್ತಲೇ ಇರಲಿಲ್ಲ. ಹಾಗಾಗಿ ಅವನು ದಿನಕ್ಕೆ 10 ಲೀಟರ್ ನೀರು ಕುಡಿಯುತ್ತಿದ್ದ. ಅಷ್ಟು ನೀರು ಕುಡಿದ ನಂತರವೂ ಈತನಿಗೆ ಗಂಟಲು ಒಣಗಿದಂತಾಗಿ ಇನ್ನೂ ನೀರು ಕುಡಿಯಬೇಕು ಅನ್ನಿಸ್ತಿತ್ತು. ತನಗೆ ಏನೋ ಆಗಿದೆ ಎನ್ನುವ ಅನುಮಾನದೊಂದಿಗೆ ಜೋನಾಥನ್ ವೈದ್ಯರ ಬಳಿಗೆ ಹೋದ. ಜೋನಾಥನ್ ಅವರ ಸಮಸ್ಯೆಯನ್ನು ಕೇಳಿದ ವೈದ್ಯರು ಈತನಿಗೆ ಡಯಾಬಿಟೀಸ್ ಇರಬೇಕು. ಹಾಗಾಗಿಯೇ ಈತನಿಗೆ ಹೆಚ್ಚು ಬಾಯಾರಿಕೆ ಆಗ್ತಿದೆ ಎಂದು ಪರೀಕ್ಷೆ ನಡೆಸಿದರು. ಆದರೆ ಪರೀಕ್ಷೆ ನಡೆಸಿದ ನಂತರ ವೈದ್ಯರಿಗೆ ಆಶ್ಚರ್ಯ ಕಾದಿತ್ತು. ಏಕೆಂದರೆ ಜೋನಾಥನ್ ಅವರಿಗೆ ಡಯಾಬಿಟೀಸ್ ಸಮಸ್ಯೆ ಇರಲೇ ಇಲ್ಲ.

ಗಿನ್ನೆಸ್‌ ದಾಖಲೆಗಾಗಿ 7 ದಿನ ನಿದ್ರಿಸದೇ ಕಣ್ಣೀರು ಸುರಿಸಿ ಹುಚ್ಚಾಟ: ಈಗ ದೃಷ್ಟಿ ಕಳ್ಕೊಂಡು ಪರದಾಟ

ಕೆಲವು ದಿನಗಳ ನಂತರ ಜೋನಾಥನ್ ಕಣ್ಣಿನ ಪರೀಕ್ಷೆಗಾಗಿ ಡಾಕ್ಟರ್ ಬಳಿ ಹೋದ. ಆಗ ಆತನ ಕಣ್ಣಿನಲ್ಲಿ ಸಣ್ಣ ಗಡ್ಡೆ ಇರುವುದು ಕಂಡುಬಂತು. ಸಣ್ಣ ಗಡ್ಡೆ ಕಂಡುಬಂದ ನಂತರ ವೈದ್ಯರು ಜೋನಾಥನ್ ಗೆ ಎಂ ಆರ್ ಐ ಸ್ಕ್ಯಾನಿಂಗ್ ಮಾಡಿಸಿದರು. ಎಂ ಆರ್ ಐ ರಿಪೋರ್ಟ್ ನೋಡಿದ ವೈದ್ಯರು ಸ್ವತಃ ದಂಗಾಗಿದ್ದರು. ಏಕೆಂದರೆ ಜೋನಾಥನ್ ನ ಪಿಟ್ಯುಟರಿ ಗ್ರಂಥಿಯ ಬಳಿ ಬ್ರೇನ್ ಟ್ಯೂಮರ್ ಇರುವುದು ಕಂಡುಬಂದಿತ್ತು.

ಬ್ರೇನ್ ಟ್ಯೂಮರ್ ಕಾರಣದಿಂದಲೇ ಹೆಚ್ಚು ನೀರು ಕುಡೀತಿದ್ದ : ಜೋನಾಥನ್ ಮೆದುಳಿನಲ್ಲಿದ್ದ ಗಡ್ಡೆಯ ಕಾರಣದಿಂದ ಆತನ ಇಡೀ ದೇಹ ವ್ಯವಸ್ಥೆಯೇ ಹದಗೆಟ್ಟಿತ್ತು. ಅವನಿಗೆ ಮೆದುಳಿನಿಂದ ಯಾವುದೇ ರೀತಿಯ ಸಂಕೇತಗಳು ಸರಿಯಾಗಿ ಬರ್ತಿರ್ಲಿಲ್ಲ. ಆದ್ದರಿಂದ ಬಾಯಾರಿಕೆ ಇಲ್ಲದೇ ಇದ್ದಾಗಲೂ ಕೂಡ ಈತನಿಗೆ ನೀರು ಕುಡಿ ಎನ್ನುವ ಸಂದೇಶವನ್ನು ಮೆದುಳು ನೀಡುತ್ತಿತ್ತು. ಈ ಖಾಯಿಲೆಯಿಂದ ಈತ ಪ್ರತಿದಿನ 5 ಪಟ್ಟು ಹೆಚ್ಚು ನೀರು ಕುಡಿಯುತ್ತಿದ್ದ.

ತನಗೆ ಇರುವ ಅನಾರೋಗ್ಯದ ಬಗ್ಗೆ ಕೇಳಿದ ಜೋನಾಥನ್ ಆಘಾತಕ್ಕೆ ಒಳಗಾಗಿದ್ದ. ನಂತರದಲ್ಲಿ ಸುದೀರ್ಘ ಚಿಕಿತ್ಸೆಯ ನಂತರ ಗುಣಮುಖನಾಗಿದ್ದಾನೆ. ಜೋನಾಥನ್  ಹಾಗೆಯೇ ಕೆಲವರಿಗೆ ಶರೀರದ ಯಾವುದೋ ತೊಂದರೆಯಿಂದ ಅತಿಯಾದ ನೀರಡಿಕೆ ಉಂಟಾಗಬಹುದು ಅಥವಾ ಇನ್ಯಾವುದೋ ಸೂಚನೆಯ ಮೂಲಕ ನಿಮ್ಮ ಅನಾರೋಗ್ಯದ ಲಕ್ಷಣ ನಿಮಗೆ ಕಾಣಿಸಬಹುದು. ಆದ್ದರಿಂದ ಶರೀರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದರೂ ಅದನ್ನು ನಿರ್ಲಕ್ಷ್ಯಿಸಬೇಡಿ. ಆದಷ್ಟು ಬೇಗ ವೈದ್ಯರನ್ನು ಭೇಟಿಯಾಗಿ. 

click me!