ನಿಮ್ಮ ಮಗುವಿನಲ್ಲಿ ಬೊಜ್ಜು ಹೆಚ್ಚುತ್ತಿದೆಯಾ? ಕಡಿಮೆಗೊಳಿಸಲು ಈ ಟ್ರಿಕ್‌ ಬಳಸಿ!

By Suvarna NewsFirst Published Dec 29, 2019, 10:19 AM IST
Highlights

ಮಕ್ಕಳು ಮೈಕೈ ತುಂಬಿಕೊಂಡಿರಬೇಕು ಎಂಬುದು ಎಲ್ಲ ಹೆತ್ತವರ ಕನಸು. ಆದರೆ ಮಕ್ಕಳ ಮೈಯಲ್ಲಿ ಬೊಜ್ಜು ತುಂಬಿಕೊಳ್ಳುವುದು ಅಪಾಯಕಾರಿ. ಇದನ್ನು ಅವಾಯ್ಡ್‌ ಮಾಡುವುದು ಹೇಗೆ?
 

ಸುಟಿಸುಟಿಯಾಗಿ ಆಟವಾಡಿಕೊಂಡು ಇರಬೇಕಾದ ಮಕ್ಕಳು ಸುಮ್ಮನೇ ಸೋಫಾದಲ್ಲಿ ಕುಳಿತು ಟಿವಿ ನೋಡುತ್ತಾ, ಜಂಕ್‌ಫೂಡ್‌ ಹಾಳುಮೂಳು ತಿಂದು ಮೈತೂಕ ಹೆಚ್ಚಿಸಿಕೊಂಡು ಬೊಜ್ಜು ಬೆಳೆಸಿಕೊಂಡರೆ ಅಪ್ಪ- ಅಮ್ಮನಿಗೆ ಬೇಜಾರಾಗದೆ ಇರುತ್ತದೆಯೇ. ಬೊಜ್ಜಿಗೆ ಕೆಲವೊಮ್ಮೆ ಮಕ್ಕಳ ಆಹಾರದ ಅಭ್ಯಾಸ ಕಾರಣ ಇರಬಹುದು; ಇನ್ನು ಕೆಲವೊಮ್ಮೆ ಸಾಕಷ್ಟು ವ್ಯಾಯಾಮ ಇಲ್ಲದಿರುವುದು ಕಾರಣ ಆಗಿರಬಹುದು. ಆದರೆ ಮಕ್ಕಳಲ್ಲಿ ಬೊಜ್ಜು ಅತ್ಯಂತ ಹಾನಿಕರ.

ಹೊಟ್ಟೆ ಬೊಜ್ಜು ಕರಗಿಸೋದು ಕಷ್ಟವಲ್ಲ; ಇಲ್ಲಿದೆ ಸಿಂಪಲ್ ಟಿಪ್ಸ್!

ಭಾರತದ ಮಕ್ಕಳಲ್ಲಿ ಸುಮಾರು ಶೇಕಡಾ 88 ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ತೂಕದ ಮೈ ಇದೆ ಎಂದು ಒಂದು ಅಧ್ಯಯನದಲ್ಲಿ ಗೊತ್ತಾಗಿದೆ. ಇಂಥ ಅನಗತ್ಯ ಬೊಜ್ಜಿನಿಂದ ಟೈಪ್‌ 2 ಡಯಾಬಿಟೀಸ್‌ ಬರುವ ಸಾಧ್ಯತೆ ಇದೆ. ಅದನ್ನು ಅವಾಯ್ಡ್‌ ಮಾಡೋಕೆ ಮಕ್ಕಳ ಆಹಾರ ಹಾಗೂ ಚಟುವಟಿಕೆಯಲ್ಲಿ ಕೆಲವು ಬದಲಾವಣೆಗಳನ್ನು ನೀವು ಮಾಡಿಕೊಳ್ಳಬೇಕಾದೀತು.

ಸಾಕಷ್ಟು ನಿದ್ರಿಸಲಿ

ಮಕ್ಕಳಿಗೆ ನಿದ್ರೆ ತುಂಬಾ ಮುಖ್ಯ, 3ರಿಂಧ 5 ವರ್ಷದ ಮಕ್ಕಳು ದಿನದಲ್ಲಿ ಕನಿಷ್ಠ 10 ಗಂಟೆ, ಗರಿಷ್ಠ 13 ಗಂಟೆ ನಿದ್ರೆ ಮಾಡಲೇಬೇಕು. ಈ ಪ್ರಾಯದಲ್ಲಿ ಮಗು ಚಟುವಟಿಕೆಗಾಗಿ ತನ್ನೆಲ್ಲ ಶಕ್ತಿಯನ್ನೂ ವ್ಯಯಿಸುತ್ತದೆ. ನಿದ್ರೆ ಮಾಡುವ ಸಂದರ್ಭದಲ್ಲಿ ಮಗು ಸೇವಿಸುವ ಆಹಾರ ನಿಧಾನವಾಗಿ ಜಠರದಲ್ಲಿ ಪಚನಕ್ರಿಯೆಗೆ ಒಳಗಾಗುತ್ತದೆ. ಎಚ್ಚರದಲ್ಲಿ ಇದು ವೇಗವಾಗಿ ನಡೆಯುತ್ತದೆ. ನಿದ್ರೆ ಮೆದುಳಿನ ಜೀವಕೋಶಗಳಿಗೆ ಅಗತ್ಯವಾದ ವಿಶ್ರಾಂತಿಯನ್ನು ಒದಗಿಸಿ, ಎಚ್ಚರದ ಬಳಿಕ ದೇಹವನ್ನು ಚುರುಕಾಗಿಡುತ್ತದೆ. ನಿದ್ರೆಯಿಲ್ಲದಿದ್ದರೆ ಮೈ ಜಡವಾಗುವುದು ಸಹಜ.

ಸರಿಯಾದ ಸಮಯಕ್ಕೆ ನಿದ್ರೆ

ಮಗುವನ್ನು ನಿದ್ರೆ ಮಾಡಿಸುವುದಕ್ಕೆ ಒಂದು ನಿಗದಿತ ಸಮಯವನ್ನು ಕಲ್ಪಿಸಿಕೊಳ್ಳುವುದು ತುಂಬಾ ಮುಖ್ಯ. ಆ ಸಮಯಕ್ಕಿಂತ ಹದಿನೈದು ನಿಮಿಷಗಳ ಮೊದಲೇ ಆಟವನ್ನೆಲ್ಲ ಬಂದ್‌ ಮಾಡಿ, ಕತೆ ಹೇಳುವುದರ ಮೂಲಕ ಮಗುವನ್ನು ಬೆಡ್‌ಗೆ ಒಯ್ಯಬಹುದು. ದಿನಾ ನಿರ್ದಿಷ್ಟ ಸಮಯದಲ್ಲಿ ನಿದ್ರೆ ಹೋಗುವುದರಿಂದ ದೇಹದ ಜೈವಿಕ ಗಡಿಯಾರ ಸಮತೋಲನದಲ್ಲಿರುತ್ತದೆ.

ಆಯುರ್ವೇದಿಕ್ ಡಯಟ್; ತೂಕ ಇಳಿಸೋಕೂ ಸಹಕಾರಿನಾ?

ಸರಿಯಾದ ಹೊತ್ತಿಗೆ ಊಟ

ಸೂಕ್ತ ಸಮಯದಲ್ಲಿ ನಿದ್ರೆ ಮಾಡುವಂತೆ, ಸೂಕ್ತ ಸಮಯದಲ್ಲಿ ಊಟವನ್ನೂ ಮಗು ಮಾಡಲಿ. ಎರಡು ಊಟಗಳ ಮಧ್ಯೆ ಜಂಕ್‌ಫುಡ್‌, ಬೇಕರಿ ಐಟಂ, ಐಸ್‌ಕ್ರೀಮ್‌ ಅಥವಾ ಚಾಕಲೇಟ್‌ ಕೊಟ್ಟು ಮಗುವಿನ ಹಸಿವನ್ನು ಕೆಡಿಸದಿರಿ. ರಾತ್ರಿ ವೇಳೆ ಚಾಕಲೇಟ್‌ ತಿಂದರೆ ನಿದ್ರೆ ಕೆಡುತ್ತದೆ. ಊಟದಲ್ಲಿ ಸಾಕಷ್ಟು ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಿ. ಎರಡು ಊಟಗಳ ನಡುವೆ, ಆಟದ ಮಧ್ಯೆ ಮಕ್ಕಳು ಹಸಿವು ಎಂದರೆ ಹಣ್ಣು ಅಥವಾ ಸೌತೆಕಾಯಿ, ಕ್ಯಾರೆಟ್‌ನಂತಹ ತರಕಾರಿಗಳನ್ನು ಕಟ್‌ ಮಾಡಿ ಕೊಡಿ. ಊಟದಲ್ಲಿ ಪ್ರೊಟೀನ್‌ನಂತೆಯೇ ಬೇಳೆಕಾಳು, ತರಕಾರಿ ಇರುವುದು ಅಗತ್ಯ.

ಸ್ಕ್ರೀನ್‌ಟೈಮ್‌ ಮಿತಿಗೊಳಿಸಿ

ಇಂದಿನ ಮಕ್ಕಳು ಕಂಪ್ಯೂಟರ್‌ ಹಾಗೂ ಮೊಬೈಲ್‌ ನೋಡುವ ಅವಧಿ ಹೆಚ್ಚಾಗುತ್ತಿದೆ. ಇದನ್ನು ನೋಡುತ್ತಿರುವಷ್ಟು ಹೊತ್ತೂ ಮಕ್ಕಳು ಜಡವಾಗಿ ಒಂದೆಡೆ ಕುಳಿತೇ ಇರುತ್ತವೆ. ಇದು ಅಪಾಯಕಾರಿ. ಪುಟ್ಟ ಮಕ್ಕಳು ದಿನದಲ್ಲಿ ಹೆಚ್ಚೆಂದರೆ ಒಂದು ಗಂಟೆ, ಮಧ್ಯೆ ಆಗಾಗ ಬಿಡುವು ಕೊಟ್ಟು ಕಂಪ್ಯೂಟರ್‌ ನೋಡಬಹುದು. ಅರ್ಧ ಗಂಟೆಗಿಂತ ಹೆಚ್ಚು 
ಮೊಬೈಲ್‌ ಬಳಕೆ ಬೇಡ.

ಬೇಕೆಂದಷ್ಟು ತಿಂದೂ ತೂಕ ಇಳಿಸುವ ಆಸೆಯೇ? ಹಾಗಿದ್ರೆ ಈ ಡಯಟ್ ಮಾಡಿ

ನೀವು ಕೂಡ ಮೊಬೈಲ್‌ ಆಚೆಗಿಟ್ಟು ಮಕ್ಕಳೊಡನೆ ಮಗುವಾಗಿ ಆಡಿದಾಗ, ಮಗುವಿಗೆ ಮಲಗುವ ಮುನ್ನ ಕತೆ ಹೇಳಿದಾಗ, ಮಗುವಿನೊಡನೆ ಕೂತು ನೀವೂ ಊಟ ಮಾಡಿದಾಗ- ಮಗುವಿನ ಆರೋಗ್ಯವನ್ನು ನಿಮಗೇ ಗೊತ್ತಿಲ್ಲದಂತೆ ಆರೋಗ್ಯಕರವಾಗಿ ಬೆಳೆಸುತ್ತೀರಿ ಎಂದರ್ಥ. ಮಕ್ಕಳಲ್ಲಿ ಬೊಜ್ಜು ಬೆಳೆಯದಂತಿರಲು ನೀವೂ ಅವರಿಗೆ ಸಾಕಷ್ಟು ಟೈಮ್‌ ಕೊಡುವುದು ಇಂಪಾರ್ಟೆಂಟು.

click me!