ಯುವಜನರಲ್ಲಿ ಹೃದಯಾಘಾತ 22% ಹೆಚ್ಚಳ, ಮಹಿಳೆಯರಲ್ಲಿ ಶೇ.8 ಏರಿಕೆ: ಡಾ.ಸಿ.ಎನ್‌.ಮಂಜುನಾಥ್‌

By Kannadaprabha News  |  First Published Aug 8, 2023, 3:00 AM IST

ನಮ್ಮ ದೇಶದಲ್ಲಿ ಕಳೆದ 15 ವರ್ಷದಿಂದ ಈಚೆಗೆ ಯುವಕರು ಹಾಗೂ ಮಧ್ಯ ವಯಸ್ಕರಲ್ಲಿ ಹೃದಯಾಘಾತಗಳು ಶೇ.22ರಷ್ಟುಹೆಚ್ಚಾಗಿವೆ. 25-40 ವರ್ಷದ ಮಹಿಳೆಯರಲ್ಲೇ ಹೃದಯಾಘಾತಗಳು ಶೇ.8ರಷ್ಟು ಹೆಚ್ಚಾಗಿವೆ. 


ಬೆಂಗಳೂರು (ಆ.08): ನಮ್ಮ ದೇಶದಲ್ಲಿ ಕಳೆದ 15 ವರ್ಷದಿಂದ ಈಚೆಗೆ ಯುವಕರು ಹಾಗೂ ಮಧ್ಯ ವಯಸ್ಕರಲ್ಲಿ ಹೃದಯಾಘಾತಗಳು ಶೇ.22ರಷ್ಟು ಹೆಚ್ಚಾಗಿವೆ. 25-40 ವರ್ಷದ ಮಹಿಳೆಯರಲ್ಲೇ ಹೃದಯಾಘಾತಗಳು ಶೇ.8ರಷ್ಟು ಹೆಚ್ಚಾಗಿವೆ. ಹೀಗಾಗಿ ಜೀವನಶೈಲಿ, ಆಹಾರ ಕ್ರಮ, ಆರೋಗ್ಯದ ಬಗ್ಗೆ ನಿಗಾ ಸೇರಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದ್ದಾರೆ.

ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಹಠಾತ್‌ ನಿಧನದ ಬಗ್ಗೆ ಪ್ರತಿಕ್ರಿಯಿಸಿದ ಅವರು, 3-4 ದಶಕಗಳ ಹಿಂದೆ ಮಹಿಳೆಯರಲ್ಲಿ ಹೃದಯಾಘಾತ ಸಮಸ್ಯೆ ಎಂಬುದೇ ಅಪರೂಪ ಎಂಬಂತಾಗಿತ್ತು. ಈಗಲೂ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೃದಯ ಸಮಸ್ಯೆಗಳು ಕಡಿಮೆ. ಆದರೆ, ಇತ್ತೀಚೆಗೆ ಮಹಿಳೆಯರಲ್ಲೂ ಅಕಾಲಿಕ ಹೃದಯಾಘಾತ ಸಮಸ್ಯೆ ಶೇ.8ರಷ್ಟು ಹೆಚ್ಚಾಗಿದೆ ಎಂದು ಹೇಳಿದರು. ಇದಕ್ಕೆ ಮಹಿಳೆಯರ ಜೀವನದಲ್ಲೂ ಗಂಡಸರ ರೀತಿಯಲ್ಲೇ ಒತ್ತಡ ಹೆಚ್ಚಾಗುತ್ತಿರುವುದು ಪ್ರಮುಖ ಕಾರಣ. ಜತೆಗೆ, ಹಾರ್ಮೊನ್ಸ್‌, ಫ್ಯಾಟಿ ಲಿವರ್‌, ಥೈರಾಯ್ಡ್‌, ಪಿಒಸಿಡಿ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದರು.

Tap to resize

Latest Videos

ಕೊಡಗು ಜಿಲ್ಲೆಯಲ್ಲಿ ಹರಡುತ್ತಿದೆ ಮದ್ರಾಸ್‌ ಐ ಸೋಂಕು: 10 ದಿನಗಳಲ್ಲಿ 136 ಜನರಿಗೆ ಹರಡಿದ ರೋಗ

ವ್ಯಾಯಾಮ ಮುಖ್ಯ, ಅತಿಯಾಗಬಾರದು: ಹೃದಯ ಸೇರಿದಂತೆ ದೇಹದ ಆರೋಗ್ಯಕ್ಕೆ ವ್ಯಾಯಾಮ ಎಂಬುದು ತುಂಬಾ ಮುಖ್ಯ. ಆದರೆ ಅತಿರೇಕದ ಉತ್ಸಾಹ, ಅತಿಯಾದ ವ್ಯಾಯಾಮ ಒಳ್ಳೆಯದಲ್ಲ. ಇದರಿಂದ ರಕ್ತನಾಳಗಳಲ್ಲಿ ಸಮಸ್ಯೆಯಾಗಿ ಹೃದಯಾಘಾತಕ್ಕೆ ಸ್ವಲ್ಪ ಹೊತ್ತಿನ ಮುಂಚಿನವರೆಗೂ ಯಾವುದೇ ತಪಾಸಣೆ ನಡೆಸಿದರೂ ತಿಳಿಯದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಜತೆಗೆ ವ್ಯಾಯಾಮಯದ ಜತೆಗೆ ಆಹಾರ ಪದ್ಧತಿಯೂ ಸೂಕ್ತವಿರಬೇಕು. ತೂಕ ಇಳಿಸಲು ಡಯಟ್‌ಗಳ ಮೊರೆ ಹೋಗಬಾರದು. ಕೃತಕ ಪ್ರೊಟೀನ್‌ ಸೇವಿಸುವ ಬದಲು ಮೊಳಕೆ ಕಾಳು, ಮೊಟ್ಟೆಯಂತಹ ಪ್ರೊಟೀನ್‌ ಸೇವಿಸಬೇಕು ಎಂದು ಹೇಳಿದರು.

ಮುನ್ನೆಚ್ಚರಿಕೆ ಕ್ರಮಗಳೇನು?: ಯಾರಿಗೆ ರಕ್ತನಾಳದಲ್ಲಿ ಕ್ರಮೇಣ ಬ್ಲಾಕೇಜ್‌ ಹೆಚ್ಚಾಗುತ್ತಾ ಹೋಗುತ್ತದೆಯೋ ಅಂತಹವರಿಗೆ ನಡೆಯುವಾಗ, ಎತ್ತರ ಏರುವಾಗ ಎದೆಭಾರ, ಎದೆಯುರಿ, ಗಂಟಲು ನೋವು, ದವಡೆ, ಗಂಟಲುಯುರಿಯತಹ ಮುನ್ಸೂಚನೆ ಕಂಡುಬರುತ್ತದೆ. ಇನ್ನೂ ಕೆಲವರಿಗೆ ಎದೆ ಎಡಭಾಗದಲ್ಲಿ ನೋವು ಬರದೆ ಹೊಟ್ಟೆಮೇಲೆ ನೋವು ಬಂದು ವಾಂತಿ ಆಗಿ, ಬೆವರಬಹುದು. ಮೇಲ್ನೋಟಕ್ಕೆ ಗ್ಯಾಸ್ಟ್ರಿಕ್‌ ಎಂದು ನಿರ್ಲಕ್ಷಿಸಿ ಎಷ್ಟೋ ಮಂದಿ ಪ್ರಾಣ ತೆತ್ತಿದ್ದಾರೆ. ಹೀಗಾಗಿ ಇಂತಹ ಯಾವುದೇ ಲಕ್ಷಣ ಕಾಣಿಸಿದರೂ ಪರೀಕ್ಷೆ ಮಾಡಿಸಬೇಕು. ಮದ್ಯಸೇವನೆ, ಧೂಮಪಾನ, ಡ್ರಗ್ಸ್‌ನಂತಹ ಚಟ, ಒತ್ತಡದ ಜೀವನದಿಂದ ದೂರ ಇರಬೇಕು. ಇವೆಲ್ಲವುಗಳಿಂದಲೂ ದೂರವಿದ್ದರೂ ಕೆಲವರಿಗೆ ಅನುವಂಶಿಕ ಕಾರಣಗಳಿಂದ ಸಮಸ್ಯೆಯಾಗಬಹುದು. ಅಂತಹವರು ಕಾಲಕಾಲಕ್ಕೆ ಪರೀಕ್ಷೆ ಮಾಡುತ್ತಿರಬೇಕು ಎಂದು ತಿಳಿಸಿದರು.

ಮೋದಿ ಬಂದ ಮೇಲೆ ರೈಲ್ವೆ ಇಲಾಖೆ ಚಿತ್ರಣ ಬದಲು: ಪ್ರಲ್ಹಾದ್‌ ಜೋಶಿ

ಆಹಾರ ಕ್ರಮ ಹೇಗಿರಬೇಕು?: ಆಹಾರ ಪದ್ಧತಿ, ಆಹಾರ ಪದಾರ್ಥಗಳಲ್ಲಿ ಮಿತಿ ಇರಬೇಕು. ಹೆಚ್ಚು ಹಣ್ಣು, ತರಕಾರಿ ಸೇವಿಸಬೇಕು. ಫಾಸ್ಟ್‌ಫುಡ್‌ ಸೇವನೆ ಮಾಡಬಾರದು. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಊಟದಲ್ಲಿ ಉಪ್ಪು, ಕೊಬ್ಬಿನಂಶ ಹಾಗೂ ಸಕ್ಕರೆ ಅಂಶ ನಿಯಂತ್ರಿಸಬೇಕು. ನಮ್ಮ ದೇಶದಲ್ಲಿ ದುಡಿದು ಸಾಯುವವರಿಗಿಂತ ಚಿಂತೆ ಮಾಡಿ ಸಾಯುವವರೇ ಹೆಚ್ಚಾಗಿದ್ದಾರೆ. ಹೀಗಾಗಿ ಚಿಂತೆಯಿಂದ ದೂರ ಇರಬೇಕು ಎಂದು ಸಲಹೆ ಮಾಡಿದರು.

click me!