ಹೆಣ್ಣು ಮಕ್ಕಳ ಪಾಲಿಗೆ ಅಪ್ಪನೇ ಆಕಾಶ. ಕೇಳಿದ್ದನ್ನೆಲ್ಲಾ ಇಲ್ಲ ಎಂದು ಹೇಳಿಕೊಡದೆ ನೀಡುವ ಜಾದೂಗಾರ. ಬೈಯದೆ ಪ್ರೀತಿಯ ಮಳೆ ಸುರಿಸುವ ಅದ್ಭುತ. ಎಲ್ಲಾ ಹೆಣ್ಣುಮಕ್ಕಳಿಗೂ ಅಪ್ಪನೆಂದರೆ ವಿಶೇಷ ಕಾಳಜಿಯಿರುತ್ತದೆ. ಹಾಗೆಯೇ ಕೇರಳದಲ್ಲೊಬಬ್ 17 ವರ್ಷದ ವಿದ್ಯಾರ್ಥಿನಿ ತನ್ನ ಯಕೃತ್ತಿನ ಒಂದು ಭಾಗವನ್ನೇ ಅಪ್ಪನಿಗೆ ದಾನ ನೀಡಿದ್ದಾಳೆ.
ಕೊಚ್ಚಿ: ಅಪ್ಪನೆಂದರೆ ಹೆಣ್ಣುಮಕ್ಕಳ ಪಾಲಿಗೆ ಮೊದಲ ಹೀರೋ. ಎಲ್ಲಾ ಹೆಣ್ಣುಮಕ್ಕಳಿಗೂ ಅಪ್ಪನೆಂದರೆ ವಿಶೇಷ ಅಕ್ಕರೆಯಿರುತ್ತದೆ. ಕಾಳಜಿಯಿರುತ್ತದೆ. ಹೆಣ್ಣು ತನ್ನ ಜೀವನದುದ್ದಕ್ಕೂ ಅಪ್ಪನನ್ನು ಮಾದರಿಯಾಗಿ ನೋಡುತ್ತಾಳೆ. ಆತನ ಖುಷಿಗೆ ನಗುತ್ತಾಳೆ, ಕಷ್ಟಕ್ಕೆ ಕಣ್ಣೀರಾಗುತ್ತಾಳೆ. ಹೆಣ್ಣುಮಕ್ಕಳು ತಮ್ಮ ಅಪ್ಪನಿಗೆ ಕಷ್ಟ ಬಂದಾಗ ಎಂಥಾ ಸಹಾಯವನ್ನು ಮಾಡಲು ಹಿಂಜರಿಯುವುದಿಲ್ಲ. ತಮ್ಮ ಕೈಯಿಂದಾದ ಸಹಾಯವನ್ನು ಮಾಡಿಯೇ ಮಾಡುತ್ತಾರೆ. ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ತಮ್ಮ ತಂದೆಗೆ ಕಿಡ್ನಿ ದಾನ ಮಾಡಿದ್ದು ಇತ್ತೀಚೆಗೆ ಭಾರೀ ಸುದ್ದಿಯಾಗಿ ಪ್ರಶಂಸೆಗೆ ಪಾತ್ರವಾಗಿತ್ತು. ಕೇರಳದಲ್ಲೂ ಅದೇ ಮಾದರಿಯ ಪ್ರಕರಣ ನಡೆದಿದ್ದು, 17 ವರ್ಷದ ವಿದ್ಯಾರ್ಥಿನಿ ತನ್ನ ಯಕೃತ್ತಿನ ಒಂದು ಭಾಗವನ್ನೇ ಅಪ್ಪನಿಗೆ ದಾನ ನೀಡಿದ್ದಾಳೆ.
ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿರುವ 48 ವರ್ಷದ ಪ್ರತೀಶ್ ಅವರಿಗೆ ಯಕೃತ್ತು ಕಸಿ ಶಸ್ತ್ರಚಿಕಿತ್ಸೆ (Operation) ನಡೆಸದೇ ಬೇರೆ ದಾರಿಯಿಲ್ಲ ಎಂದು ವೈದ್ಯರು ಹೇಳಿದ್ದರು. ದಾನಿಗಳಿಗೆ ಎಷ್ಟೇ ಹುಡುಕಾಡಿದರೂ ಯಾರೊಬ್ಬರೂ ಮುಂದೆ ಬರಲಿಲ್ಲ. ಕೊನೆಗೇ ಮಗಳೇ (Daughter) ಅಪ್ಪನಿಗೆ ಯಕೃತ್ತು (Liver) ನೀಡಲು ಮುಂದಾಗಿದ್ದಾಳೆ. ಪ್ರತೀಶ್ ಅವರ ಮಗಳು, 12ನೇ ತರಗತಿಯ ವಿದ್ಯಾರ್ಥಿನಿ ದೇವಾನಂದ, ತಾನೇ ಅಪ್ಪನಿಗೆ ಯಕೃತ್ತು ದಾನ ಮಾಡಲು ನಿರ್ಧರಿಸಿದಳು. ಆದರೆ, ಅಪ್ರಾಪ್ತ ವಯಸ್ಸಿನವರು ಅಂಗಾಂಗ ದಾನ (Organ donation) ಮಾಡುವಂತಿಲ್ಲ ಎಂಬ ನಿಯಮವಿದ್ದ ಕಾರಣ, ಆಕೆ ಕೋರ್ಟ್ ಮೆಟ್ಟಿಲೇರಿದ್ದಳು. ಕೋರ್ಟ್‌ನ ಒಪ್ಪಿಗೆಯ ಮೇರೆಗೆ ಫೆ.9ರಂದು ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ. ಫೆಬ್ರವರಿ 9ರಂದು ಇಲ್ಲಿನ ಆಲುವಾ ಬಳಿಯ ರಾಜಗಿರಿ ಆಸ್ಪತ್ರೆಯಲ್ಲಿ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ಮೂಲಕ ದೇವಾನಂದ, ಭಾರತದ ಅತ್ಯಂತ ಕಿರಿಯ ಜೀವಂತ ಅಂಗಾಗದಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಗಳಿದ್ದರೆ ನಿನ್ನಂಥ ಮಗಳಿರಬೇಕು! ಲಾಲುಗೆ ಕಿಡ್ನಿ ಕೊಟ್ಟ ಮಗಳಿಗೊಂದು ಚಪ್ಪಾಳೆ
ಅಪ್ರಾಪ್ತ ವಯಸ್ಸಿನವರು ಅಂಗಾಂಗ ದಾನ ಮಾಡುವ ಬಗ್ಗೆ ಕೋರ್ಟ್ ಕೇಸ್
2022ರ ಡಿಸೆಂಬರ್‌ನಲ್ಲಿ ಕೇರಳ ಹೈಕೋರ್ಟ್ ತನ್ನ ಯಕೃತ್ತಿನ ಒಂದು ಭಾಗವನ್ನು ತನ್ನ ಅನಾರೋಗ್ಯದ ತಂದೆಗೆ (Father) ದಾನ ಮಾಡಲು ಅನುಮತಿ ನೀಡಿದ ನಂತರ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮಾನವ ಅಂಗಾಂಗಗಳು ಮತ್ತು ಅಂಗಾಂಶಗಳ ಕಸಿ ಕಾಯಿದೆ, 1994 ರ ಅಡಿಯಲ್ಲಿ ಸೂಕ್ತ ಪ್ರಾಧಿಕಾರವು ರಚಿಸಿದ ತಜ್ಞರ ಸಮಿತಿಯು ಅಪ್ರಾಪ್ತ ವಯಸ್ಕರಿಂದ ಅಂಗಾಂಗ ದಾನದ ಮೇಲಿನ ಕಾಯಿದೆ ಮತ್ತು ನಿಯಮಗಳಿಂದ ವಿಧಿಸಲಾದ ಬಾರ್‌ನಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ನಂತರ ದೇವಾನಂದ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಆಕೆಯ ಮನವಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ವಿ.ಜಿ.ಅರುಣ್, ಮತ್ತೊಂದು ತಜ್ಞರ ತಂಡವು ಆಕೆಯ ಪರವಾಗಿ ಶಿಫಾರಸು ಮಾಡಿದ ನಂತರ ಸಮಿತಿಯು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿದ್ದರು. ತಂದೆಯ ಜೀವ ಉಳಿಸಲು ದೇವಾನಂದ ಅವರು ನಡೆಸಿದ ಹೋರಾಟವನ್ನು ನ್ಯಾಯಾಧೀಶರು ಶ್ಲಾಘಿಸಿದ್ದರು.
ಮೊಮ್ಮಗನಿಗೆ ಕಿಡ್ನಿ ನೀಡಿ ಇಳಿವಯಸ್ಸಿನಲ್ಲೂ ಮಾದರಿಯಾದ ಅಜ್ಜಿ
ಯಕೃತ್ತು ದಾನಿಗಾಗಿ ಹುಡುಕಾಟ
ತ್ರಿಶೂರ್‌ನಲ್ಲಿ ಕೆಫೆ ನಡೆಸುತ್ತಿದ್ದ ಪ್ರತೀಶ್‌ಗೆ ಪಿತ್ತಜನಕಾಂಗದ ಕಾಯಿಲೆ ಹಾಗೂ ಯಕೃತ್ತಿನಲ್ಲಿ ಕ್ಯಾನ್ಸರ್ ಪೀಡಿತ ಎಂದು ಪತ್ತೆಯಾದ ನಂತರ ಅವರ ಸ್ಥಿತಿ ಹದಗೆಟ್ಟಿತ್ತು. ಹೊಂದಾಣಿಕೆಯ ದಾನಿಗಾಗಿ ಕುಟುಂಬವು ಸಾಕಷ್ಟು ಹುಡುಕಾಟ ನಡೆಸಿತು. ಯಾವುದೇ ದಾನಿಗಳು ಸಿಕ್ಕದಿದ್ದಾಗ ದೇವಾನಂದ ತನ್ನ ಪಿತ್ತಜನಕಾಂಗದ ಒಂದು ಭಾಗವನ್ನು ತನ್ನ ತಂದೆಗೆ ನೀಡಲು ಮುಂದಾದರು. ಆಸ್ಪತ್ರೆಯ ಅಧಿಕಾರಿಗಳು ನೀಡಿದ ಸಂವಹನದ ಪ್ರಕಾರ, ಅವರು ತಮ್ಮ ಆಹಾರದಲ್ಲಿ ತೀವ್ರ ಬದಲಾವಣೆಗಳನ್ನು ಮಾಡಿದ್ದಾರೆ ಮತ್ತು ಯಕೃತ್ತು ದಾನಕ್ಕೆ ಉತ್ತಮ ಸ್ಥಿತಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ನಿಯಮಿತ ವ್ಯಾಯಾಮಕ್ಕಾಗಿ ಸ್ಥಳೀಯ ಜಿಮ್‌ಗೆ ಸೇರಿಕೊಂಡರು.
ಬಹು ಅಂಗಾಂಗ ಕಸಿ ಸೇವೆಗಳ ಮುಖ್ಯಸ್ಥ ಡಾ.ರಾಮಚಂದ್ರನ್ ನಾರಾಯಣಮೆನನ್ ನೇತೃತ್ವದ ವೈದ್ಯರ ತಂಡವು ಶಸ್ತ್ರಚಿಕಿತ್ಸೆ ನಡೆಸಿತು. ಆಕೆಯ ಧೀರ ಪ್ರಯತ್ನಗಳನ್ನು ಶ್ಲಾಘಿಸಿ, ಆಡಳಿತ ಮಂಡಳಿಯು ಆಕೆಯ ವೈದ್ಯಕೀಯ ವೆಚ್ಚವನ್ನು ಮನ್ನಾ ಮಾಡಿದೆ ಎಂದು ಅದು ಹೇಳಿದೆ.