ಹೆಚ್ತಿದೆ ಸಡನ್‌ ಹಾರ್ಟ್‌ಅಟ್ಯಾಕ್ ಕೇಸ್‌, ದಿನಕ್ಕೆ 11 ನಿಮಿಷ ವಾಕ್‌ ಮಾಡಿ ಜೀವ ಉಳಿಸಿಕೊಳ್ಬೋದಾ?

By Vinutha PerlaFirst Published Mar 4, 2023, 10:36 AM IST
Highlights

ಇತ್ತೀಚಿನ ವರ್ಷಗಳಲ್ಲಿ ಒತ್ತಡದ ಜೀವನಶೈಲಿ ಹಲವಾರು ಆರೋಗ್ಯ ಸಮಸ್ಯೆಗೆ ಕಾರಣವಾಗ್ತಿದೆ. ಹೀಗಾಗಿಯೇ ಜನರು ವಾಕಿಂಗ್‌, ರನ್ನಿಂಗ್, ಯೋಗ, ಪ್ರಾಣಾಯಾಮ ಅಂತ ಹಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ 11 ನಿಮಿಷಗಳ ವೇಗದ ನಡಿಗೆ ಅಕಾಲಿಕ ಮರಣವನ್ನು ತಡೆಯಬಹುದು ಅನ್ನೋ ವಿಚಾರ ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ. 

ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆಯೆಂಬುದು ಸಾಮಾನ್ಯವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಹಠಾತ್ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಜನರು ಜಿಮ್‌ನಲ್ಲಿ, ಡ್ಯಾನ್ಸ್‌ ಕ್ಲಾಸ್‌ನಲ್ಲಿ, ಕ್ರೀಡಾಂಗಣಗಳಲ್ಲಿ, ಮದುವೆ ಮಂಟಪಗಳಲ್ಲಿ ಹಾರ್ಟ್‌ ಅಟ್ಯಾಕ್‌ ಆಗಿ ಕುಸಿದು ಬಿದ್ದು ಸಾವನ್ನಪ್ಪೋದನ್ನು ನಾವು ನೋಡಿದ್ದೇವೆ. ಯಾವುದೇ ಆರೋಗ್ಯ ಸಮಸ್ಯೆ ಇಲ್ಲದ ವ್ಯಕ್ತಿಯೂ ಹಠಾತ್ತನೆ ಕುಸಿದು ಬಿದ್ದು ಸಾವನ್ನಪ್ಪುವ (Death) ಪ್ರಕರಣ ಎಲ್ಲರನ್ನೂ ಆತಂಕಕ್ಕೀಡು ಮಾಡುತ್ತಿದೆ. ಹೀಗಾಗಿ ಬಹುತೇಕರು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ. ವಾಕಿಂಗ್‌, ರನ್ನಿಂಗ್, ಯೋಗ, ಪ್ರಾಣಾಯಾಮ ಅಂತ ಹಲವು ಆರೋಗ್ಯಕರ ಅಭ್ಯಾಸಗಳನ್ನು (Healthy habits) ಬೆಳೆಸಿಕೊಂಡಿದ್ದಾರೆ. ಹೀಗಿರುವಾಗ ಪ್ರತಿದಿನ 11 ನಿಮಿಷಗಳ ಕಾಲ ವೇಗದ ನಡಿಗೆಯು ಅಂತಹ ಸಾವುಗಳನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅಧ್ಯಯನವು ಪ್ರತಿದಿನ ಕನಿಷ್ಠ 11 ನಿಮಿಷಗಳ ಕಾಲ ಚುರುಕಾದ ನಡಿಗೆಯು (Walking) ಅಕಾಲಿಕ ಮರಣದ ಅಪಾಯವನ್ನು 25 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ. ಈ ಅಧ್ಯಯನದ ಪ್ರಕಾರ, ಪ್ರತಿದಿನ 11 ನಿಮಿಷಗಳ ವೇಗದ ನಡಿಗೆ ಅಥವಾ ವಾರಕ್ಕೆ 75 ನಿಮಿಷಗಳು ಆರೋಗ್ಯಕರವಾಗಿರಲು ಸಾಕಾಗುತ್ತದೆ. ಇದು ಹೃದ್ರೋಗ, ಪಾರ್ಶ್ವವಾಯು ಮತ್ತು ಅನೇಕ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದಿಂದ (Study) ತಿಳಿದುಬಂದಿದೆ ರಾಷ್ಟ್ರೀಯ ಆರೋಗ್ಯ ಸೇವೆಯ (NHS) ಶಿಫಾರಸಿನ ಪ್ರಕಾರ, ಕನಿಷ್ಠ ಅರ್ಧದಷ್ಟು ದೈಹಿಕ ಚಟುವಟಿಕೆಯನ್ನು ಮಾಡುವ ಮೂಲಕ ಹತ್ತರಲ್ಲಿ ಒಂದು ಅಕಾಲಿಕ ಮರಣವನ್ನು ತಡೆಯಬಹುದು ಎಂದು ಸಂಶೋಧಕರು ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಕಟಿಸಿದ ಅಧ್ಯಯನದಲ್ಲಿ ತೀರ್ಮಾನಿಸಿದ್ದಾರೆ.

ಕಣ್ರೆಪ್ಪೆ ಮುಚ್ಚಿ ತೆರೆಯೋದ್ರೊಳಗೆ ಜೀವಾನೇ ಹೋಗಿತ್ತು, ಬದುಕು ಎಷ್ಟು ಕ್ಷಣಿಕ ನೋಡಿ..

ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆಗಳು ಯಾವುವು?
ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆಗಳು (Exercise) ಒಬ್ಬರ ಹೃದಯ ಬಡಿತವನ್ನು ಹೆಚ್ಚಿಸುತ್ತವೆ ಮತ್ತು ಅವರು ವೇಗವಾಗಿ ಉಸಿರಾಡುವಂತೆ ಮಾಡುತ್ತದೆ. ಈ ಚಟುವಟಿಕೆಗಳನ್ನು ಸುಲಭವಾಗಿ ನಿರ್ವಹಿಸಬಹುದು ಮತ್ತು ಅದನ್ನು ನಿರ್ವಹಿಸುವಾಗಲೂ ಮಾತನಾಡಲು ಸಾಧ್ಯವಾಗುತ್ತದೆ. ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆಯ ಉದಾಹರಣೆಗಳಲ್ಲಿ ಚುರುಕಾದ ನಡಿಗೆ, ಬೈಕು ಸವಾರಿ ಮತ್ತು ಹೈಕಿಂಗ್, ನೃತ್ಯ ಮತ್ತು ಟೆನಿಸ್ ಅಥವಾ ಬ್ಯಾಡ್ಮಿಂಟನ್ ಆಡುವುದು ಸೇರಿವೆ.

ಹೃದಯರಕ್ತನಾಳದ ಕಾಯಿಲೆಗಳಾದ ಹೃದ್ರೋಗ ಮತ್ತು ಪಾರ್ಶ್ವವಾಯು 2019 ರಲ್ಲಿ 17.9 ಮಿಲಿಯನ್ ಸಾವುಗಳಿಗೆ ಕಾರಣವಾಗಿವೆ. ಈ ರೋಗಗಳು ಸಾವಿಗೆ ಪ್ರಮುಖ ಕಾರಣಗಳಾಗಿವೆ. 2017 ರಲ್ಲಿ, 9.6 ಮಿಲಿಯನ್ ಸಾವುಗಳಿಗೆ ಕ್ಯಾನ್ಸರ್ ಕಾರಣವಾಗಿದೆ ಎಂದು ಅಧ್ಯಯನ ಹೇಳಿದೆ. ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆಯು ಹೃದಯರಕ್ತನಾಳದ ಕಾಯಿಲೆ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಯುನೈಟೆಡ್ ಕಿಂಗ್‌ಡಮ್‌ನ ರಾಷ್ಟ್ರೀಯ ಆರೋಗ್ಯ ಸೇವೆ (NHS) ವಯಸ್ಕರು ಪ್ರತಿ ವಾರ ಕನಿಷ್ಠ 150 ನಿಮಿಷಗಳ ಮಧ್ಯಮ-ತೀವ್ರತೆಯ ಚಟುವಟಿಕೆ ಅಥವಾ 75 ನಿಮಿಷಗಳ ಹುರುಪಿನ-ತೀವ್ರತೆಯ ಚಟುವಟಿಕೆಯನ್ನು ನಿರ್ವಹಿಸಬೇಕೆಂದು ಶಿಫಾರಸು ಮಾಡುತ್ತದೆ ಎಂದು ಅಧ್ಯಯನವು ಹೇಳಿದೆ.

ವರ್ಕೌಟ್ ಮಾಡುವಾಗ ಹಾರ್ಟ್‌ ಅಟ್ಯಾಕ್‌ ಆಗೋದ್ಯಾಕೆ ?

ಸಂಶೋಧಕರ ಪ್ರಕಾರ, ಪ್ರತಿಯೊಬ್ಬರೂ ಶಿಫಾರಸು ಮಾಡಲಾದ ದೈಹಿಕ ಚಟುವಟಿಕೆಯ ಅರ್ಧದಷ್ಟು ಮಟ್ಟವನ್ನು ನಿರ್ವಹಿಸಿದರೆ, ಹತ್ತರಲ್ಲಿ ಒಂದು ಆರಂಭಿಕ ಸಾವುಗಳನ್ನು ತಡೆಯಬಹುದು ಎಂದು ತಿಳಿಸಲಾಗಿದೆ.

ಅಧ್ಯಯನವನ್ನು ಹೇಗೆ ನಡೆಸಲಾಯಿತು ?
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧಕರು ಹಲವಾರು ದೀರ್ಘಕಾಲದ ಕಾಯಿಲೆಗಳು (Disease) ಮತ್ತು ಅಕಾಲಿಕ ಮರಣದ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರಲು ಅಗತ್ಯವಾದ ದೈಹಿಕ ಚಟುವಟಿಕೆಯ ಪ್ರಮಾಣವನ್ನು ಅನ್ವೇಷಿಸಲು, ಎಲ್ಲಾ ಪ್ರಕಟಿತ ಪುರಾವೆಗಳಿಂದ ಸಮಂಜಸವಾದ ಡೇಟಾವನ್ನು ಒಟ್ಟುಗೂಡಿಸಿ ವಿಶ್ಲೇಷಣೆಯನ್ನು ನಡೆಸಿದರು. ಅಧ್ಯಯನದಲ್ಲಿ 30 ಮಿಲಿಯನ್‌ಗಿಂತಲೂ ಹೆಚ್ಚು ಜನರ ಆರೋಗ್ಯ ಡೇಟಾವನ್ನು ವಿಶ್ಲೇಷಿಸಲಾಯಿತು. ಅಲ್ಪ ಪ್ರಮಾಣದ ವ್ಯಾಯಾಮವೂ ಸಹ ಜೀವಿತಾವಧಿಯನ್ನು ಗಣನೀಯವಾಗಿ ಹೆಚ್ಚಿಸಬಹುದು, ಹೃದ್ರೋಗ, ಅನೇಕ ರೀತಿಯ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.

click me!