ಮದುವೆ ಭೋಜನದಲ್ಲಿ ಭಾಗವತಿಕೆ: ಜೋಡಿ ಕಲಾರಾಧನೆಗೆ ಕಲಾ ರಸಿಕರು ಖುಷ್

First Published | Aug 10, 2020, 11:50 AM IST

ನೂರಾರು ಯಕ್ಷಗಾನ ಕಾರ್ಯಕ್ರಮಗಳಲ್ಲಿ ಹಿಮ್ಮೇಳದಲ್ಲಿ ಜೊತೆಯಾಗಿ ಪ್ರದರ್ಶನ ನೀಡಿ ಜನಮನ ಗೆದ್ದ ತೆಂಕು ತಿಟ್ಟು ಯಕ್ಷಗಾನ ರಂಗದ ಯುವ ಭಾಗವತೆ ಅಮೃತಾ ಅಡಿಗ ಮತ್ತು ಚಂಡೆ- ಮದ್ದಳೆಗಾರ ಕೌಶಿಕ್ ರಾವ್  ನಿಜ ಜೀವನದಲ್ಲೂ ಜೊತೆಯಾಗಿದ್ದು ಕಳೆದ ತಿಂಗಳು ಸಪ್ತಪದಿ ತುಳಿದಿದ್ದಾರೆ. ಈ ಯುವ ಕಲಾ ಜೋಡಿ ತಮ್ಮ ಮದುವೆಯ ಔತಣಕೂಟದಲ್ಲಿ ಹಾಡಿದ ಯಕ್ಷಗಾನ ಪದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ಜೋಡಿ ಬಗ್ಗೆ ಒಂದಿಷ್ಟು...
-ಬರಹ- ಚಿತ್ರಾ ಸಿ.ಆರ್. ಮಂಗಳೂರು.

ಕರಾವಳಿ ಭಾಗದ ಮದುವೆ, ಗೃಹ ಪ್ರವೇಶ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಜನೆ, ಹಾಡು, ಶ್ಲೋಕಗಳನ್ನು ಹೇಳುವುದು ಸಾಮಾನ್ಯ. ಈಗಂತು ಡಿಜೆ, ಆರ್ಕೆಸ್ಟ್ರಾ, ಸಿನಿಮಾ ಗೀತೆಗಳಿಗೆ ಹಾಡು ಕುಣಿತವೂ ಕಾಮನ್. ಆದರೆ ಅಮೃತಾ-ಕೌಶಿಕ್ ಜೋಡಿ ತಮ್ಮ ಮದುವೆಯ ಔತಣಕೂಟದ ಭೋಜನ ವೇಳೆ ಯಕ್ಷಗಾನ ಭಾಗವತಿಕೆ ಮೂಲಕ ವಿಶಿಷ್ಟ ರೀತಿಯಲ್ಲಿ ಅತಿಥಿ ಸತ್ಕಾರ ನೀಡಿದರು.
ಅಮೃತಾ ಅಡಿಗ ಹಾಡಿದ ಪದಕ್ಕೆ ಮದುಮಗ ಕೌಶಿಕ್ ರಾವ್ ಮದ್ದಳೆಯಲ್ಲಿ ಹಾಗೂ ಮೈದುನ ಕೌಶಲ್ ರಾವ್ ಚಂಡೆಯಲ್ಲಿ ಸಾಥ್ ನೀಡಿದರು.
Tap to resize

ಅಭಿಮಾನಿಯೊಬ್ಬರು ಈ ವಿಡಿಯೋ ಸೆರೆ ಹಿಡಿದು ವಾಟ್ಸಆ್ಯಪ್, ಫೇಸ್ಬುಕ್‌ನಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋ ಇಷ್ಟೊಂದು ವೈರಲ್ ಆಗುತ್ತದೆಂದು ಮಧುಮಕ್ಕಳೇ ಊಹಿಸಿರಲಿಲ್ಲ.
ಯುಎಸ್, ಹೈದರಾಬಾದ್ ಮತ್ತಿತ್ತರ ಕಡೆಗಳಿಂದ ಕರೆಮಾಡಿ ಈ ಜೋಡಿಯನ್ನು ಅಭಿನಂದಿಸುತ್ತಿದ್ದಾರೆ.
ಕಲಾ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಅಮೃತಾ ಆರನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನ ವೇಷ ಧರಿಸಿ ಕುಣಿತ ಶುರು ಮಾಡಿದ್ದರು.
ವಿವಿಧ ಪ್ರಸಂಗಗಳಲ್ಲಿ ಅನೇಕ ವೇಷಗಳಲ್ಲಿ ಮಿಂಚಿದ್ದಾರೆ. ಸ್ವತಃ ಮದ್ದಳೆಗಾರರಾಗಿರುವ ತಂದೆ ಸತ್ಯನಾರಾಯಣ ಅಡಿಗ ಮಗಳಲ್ಲಿರುವ ಸಂಗೀತ ಆಸಕ್ತಿಯನ್ನು ಗುರುತಿಸಿ ಭಾಗವತಿಕೆ ತರಗತಿಗೆ ಸೇರಿಸಿದರು.
ಮುಮ್ಮೇಳದಿಂದ ಹಿಮ್ಮೇಳಕ್ಕೆ ಹೋದ ಇವರು ಕೆಲವೇ ಮಹಿಳಾ ಭಾಗವತರಲ್ಲಿ ಒಬ್ಬರಾಗಿ ಪ್ರವರ್ಧಮಾನಕ್ಕೆ ಬಂದಿದ್ದಾರೆ. ಅನೇಕ ಹಿರಿಯ ಹಿಮ್ಮೇಳ ಕಲಾವಿದರ ಜೊತೆಗೂ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿರುವ ಇವರು ತಮ್ಮದೇ ವಿಶಿಷ್ಟ ರಾಗದ ಮೂಲಕ ಭಾಗವತಿಕೆಯಲ್ಲಿ ಛಾಪು ಮೂಡಿಸುತ್ತಿದ್ದಾರೆ.
ದ.ಕ. ಜಿಲ್ಲೆ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಸತ್ಯನಾರಾಯಣ ಅಡಿಗ- ಜಯಲಕ್ಷ್ಮಿ ದಂಪತಿಯ ಪುತ್ರಿ. ಮಂಗಳೂರಿನಲ್ಲಿ ಬಿಎಡ್ ವಿದ್ಯಾರ್ಥಿನಿ. ಪುಣೆ, ಮುಂಬಯಿ, ದೆಹಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಈವರೆಗೆ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.ತಮ್ಮ ಬಹುತೇಕ ಕಾರ್ಯಕ್ರಮಗಳಲ್ಲಿ ಭಾಗವತಿಕೆಗೆ ಚಂಡೆ ಮದ್ದಳೆಯಲ್ಲಿ ಸಾಥ್ ನೀಡುತ್ತಿದ್ದ ಮೂಡುಬಿದಿರೆ ಪುತ್ತಿಗೆ ಗ್ರಾಮದ ಕೌಶಿಕ್ ರಾವ್ ಅವರನ್ನು ವರಿಸುವ ಮೂಲಕ ಈ ಯುವ ಜೋಡಿ ಕಲಾರಾಧನೆಯನ್ನು ಮಂದುವರಿಸುತ್ತಿದ್ದಾರೆ.
ಪಲಿಮಾರು ಮಠದಲ್ಲಿ ವೇದಾಧ್ಯಯನ ಮಾಡಿರುವ ಕೌಶಿಕ್ ರಾವ್ ಪೌರೋಹಿತ್ಯ ವೃತ್ತಿಯೊಂದಿಗೆ 6-7 ವರ್ಷಗಳಿಂದ ಚಂಡೆ, ಮದ್ದಳೆಗಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ.
ಕೌಶಿಕ್ ತಮ್ಮ ಕೌಶಲ್ ಚಂಡೆ ಮದ್ದಳೆಯಲ್ಲಿ ಹಾಗೂ ಅಮೃತಾ ತಂಗಿ ಅನನ್ಯ ಕೂಡ ಮದ್ದಳೆ ಕಲಾವಿದರು.ಇಡೀ ಕುಟುಂಬವೇ ಯಕ್ಷಗಾನ ಕಲಾರಾಧನೆಯಲ್ಲಿ ತೊಡಗಿಸಿಕೊಂಡಿದೆ.

Latest Videos

click me!