ಗಂಡ-ಹೆಂಡತಿ ಸಂಬಂಧವು ಪ್ರೀತಿ - ವಿಶ್ವಾಸದಲ್ಲಿ ಬಂಧಿಸಲ್ಪಟ್ಟಿರುತ್ತೆ. ಮದುವೆಯ ನಂತರ ಪ್ರತಿಯೊಬ್ಬ ವ್ಯಕ್ತಿಯ ಮೊದಲ ಧರ್ಮವೆಂದರೆ ಪ್ರತಿ ಸಂದರ್ಭದಲ್ಲೂ ತನ್ನ ಸಂಗಾತಿಯೊಂದಿಗೆ ನಿಲ್ಲುವುದು. ಸಂತೋಷ ಮತ್ತು ದುಃಖದಲ್ಲಿ ಸಂಗಾತಿಯನ್ನು ಬೆಂಬಲಿಸುವುದರ ಜೊತೆಗೆ,ಅವರಿಗೆ ಸಹಾಯ ಮಾಡೋದು. ಗಂಡ - ಹೆಂಡತಿ ಇಬ್ಬರೂ ಒಬ್ಬರಿಗೊಬ್ಬರು ಜೊತೆಯಾದರೆ ವೈವಾಗಿಕ ಜೀವನದಲ್ಲಿ (married life) ನೆಮ್ಮದಿ ಸದಾ ಇರುತ್ತೆ.
ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಮತ್ತು ಎನ್.ಆರ್.ನಾರಾಯಣ ಮೂರ್ತಿ (Sudha Murthy and Narayan Murthy) ಅವರ ವೈವಾಹಿಕ ಜೀವನದ ಬಗ್ಗೆ ನೀವೆಲ್ಲ ಕೇಳಿರುತ್ತೀರಿ. ಯಾವ ರೀತಿ ಒಬ್ಬರಿಗೊಬ್ಬರು ನೆರವಾಗುವ ಮೂಲಕ ದಾಂಪತ್ಯ ಜೀವನ ನೆಮ್ಮದಿಯಾಗಿ, ಸಂತೋಷವಾಗಿರುವಂತೆ ನೋಡಿಕೊಂಡರು ಅನ್ನೋದರ ಬಗ್ಗೆ ತಿಳಿಯೋಣ.
ಸುಧಾ ಮೂರ್ತಿಯವರು, ನಾರಾಯಣ ಮೂರ್ತಿಯವರನ್ನು ಮದುವೆಯಾದಾಗ ಅವರ ಬಳಿ ಏನೂ ಇರಲಿಲ್ಲವಂತೆ. ಅಂತಹ ಪರಿಸ್ಥಿತಿಯಲ್ಲಿ, ನಾರಾಯಣ ಮೂರ್ತಿ ಅವರು ಸಾಫ್ಟ್ವೇರ್ ಕಂಪನಿಯನ್ನು (software company) ತೆರೆಯುವ ಬಗ್ಗೆ ಮಾತನಾಡಿದಾಗ, ಸುಧಾ ಮೂರ್ತಿ ತಮ್ಮ ಪತಿಗೆ ತಮ್ಮಲ್ಲಿದ್ದ 10,000 ರೂ.ಗಳನ್ನು ನೀಡಿದರು, ಅದೇ ಹತ್ತು ಸಾವಿರದಿಂದ ಇಂದು ಸುಧಾ ಮೂರ್ತಿ -ನಾರಾಯಣ ಮೂರ್ತಿಯವರು ಜಗದ್ವಿಖ್ಯಾತ ಇನ್ಫೋಸೀಸ್ ಕಂಪನಿ ಆರಂಭಿಸಿ, ಬೆಳೆಸಿದರು.
ಇನ್ಫೋಸಿಸ್ ಹೇಗೆ ಪ್ರಾರಂಭವಾಯಿತು?: ನಾರಾಯಣ ಮೂರ್ತಿ 1981 ರಲ್ಲಿ ಇನ್ಫೋಸಿಸ್ (Infosys) ಪ್ರಾರಂಭಿಸಿದರು. ಆಗ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಮುಂಬೈನ ಬಾಂದ್ರಾದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರಂತೆ. ಒಂದು ದಿನ, ನಾರಾಯಣ ಮೂರ್ತಿಯವರು, ಸುಧಾ ಮೂರ್ತಿ ಬಳಿ ಬಂದು ನನ್ನ ಸಹೋದ್ಯೋಗಿಯೊಬ್ಬರ ಜೊತೆ ಸೇರಿ ಸಾಫ್ಟ್ ವೇರ್ ಕಂಪನಿ ಆರಂಭಿಸಬೇಕೆಂದು ಯೋಜಿಸಿದ್ದೇವೆ ಎಂದಿದ್ದರಂತೆ.
ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ಸುಧಾ ಮೂರ್ತಿ ಪತಿಗೆ ಕೇಳಿದ ಮೊದಲ ಪ್ರಶ್ನೆ ಅಂದ್ರೆ ಇದಕ್ಕೆ ಹಣ ಎಲ್ಲಿಂದ ಬರುತ್ತದೆ ಎಂಬುದು. ಇದರ ನಂತರ, ಭಾರತಕ್ಕೆ ಸಾಫ್ಟ್ವೇರ್ ಕ್ರಾಂತಿಯ ಅಗತ್ಯವಿದೆ ಎನ್ನುವ ಬಗ್ಗೆ ನಾರಾಯಣ ಮೂರ್ತಿಯವರು ದೊಡ್ಡ ಭಾಷಣವೇ ಮಾಡಿದರಂತೆ. ಇದಾದ ಬಳಿಕ ಸುಧಾ ಮೂರ್ತಿ, ಸರಿ ಈಗ ನಾನೇನು ಮಾಡಬೇಕು ಎಂದು ಕೇಳಿದ್ರಂತೆ, ಅದಕ್ಕೆ ನಾರಾಯಣ ಮೂರ್ತಿ ಅವರು ಮುಂದಿನ ಮೂರು ವರ್ಷಗಳವರೆಗೆ ನೀವು ಮನೆಯ ಎಲ್ಲಾ ಖರ್ಚುಗಳನ್ನು ಭರಿಸಬೇಕು ಮತ್ತು ನನ್ನನ್ನು ಸಹ ಬೆಂಬಲಿಸಬೇಕು ಎಂದು ಹೇಳಿದರು.
ಕಂಪನಿಯನ್ನು ಪ್ರಾರಂಭಿಸಲು ಗಂಡನಿಗೆ ಹಣ ನೀಡಿದ ಸುಧಾ ಮೂರ್ತಿ: ನಾರಾಯಣ ಮೂರ್ತಿಯವರು ಸಾಫ್ಟ್ವೇರ್ ಕಂಪನಿ ಆರಂಭಿಸುವ ಬಗ್ಗೆ ಮಾತನಾಡಿದಾಗ ಅವರ ಬಳಿ ಹಣವಿರಲಿಲ್ಲ. ಇದಕ್ಕಾಗಿ ಅವರು ತಮ್ಮ ಪತ್ನಿ ಸುಧಾ ಮೂರ್ತಿ ಅವರ ಸಹಾಯವನ್ನು ಪಡೆದರು. ಸ್ವಲ್ಪ ಸಮಯದ ಖರ್ಚುಗಳಿಗಾಗಿ ನೀವು ಸ್ವಲ್ಪ ಹಣ ಕೊಡಬಹುದೆ ಎಂದು ಪತ್ನಿಯನ್ನು ಕೇಳಿದಂತೆ.
ನಂತರ ಸುಧಾ ಮೂರ್ತಿ ಅವರು ತಮ್ಮ ಬಳಿ ಇದ್ದ ಹತ್ತು ಸಾವಿರ ರೂಪಾಯಿಗಳನ್ನು ಪತಿಯ ಕೈಯಲ್ಲಿ ಕೊಟ್ಟರಂತೆ. ತನ್ನ ಗಂಡನಿಗೆ ತಿಳಿಯದಂತೆ ಸುಧಾ ಮೂರ್ತಿ ಅಡುಗೆ ಮನೆಯ ಡಬ್ಬಿಯಲ್ಲಿ ಠೇವಣಿ ಇಡುತ್ತಿದ್ದ ಹಣ ಇದಂತೆ. ಈ ಪೈಕಿ 250 ರೂ.ಗಳನ್ನು ತುರ್ತು ಸಂದರ್ಭಗಳಲ್ಲಿ (emergency fund)ಬಳಸಲು ತೆಗೆದಿಟ್ಟಿದ್ದರಂತೆ.
ವಿವಾಹಿತ ಮಹಿಳೆಯರಿಗೆ ಸುಧಾ ಮೂರ್ತಿ ಸಲಹೆ: ಪ್ರತಿಯೊಬ್ಬ ವಿವಾಹಿತ ಮಹಿಳೆ (married women) ತನ್ನ ಗಂಡನಿಗೆ ತಿಳಿಯದಂತೆ ಸ್ವಲ್ಪ ಹಣವನ್ನು ಉಳಿಸಬೇಕು ಎಂದು ಸುಧಾ ಮೂರ್ತಿ ಹೇಳುತ್ತಾರೆ. ಇದನ್ನೇ ಸ್ವತಃ ಸುಧಾಮೂರ್ತಿ ಅವರೇ ಮಾಡಿದ್ದಾರೆ, ಅವರು ತೆಗೆದಿಟ್ಟ ಆ ಹಣದಿಂದಲೇ ಇಂದು ಇನ್ಪೋಸೀಸ್ ಸಂಸ್ಥೆ ಆರಂಭವಾಗಿ ದೇಶ ಮತ್ತು ವಿದೇಶಗಳಲ್ಲಿ ಪ್ರಸಿದ್ಧವಾಗಿದೆ. ಸುಧಾ ಮೂರ್ತಿ ಅದನ್ನು ತನ್ನ ಅತ್ಯುತ್ತಮ ಹೂಡಿಕೆ ಎಂದು ಹೇಳುತ್ತಾರೆ..