ದಕ್ಷಿಣ ಆಫ್ರಿಕಾ
ಲಿಂಗ ತಾರತಮ್ಯ, ಮಹಿಳೆಯರ ಮೇಲೆ ದೌರ್ಜನ್ಯ ವಿಪರೀತವಾಗಿ ಹೆಚ್ಚುತ್ತಿರುವ ದೇಶಗಳಲ್ಲಿ ದಕ್ಷಿಣ ಆಫ್ರಿಕಾ ಕೂಡ ಒಂದು. ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ ಎಂದು ಇದನ್ನು ಕರೆಯಲಾಗುತ್ತದೆ. ಮಹಿಳೆಯರ ಸುರಕ್ಷತೆ ವಿಷಯದಲ್ಲಿ ದೇಶವು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೆಲವು ಸಂಸ್ಥೆಗಳ ವರದಿಯ ಪ್ರಕಾರ ಕೇವಲ 25% ಮಹಿಳೆಯರು ಮಾತ್ರ ಒಂಟಿಯಾಗಿ ಹೊರಗೆ ನಡೆಯುವುದು ಸುರಕ್ಷಿತ ಎಂದು ಭಾವಿಸುತ್ತಾರೆ. ಇಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಅಪಾಯಗಳು ಹೆಚ್ಚು.
ಭಾರತ
ಮಹಾನ್ ಸಾಂಸ್ಕೃತಿಕ ಪರಂಪರೆ, ವೈವಿಧ್ಯಮಯ ಭೌಗೋಳಿಕ ಪರಿಸ್ಥಿತಿಗಳನ್ನು ಹೊಂದಿರುವ ಭಾರತದಲ್ಲೂ ಮಹಿಳೆಯರ ಸುರಕ್ಷತೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಇಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಅಲ್ಲದೆ ಮಾನವ ಕಳ್ಳಸಾಗಣೆ, ಬಲವಂತದ ದುಡಿಮೆ, ಇತರ ರೀತಿಯ ಶೋಷಣೆಗಳನ್ನು ಭಾರತೀಯ ಮಹಿಳೆಯರು ಎದುರಿಸುತ್ತಿದ್ದಾರೆ. ಮಹಿಳೆಯರ ರಕ್ಷಣೆಗೆ ಸಂಬಂಧಿಸಿದಂತೆ ಕಠಿಣ ಕಾನೂನುಗಳ ಕೊರತೆಯೇ ಇದಕ್ಕೆ ಕಾರಣ ಎಂಬ ಭಾವನೆ ಇದೆ. ಸೂಕ್ತ ರಕ್ಷಣೆ ಇಲ್ಲದ ಕಾರಣ ಉದ್ಯೋಗ, ವ್ಯಾಪಾರ ಮಾಡುವ ಮಹಿಳೆಯರು ಮಾತ್ರವಲ್ಲದೆ ಗೃಹಿಣಿಯರು ಸಹ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ.
ಆಫ್ಘಾನಿಸ್ತಾನ
ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಆಫ್ಘಾನಿಸ್ತಾನದಲ್ಲಿ ಮಹಿಳೆಯರ ಪರಿಸ್ಥಿತಿ ಹೀನಾಯವಾಗಿದೆ. ಸ್ವಾತಂತ್ರ್ಯ, ಆರೋಗ್ಯ ಸೇವೆ, ಆರ್ಥಿಕ ಅವಕಾಶಗಳ ಮೇಲೆ ತೀವ್ರ ನಿರ್ಬಂಧಗಳನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಗೃಹ ಹಿಂಸೆ, ಇತರ ರೀತಿಯ ಲೈಂಗಿಕ ದೌರ್ಜನ್ಯಗಳಿಗೆ ಗುರಿಯಾಗುತ್ತಿದ್ದಾರೆ. ದೇಶದಲ್ಲಿನ ಉದ್ವಿಗ್ನ ಪರಿಸ್ಥಿತಿ, ರಾಜಕೀಯ ಅಸ್ಥಿರತೆ ಮಹಿಳೆಯರ ಪರಿಸ್ಥಿತಿಯನ್ನು ದಿನದಿಂದ ದಿನಕ್ಕೆ ಹದಗೆಡಿಸುತ್ತಿದೆ. ಇದರಿಂದಾಗಿ ಆಫ್ಘಾನಿಸ್ತಾನವು ಪ್ರಪಂಚದಲ್ಲೇ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿದೆ.
ಸೊಮಾಲಿಯಾ
ನಿರಂತರ ಉದ್ವಿಗ್ನ ಪರಿಸ್ಥಿತಿಗಳು, ಹಾನಿಕಾರಕ ಸಾಂಸ್ಕೃತಿಕ ಪದ್ಧತಿಗಳಿಂದಾಗಿ ಸೊಮಾಲಿಯಾದ ಮಹಿಳೆಯರು ದಾರುಣ ಜೀವನವನ್ನು ನಡೆಸುತ್ತಿದ್ದಾರೆ. ಆರೋಗ್ಯ ಸೇವೆ, ಆರ್ಥಿಕ ಸಂಪನ್ಮೂಲಗಳ ಲಭ್ಯತೆ ತೀವ್ರವಾಗಿ ಸೀಮಿತವಾಗಿದೆ. ಇಲ್ಲಿನ ಪದ್ಧತಿಗಳಿಂದಾಗಿ ಮಹಿಳೆಯರು ದೈಹಿಕ ಹಿಂಸೆಗೆ ಗುರಿಯಾಗುತ್ತಿದ್ದಾರೆ. ಕಾನೂನು ರಕ್ಷಣೆ ಇಲ್ಲದಿರುವುದು, ಲಿಂಗ ತಾರತಮ್ಯ, ದೌರ್ಜನ್ಯ ವಿಪರೀತವಾಗಿರುವುದರಿಂದ ಸೊಮಾಲಿಯಾ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ.
ಕಾಂಗೋ
ಕಾಂಗೋ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ ಎಂದು ಕರೆಯಲಾಗುತ್ತದೆ. ಮಹಿಳೆಯರ ಮೇಲಿನ ಅತ್ಯಾಚಾರಗಳು, ತಾರತಮ್ಯ ಈ ದೇಶದಲ್ಲಿ ತುಂಬಾ ಹೆಚ್ಚು. ಈ ದೇಶದ ಮಹಿಳೆಯರು ದಾರುಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಯೆಮೆನ್
ವರ್ಷಗಳಿಂದ ನಡೆಯುತ್ತಿರುವ ಅಂತರ್ಯುದ್ಧದಿಂದಾಗಿ ಯೆಮೆನ್‌ನಲ್ಲಿ ಮಹಿಳೆಯರ ಪರಿಸ್ಥಿತಿ ಹೀನಾಯವಾಗಿದೆ. ಇಲ್ಲಿ ಮಹಿಳೆಯರಿಗೆ ಆರೋಗ್ಯದ ಜೊತೆಗೆ ಸಾಮಾಜಿಕ ಭದ್ರತೆಯೂ ಇಲ್ಲ. ಇಂತಹ ದೇಶದಲ್ಲಿ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಹೇಳುವ ಅಗತ್ಯವಿಲ್ಲ. ಇಲ್ಲಿನ ಆಚಾರ ವಿಚಾರಗಳು ಸಹ ಮಹಿಳೆಯರ ಮೇಲಿನ ತಾರತಮ್ಯಕ್ಕೆ ಕಾರಣ.