ಓಟ್ಸ್‌ನಲ್ಲಿರುವ ಅಮಿನೊ ಆಸಿಡ್ ಮತ್ತು ಸಿಲಿಕಾ ಚರ್ಮಕ್ಕೆ ನೈಸರ್ಗಿಕ ತೇವಾಂಶ ಒದಗಿಸಲು ನೆರವಾಗುತ್ತವೆ. ಇದು ಚರ್ಮವನ್ನು ಸ್ವಚ್ಛ ಮಾಡಿ ಮೃದುವನ್ನಾಗಿಸುತ್ತದೆ. ಆದ್ದರಿಂದ ಮನೆಯಲ್ಲಿಯೇ ಓಟ್ಸ್‌ನ ನ್ಯಾಚುರಲ್ ಪ್ಯಾಕ್‌ಗಳನ್ನು ಮಾಡಿ ಮುಖಕ್ಕೆ ಉಪಯೋಗಿಸಿದರೆ ಮುಖ ಕಾಂತಿಯುಕ್ತವಾಗುತ್ತದೆ. ಕೆಲವು ಫೇಸ್ ಪ್ಯಾಕ್‌ಗಳನ್ನು ಮಾಡುವ ವಿಧಾನ ಇಲ್ಲಿದೆ.
ಓಟ್ಸ್‌ನಲ್ಲಿರುವ ವಿಟಮಿನ್ ಇ ಚರ್ಮಕ್ಕೆ ಮಾಯಿಶ್ಚರೈಸ್ ನೀಡುತ್ತದೆ. ಇದಕ್ಕಾಗಿ ಎರಡು ಚಮಚ ಓಟ್ಸ್ ಪುಡಿಗೆ ಒಂದು ಚಮಚ ಜೇನುತುಪ್ಪ, ಎರಡು ಚಮಚ ಹಾಲು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ.
ಒಂದು ಸಣ್ಣ ಬೌಲ್‌ನಷ್ಟು ಓಟ್ಸ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ಟೊಮ್ಯಾಟೋ ಹಣ್ಣಿನ ತಿರುಳನ್ನು ಬೆರೆಸಿ. ಓಟ್ಸ್ ಮೆತ್ತಗಾದ ಬಳಿಕ ಇದನ್ನು ಪೇಸ್ಟ್ ಮಾಡಿ. ನಂತರ ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷಗಳ ನಂತರ ತೊಳೆಯಿರಿ. ಇದರಲ್ಲಿರುವ ಟೊಮ್ಯಾಟೋ ಮುಖದ ಬಣ್ಣವನ್ನು ತಿಳಿಯಾಗಿಸುತ್ತದೆ ಮತ್ತು ಓಟ್ಸ್‌ನಲ್ಲಿರುವ ನಾರು ಚರ್ಮದಲ್ಲಿರುವ ಜಿಡ್ಡಿನಾಂಶವನ್ನು ತೊಲಗಿಸುತ್ತದೆ.
ಎರಡು ಚಮಚ ಓಟ್ಸ್‌ಗೆ ಅರ್ಧ ಹೋಳು ನಿಂಬೆಯ ರಸ ಮತ್ತು ಒಂದು ಚಮಚ ಆಲಿವ್ ಎಣ್ಣೆಯನ್ನು ಹಾಕಿ ಬೆರೆಸಿ. ಇದನ್ನು ಮುಖಕ್ಕೆ ಲೇಪಿಸಿ ಹತ್ತು ನಿಮಿಷದ ನಂತರ ತೊಳೆಯಿರಿ. ನಿಂಬೆ ರಸ ಮತ್ತು ಓಟ್ಸ್ ಚರ್ಮದಲ್ಲಿರುವ ಎಣ್ಣೆಯ ಪಸೆಯನ್ನು ಕಡಿಮೆ ಮಾಡುತ್ತದೆ ಹಾಗೂ ಆಲಿವ್ ಎಣ್ಣೆ ಚರ್ಮವನ್ನು ಮೃದುವಾಗಿಸುತ್ತದೆ.
ಮೊಡವೆ ಬಾರದಂತೆ ತಡೆಗಟ್ಟಲು ಎರಡು ಚಮಚ ಓಟ್ಸ್ ಅನ್ನು ನೀರು ಅಥವಾ ಹಾಲಿನಲ್ಲಿ ಬೇಯಿಸಿ. ಈ ಮಿಶ್ರಣ ದಪ್ಪಗಾದಾಗ ಒಲೆಯಿಂದ ಕೆಳಗಿಳಿಸಿ ತಣಿಯಲು ಬಿಡಿ. ನಂತರ ಇದನ್ನು ಮುಖಕ್ಕೆ ಹಚ್ಚಿಕೊಂಡು ಹದಿನೈದು ನಿಮಿಷಗಳ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡಿದರೆ ಮೊಡವೆಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತವೆ.
ಓಟ್ಸ್ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಬಹುದು ಮತ್ತು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಸ್ನಾನದ ನೀರಿಗೆ ಸ್ವಲ್ಪ ಬೇಯಿಸದ ಓಟ್ ಮೀಲ್ ಮತ್ತು ಅಡಿಗೆ ಸೋಡಾ ಸೇರಿಸಿ. 20 ನಿಮಿಷಗಳ ಕಾಲ ನೆನೆಸಿಡಿ. ಇದರಿಂದ ಸ್ನಾನ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಒಂದು ಬಟ್ಟಲಿನಲ್ಲಿ ಸ್ವಲ್ಪ ಪ್ರಮಾಣದ ಬೇಯಿಸಿದ ಓಟ್ಸ್ ಅನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ, ಮುಖಕ್ಕೆ ಮಸಾಜ್ ಮಾಡಿ ಮತ್ತು ತೊಳೆಯಿರಿ. ಇದನ್ನು ಪ್ರತಿದಿನ ಮಾಡುವುದರಿಂದ ಚರ್ಮ ಕ್ಲಿಯರ್ ಆಗುತ್ತದೆ. ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ.
ಚರ್ಮದಲ್ಲಿ ತುರಿಕೆ ಕಂಡು ಬಂದರೆ ಓಟ್ಸ್ ಅನ್ನು ಪುಡಿಯಾಗಿ ಮಿಶ್ರಣ ಮಾಡಿ;ಪೇಸ್ಟ್ ಮಾಡಿ ತುರಿಕೆ ಪ್ರದೇಶದ ಮೇಲೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ಅದನ್ನು ತಣ್ಣೀರಿನಿಂದ ತೊಳೆಯಿರಿ. ಇದರಿಂದ ಚರ್ಮದ ಇರಿಟೇಷನ್ ಕಡಿಮೆಯಾಗುತ್ತದೆ.
ಓಟ್ಸ್ ನ್ನು ನೀರಿನ ಜೊತೆ ಮಿಕ್ಸ್ ಮಾಡಿ ಪ್ರತಿದಿನ ಮುಖ ತೊಳೆಯುವುದರಿಂದ ಮುಖ ಹೊಳೆಯುತ್ತದೆ, ಜೊತೆ ಕ್ಲೀನ್ ಆಗಿರುತ್ತದೆ.
ಓಟ್ಸ್ ನ್ನು ಜೇನಿನ ಜೊತೆ ಸೇರಿಸಿ ಮುಖ, ಕೈ ಕಾಲಿಗೆ ಹಚ್ಚಿದರೆ ಆ ಜಾಗದ ಮೇಲಿನ ಕಲೆ ನಿವಾರಣೆಯಾಗುತ್ತದೆ. ಸುಂದರ ತ್ವಚೆ ನಿಮ್ಮದಾಗುತ್ತದೆ. ಈ ಸುಲಭ ವಿಧಾನವನ್ನು ನೀವು ಮಿಸ್ ಮಾಡದೆ ಟ್ರೈ ಮಾಡಿ.