ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ವಿಭಾಳ ಬಾಲ್ಯದ ದಿನಗಳನ್ನೂ ನೆನಪಿಸಿಕೊಂಡಿದ್ದಾರೆ. 'ಅವಳನ್ನು ಆ ಸ್ಥಿತಿಯಲ್ಲಿ ನೋಡುತ್ತಿದ್ದಂತೆ ನನ್ನ ಆಲೋಚನೆಗಳು ಒಮ್ಮೆಲೇ ಹಳೆಯ ದಿನಗಳಿಗೆ ಜಾರಿಹೋದವು. ಅವಳಿನ್ನೂ ಈ ಜಗತ್ತಿನಲ್ಲಿ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ, ತನ್ನ ಸುತ್ತಲಿನ ಪ್ರತಿಯೊಂದನ್ನೂ ಕುತೂಹಲದಿಂದ ಕಲಿಯಲು ಮತ್ತು ಗ್ರಹಿಸಲು ಆರಂಭಿಸಿದ್ದ ಆ ದಿನಗಳು ಕಣ್ಣಮುಂದೆ ಬಂದವು.. ಕಿಂಡರ್‌ಗಾರ್ಟನ್ ಶಾಲೆಯಿಂದ ನಾನು ಅವಳನ್ನು ಮನೆಗೆ ಕರೆದುಕೊಂಡು ಹೋಗಲು ಕಾಯುತ್ತಿದ್ದಾಗ, ತನ್ನ ಆ ದೊಡ್ಡ ದೊಡ್ಡ ದುಂಡಗಿನ ಕಣ್ಣುಗಳಿಂದ ನನ್ನನ್ನೇ ಹುಡುಕುತ್ತಿದ್ದ ಆ ರೀತಿ.. ಮರಳಿ ಮನೆಗೆ ಬರುವ ದಾರಿಯಲ್ಲಿ ನನ್ನ ಮಡಿಲ ಮೇಲೆಯೇ ಮಲಗಿಬಿಡುತ್ತಿದ್ದ ಆ ಮುಗ್ಧತೆ... ಇವೆಲ್ಲವೂ ನೆನಪಾಗಿ ಮೈಮನ ರೋಮಾಂಚನಗೊಂಡಿತು. ಆದರೆ, ಇವತ್ತು ಅವಳು ಸಂಪೂರ್ಣವಾಗಿ ಬೆಳೆದು ನಿಂತಿದ್ದಾಳೆ, ಈ ಇಡೀ ಜಗತ್ತನ್ನೇ ಗೆಲ್ಲಲು ಸಜ್ಜಾಗಿದ್ದಾಳೆ!