ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಮಂಜಿನನಗರಿಯ ರಾಜಾಸೀಟಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ರಾಜಾಸೀಟು, ಗ್ರೇಟರ್ ರಾಜಾಸೀಟು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಹೆಜ್ಜೆ ಇಡಲು ಸಾಧ್ಯವೇ ಇಲ್ಲ ಎನ್ನುವಷ್ಟು ಪ್ರವಾಸಿಗರು ಬಂದಿದ್ದಾರೆ. ರಾಜಸೀಟಿನಲ್ಲಿ ಅಲ್ಲಿಂದ ಬಹಳ ದೂರದವರೆಗೆ ಕಾಣುವ ಪ್ರಕೃತಿಯ ಸೌಂದರ್ಯವನ್ನು ತುಂಬಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ರಾಜಾಸೀಟಿನ ವೀವ್ಹ್ ಪಾಯಿಂಟಿನಲ್ಲಿಯೂ ಕುಳಿತು ಪ್ರಕೃತಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಅಬ್ಬಿಫಾಲ್ಸ್, ದುಬಾರೆ, ನಿಸರ್ಗಧಾಮ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡೇ ಇದೆ. ಜೊತೆಗೆ ಕಳೆದ ಹದಿನೈದು ದಿನಗಳ ಇಂದೆಯಷ್ಟೇ ಕೊಡಗಿನ ಕುಲದೇವಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿದ್ದು, ಒಂದು ತಿಂಗಳ ಅವಧಿಯಲ್ಲಿ ಇಲ್ಲಿ ಪುಣ್ಯ ಸ್ನಾನ ಮಾಡಿ, ತೀರ್ಥ ಸಂಗ್ರಹಿಸುವುದರಿಂದ ಎಲ್ಲವೂ ಒಳ್ಳಿತಾಗಲಿದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ತಲಕಾವೇರಿ ಹಾಗೂ ಭಾಗಮಂಡಲ ಪುಣ್ಯ ಕ್ಷೇತ್ರಗಳಿಗೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಹೀಗಾಗಿಯೇ ತಲಕಾವೇರಿ ಕ್ಷೇತ್ರದಲ್ಲೂ ಎತ್ತ ನೋಡಿದರೂ ಜನವೋ ಜನ. ಬಸ್ಸು, ಟಿಟಿ. ಸೇರಿದಂತೆ ಸಾವಿರಾರು ಬಸ್ಸುಗಳಲ್ಲಿ ಲಕ್ಷಾಂತರ ಜನರು ಜಿಲ್ಲೆಗೆ ಆಗಮಿಸುತ್ತಿದ್ದಾರೆ.