ನವರಾತ್ರಿ (Navratri) ಎಂದರೆ ನವದುರ್ಗೆಯರನ್ನು ನವ ಅವತಾರದಲ್ಲಿ ಪೂಜಿಸುವ ಹಬ್ಬ. ಈ ಸಂಭ್ರಮವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತೆ. ಭಾರತದಲ್ಲಿರುವ ದೇವಿ ದೇಗುಲಗಳಂತೂ ಭಕ್ತರಿಂದ ತುಂಬಿ ತುಳುಕುತ್ತದೆ. ತಮ್ಮ ಚಮತ್ಕಾರದಿಂದಲೇ ಹೆಸರುವಾಸಿಯಾಗಿರುವ ದೇಶದ ಪ್ರಮುಖ ದೇವಿ ಮಂದಿರಗಳ ಬಗ್ಗೆ ತಿಳಿಸುತ್ತೇವೆ. ಈ ಮಂದಿರಗಳ ಚಮತ್ಕಾರದ ಮುಂದೆ ವಿಜ್ಞಾನವೂ ಸೋತಿದೆ.
ಇಡಾನ ಮಾತಾ ಮಂದಿರ
ಈ ಮಂದಿರ ರಾಜಸ್ಥಾನದ ಉದಯಪುರದಲ್ಲಿದೆ. ಇಲ್ಲಿ ವರ್ಷದಲ್ಲಿ ಹಲವಾರು ಬಾರಿ ದೇಗುಲದಲ್ಲಿ ಬೆಂಕಿ ಹತ್ತಿಕೊಳ್ಳುತ್ತೆ. ಇದರಿಂದ ದೇವಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳು ಸಹ ಸುಟ್ಟು ಬೂದಿಯಾಗುತ್ತೆ. ಆದರೆ ದೇವಿಯ ಮೂರ್ತಿಗೆ ಮಾತ್ರ ಏನೂ ತೊಂದರೆ ಆಗೋದಿಲ್ಲ. ಇಲ್ಲಿ ದೇವಿ ಅಗ್ನಿಯಲ್ಲಿ ಸ್ನಾನ ಮಾಡುತ್ತಾಳೆ ಎಂದು ನಂಬಲಾಗಿದೆ.
ಜ್ವಾಲ ಮಾತ ಮಂದಿರ
ಈ ದೇಗುಲ ಹಿಮಾಚಲದ ಕಂಗಡದಾಲ್ಲಿ ನಿರ್ಮಾಣವಾಗಿದೆ. ಇಲ್ಲಿ ಸಾವಿರಾರು ವರ್ಷಗಳಿಂದ ಪ್ರಾಕೃತಿಕವಾಗಿ ಅಗ್ನಿ ಉರಿಯುತ್ತಿದೆ. ಇದರ ಮೂಲ ಯಾವುದು ಎಂದು ಇದುವರೆಗೂ ಯಾರಿಗೂ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ವಿಜ್ಞಾನಿಗಳು ಸಹ ಈ ರಹಸ್ಯದ ಮುಂದೆ ಸೋತಿದ್ದಾರೆ.
ಕಾಮಕ್ಯಾ ಮಂದಿರ
ಈ ಮಂದಿರ ಅಸ್ಸಾಂನ ಗುವಾಹಟಿಯಲ್ಲಿದೆ. ಅಂಬುವಾಚಿ ಮೇಳದ ಸಮಯದಲ್ಲಿ ಈ ದೇಗುಲವನ್ನು ಮೂರು ದಿನಗಳ ಕಾಲ ಮುಚ್ಚಲಾಗುತ್ತದೆ. ಈ ಸಮಯದಲ್ಲಿ ದೇವಿ ಋತುಮತಿಯಾಗುತ್ತಾಳೆ ಎಂದು ನಂಬಲಾಗುತ್ತೆ. ಅಲ್ಲದೇ ಇಲ್ಲಿ ಆ ಸಮಯದಲ್ಲಿ ಇಟ್ಟ ಬಿಳಿ ಬಟ್ಟೆಯು ಕೆಂಪು ಬಣ್ಣಕ್ಕೆ ಬದಲಾಗುತ್ತದೆ.
ಕರ್ಣಿ ಮಾತಾ ಮಂದಿರ
ಈ ಮಂದಿರ ರಾಜಸ್ಥಾನದ ಬಿಕೇನೆರ್‌ನಲ್ಲಿದೆ. ಇಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಇಲಿಗಳು ವಾಸಿಸುತ್ತವೆ. ಈ ದೇಗುಲದಲ್ಲಿ ಇಷ್ಟೊಂದು ಇಲಿಗಳು ಯಾಕಿವೆ, ಅವು ಬೇರೆ ಜಾಗಕ್ಕೆ ಯಾಕೆ ಹೋಗೋದಿಲ್ಲ ಅನ್ನೋದು ಇನ್ನೂ ತಿಳಿದಿಲ್ಲ. ಇಲ್ಲಿ ಇಲಿಗಳನ್ನು ಭಕ್ತಿಯಿಂದ ಪೂಜಿಸಲಾಗುತ್ತೆ, ಜೊತೆಗೆ ಇಲಿಗಳಿಗೆ ನೈವೇದ್ಯ ನೀಡಲಾಗುತ್ತದೆ.
ಮುಂಡೇಶ್ವರಿ ಮಾತಾ ಮಂದಿರ
ಈ ಮಂದಿರ ಬಿಹಾರದ ಕೈಮೂರ್‌ನಲ್ಲಿದೆ. ಇಲ್ಲಿ ಬಲಿ ನೀಡುವ ಸಮಯದಲ್ಲಿ ಕುರಿಗಳ ಮೇಲೆ ಪವಿತ್ರ ನೀರು ಹಾಕಲಾಗುತ್ತದೆ. ಇದರಿಂದ ಅವು ಪ್ರಜ್ಞೆ ಕಳೆದುಕೊಳ್ಳುತ್ತವೆಯಂತೆ. ಸ್ವಲ್ಪ ಹೊತ್ತಲ್ಲಿ ಮತ್ತೆ ಪ್ರಜ್ಞೆ ಬರುತ್ತೆ ಎಂದು ಸಹ ಹೇಳಲಾಗುತ್ತೆ.
ಶಾರದ ಮಾತಾ ಮಂದಿರ
ಈ ಮಂದಿರ ಮಧ್ಯಪ್ರದೇಶದ ಮೆಹೆರ್ ನಲ್ಲಿದೆ. ಪ್ರತಿದಿನ ಬೆಳಗ್ಗೆ ಮಂದಿರದ ಬಾಗಿಲು ತೆರೆಯುತ್ತಿದ್ದಂತೆ ಇಲ್ಲಿ ದೇವಿಗೆ ತಾಜಾ ಹೂವುಗಳನ್ನು ಹಾಕಿರೋದನ್ನು ಕಾಣಬಹುದು. ಇಲ್ಲಿಗೆ ದೇವಿಯ ಪರಮ ಭಕ್ತರಾಗಿ ಅಲ್ಲಾ-ಉದಲ್ ನಿತ್ಯವೂ ಪೂಜೆ ಸಲ್ಲಿಸಲು ಬರುತ್ತಾರೆ ಎಂದು ಹೇಳಲಾಗುತ್ತೆ. ಆದರೆ ಇದುವರೆಗೂ ಯಾರಿಗೂ ಇದನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.