ವಿಮಾನದ ದುಬಾರಿ ವೆಚ್ಚದ ತಲೆಬಿಸಿ ಬಿಡಿ, ನೀವು ಈ ದೇಶಗಳಿಗೆ ಕಾರಲ್ಲೇ ಹೋಗಬಹುದು

First Published Nov 20, 2022, 12:17 PM IST

ಹೆಚ್ಚಿನ ಜನರು ವಿದೇಶ ಪ್ರವಾಸಗಳಿಗಾಗಿ ವಿಮಾನವನ್ನೇ ಹೆಚ್ಚಾಗಿ ಆಯ್ಕೆ ಮಾಡ್ತಾರೆ, ಆದರೆ ಅನೇಕ ದೇಶಗಳಲ್ಲಿ ನೀವು ವಿಮಾನಗಳ ಬದಲಿಗೆ ರಸ್ತೆ ಪ್ರವಾಸಗಳ ಮೂಲಕ ಹೋಗಬಹುದು ಅನ್ನೋದು ಗೊತ್ತಾ?. ಹೌದು ನೀವು ಭಾರತದ ರಾಜಧಾನಿ ದೆಹಲಿಯಿಂದ ರಸ್ತೆ ಪ್ರವಾಸಗಳ ಮೂಲಕ ಯಾವ ದೇಶಗಳಿಗೆ ಹೋಗಬಹುದು ಅನ್ನೋದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ನೋಡಿ.

ರಸ್ತೆ ಪ್ರವಾಸಗಳು ವಿಭಿನ್ನ ರೀತಿಯ ಮೋಜು ಮತ್ತು ಅನುಭವ ನೀಡುತ್ತೆ. ರಸ್ತೆ ಪ್ರವಾಸಗಳ ಮೂಲಕ, ನೀವು ರಸ್ತೆಗಳು ಮತ್ತು ಪ್ರಕೃತಿಯ ಸೌಂದರ್ಯವನ್ನು ತುಂಬಾ ಹತ್ತಿರದಿಂದ ನೋಡಲು ಸಾಧ್ಯವಾಗುತ್ತೆ. ನೀವು ವಿಮಾನಗಳು ಮತ್ತು ರೈಲುಗಳಲ್ಲಿ ಟ್ರಾವೆಲ್ ಮಾಡಿದ್ರೆ, ಹೆಚ್ಚಿನ ಸೌಲಭ್ಯ ಪಡೆಯಬಹುದು, ಜೊತೆಗೆ ಟ್ರಾವೆಲ್ ಸುಲಭವಾಗಿರುತ್ತೆ ನಿಜ, ಆದರೆ ರಸ್ತೆ ಪ್ರಯಾಣಗಳಿಂದ ಪಡೆಯುವ ಅನುಭವವನ್ನು ನೀವು ಎಲ್ಲೂ ಪಡೆಯಲು ಸಾಧ್ಯವಿಲ್ಲ. ಭಾರತದಲ್ಲಿ, ಜನರು ಒಂದು ನಗರದಿಂದ ಮತ್ತೊಂದು ನಗರಕ್ಕೆ ರೋಡ್ ಟ್ರಿಪ್ ಮಾಡ್ತಾರೆ.  ಆದರೆ ರಸ್ತೆ ಮೂಲಕ, ಭಾರತದಿಂದ ವಿದೇಶಗಳಿಗೆ ಪ್ರಯಾಣಿಸಬಹುದು ಅನ್ನೋದು ನಿಮಗೆ ಗೊತ್ತಾ? ಇಂದು ನಾವು ನಿಮಗೆ ಕೆಲವು ದೇಶಗಳ ಬಗ್ಗೆ ಹೇಳಲಿದ್ದೇವೆ, ಅಲ್ಲಿ ಭಾರತೀಯರು ರೋಡ್ ಟ್ರಿಪ್ (road trip)ಮೂಲಕ ಹೋಗಬಹುದು. 

ನೇಪಾಳ (Nepal)
ಭಾರತದಿಂದ ರಸ್ತೆ ಪ್ರವಾಸದ ಮೂಲಕ ನೇಪಾಳಕ್ಕೆ ಹೋದರೆ, ಈ ಸಮಯದಲ್ಲಿ ನೀವು ಅನೇಕ ಸುಂದರ ಅನುಭವ ಪಡೆಯುವಿರಿ. ಈ ರಸ್ತೆ ಪ್ರಯಾಣದಲ್ಲಿ ಅನೇಕ ಸುಂದರವಾದ ದೃಶ್ಯಗಳನ್ನು ಕಾಣಬಹುದು. ರಸ್ತೆ ಮೂಲಕ ನೇಪಾಳಕ್ಕೆ ಪ್ರಯಾಣಿಸುವಾಗ ನಿಮಗೆ ಯಾವುದೇ ಪ್ರತ್ಯೇಕ ಲೈಸೆನ್ಸ್ ಅಗತ್ಯವಿಲ್ಲ, ಅಂದರೆ ನೀವು ಭಾರತೀಯ ಡ್ರೈವಿಂಗ್ ಲೈಸೆನ್ಸ್ ಮೂಲಕ ನೇಪಾಳದಲ್ಲಿ ಪ್ರಯಾಣಿಸಬಹುದು. ಇದಲ್ಲದೆ, ನೇಪಾಳಕ್ಕೆ ಹೋಗಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ. ದೆಹಲಿಯಿಂದ ಕಠ್ಮಂಡುವಿಗೆ ಹೋದರೆ, ಸೊನೌಲಿ ಗಡಿಯಿಂದ ನೇಪಾಳವನ್ನು ಪ್ರವೇಶಿಸಬೇಕಾಗುತ್ತದೆ. ದೆಹಲಿಯಿಂದ ನೇಪಾಳಕ್ಕೆ ರಸ್ತೆಯ ಮೂಲಕ 1079 ಕಿ.ಮೀ. ದೂರ ಇದೆ.

ಥೈಲ್ಯಾಂಡ್- (Thailand)
ನೀವು ಥೈಲ್ಯಾಂಡ್ ಗೆ ಹೋಗಲು ಪ್ಲ್ಯಾನ್ ಮಾಡಿದ್ರೆ, ವಿಮಾನದ ಬದಲು ರಸ್ತೆ ಪ್ರಯಾಣದ ಮೂಲಕ ಹೋಗಿ. ರೋಡ್ ಟ್ರಿಪ್ ಮೂಲಕ ಥೈಲ್ಯಾಂಡ್ ಗೆ ಹೋದ್ರೆ ನೀವು ಇಲ್ಲಿನ ಸಂಸ್ಕೃತಿಯನ್ನು ಬಹಳ ಹತ್ತಿರದಿಂದ ನೋಡಲು ಸಾಧ್ಯವಾಗುತ್ತೆ/ ಅಷ್ಟೇ ಅಲ್ಲ, ಇಲ್ಲಿ ನೀವು ಅನೇಕ ಸುಂದರವಾದ ಕಡಲತೀರಗಳು, ಚರ್ಚ್ ಗಳು ಮತ್ತು ದೇವಾಲಯಗಳನ್ನು ಕಾಣಬಹುದು, ನಿಮ್ಮ ಬಜೆಟ್ ಕಡಿಮೆ ಇದ್ದರೂ ಸಹ, ನೀವು ಥೈಲ್ಯಾಂಡ್ ನಲ್ಲಿ ಎಂಜಾಯ್ ಮಾಡಬಹುದು. ಇಲ್ಲಿಗೆ ಹೋಗಲು ನಿಮಗೆ ವೀಸಾ ಮತ್ತು ವಿಶೇಷ ಪರವಾನಗಿಯ ಅಗತ್ಯವಿದೆ. ದೆಹಲಿಯಿಂದ ಥೈಲ್ಯಾಂಡ್ ಗೆ ರಸ್ತೆ ಮೂಲಕ 4,138 ಕಿ.ಮೀ ದೂರವಿದೆ ಮತ್ತು ಇಲ್ಲಿಗೆ ತಲುಪಲು ನಿಮಗೆ 75 ಗಂಟೆಗಳು ಬೇಕಾಗುತ್ತದೆ 

ಭೂತಾನ್ (Bhutan)
ನೇಪಾಳದಂತೆ, ಭಾರತೀಯ ಜನರು ಭೂತಾನ್ ಅನ್ನು ಸುಲಭವಾಗಿ ಪ್ರವೇಶಿಸಬಹುದು. ನೀವು ಭಾರತದಿಂದ ಭೂತಾನ್ ಗೆ ರಸ್ತೆ ಪ್ರವಾಸದ ಮೂಲಕ ಹೋಗುತ್ತಿದ್ದರೆ, ಯಾವುದೇ ರೀತಿಯ ಸಮಸ್ಯೆ ಎದುರಿಸಬೇಕಾಗಿಲ್ಲ. ಯಾಕಂದ್ರೆ ಭಾರತೀಯರಿಗೆ ಇಲ್ಲಿಗೆ ಹೋಗಲು ಯಾವುದೇ ಪಾಸ್‌ಪೋರ್ಟ್ ಅಥವಾ ವೀಸಾ ಅಗತ್ಯವಿಲ್ಲ. ನೀವು ರೋಡ್ ಟ್ರಿಪ್ ಮೂಲಕ ಭಾರತದಿಂದ ಭೂತಾನ್ ಗೆ ಹೋಗಲು ಬಯಸಿದ್ರೆ, ಭೂತಾನ್ ಗಡಿ ಪ್ರವೇಶಿಸುವ ಮೊದಲು ನಿಮ್ಮ ವಾಹನದ ಸಂಖ್ಯೆ ರಿಜಿಸ್ಟರ್ ಮಾಡೋದನ್ನು ಮರೆಯಬೇಡಿ. ದೆಹಲಿಯಿಂದ ಭೂತಾನ್ ಗೆ ರಸ್ತೆ ಮೂಲಕ 1,915 ಕಿ.ಮೀ ದೂರವಿದೆ ಮತ್ತು ಇಲ್ಲಿಗೆ ತಲುಪಲು ನಿಮಗೆ 37 ಗಂಟೆಗಳು ಬೇಕಾಗುತ್ತದೆ.

ಬಾಂಗ್ಲಾದೇಶ (Bangladesh)
ಬಾಂಗ್ಲಾದೇಶ ಭಾರತದ ನೆರೆಯ ದೇಶವಾಗಿದೆ. ಇಲ್ಲಿಗೆ ಹೋಗಲು, ನೀವು ವರ್ಷದಲ್ಲಿ ಯಾವುದೇ ತಿಂಗಳನ್ನು ಯೋಜಿಸಬಹುದು ಮತ್ತು ಇದು ಸುಲಭವಾದ ಅಂತರರಾಷ್ಟ್ರೀಯ ಪ್ರವಾಸವಾಗಿದೆ. ಇಲ್ಲಿಗೆ ಹೋಗಲು ಸುರಕ್ಷಿತ ಮಾರ್ಗವೆಂದರೆ ಢಾಕಾ-ಚಿತ್ತಗಾಂಗ್ ಹೆದ್ದಾರಿ. ಇಲ್ಲಿಗೆ ಹೋಗಲು ಪಾಸ್ ಪೋರ್ಟ್ ಬೇಕು. ಇದಲ್ಲದೆ, ಭಾರತೀಯರು ಬಾಂಗ್ಲಾದೇಶದ ರಾಯಭಾರ ಕಚೇರಿಯಿಂದ ವೀಸಾಗಳನ್ನು ಸುಲಭವಾಗಿ ಪಡೆಯಬಹುದು. ದೆಹಲಿಯಿಂದ ಬಾಂಗ್ಲಾದೇಶಕ್ಕೆ ರಸ್ತೆ ಮೂಲಕ 1,799 ಕಿ.ಮೀ ದೂರವಿದೆ ಮತ್ತು ಇಲ್ಲಿಗೆ ತಲುಪಲು ನಿಮಗೆ 32 ಗಂಟೆಗಳು ಬೇಕಾಗುತ್ತೆ.  

ಮಲೇಷ್ಯಾ- (Malaysia)
ಮಲೇಷ್ಯಾ ಕೂಡ ಭಾರತದಿಂದ ರಸ್ತೆ ಪ್ರಯಾಣದ ಮೂಲಕ ಹೋಗಬಹುದಾದ ದೇಶವಾಗಿದೆ. ದೆಹಲಿಯಿಂದ ಕೌಲಾಲಂಪುರವನ್ನು ತಲುಪಲು, ನೀವು ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಎಂಬ ಎರಡು ದೇಶಗಳ ಮೂಲಕ ಹಾದುಹೋಗಬೇಕಾಗುತ್ತದೆ. ಪ್ರಯಾಣದ ಸಮಯದಲ್ಲಿ ಯಾವುದೇ ಸಮಸ್ಯೆ ಬರಬಾರದು ಎಂದು ಬಯಸಿದ್ರೆ, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಮತ್ತು ವೀಸಾವನ್ನು ನಿಮ್ಮೊಂದಿಗೆ ಇರಿಸಿ. ದೆಹಲಿಯಿಂದ ರಸ್ತೆ ಮೂಲಕ ಮಲೇಷ್ಯಾಕ್ಕೆ 5,536.6 ಕಿ.ಮೀ ದೂರವಿದೆ ಮತ್ತು ಇಲ್ಲಿಗೆ ತಲುಪಲು ನಿಮಗೆ 95 ಗಂಟೆಗಳು ಬೇಕಾಗುತ್ತದೆ. 

ಶ್ರೀಲಂಕಾ (Srilanka)
ನೀವು ರಸ್ತೆ ಪ್ರವಾಸದ ಮೂಲಕ ಶ್ರೀಲಂಕಾಕ್ಕೆ ಹೋಗಬಹುದು.  ಇದಕ್ಕಾಗಿ ಮೊದಲು ನೀವು ತಮಿಳುನಾಡಿಗೆ ತೆರಳಬೇಕು. ತಮಿಳುನಾಡು ತಲುಪಿದ ನಂತರ, ಟುಟಿಕೋರಿನ್ ಬಂದರಿನಿಂದ ಶ್ರೀಲಂಕಾದ ಕೊಲಂಬೊ ಬಂದರಿಗೆ ದೋಣಿಯನ್ನು ತೆಗೆದುಕೊಳ್ಳಬಹುದು. ಇಲ್ಲಿ ನೀವು ಸುಂದರವಾದ ತಾಣಗಳನ್ನು ನೋಡುತ್ತಾ ಎಂಜಾಯ್ ಮಾಡಬಹುದು.
 

ಟರ್ಕಿ- (Turkey)
ನೀವು ಡ್ರೈವ್ ಮಾಡಲು ಇಷ್ಟಪಡುತ್ತಿದ್ದರೆ ಮತ್ತು ನೀವು ನಿಜವಾಗಿಯೂ ಲಾಂಗ್ ಡ್ರೈವ್ ಮಾಡಲು ಬಯಸಿದರೆ, ಆಗ ನಿಮಗೆ ಟರ್ಕಿಗಿಂತ ಉತ್ತಮವಾದ ತಾಣ ಇನ್ನೊಂದಿಲ್ಲ. ದೆಹಲಿಯಿಂದ ಟರ್ಕಿಯವರೆಗಿನ ಇಡೀ ಪ್ರಯಾಣದಲ್ಲಿ, ನೀವು ಅನೇಕ ಸುಂದರ ಅನುಭವ ಪಡೆಯಬಹುದು. ದೆಹಲಿಯಿಂದ ಟರ್ಕಿಯವರೆಗಿನ ರಸ್ತೆ ನಕ್ಷೆ ಹೀಗಿದೆ: ನವದೆಹಲಿ- ಲಾಸಾ (ಟಿಬೆಟ್) - ಚೀನಾ - ಕಿರ್ಗಿಸ್ತಾನ್ - ಉಜ್ಬೇಕಿಸ್ತಾನ್ - ತುರ್ಕಮೆನಿಸ್ತಾನ್ - ಇರಾನ್ - ಟರ್ಕಿ. ಟರ್ಕಿಯನ್ನು ತಲುಪಿದ ನಂತರ, ನೀವು ಇಲ್ಲಿ ಅನೇಕ ಸುಂದರ ದೃಶ್ಯಗಳನ್ನು ನೋಡಬಹುದು. ನೀವು ತುಂಬಾ ಆನಂದಿಸಬಹುದಾದ ಅತ್ಯಂತ ಸುಂದರವಾದ ಕಡಲತೀರಗಳು ಸಹ ಇವೆ. ದೆಹಲಿಯಿಂದ ಟರ್ಕಿಗೆ ರಸ್ತೆಯ ಮೂಲಕ 3,993 ಕಿ.ಮೀ. ಇದೆ.

click me!