ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, "ಮುಂಗಾರು ಮಳೆ ಸಿನಿಮಾದಿಂದ ನಾಯಕನಾಗಿ ಶುರುವಾದ ನನ್ನ ಸಿನಿ ಜರ್ನಿ ಈ ಹಂತ ತಲುಪಲು ದೇವರ, ತಂದೆ - ತಾಯಿ ಹಾಗೂ ಅಭಿಮಾನಿಗಳ ಆಶೀರ್ವಾದವೇ ಕಾರಣ. ಇನ್ನೂ, ನನ್ನ ಮಕ್ಕಳು " ಕಾರ್ತಿಕೇಯ 2" ಸಿನಿಮಾವನ್ನು ನೋಡಿದಾಗ, ನೀವು ಈತರಹದ ಚಿತ್ರದಲ್ಲಿ ಅಭಿನಯಿಸಬೇಕೆಂದು ಹೇಳುತ್ತಿದ್ದರು. ನಾನು ಶಿವ ಭಕ್ತ. "ಪಿನಾಕ" ಸಹ ಶಿವನ ಕುರಿತಾದ ಸಿನಿಮಾ. ಇಂತಹ ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ. ಈ ಚಿತ್ರದ ಕುರಿತು ನಿರ್ಮಾಪಕರು ನನ್ನ ಬಳಿ ಮಾತನಾಡಿದಾಗ, ಈ ಕಥೆ ಬಹಳ ಬಜೆಟ್ ಕೇಳುತ್ತದೆ. ನಿಮಗೆ ಹೊರೆಯಾಗಬಾರದು ಎಂದು ಹೇಳಿದೆ. ಅವರು ಇಲ್ಲ ಕಥೆ ಕೇಳುವ ಬಜೆಟ್ ಹಾಕಲು ನಾವು ಸಿದ್ದರಿದ್ದೇವೆ ಎಂದು ಹೇಳಿದರು.
ಈ ಚಿತ್ರದ ಚಿತ್ರೀಕರಣದಲ್ಲಿ ಸಾವಿರಾರು ಜನರು ಭಾಗಿಯಾಗುತ್ತಿದ್ದರು. ಕ್ಲೈಮ್ಯಾಕ್ಸ್ ಅಂತು ನಾನು ಈವರೆಗೂ ಯಾವ ಚಿತ್ರದಲ್ಲೂ ನೋಡಿರದ ಕ್ಲೈಮ್ಯಾಕ್ಸ್ ಎನ್ನಬಹುದು. 12 ನಿಮಿಷಗಳ ಕ್ಲೈಮ್ಯಾಕ್ಸ್ ಗೆ 22 ದಿನಗಳ ಚಿತ್ರೀಕರಣ ಮಾಡಿದ್ದೇವೆ. "ಪಿನಾಕ", ಚಾರುಕೇಶ ರಾಜನ ಕಥೆ. ಈ ಚಿತ್ರ ಚೆನ್ನಾಗಿ ಮೂಡಿಬರಲು ತಂಡದ ಸಹಕಾರವೇ ಕಾರಣ. ಈ ಚಿತ್ರದಲ್ಲಿ ನಟಿಸಿರುವ ಶ್ರೀನಿವಾಸಮೂರ್ತಿ, ರಂಗಾಯಣ ರಘು, ಸಾಧುಕೋಕಿಲ ಅವರಂತಹ ಹಿರಿಯ ಕಲಾವಿದರಿಂದ ಸಾಕಷ್ಟು ಕಲಿತಿದ್ದೇನೆ. ಅಕ್ಟೋಬರ್ 2ರಂದು ತೆರೆಗೆ ಬರುತ್ತಿರುವ ಈ ಚಿತ್ರ ನೋಡುಗರಿಗೆ ಮನೋರಂಜನೆಯ ರಸದೌತಣ ನೀಡಲಿದೆ ಎಂದರು.