Why children lie: ಮಕ್ಕಳು ತುಂಟಾಟ ಮಾಡೋದು, ಹಠ ಹಿಡಿಯೋದು, ಕೆಲವೊಮ್ಮೆ ಮಾತು ಕೇಳದೇ ಇರೋದು ಸಹಜ. ಆದರೆ ನಿಮ್ಮ ಮಕ್ಕಳು ತಪ್ಪು ಮಾಡಿದಾಗೆಲ್ಲಾ ಸತ್ಯ ಮುಚ್ಚಿಡುತ್ತಾರಾ? ಯಾಕೆ ಹೀಗೆ ಮಾಡ್ತಾರೆ? ಇದನ್ನು ಸರಿಪಡಿಸೋದು ಹೇಗೆ ಅಂತ ಇಲ್ಲಿ ನೋಡೋಣ.
ಪೋಷಕರೇ, ಈ ಅಭ್ಯಾಸವನ್ನು ಗಮನಿಸಿ ಮಕ್ಕಳು ಬೆಳೆದಂತೆ ಕೆಲವು ಕೆಟ್ಟ ಅಭ್ಯಾಸಗಳು ತಾವಾಗಿಯೇ ಹೋಗುತ್ತವೆ. ಆದರೆ ಕೆಲವನ್ನು ಪೋಷಕರು ಸರಿಯಾದ ಸಮಯದಲ್ಲಿ ಗುರುತಿಸಿ, ಪ್ರೀತಿಯಿಂದ ಸರಿಪಡಿಸಬೇಕು. ತಪ್ಪು ಮಾಡಿದಾಗ ಸತ್ಯ ಮುಚ್ಚಿಡುವುದು ಅಥವಾ ಸುಳ್ಳು ಹೇಳುವುದು ಇವುಗಳಲ್ಲಿ ಒಂದು. ನಿಮ್ಮ ಮಗು ತಪ್ಪು ಮಾಡಿದಾಗ 'ನಾನು ಮಾಡಿಲ್ಲ', 'ನನಗೆ ಗೊತ್ತಿಲ್ಲ' ಅಂತ ತಪ್ಪಿಸಿಕೊಳ್ಳಲು ನೋಡುತ್ತಿದೆಯಾ? ಈ ನಡವಳಿಕೆ ಹಿಂದೆ ಹಲವು ಕಾರಣಗಳಿರುತ್ತವೆ. ಅವುಗಳೇನು, ಸರಿಪಡಿಸುವುದು ಹೇಗೆಂದು ನೋಡೋಣ.
25
ಮಕ್ಕಳು ಸತ್ಯವನ್ನು ಯಾಕೆ ಮುಚ್ಚಿಡುತ್ತಾರೆ?
ಮಕ್ಕಳು ಸತ್ಯವನ್ನು ಯಾಕೆ ಮುಚ್ಚಿಡುತ್ತಾರೆ? ಹೆಚ್ಚಿನ ಪೋಷಕರು ಮಕ್ಕಳು ಸುಳ್ಳು ಹೇಳಿದ ತಕ್ಷಣ ಕೋಪಗೊಳ್ಳುತ್ತಾರೆ. 'ಯಾಕೆ ಸುಳ್ಳು ಹೇಳ್ತಿದ್ದೀಯಾ?', 'ಸತ್ಯ ಹೇಳು' ಅಂತ ಗದರಿಸುತ್ತಾರೆ. ಆದರೆ ಇಲ್ಲಿಂದಲೇ ಸಮಸ್ಯೆ ಶುರುವಾಗೋದು. ಮಕ್ಕಳು ಶಿಕ್ಷೆಗಿಂತ ಹೆಚ್ಚಾಗಿ ಪೋಷಕರ ಕೋಪ ಅಥವಾ ನಿರಾಸೆಯನ್ನು ಎದುರಿಸುವ ಭಯದಿಂದ ಸತ್ಯ ಮುಚ್ಚಿಡುತ್ತಾರೆ. ಒಮ್ಮೆ ಸತ್ಯ ಹೇಳಿದಾಗ ಬೈಗುಳ, ಶಿಕ್ಷೆ ಸಿಕ್ಕರೆ, ಮುಂದಿನ ಬಾರಿ ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದೇ ಸರಿ ಎಂದು ಮಕ್ಕಳು ಭಾವಿಸುತ್ತಾರೆ.
35
ಮಕ್ಕಳೊಂದಿಗೆ ಶಾಂತವಾಗಿ ಮಾತನಾಡಿ
ಮಕ್ಕಳೊಂದಿಗೆ ಶಾಂತವಾಗಿ ಮಾತನಾಡಿ ಮಕ್ಕಳು ಸುಳ್ಳು ಹೇಳಿದಾಗ, 'ಯಾಕೆ ಸುಳ್ಳು ಹೇಳಿದರು?' ಅಂತ ಮೊದಲು ಯೋಚಿಸಿ. ಮಗು ಮನೆಯಲ್ಲಿ ಏನೋ ಒಡೆದು ಹಾಕಿದೆ ಅಂದುಕೊಳ್ಳಿ. 'ಯಾರು ಒಡೆದಿದ್ದು?' ಅಂತ ಕೇಳಿದ್ರೆ, ಭಯಕ್ಕೆ 'ನಾನಲ್ಲ' ಅನ್ನಬಹುದು. ಆ ಸಮಯದಲ್ಲಿ ಕೋಪದಿಂದ ಕೂಗಾಡುವ ಬದಲು, 'ನೀನೇನಾ ಮಾಡಿದ್ದು? ಪರವಾಗಿಲ್ಲ, ಸತ್ಯ ಹೇಳು' ಅಂತ ಶಾಂತವಾಗಿ ಮಾತಾಡಿದ್ರೆ ಮಗು ಸತ್ಯ ಹೇಳುವ ಸಾಧ್ಯತೆ ಹೆಚ್ಚು.
ಉದ್ದೇಶಪೂರ್ವಕವಾಗಿ ಸತ್ಯ ಮುಚ್ಚಿಟ್ಟರೆ? ಆದರೆ, ಮಕ್ಕಳು ಹೇಳುವ ಪ್ರತಿ ಸುಳ್ಳನ್ನೂ ಪೋಷಕರು ಹಗುರವಾಗಿ ತೆಗೆದುಕೊಳ್ಳಬಾರದು. ವಯಸ್ಸು ಹೆಚ್ಚಾದಂತೆ ಉದ್ದೇಶಪೂರ್ವಕವಾಗಿ ಸತ್ಯ ಮುಚ್ಚಿಡುವುದು, ಪದೇ ಪದೇ ಸುಳ್ಳು ಹೇಳುವುದು, ತಪ್ಪನ್ನು ಇತರರ ಮೇಲೆ ಹಾಕುವುದು ಮುಂದುವರಿದರೆ ಅದನ್ನು ಗಮನಿಸಬೇಕು. ಮನೆಯಲ್ಲಿ, ಶಾಲೆಯಲ್ಲಿ, ಸ್ನೇಹಿತರ ಬಳಿ ಹೀಗೆ ನಿರಂತರವಾಗಿ ನಡೆದರೆ ಮಗುವಿನೊಂದಿಗೆ ಶಾಂತವಾಗಿ ಮಾತನಾಡುವುದು ಅವಶ್ಯಕ.
55
ಪೋಷಕರ ನಡವಳಿಕೆ ಬಹಳ ಮುಖ್ಯ
ಪೋಷಕರ ನಡವಳಿಕೆ ಬಹಳ ಮುಖ್ಯ ಸತ್ಯ ಹೇಳಿದರೆ ತಮಗೆ ತೊಂದರೆಯಾಗುವುದಿಲ್ಲ ಎಂಬ ನಂಬಿಕೆ ಮಕ್ಕಳಲ್ಲಿ ಮೂಡಬೇಕು. 'ಸತ್ಯ ಹೇಳಿದರೆ ಅಪ್ಪ-ಅಮ್ಮ ನನ್ನನ್ನು ಅರ್ಥಮಾಡಿಕೊಳ್ಳುತ್ತಾರೆ' ಎಂಬ ಭಾವನೆ ಮಕ್ಕಳಲ್ಲಿದ್ದರೆ, ಅವರು ಸಮಸ್ಯೆ ಬಂದಾಗ ಪೋಷಕರ ಬಳಿಯೇ ಬರುತ್ತಾರೆ. ಅದೇ 'ಸತ್ಯ ಹೇಳಿದರೆ ಬೈಗುಳ, ಹೊಡೆತ ತಪ್ಪಿದ್ದಲ್ಲ' ಎಂಬ ಭಯವಿದ್ದರೆ ಸಮಸ್ಯೆಗಳನ್ನು ಮುಚ್ಚಿಡಲು ಶುರು ಮಾಡುತ್ತಾರೆ. ಇಲ್ಲಿ ಪೋಷಕರ ನಡವಳಿಕೆಯೂ ಮುಖ್ಯ. ಮಕ್ಕಳು ನಾವು ಹೇಳುವುದನ್ನು ಮಾತ್ರವಲ್ಲ, ಮಾಡುವುದನ್ನೂ ಗಮನಿಸುತ್ತಾರೆ. ನಾವು ಸಣ್ಣಪುಟ್ಟ ವಿಷಯಗಳಲ್ಲಿ ಸುಳ್ಳನ್ನು ಸಾಮಾನ್ಯವಾಗಿ ತೆಗೆದುಕೊಂಡರೆ, ಮಕ್ಕಳೂ ಅದನ್ನೇ ಕಲಿಯುತ್ತಾರೆ. ಹಾಗಾಗಿ ಮಕ್ಕಳಿಗೆ ಪ್ರಾಮಾಣಿಕತೆ ಕಲಿಸಲು ಮೊದಲು ನಮ್ಮ ನಡವಳಿಕೆಯಲ್ಲೂ ಅದನ್ನು ತೋರಿಸಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.