ಭಾರತದ ಅತ್ಯುನ್ನತ ಹಾಸ್ಪಿಟಾಲಿಟಿ ಹಾಗೂ ಟ್ರಾವೆಲ್ ಸೇವೆಯ ಕಂಪನಿಯಾಗಿರುವ ಓಯೋ, ಇಂದು ಜಗತ್ತಿನ 80ಕ್ಕೂ ಅಧಿಕ ದೇಶಗಳಲ್ಲಿ 800ಕ್ಕೂ ಅಧಿಕ ನಗರಗಳಲ್ಲಿ ವ್ಯಾಪಿಸಿದೆ.
29 ವರ್ಷದ ಓಯೋ ಸಂಸ್ಥಾಪಕ ರೀತೇಶ್ ಅಗರ್ವಾಲ್ ಮತ್ತು ಗೀತಾಂಶಾ ಮಾರ್ಚ್ 7 ರಂದು ಮದುವೆ ಆರತಕ್ಷತೆ ಕಾರ್ಯಕ್ರವನ್ನು ದೆಹಲಿಯಲ್ಲಿ ಆಯೋಜಿಸಿದ್ದರು. ಸಾಫ್ಟ್‌ಬ್ಯಾಂಕ್ ಚೇರ್ಮನ್ ಹಾಗೂ ಓಯೋದಲ್ಲಿ ದೊಡ್ಡ ಹೂಡಿಕೆ ಮಾಡಿರುವ ಮಸಯೋಶಿ ಸನ್ ಅರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ದೇಶದ ಅತ್ಯಂತ ಕಿರಿಯ ವಯಸ್ಸಿನ ಬಿಲಿಯನೇರ್‌ಗಳಲ್ಲಿ ಒಬ್ಬರಾಗಿರುವ ರಿತೇಶ್ ಅಗರ್ವಾಲ್, 2013ರಲ್ಲಿ ತಮ್ಮ 19ನೇ ವರ್ಷದಲ್ಲಿ ಓಯೋ ಕಂಪನಿಯನ್ನು ಸ್ಥಾಪನೆ ಮಾಡಿದ್ದರು. ಈ ಕಂಪನಿಯ ಮೇಲೆ ಜಪಾನ್‌ನ ಸಾಫ್ಟ್‌ಬ್ಯಾಂಕ್ ದೊಡ್ಡ ಮಟ್ಟದ ಹೂಡಿಕೆ ಮಾಡಿದೆ.
ಗೀತಾಂಶಾ ಸೂದ್‌ರನ್ನು ಮಂಗಳವಾರ ದೆಹಲಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ವಿವಾಹವಾದರು. ಈವೆಂಟ್‌ನಲ್ಲಿ ಪೇಟಿಎಂನ ವಿಜಯ್ ಶೇಖರ್ ಶರ್ಮಾ ಮತ್ತು ಲೆನ್ಸ್‌ಕಾರ್ಟ್‌ನ ಪೆಯೂಶ್ ಬನ್ಸಾಲ್ ಸೇರಿದಂತೆ ಅನೇಕ ಕಾರ್ಪೊರೇಟ್‌ಗಳು ಭಾಗವಹಿಸಿದ್ದರು.
ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಕೂಡ ದಂಪತಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ರಿತೇಶ್ ಅಗರ್ವಾಲ್ - ಗೀತಾಂಶ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.
ಕಳೆದ ತಿಂಗಳು, ರಿತೇಶ್ ಅಗರ್ವಾಲ್ ತಮ್ಮ ತಾಯಿ ಮತ್ತು ಗೀತಾಂಶಾ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದರು. ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ - ಗೀತಾಂಶಾ ಮದುವೆಯ ಆರತಕ್ಷತೆ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಇನ್ನು ರಿತೇಶ್ ಅಗರ್ವಾಲ್ ಅವರ ಮದುವೆ ಚಿತ್ರಗಳಿಗೆ ಭಿನ್ನಭಿನ್ನವಾದ ಕಾಮೆಂಟ್‌ಗಳು ಬಂದಿವೆ. ಮಧುಚಂದ್ರಕ್ಕೆ ಬೇರೆಲ್ಲೂ ಹೋಗಬೇಕಿಲ್ಲ, ಓಯೋ ರೂಮ್ ಅನ್ನೇ ಆಯ್ಕೆ ಮಾಡಿಕೊಳ್ಳಿ ಎಂದು ಬರೆದಿದ್ದರೆ. 'ನಿಮ್ಮದೇ ಕಂಪನಿಗೆ ನೀವೇ ಕ್ಲೈಂಟ್ ಆಗೋದು ಒಳ್ಳೆಯ ವಿಚಾರ' ಎಂದು ಇನ್ನೊಬ್ಬರು ಬರೆದಿದ್ದಾರೆ.
ಇನ್ನೊಂದೆಡೆ ಸಾಫ್ಟ್‌ಬ್ಯಾಂಕ್ ಸಿಇಒ ಸನ್, ಭಾರತದ ಭೇಟಿಯ ಸಮಯದಲ್ಲಿ ದೇಶದ ಪ್ರಮುಖ ಸ್ಟಾರ್ಟ್‌ಅಪ್‌ಗಳ ಸಿಇಓಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಭಾರತೀಯ ಸ್ಟಾರ್ಟ್‌ಅಪ್‌ಗಳ ವ್ಯವಸ್ಥೆಯಲ್ಲಿ ಸಾಫ್ಟ್‌ಬ್ಯಾಂಕ್ ಪ್ರಮುಖ ಮತ್ತು ಸಮೃದ್ಧ ಹೂಡಿಕೆದಾರರಾಗಿದ್ದು, ವರ್ಷಗಳಲ್ಲಿ ಅಂದಾಜು 15 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಓಲಾ, ಓಯೋ, ಲೆನ್ಸ್‌ಕಾರ್ಟ್ ಮತ್ತು ಮೀಶೋಗಳ ಮೇಲೆ ಸಾಫ್ಟ್ ಬ್ಯಾಂಕ್ ಹೂಡಿಕೆ ಮಾಡಿದೆ.