ಮಗು ಹೆರಲಿರುವ ಅಪ್ಪ, ಕೇರಳದ ಸಹದ್‌ 8 ತಿಂಗಳ ಗರ್ಭಿಣಿ!

First Published Feb 3, 2023, 9:31 AM IST

ಭಾರತದ ಮೊದಲ ಟ್ರಾನ್ಸ್‌ಮ್ಯಾನ್ ತಂದೆಯಾಗಲು ಸಿದ್ಧರಾಗಿದ್ದಾರೆ. ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಸಹದ್ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಜಿಯಾ ತಮ್ಮ ಮೊದಲ ಮಗುವನ್ನು ಎದುರು ನೋಡುತ್ತಿದ್ದಾರೆ. ಸಹದ್ 8 ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕೋಝಿಕ್ಕೋಡ್‌ನ ಉಮ್ಮಲತ್ತೂರ್‌ನ ಟ್ರಾನ್ಸ್‌ ಜೆಂಡರ್ ದಂಪತಿ ಜಿಯಾ ಮತ್ತು ಸಹದ್ ತಮ್ಮ ಮೊದಲ ಮಗುವನ್ನು ಎದುರು ನೋಡುತ್ತಿದ್ದಾರೆ. ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಸಹದ್ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಜಿಯಾ ತಮ್ಮ ಖುಷಿಯ ಕ್ಷಣವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಹದ್ ಗರ್ಭಧಾರಣೆಯ ಮೂಲಕ ಭಾರತದ ಮೊದಲ ಟ್ರಾನ್ಸ್‌ಮ್ಯಾನ್‌ ತಂದೆಯಾಗಲು ಸಿದ್ಧರಾಗಿದ್ದಾರೆ.

ಈ ಹಿಂದೆಯೇ ದಂಪತಿ ಮಗುವನ್ನು ದತ್ತು ಪಡೆಯಲು ಪ್ರಯತ್ನಿಸಿದ್ದರು. ಆದರೆ, ದಂಪತಿ ಟ್ರಾನ್ಸ್‌ಜೆಂಡರ್‌ ಆಗಿರುವ ಕಾರಣ ಕಾನೂನು ಪ್ರಕ್ರಿಯೆಯು ಸವಾಲಾಗಿತ್ತು. ಹೀಗಿದ್ದೂ ಸಹದ್‌ಗೆ ಗಂಡಾಗಿದ್ದರೂ ಗರ್ಭಿಣಿಯಾಗುವ ಯೋಚನೆ ಬಂದಿತ್ತು.

'ಜನರು ಏನು ಹೇಳುತ್ತಾರೋ ಎಂಬ ಆತಂಕದಲ್ಲಿ ಆರಂಭದಲ್ಲಿ ಹಿಂಜರಿಯುತ್ತಿದ್ದೆ. ಅಲ್ಲದೆ ಒಮ್ಮೆ ಕೈಬಿಟ್ಟ ಸ್ತ್ರೀತ್ವಕ್ಕೆ ಮರಳುವುದು ಒಂದು ಸವಾಲಾಗಿ ಪರಿಣಮಿಸಿತು. ಆದರೆ ಜಿಯಾಳ ಪ್ರೀತಿ ಮತ್ತು ತಾಯಿಯಾಗಬೇಕೆಂಬ ಅದಮ್ಯ ಬಯಕೆ ನಿರ್ಧಾರವನ್ನೇ ಬದಲಿಸಿತು' ಎಂದು ಸಹದ್ ಹೇಳಿದ್ದಾರೆ.

ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನ ವೈದ್ಯರ ಮಾರ್ಗದರ್ಶನದಲ್ಲಿ ತಜ್ಞ ಪರೀಕ್ಷೆಗಳನ್ನು ನಡೆಸಿ ಆರೋಗ್ಯ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿಕೊಂಡ ನಂತರ ದಂಪತಿಗೆ ಚಿಕಿತ್ಸೆ ಆರಂಭಿಸಲಾಯಿತು. ಸಹದ್ ಹೆಣ್ಣಿನಿಂದ ಗಂಡಾಗಿ ಪರಿವರ್ತನೆಯ ಭಾಗವಾಗಿ, ಸ್ತನಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಯಿತು. ಆದರೆ ಗರ್ಭಾಶಯ ಇತ್ಯಾದಿಗಳನ್ನು ಬದಲಾಯಿಸಲಾಗಿಲ್ಲ. 

ಈ ತೃತೀಯಲಿಂಗಿ ದಂಪತಿಗಳು  ಒಂದೆರಡು ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ನಿರೀಕ್ಷಿಸುತ್ತಿದ್ದಾರೆ. ಇದರೊಂದಿಗೆ ಭಾರತದಲ್ಲಿ ಮಗುವಿಗೆ ಜನ್ಮ ನೀಡಿದ ಮೊದಲ ಮೂರನೇ ಲಿಂಗದ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಈಗ ಎಂಟು ತಿಂಗಳ ತುಂಬು ಗರ್ಭಿಣಿಯಾಗಿರುವ ಸಹದ್ ಹೆರಿಗೆಯ ದಿನಾಂಕ ಮಾರ್ಚ್ 4 ಎಂದು ವೈದ್ಯರು ತಿಳಿಸಿದ್ದಾರೆ.

8 ತಿಂಗಳ ಗರ್ಭಿಣಿಯಾಗಿರುವ ಸಹದ್ ಜೋಡಿ ಇದೀಗ ಫೋಟೋ ಶೂಟ್ ಮಾಡಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ತನಗೆ ಮಗುವಾಗದ ಕಾರಣ ಸಹದ್ ಗೆ ಮಗು ಆಗಲಿದೆ ಎಂದೂ ಜಿಯಾ ಹೇಳುತ್ತಾಳೆ. ಮಗು ಜನಿಸಿದ ನಂತರ ಎದೆಹಾಲು ಬ್ಯಾಂಕ್‌ನಿಂದ ಖರೀದಿಸಿ ಮಗುವಿಗೆ ನೀಡಲು ನಿರ್ಧರಿಸಿದ್ದಾರೆ. 

ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಜೋಡಿ ಮಗುವಿನ ಆಗಮನದ ನಿರೀಕ್ಷೆಯಲ್ಲಿ ತುಂಬಾ ಖುಷಿಯಾಗಿದ್ದಾರೆ. ಜಿಯಾ ನೃತ್ಯಗಾರ್ತಿ. ಸಹದ್ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

click me!