Graveyard Dating: ಕಾಫಿ ಶಾಪ್, ಪಾರ್ಕ್‌ಗಳೆಲ್ಲಾ ಹಳೆಯದಾಯ್ತು. ಈಗಿನ ಹೊಸ ಟ್ರೆಂಡ್ ಗ್ರೇವ್‌ಯಾರ್ಡ್ ಡೇಟಿಂಗ್. ಯುವ ಜೋಡಿಗಳು ಸ್ಮಶಾನಗಳಲ್ಲಿ ಯಾಕೆ ಡೇಟಿಂಗ್ ಮಾಡ್ತಿದ್ದಾರೆ? ಇದರ ಹಿಂದಿನ ಅಸಲಿ ಕಾರಣಗಳೇನು? ಈ ಕುತೂಹಲಕಾರಿ ವಿವರ ಇಲ್ಲಿದೆ.
ಪ್ರೇಮಕ್ಕಾಗಿ ಸ್ಮಶಾನಕ್ಕೆ.. ಈಗ ಗ್ರೇವ್‌ಯಾರ್ಡ್ ಡೇಟಿಂಗ್ ಟ್ರೆಂಡ್ ನಡೀತಿದೆ.. ಅಸಲಿಗೆ ಏನಿದು?
ಒಂದು ಕಾಲದಲ್ಲಿ ಡೇಟಿಂಗ್ ಅಂದ್ರೆ ಕಾಫಿ ಶಾಪ್, ರೆಸ್ಟೋರೆಂಟ್ ಅಥವಾ ಸಿನಿಮಾ ಥಿಯೇಟರ್‌ಗಳಿಗೆ ಸೀಮಿತವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಯುವಕರ ಆಲೋಚನೆಗಳು ಇನ್ನೂ ವೇಗವಾಗಿ ಬದಲಾಗುತ್ತಿವೆ. ಸದ್ಯ 'ಗ್ರೇವ್‌ಯಾರ್ಡ್ ಡೇಟಿಂಗ್' ಎಂಬ ಹೊಸ ಟ್ರೆಂಡ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹೆಸರು ಕೇಳಿದರೆ ಮೈ ಜುಂ ಎನಿಸಿದರೂ, ಈ ಕಾಲದ ಪ್ರೇಮಿಗಳು ಇದಕ್ಕೆ ಜೈ ಎನ್ನುತ್ತಿದ್ದಾರೆ.
24
ಏನಿದು ಗ್ರೇವ್‌ಯಾರ್ಡ್ ಡೇಟಿಂಗ್?
ಡೇಟಿಂಗ್ ಅಂದ ತಕ್ಷಣ ನೆನಪಾಗೋದು ಸುಂದರ ತಾಣಗಳು ಅಥವಾ ಲೈಟಿಂಗ್ಸ್ ಇರುವ ಹೋಟೆಲ್‌ಗಳು. ಆದರೆ ಈ ಟ್ರೆಂಡ್‌ನಲ್ಲಿ ಪ್ರೇಮಿಗಳು ಸ್ಮಶಾನಗಳಲ್ಲಿ ಭೇಟಿಯಾಗುತ್ತಾರೆ. ಅಲ್ಲಿ ಕುಳಿತು ಹರಟೆ ಹೊಡೆಯುತ್ತಾರೆ. ಕೇಳಲು ವಿಚಿತ್ರ ಎನಿಸಿದರೂ, ಇನ್‌ಸ್ಟಾಗ್ರಾಮ್, ಟಿಕ್‌ಟಾಕ್‌ನಂತಹ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಈಗ ತುಂಬಾನೇ ಹರಿದಾಡುತ್ತಿವೆ. ಈಗಾಗಲೇ ಫ್ಲಡ್‌ಲೈಟಿಂಗ್, ಮಂಕಿ ಬ್ಯಾರಿಂಗ್, ಬ್ರೆಡ್‌ಕ್ರಂಬಿಂಗ್‌ನಂತಹ ವಿಚಿತ್ರ ಡೇಟಿಂಗ್ ಟ್ರೆಂಡ್‌ಗಳನ್ನು ನೋಡಿದ್ದೇವೆ. ಈಗ ಇವೆಲ್ಲವನ್ನೂ ಮೀರಿಸಿ ಈ ಗ್ರೇವ್‌ಯಾರ್ಡ್ ಡೇಟಿಂಗ್ ಚರ್ಚೆಯಲ್ಲಿದೆ.
34
ಸ್ಮಶಾನಕ್ಕೇ ಯಾಕೆ ಹೋಗ್ತಾರೆ?
ಜನದಟ್ಟಣೆ ಇರುವ ಸ್ಥಳಗಳ ಬದಲು, ಯುವಜನರು ಏಕಾಂತ ಪ್ರದೇಶಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಶಾಂತಿ, ಪ್ರೈವೆಸಿ ಮತ್ತು ಗಂಭೀರ ಸಂಭಾಷಣೆ. ನಗರದ ಟ್ರಾಫಿಕ್ ಗದ್ದಲ, ರೆಸ್ಟೋರೆಂಟ್‌ಗಳ ಕಿರಿಚಾಟ ಇಲ್ಲದೆ ಸ್ಮಶಾನಗಳು ನಿಶ್ಯಬ್ದವಾಗಿರುತ್ತವೆ. ಇಲ್ಲಿ ನಮ್ಮನ್ನು ನೋಡುವವರು, ಡಿಸ್ಟರ್ಬ್ ಮಾಡುವವರು ಯಾರೂ ಇರಲ್ಲ. ಹಾಗಾಗಿ, ಮನಸ್ಸಿನ ಮಾತುಗಳನ್ನು ಧೈರ್ಯವಾಗಿ ಹಂಚಿಕೊಳ್ಳಲು ಇದು ಸರಿಯಾದ ಜಾಗ ಎಂದು ಕೆಲವರು ಭಾವಿಸುತ್ತಾರೆ. ಹಳೆಯ ಸಮಾಧಿಗಳು, ಮರಗಳ ನಡುವೆ ಕುಳಿತಾಗ ಜೀವನ, ಭಯ, ಕನಸುಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತವೆ ಎಂದು ವೋಗ್ ಇಂಡಿಯಾದಂತಹ ಪತ್ರಿಕೆಗಳು ಕೂಡ ಹೇಳಿವೆ. ಇದೊಂದು ರೀತಿ ಹೊಂದಾಣಿಕೆ ಪರೀಕ್ಷೆ ಇದ್ದಂತೆ ಎನ್ನುತ್ತಾರೆ ಡೇಟರ್ಸ್.
ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಸ್ಮಶಾನದ ಕಡೆ ಹೋಗಲು ಎಲ್ಲರೂ ಹೆದರುತ್ತಾರೆ. ಆತ್ಮಗಳು ಓಡಾಡುತ್ತವೆ, ದೆವ್ವಗಳಿರುತ್ತವೆ ಎಂಬ ನಂಬಿಕೆಗಳಿವೆ. ಆದರೆ ಈ ಗ್ರೇವ್‌ಯಾರ್ಡ್ ಡೇಟಿಂಗ್ ಮಾಡುವವರಿಗೆ ಪ್ರೀತಿಯ ಮುಂದೆ ಈ ಭಯ ಕಾಣುತ್ತಿಲ್ಲವಂತೆ. ಆದರೆ, ಇದು ಎಲ್ಲರಿಗೂ ಇಷ್ಟವಾಗಬೇಕೆಂದಿಲ್ಲ. ಕೆಲವರಿಗೆ ಇದು ವಿಚಿತ್ರ ಎನಿಸಿದರೆ, ಇನ್ನು ಕೆಲವರು ಇದನ್ನು ಅಸಹ್ಯಕರ ಎಂದು ಭಾವಿಸುತ್ತಾರೆ. ಸತ್ತವರು ಮಲಗುವ ಜಾಗದಲ್ಲಿ ರೊಮ್ಯಾನ್ಸ್ ಏನೂಂತ ಟೀಕಿಸುವವರೂ ಇದ್ದಾರೆ. ಇಂದಿನ ದಿನಗಳಲ್ಲಿ, ಜನರ ಇಷ್ಟಗಳು ಅವರವರ ಆಯ್ಕೆ. ಜೆನ್-ಝಿ ಮತ್ತು ಮಿಲೇನಿಯಲ್‌ಗಳು ತಮ್ಮ ಒತ್ತಡದ ಬದುಕಿನಿಂದ ವಿರಾಮ ಪಡೆಯಲು ಇಂತಹ ನಿಶ್ಯಬ್ದ ಜಾಗಗಳನ್ನು ಹುಡುಕುತ್ತಿದ್ದಾರೆ ಎಂಬ ಅಭಿಪ್ರಾಯಗಳೂ ಇವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.