ಶುಕ್ರವಾರ ಅದ್ಧೂರಿಯಾಗಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಸ್ವರ್ಗವೇ ಧರೆಗಿಳಿದ ರೀತಿಯಲ್ಲಿ ನಡೆದಿದ್ದ ವಿವಾಹದಲ್ಲಿ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್‌ಗಳ ಮರುಸೃಷ್ಟಿಸಲಾಗಿತ್ತು .
ಹಿಂದೂ ಧರ್ಮ, ಸನಾತನ ಪದ್ಧತಿ ಮೇಲೆ ಅಪಾರ ಶ್ರದ್ಧೆಯುಳ್ಳ ಅಂಬಾನಿ ಕುಟುಂಬ ಇದೇ ಕಾರಣಕ್ಕೆ ಕಾಶಿ ಪರಿಕಲ್ಪನೆಯಲ್ಲಿ ಮಂಟಪವನ್ನು ಸಿದ್ಧಪಡಿಸಿತ್ತು. ರಿಲಯನ್ಸ್ ದಿಗ್ಗಜನ ಮದುವೆ ಕಾರ್ಯಕ್ರಮಕ್ಕೆ ಭಾಗವಹಿಸುವ ಜಾಗತಿಕ ಗಣ್ಯರಿಗೆ ಭಾರತೀಯ ಸಂಸ್ಕೃತಿಯ ಪರಿಚಯಿಸುವ ಉದ್ದೇಶದಿಂದ ಪಕ್ಕಾ ಭಾರತೀಯ ಸಂಪ್ರದಾಯದಂತೆ ಮದುವೆ ನಡೆದಿತ್ತು.
ಭಾರತೀಯ ಶ್ರೀಮಂತ ಸಂಪ್ರದಾಯ, ಆಧ್ಯಾತ್ಮಿಕತೆ, ಸಂಸ್ಕೃತಿ, ಕಲೆಗಳು ಮತ್ತು ಬನಾರಸಿ ಪಾಕಪದ್ಧತಿಗೆ ಹೆಸರುವಾಸಿಯಾದ ಶಾಶ್ವತ ನಗರವನ್ನು ಗೌರವಿಸುವುದು ಮತ್ತು ಪರಿಚಯಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಜಿಯೋ ವರ್ಲ್ಡ್ ಸೆಂಟರ್‌ನಲ್ಲಿನ ಮದುವೆಯ ಸ್ಥಳವನ್ನು ಬನಾರಸ್‌ನ ಬೀದಿಗಳಂತೆ ಮಾಡಿ ಜೀವ ತುಂಬಲಾಗಿತ್ತು.
ಅತಿಥಿಗಳ ಡ್ರೆಸ್ ಕೋಡ್‌ನಿಂದ ಹಿಡಿದು, ಮಂಟಪದ ವಿನ್ಯಾಸ, ಅಲಂಕಾರಕ್ಕೆ ಬಳಸಿರುವ ಹೂವುಗಳು ಕೂಡ ದೇಶದ ಸಂಸ್ಕೃತಿ ಬಿಂಬಿಸುವ ರೀತಿಯಲ್ಲಿತ್ತುಅಲ್ಲದೇ ದೇಶದ ಸಾಂಪ್ರದಾಯಿಕ ಶೈಲಿಯ ಖಾದ್ಯಗಳನ್ನು ಗಣ್ಯರಿಗೆ ಉಣಬಡಿಸಲಾಗಿತ್ತು. ಭಜನೆಯಿಂದ ಹಿಡಿದು ಬಾಲಿವುಡ್ ಹಾಡಿನವರೆಗೆ ಗಾಯಕರಿಂದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಗಣ್ಯರಿಗೆ ಮನರಂಜನೆ ನೀಡಲಾಯಿತು.
ಭಾರತೀಯ ಗಣ್ಯರು ಮಾತ್ರವಲ್ಲ ವಿಶ್ವಾದ್ಯಂತ ಇರುವ ಜಾಗತಿಕ ನಾಯಕರು ಕೂಡ ಮದುವೆಯಲ್ಲಿ ಭಾರತೀಯ ಉಡುಗೆಯಲ್ಲಿ ಮಿಂಚಿದ್ದರು. ಸದ್ಯಕ್ಕೆ ಕರ್ನಾಟಕದಿಂದ ಕರ್ನಾಟಕದಿಂದ ನಟ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಮಾತ್ರ ಮದುವೆಯಲ್ಲಿ ಭಾಗವಹಿಸಿರುವ ಮಾಹಿತಿ ಇದೆ.
ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ವೈಭವದಿಂದ ಶುಕ್ರವಾರ ಅಂದರೆ ಜುಲೈ 12 ಮದುವೆ ನಡೆಯಿತು. ಜುಲೈ 13ರಂದು ಆರತಕ್ಷತೆ ಸಮಾರಂಭ ನಡೆಯಿತು. ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.
ಇನ್ನು ಅಂಬಾನಿ ಅದ್ದೂರಿ ವಿವಾಹದ ಕಾರ್ಯಕ್ರಮವು ಅಮೆರಿಕದ ತಮ್ಮ ಪ್ರಸಿದ್ಧ ದಿ ಕರ್ದಶಿಯನ್ ರಿಯಾಲಿಟಿ ಶೋನಲ್ಲಿ ಪ್ರಸಾರವಾಗುತ್ತದೆ ಎಂದು ಅಮೆರಿಕದ ಮಾಡೆಲ್ ಕಿಮ್ ಕರ್ದಶಿಯನ್ ಹೇಳಿದ್ದಾರೆ. ಮುಂಬೈನಲ್ಲಿ ನಡೆದಿದ್ದ ಅನಂತ್ ಅಂಬಾನಿ ಮದುವೆ ಕಾರ್ಯಕ್ರಮಕ್ಕೆ ಕಿಮ್ ಕರ್ದಶಿಯನ್ ಮತ್ತು ಆಕೆ ಸಹೋದರಿ ಖೋಲೆ ಕರ್ದಶಿಯನ್ ಭಾಗವಹಿಸಿದ್ದರು.
ಈ ವೇಳೆಯಲ್ಲಿ ಕಿಮ್ ಮತ್ತು ಖೋಲೆ ಕರ್ದಶಿಯನ್ ಸಾಮಾಜಿಕ ಜಾಲತಾಣದಲ್ಲಿ ತಾವು ಮದುವೆಗೆ ಸಿದ್ಧತೆ ನಡೆಸುತ್ತಿರುವುದು ಸೇರಿದಂತೆ ಚಿತ್ರೀಕರಣದ ಕೆಲ ತುಣುಕುಗಳನ್ನು ಹಂಚಿಕೊಂಡಿದ್ದರು. ಇದನ್ನು ನೋಡಿದ ಕೆಲವರು ರಿಯಾಲಿಟಿ ಶೋಗೆ ಚಿತ್ರೀಕರಣ ನಡೆಯುತ್ತಿರಬಹುದು ಎಂದು ಊಹೆ ಮಾಡಿದ್ದರು. 'ದಿ ಕರ್ದಶಿಯನ್’ ರಿಯಾಲಿಟಿ ಶೋ ಡಿಸ್ನಿ ಹಾಸ್ಟರ್‌ನಲ್ಲಿ ಪ್ರಸಾರವಾಗುತ್ತದೆ. ಇದರಲ್ಲಿ ಕರ್ದಶಿಯನ್ ಮತ್ತು ಜೆನ್ನರ್ ಕುಟುಂಬದ ವೈಯುಕ್ತಿಕ ವಿಚಾರಗಳನ್ನು ತೋರಿಸಲಾಗುತ್ತದೆ.
ಇನ್ನು ದ್ವಾರಕಾ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಮತ್ತು ಜ್ಯೋತಿರ್ಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಶಂಕರಾಚಾರ್ಯರು, ಅಯೋಧ್ಯೆಯ ರಾಮಭದ್ರಾಚಾರ್ಯರು ಆಗಮಿಸಿ ನವವಿವಾಹಿತರಿಗೆ ಆಶೀರ್ವದಿಸಿದರು.