ಗಣೇಶ ಚತುರ್ಥಿ ಸಂದರ್ಭ ಏಷ್ಯಾನೆಟ್ ಸುವರ್ಣನ್ಯೂಸ್‌ನ ರಾಧಿಕೆಯ ಗಣಪ ಕಾರ್ಯಕ್ರಮಕ್ಕೆ ಬಂದಿದ್ದ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 37 ವರ್ಷವಾದರೂ ಇನ್ನೂ ಗ್ಲಾಮರ್ ಡಾಲ್ ಆಗಿರುವ ತಮ್ಮ ಫಿಟ್‌ನೆಸ್ ಸೀಕ್ರೆಟ್‌ಅನ್ನು ಅವರು ತಿಳಿಸಿದ್ದಾರೆ.
ಫಿಟ್‌ನೆಸ್‌ಗಾಗಿ ತಾವು ಯಾವುದೇ ರೀತಿಯ ಡಯಟ್ ಕೂಡ ಮಾಡುತ್ತಿಲ್ಲ ಎಂದಿರುವ ಅವರು, ನಿನಗಾಗಿ ಸಿನಿಮಾದ ಸಮಯದಲ್ಲಿ ಇದ್ದ ರಾಧಿಕಾಗೂ ಈಗಿನ ರಾಧಿಕಾಗೂ ಬಹಳ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ. ಈಗ ಕೂಡ ನಾನು ಫುಡ್ಡಿ ಆದರೆ, ಡಾನ್ಸ್ ಮಾಡುವ ಮೂಲಕ ಫಿಟ್‌ನೆಸ್ ಮೇಂಟೇನ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ನಾನು ತುಂಬಾ ಫುಡ್ಡಿ. ಈಗ ಗಣೇಶ ಹಬ್ಬಕ್ಕೆ ಏನೆಲ್ಲಾ ಸ್ವೀಟ್ಸ್‌ನ ಮನೆಯಲ್ಲಿ ಇಟ್ಟಿದ್ದಾರೋ ಅವೆಲ್ಲವನ್ನೂ ತಿನ್ನೋದು ನಾನೊಬ್ಬಳೇ. ಡಾನ್ಸ್ ಎಲ್ಲಾ ಮಾಡಿ ಫಿಟ್‌ನೆಸ್ ಮೇಂಟನ್ ಮಾಡಿಕೊಳ್ಳುತ್ತೇನೆ. ಇಲ್ದೆ ಇದ್ರೆ ನಾನೂ ಕೂಡ ತುಂಬಾ ದಪ್ಪ ಆಗುತ್ತೇನೆ. ಡಾನ್ಸ್ ಮಾಡೋದ್ರಿಂದ ನನಗೆ ಹೆಲ್ಪ್ ಆಗುತ್ತೆ. ಯಾವ ರೀತಿಯ ಡಯಟ್ ಕೂಡ ನಾನು ಮಾಡೋದಿಲ್ಲ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.
ಸಿನಿಮಾಗಳು ಇದ್ದಾಗ ನಾನು ಡಯಟ್ ಮಾಡುತ್ತೇನೆ. ಆಗ ಯಾವ ರೀತಿಯ ಸ್ವೀಟ್ಸ್‌ಗಳನ್ನು ಕೂಡ ನಾನು ತಿನ್ನೋದಿಲ್ಲ. ಜ್ಯೂಸ್, ತರಕಾರಿಗಳನ್ನು ಜಾಸ್ತಿ ತಿನ್ನೋಕೆ ಆರಂಭ ಮಾಡ್ತೇನೆ. ಇಲ್ಲ ಅಂದ್ರೆ ಮಕ್ಕಳ ಥರ ಇಡೀ ದಿನ ತಿನ್ನುತ್ತಲೇ ಇರ್ತೇನೆ. ಒಂದೇ ಲೈಫ್ ಇರೋದು ನಮಗೆ. ಎಲ್ಲಾ ಟೈಮ್‌ನಲ್ಲೂ ಒಳ್ಳೊಳ್ಳೆ ಊಟ-ತಿಂಡಿ ಎಲ್ಲಾ ಬಿಟ್ಟು ಯಾಕೆ ಬದುಕಬೇಕು ಅನ್ನೋದೇ ನನ್ನ ಪ್ರಶ್ನೆ ಎಂದಿದ್ದಾರೆ. ನನಗೆ ಯಾವಾಗ ಡಯಟ್ ಮಾಡಬೇಕು ಅನಿಸುತ್ತೋ ಆಗ ಡಯಟ್ ಮಾಡ್ತೇನೆ. ಇಲ್ಲ ಅಂದ್ರೆ ಫ್ಯಾಮಿಲಿ ಜೊತೆ ಸರಿಯಾಗಿ ಊಟ ಮಾಡ್ತೇನೆ ಎಂದು ಹೇಳಿದ್ದಾರೆ.
ಒಂದೊಂದು ಬಾಡಿ ಒಂದೊಂದು ರೀತಿ ಇರುತ್ತೆ. ಕೆಲವು ಹೆಣ್ಣು ಮಕ್ಕಳಿಗೆ ಪಿಸಿಒಡಿ, ಥೈರಾಯ್ಡ್ ಸಮಸ್ಯೆ ಇರುತ್ತೆ. ಪಾಪ.. ಅಂಥವರು ಡಯಟ್ ಮಾಡಲೇಬೇಕಾಗುತ್ತೆ. ಎಲ್ಲರಿಗೂ ಇದೇ ರೀತಿ ಮಾಡಿ ಅಂತಾ ಹೇಳೋಕೆ ಆಗಲ್ಲ. ಆದರೆ, ನಾನು ಮೊದಲಿನಿಂದಲೂ ಇದೇ ರೀತಿ ಆಹಾರ ಕ್ರಮವನ್ನು ಮಾಡುತ್ತಾ ಬಂದಿದ್ದೇನೆ. ನನ್ನ ದೇಹ ಕೂಡ ಅದಕ್ಕೆ ಒಗ್ಗಿಕೊಂಡಿದೆ. ಏನ್ ತಿಂದ್ರೂ ಸ್ವಲ್ಪ ಡಾನ್ಸ್ ಮಾಡಿದ್ರೆ ನಾನು ಸಣ್ಣ ಆಗ್ತೀನಿ ಎಂದು ರಾಧಿಕಾ ಹೇಳಿದ್ದಾರೆ.
ಡಾನ್ಸ್ ಇಲ್ದೆ ಇದ್ರೆ ನಾನು ದಪ್ಪ ಆಗ್ತೀನಿ. ಈಗಲೂ ಕೂಡ ನಾನು 6 ಕೆಜಿ ಹೆಚ್ಚಿನ ತೂಕ ಇದ್ದೇನೆ. ನಿಮಗೆ ಅದು ಗೊತ್ತಾಗುತ್ತಿಲ್ಲವಷ್ಟೇ. ನಿನಗಾಗಿ ಸಿನಿಮಾ ಟೈಮ್‌ನಲ್ಲಿ ನಾನು ತುಂಬಾ ದಪ್ಪ ಇದ್ದೆ. ಆಗ ಬಬ್ಲಿ ಬಬ್ಲಿಯಾಗಿ ಇದ್ದೆ. ನಿನಗಾಗಿ ಸಿನಿಮಾ ಟೈಮ್‌ನಲ್ಲಿ ಡೈರೆಕ್ಟರ್ ಎಸ್ ಮಹೇಂದರ್ ಸರ್ ಇದನ್ನೇ ಹೇಳ್ತಾ ಇರ್ತಿದ್ರು. ಆಗ ಒಂದು ಕೈಯಲ್ಲಿ ಚಾಕೋಲೆಟ್ ಇನ್ನೊಂದು ಕೈಲಲ್ಲಿ ಹಾಲು ಹಿಡಿದುಕೊಂಡಿರುತ್ತಿದ್ದೆ. ಚಾಕಲೋಟ್ ತಿನ್ನೋದು ಹಾಲು ಕುಡಿಯೋದು ಇದೇ ನನ್ನ ಕೆಲಸ ಆಗಿತ್ತು ಎಂದು ಹೇಳಿದ್ದಾರೆ.
ನನಗೆ ತುಪ್ಪ ತಿನ್ನೋ ಅಭ್ಯಾಸ ಜಾಸ್ತಿ. ಒಂದು ಬಾಟಲ್ ತುಪ್ಪ ತಂದು ಇಟ್ರೆ, ನಾಲ್ಕು ದಿವಸ ಕೂಡ ಅದು ಬರ್ತಾ ಇರಲಿಲ್ಲ. ಅಷ್ಟು ತುಪ್ಪ ನಾನು ತಿಂತಾ ಇದ್ದೆ. ನೀನು ಹೀಗೆ ತಿಂತಾ ಇರು, ಮುಂದೆ ನೀನು ಹೀರೋಗೆ ಅಮ್ಮನ ಅಥವಾ ಅಕ್ಕನ ಪಾರ್ಟ್ ಮಾಡೋಕೆ ರೆಡಿಯಾಗು ಎಂದು ಮಹೇಂದರ್ ಸರ್ ಹೇಳುತ್ತಿದ್ದರು. ಅದೇ ಕೊನೆ ಆ ಬಳಿಕ ನಾನು ತುಪ್ಪ ತಿನ್ನೋದನ್ನ ಕಡಿಮೆ ಮಾಡಿಬಿಟ್ಟೆ ಎಂದು ಹೇಳಿದ್ದಾರೆ.