ಖ್ಯಾತ ಭಾರತೀಯ ವಾಣಿಜ್ಯೋದ್ಯಮಿ ಮತ್ತು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಬಗ್ಗೆ ಪ್ರತ್ಯೇಕ ಪರಿಚಯದ ಅಗತ್ಯವಿಲ್ಲ. ಮುಕೇಶ್ ಅಂಬಾನಿ 7.6 ಲಕ್ಷ ಕೋಟಿ ರೂ. ಆಸ್ತಿಯ ಒಡೆಯ. 1966ರಲ್ಲಿ ರಿಲಯನ್ಸ್‌ಗೆ ಅಡಿಪಾಯ ಹಾಕಿದ ಉದ್ಯಮಿ ಧೀರೂಭಾಯಿ ಅಂಬಾನಿ ಅವರ ಮಗ. ಪ್ರಸ್ತುತ ಅಂಬಾನಿಗಳ ಮೂರನೇ ತಲೆಮಾರಿನವರು ವ್ಯವಹಾರವನ್ನು ವಹಿಸಿಕೊಂಡಿದ್ದಾರೆ.
ಮುಕೇಶ್ ಅಂಬಾನಿ ಏಪ್ರಿಲ್ 19, 1957ರಂದು ಗುಜರಾತಿ ಕುಟುಂಬದಲ್ಲಿ ಜನಿಸಿದರು. ಭಾರತದ ಉದ್ಯಮ ಲೋಕದಲ್ಲಿ ಅತೀ ಕೋಟ್ಯಾಧಿಪತಿ ಎಂದು ಗುರುತಿಸಿಕೊಂಡಿದ್ದಾರೆ. ಮುಕೇಶ್ ಅಂಬಾನಿ ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಇಂಡಸ್ಟ್ರೀಸ್‌ನ್ನು ಮುನ್ನಡೆಸುತ್ತಾರೆ. ಇದು ಹಲವು ಬ್ರ್ಯಾಂಡ್‌ಗಳನ್ನು ಹೊಂದಿದ್ದು, ಕೋಟಿ ಕೋಟಿ ವ್ಯವಹಾರ ನಡೆಸುತ್ತಿದೆ.
ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ 2023ನೇ ಸಾಲಿನ ಟಾಪ್ 100 ಶ್ರೀಮಂತ ಭಾರತೀಯರ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಯಾವತ್ತಿನಂತೆ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ನೀತಾ ಅಂಬಾನಿ, ಮುಕೇಶ್ ಅಂಬಾನಿಯ ಪತ್ನಿಯಾಗಿದ್ದು ದಂಪತಿಗೆ ಇಶಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ ಈ ಮೂವರು ಮಕ್ಕಳಿದ್ದಾರೆ.
ಆದರೆ ಮೇಲೆ ಹೇಳಿದ ಈ ಕೆಲವು ವಿಷಯಗಳು ಅಲ್ಲದೆಯೂ ಮುಕೇಶ್ ಅಂಬಾನಿ ಬಗ್ಗೆ ತಿಳಿದುಕೊಳ್ಳಬೇಕಾದ ಹಲವಾರು ಇತರ ಆಸಕ್ತಿಕರ ವಿಚಾರಗಳಿವೆ. ಅಂಬಾನಿ ಭಾರತದಲ್ಲಿ ಬೃಹತ್ ಉದ್ಯಮ ಹೊಂದಿರುವ ಕಾರಣ ಮೂಲತಃ ಭಾರತದವರೇ ಎಂದು ಎಲ್ಲರೂ ಅಂದುಕೊಳ್ಳಬಹುದು. ಆದರೆ ವಾಸ್ತವ ಅದಲ್ಲ. ಮುಕೇಶ್ ಅಂಬಾನಿ ವಿದೇಶದಲ್ಲಿ ಜನಿಸಿದರು.
ಮುಕೇಶ್ ಅಂಬಾನಿ ಈಗಿನ ಯೆಮೆನ್‌ನ ಏಡೆನ್‌ನ ಬ್ರಿಟಿಷ್ ಕ್ರೌನ್ ಕಾಲೋನಿಯಲ್ಲಿ ಜನಿಸಿದರು. ಸ್ಪಲ್ಪ ಸಮಯದ ವರೆಗೆ ಅವರು ಇದೇ ನಗರದಲ್ಲಿ ವಾಸಿಸುತ್ತಿದ್ದರು. 1958ರಲ್ಲಿ, ಧೀರೂಭಾಯಿ ಅಂಬಾನಿ ಭಾರತಕ್ಕೆ ಮರಳಲು ನಿರ್ಧರಿಸಿದರು. ಕುಟುಂಬ ಸಮೇತರಾಗಿ ಮುಂಬೈಗೆ ಸ್ಥಳಾಂತರಗೊಂಡರು. 1970ರ ದಶಕದ ವರೆಗೆ ಮುಂಬೈನ ಬುಲೇಶ್ವರದಲ್ಲಿ ಎರಡು ಮಲಗುವ ಕೋಣೆಗಳ ಅಪಾರ್ಟ್‌ಮೆಂಟ್‌ನಲ್ಲಿ ಕಷ್ಟಪಟ್ಟು ಜೀವನ ನಡೆಸಿದರು.
ಆ ನಂತರ ಮುಕೇಶ್ ಅಂಬಾನಿ ಮುಂಬೈನ ಪೆದ್ದಾರ್ ರಸ್ತೆಯಲ್ಲಿರುವ ಹಿಲ್ ಗ್ರೇಂಜ್ ಹೈಸ್ಕೂಲ್‌ಗೆ ಹೋದರು. ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಓದಿದರು.
ನಂತರ ಅವರು MBA ಮುಂದುವರಿಸಲು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ ಹೋದರು ಆದರೆ 1980ರಲ್ಲಿ ತಮ್ಮ ತಂದೆಯೊಂದಿಗೆ ವ್ಯಾಪಾರದಲ್ಲಿ ತೊಡಗಿಸಿಕೊಂಡರು.
ಮುಕೇಶ್ ಅಂಬಾನಿ ಅವರು ಸೇವ್ ಪುರಿ ಮತ್ತು ಚಾಟ್‌ಗಳಂತಹ ಬೀದಿ ಆಹಾರವನ್ನು ಇಷ್ಟಪಡುತ್ತಾರೆ ಎಂಬುದು ಅನೇಕರಿಗೆ ತಿಳಿದಿಲ್ಲ. ಬಿಡುವಿನ ಸಮಯದಲ್ಲಿ ಮುಕೇಶ್ ಅಂಬಾನಿ ತಮ್ಮ ಪತ್ನಿಯ ಸಮೇತ ಸ್ಟ್ರೀಟ್‌ಫುಡ್‌ಗೆ ಹೋಗಿ ಆಹಾರ ಸವಿಯಲು ಇಷ್ಟಪಡುತ್ತಾರೆ.