Landlord vs tenant repairs: ಬಾಡಿಗೆ ಮನೆಯಲ್ಲಿ ನಲ್ಲಿ ಹಾಳಾಗೋದು, ಕರೆಂಟ್ ಸಮಸ್ಯೆ, ಗೋಡೆಗಳಲ್ಲಿ ಬಿರುಕು, ಪೈಪ್ ಲೀಕ್ ಆಗೋದು ಸಾಮಾನ್ಯ. ಇಂಥಾ ಟೈಮ್‌ನಲ್ಲಿ ರಿಪೇರಿ ಖರ್ಚನ್ನು ಯಾರು ಕೊಡಬೇಕು? ಮನೆ ಮಾಲೀಕನಾ ಅಥವಾ ಬಾಡಿಗೆದಾರನಾ ಅನ್ನೋ ಗೊಂದಲ ಎಲ್ಲರಿಗೂ ಬರುತ್ತೆ.
ಮಾದರಿ ಬಾಡಿಗೆ ಕಾಯ್ದೆ-2021ರ (Model Tenancy Act-2021) ಪ್ರಕಾರ, ಮನೆಯನ್ನು ವಾಸಯೋಗ್ಯವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಮಾಲೀಕ ಮತ್ತು ಬಾಡಿಗೆದಾರ ಇಬ್ಬರದ್ದೂ ಆಗಿರುತ್ತದೆ. ಸಾಮಾನ್ಯ ಬಳಕೆಯಿಂದ ಉಂಟಾಗುವ ಸಣ್ಣಪುಟ್ಟ ಸವೆತ ಅಥವಾ ನೈಸರ್ಗಿಕ ಬದಲಾವಣೆಗಳನ್ನು ಹಾನಿ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಈ ಬಗ್ಗೆ ವಿವಾದ ಬೇಡ ಎಂದು ಕಾನೂನು ಹೇಳುತ್ತದೆ.
25
ದೊಡ್ಡ ರಿಪೇರಿಗಳ ಜವಾಬ್ದಾರಿ ಮನೆ ಮಾಲೀಕರದ್ದೇ
ಮನೆಗೆ ಸಂಪೂರ್ಣ ಪೇಂಟಿಂಗ್ ಮಾಡಿಸುವುದು, ಗೋಡೆಗಳಲ್ಲಿನ ದೊಡ್ಡ ಬಿರುಕು ಸರಿಪಡಿಸುವುದು, ಮುಖ್ಯ ಬಾಗಿಲು ಮತ್ತು ಕಿಟಕಿಗಳ ರಿಪೇರಿ, ಮುಖ್ಯ ನೀರಿನ ಪೈಪ್‌ಲೈನ್ ಸಮಸ್ಯೆಗಳು, ಒಳಚರಂಡಿ ವ್ಯವಸ್ಥೆಯಲ್ಲಿನ ದೋಷಗಳಂತಹ ದೊಡ್ಡ ದುರಸ್ತಿ ಕೆಲಸಗಳ ಸಂಪೂರ್ಣ ವೆಚ್ಚವನ್ನು ಮನೆ ಮಾಲೀಕರೇ ಭರಿಸಬೇಕು ಎಂದು ಕಾನೂನು ಹೇಳುತ್ತದೆ.
35
ಸಣ್ಣಪುಟ್ಟ ನಿರ್ವಹಣೆ ಕೆಲಸಗಳನ್ನು ಯಾರು ಮಾಡಬೇಕು?
ದಿನನಿತ್ಯದ ಬಳಕೆಯಿಂದ ಉಂಟಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ಸಾಮಾನ್ಯವಾಗಿ ಬಾಡಿಗೆದಾರರೇ ನೋಡಿಕೊಳ್ಳಬೇಕು. ಉದಾಹರಣೆಗೆ, ಬಲ್ಬ್ ಬದಲಾಯಿಸುವುದು, ಸಣ್ಣ ಪ್ಲಂಬಿಂಗ್ ಸಮಸ್ಯೆಗಳು, ಸ್ವಿಚ್ ಅಥವಾ ಫ್ಯೂಸ್ ರಿಪೇರಿ ಮತ್ತು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಇವೆಲ್ಲವೂ ಸಾಮಾನ್ಯ ನಿರ್ವಹಣೆ ಅಡಿಯಲ್ಲಿ ಬರುತ್ತವೆ. ಇದರ ಖರ್ಚನ್ನು ಬಾಡಿಗೆದಾರರೇ ಭರಿಸಬೇಕು.
ಕೆಲವೊಮ್ಮೆ ಬಾಡಿಗೆದಾರರು ಹಲವು ಬಾರಿ ಹೇಳಿದರೂ ಮನೆ ಮಾಲೀಕರು ರಿಪೇರಿ ಮಾಡಿಸಲು ನಿರಾಕರಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ, ಮಾದರಿ ಬಾಡಿಗೆ ಕಾಯ್ದೆಯು ಬಾಡಿಗೆದಾರರಿಗೆ ವಿಶೇಷ ಹಕ್ಕನ್ನು ನೀಡುತ್ತದೆ. ಮನೆಗೆ ತುರ್ತು ದುರಸ್ತಿ ಅಗತ್ಯವಿದ್ದು, ಮಾಲೀಕರು ಸ್ಪಂದಿಸದಿದ್ದರೆ, ಬಾಡಿಗೆದಾರರು ಸ್ವತಃ ಆ ಕೆಲಸಗಳನ್ನು ಮಾಡಿಸಬಹುದು. ಆ ಖರ್ಚನ್ನು ಬಾಡಿಗೆಯಿಂದ ಕಡಿತಗೊಳಿಸಿಕೊಳ್ಳುವ ಹಕ್ಕನ್ನೂ ಕಾನೂನು ನೀಡುತ್ತದೆ.
55
ಬಾಡಿಗೆಯಿಂದ ಹಣ ಕಡಿತಗೊಳಿಸಲು ಪಾಲಿಸಬೇಕಾದ ನಿಯಮಗಳು
ಬಾಡಿಗೆದಾರರು ದುರಸ್ತಿ ವೆಚ್ಚವನ್ನು ಬಾಡಿಗೆಯಿಂದ ಕಡಿತಗೊಳಿಸುವ ಮೊದಲು ಕೆಲವು ನಿಯಮಗಳನ್ನು ಪಾಲಿಸಬೇಕು. *ದುರಸ್ತಿ ಮಾಡಿಸುವ ಮೊದಲು, ಮಾಲೀಕರಿಗೆ ಲಿಖಿತವಾಗಿ ಅಥವಾ ಸ್ಪಷ್ಟವಾಗಿ ತಿಳಿಸಬೇಕು. ಸಮಸ್ಯೆಯನ್ನು ಬಗೆಹರಿಸಲು ಅವರಿಗೆ ಅವಕಾಶ ನೀಡಬೇಕು. *ಕಾನೂನಿನ ಪ್ರಕಾರ, ಒಂದು ತಿಂಗಳ ಬಾಡಿಗೆಯಲ್ಲಿ ದುರಸ್ತಿ ಹೆಸರಲ್ಲಿ ಕಡಿತಗೊಳಿಸುವ ಮೊತ್ತವು ಆ ತಿಂಗಳ ಬಾಡಿಗೆಯ 50% ಮೀರಬಾರದು. ಉದಾಹರಣೆಗೆ, ಮಾಸಿಕ ಬಾಡಿಗೆ ₹10,000 ಆಗಿದ್ದರೆ, ಒಂದು ತಿಂಗಳಲ್ಲಿ ಗರಿಷ್ಠ ₹5,000 ಮಾತ್ರ ಕಡಿತಗೊಳಿಸಬಹುದು. ಉಳಿದ ಮೊತ್ತವನ್ನು ಮುಂದಿನ ತಿಂಗಳುಗಳಲ್ಲಿ ಸರಿಹೊಂದಿಸಬೇಕಾಗುತ್ತದೆ. ಒಟ್ಟಿನಲ್ಲಿ, ಮಾದರಿ ಬಾಡಿಗೆ ಕಾಯ್ದೆ-2021 ಈ ಎಲ್ಲಾ ಜವಾಬ್ದಾರಿಗಳನ್ನು ಸ್ಪಷ್ಟಪಡಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.