ಕೊಂಕಣಿ ಭಾಗದ ಸಾಂಪ್ರದಾಯಿಕ ಅಡುಗೆಯಾದ ಅಂಬಾಟ ಬಟಾಟ ಸಾಂಬರ್ ತಯಾರಿಸುವ ಸರಳ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ತೆಂಗಿನಕಾಯಿ ಮಸಾಲೆ ಮತ್ತು ಆಲೂಗಡ್ಡೆಯನ್ನು ಬಳಸಿ, ರುಚಿಕರವಾದ ಈ ಕರ್ರಿಯನ್ನು ಹೇಗೆ ಮಾಡುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಎಷ್ಟೋ ವರ್ಷಗಳಿಂದ ಆಹಾರಪ್ರಿಯರನ್ನು ಹುಚ್ಚರನ್ನಾಗಿಸಿರುವ ಸಾಂಪ್ರದಾಯಿಕ ಶೈಲಿಯ ರೆಸಿಪಿಯೊಂದನ್ನು ನಿಮಗಾಗಿ ತಂದಿದ್ದೇವೆ. ತುಂಬಾನೇ ಸರಳವಾಗಿ ಕೊಂಕಣಿ ಭಾಗದ ಅಂಬಾಟ ಬಟಾಟ ಸಾಂಬರ್ ಅಥವಾ ಕರ್ರಿ ತಯಾರಿಸಬಹುದು. ಈ ರೆಸಿಪಿಗೆ ಏನೆಲ್ಲಾ ಬೇಕು? ಹೇಗೆ ತಯಾರಿಸಬೇಕು ಎಂಬುದನ್ನು ನೋಡೋಣ ಬನ್ನಿ.
25
ಬೇಕಾಗುವ ಸಾಮಾಗ್ರಿಗಳು
ತೆಂಗಿನಕಾಯಿ ತುರಿ: 1 ಕಪ್, ಮೆಂತ್ಯೆ: 1/2 ಟೀ ಸ್ಪೂನ್, ಇಂಗು: 1/2 ಟೀ ಸ್ಪೂನ್, 10 ರಿಂದ 12 ಕರೀಬೇವು ಎಲೆ, 1/2 ಟೀ ಸ್ಪೂನ್ ಅರಿಶಿನ ಪುಡಿ, 1 ಟೀ ಸ್ಪೂನ್ ಅಚ್ಚ ಖಾರದ ಪುಡಿ, ನಾಲ್ಕು ಆಲೂಗಡ್ಡೆ, ಧನಿಯಾ: 1 ಟೀ ಸ್ಪೂನ್, ಕೋತಂಬರಿ ಸೊಪ್ಪು, ಅಡುಗೆ ಎಣ್ಣೆ: 2 ಟೀ ಸ್ಪೂನ್, ಜೀರಿಗೆ: 1 ಟೀ ಸ್ಪೂನ್, 4 ಕಾಳುಮೆಣಸು, ಬೆಳ್ಳುಳ್ಳಿ ಗಾತ್ರದಷ್ಟು ಹುಣಸೆಹಣ್ಣು, ಸಾಸವೆ: 1/2 ಟೀ ಸ್ಪೂನ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು
35
ಅಂಬಾಟ ಬಟಾಟ ಮಾಡುವ ವಿಧಾನ
ಮೊದಲಿಗೆ ಒಂದು ಮಿಕ್ಸಿ ಜಾರ್‌ಗೆ ತೆಂಗಿನಕಾಯಿ ತುರಿ, ಕಾಳುಮೆಣಸು, ಧನಿಯಾ, ಜೀರಿಗೆ ಮತ್ತು ಹುಣಸೆಹಣ್ಣು ಸೇರಿಸಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ತದನಂತೆ ಆಲೂಗಡ್ಡೆ ಮೇಲಿನ ಸಿಪ್ಪೆ ತೆಗೆದು ಉದ್ದವಾಗಿ ಕತ್ತರಿಸಿಟ್ಟುಕೊಳ್ಳಿ. ಕೋತಂಬರಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ.
ಈಗ ಒಲೆ ಆನ್ ಮಾಡ್ಕೊಂಡು ಬಾಣಲೆ ಇರಿಸಿಕೊಳ್ಳಿ. ಬಾಣಲೆಗೆ ಹಾಕಿಕೊಂಡ ಎಣ್ಣೆ ಬಿಸಿಯಾಗ್ತಿದ್ದಂತೆ ಸಾಸವೆ ಹಾಕಿ. ನಂತರ ಇದಕ್ಕೆ ಕರೀಬೇವು. ಅರಿಶಿನ, ಅಚ್ಚ ಖಾರದ ಪುಡಿ, ಇಂಗು, ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಕತ್ತರಿಸಿಕೊಂಡಿರುವ ಆಲೂಗಡ್ಡೆ ಸೇರಿಸಿಕೊಂಡು ಮುಚ್ಚಳ ಮುಚ್ಚಿ ಮೂರರಿಂದ ನಾಲ್ಕು ನಿಮಿಷ ಬೇಯಿಸಿಕೊಳ್ಳಿ.
ತದನಂತರ ಇದಕ್ಕೆ ರುಬ್ಬಿಕೊಂಡಿರುವ ತೆಂಗಿನ ತುರಿ ಮಸಾಲೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ಎರಡು ನಿಮಿಷ ಬೇಯಿಸಿಕೊಳ್ಳಿ. ತದನಂತರ ಕೊನೆಗೆ ಕೋತಂಬರಿ ಸೊಪ್ಪು ಸೇರಿಸಿ ಒಂದು ನಿಮಿಷ ಬೇಯಿಸಿದ್ರೆ ರುಚಿಯಾದ ಕೊಂಕಣಿ ಶೈಲಿಯ ಅಂಬಾಟ ಬಟಾಟ ಸವಿಯಲು ಸಿದ್ಧವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.