ಚೆನ್ನಾಗಿ ಹೈಡ್ರೀಕರಿಸಲು, ನಮ್ಮ ದೇಹಕ್ಕೆ ಎಲೆಕ್ಟ್ರೋಲೈಟ್‌ಗಳು ಬೇಕಾಗುತ್ತವೆ. ನಾವು ಹೆಚ್ಚು ಬೆವರುವುದರಿಂದ, ಎಲೆಕ್ಟ್ರೋಲೈಟ್ ನೀರು ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಹೆಚ್ಚಿನ ತಾಪಮಾನದಲ್ಲಿ ನಮ್ಮ ದೇಹವನ್ನು ತಂಪಾಗಿರಿಸಲು ಇದು ಸಹಾಯ ಮಾಡುತ್ತದೆ. ಬೆವರಿನಲ್ಲಿ ಕಳೆದುಹೋಗುವ ಪ್ರಮುಖ ಪೋಷಕಾಂಶಗಳನ್ನು ನಮ್ಮ ದೇಹವು ಎಲೆಕ್ಟ್ರೋಲೈಟ್ ನೀರಿನಿಂದ ಹೀರಿಕೊಳ್ಳುತ್ತದೆ. ಹಾಗಿದ್ರೆ ಎಲೆಕ್ಟ್ರೋಲೈಟ್ ಎಂದರೇನು ತಿಳಿದುಕೊಳ್ಳೋಣ.
ಎಲೆಕ್ಟ್ರೋಲೈಟ್ ವಾಟರ್ ಎಂದರೇನು?
ಎಲೆಕ್ಟ್ರೋಲೈಟ್ ನೀರು, ಹೆಸರೇ ಸೂಚಿಸುವಂತೆ ಸೋಡಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ವಿದ್ಯುತ್ ಚಾರ್ಜ್ಡ್ ಖನಿಜಗಳಿಂದ ತುಂಬಿದ ನೀರಾಗಿದೆ. ಎಲೆಕ್ಟ್ರೋಲೈಟ್ ನೀರನ್ನು ಖನಿಜಯುಕ್ತ ನೀರು ಮತ್ತು ಕ್ಷಾರೀಯ ನೀರು ಎಂದೂ ಕರೆಯಲಾಗುತ್ತದೆ.
ದೇಶದಲ್ಲಿ ಬಿಸಿಲಿನ ತಾಪಮಾನ ತಾರಕಕ್ಕೇರಿದೆ. ಬಿಸಿಲಿನ ಝಳಕ್ಕೆ ಜನರು ಹೈರಾಣಾಗಿದ್ದಾರೆ. ಹೀಟ್ ವೇನ್‌ನಿಂದ ಅದೆಷ್ಟೋ ಮಂದಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಈ ತಾಪಮಾನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನವರು ಎಲೆಕ್ಟ್ರೋಲೈಟ್ ನೀರು ಕುಡಿಯುತ್ತಿದ್ದಾರೆ. ಹಾಗಿದ್ರೆ ಇದನ್ನು ಕುಡಿಯೋದ್ರಿಂದ ಆರೋಗ್ಯಕ್ಕೆ ಸಿಗೋ ಪ್ರಯೋಜನಗಳೇನು?
ಎಲೆಕ್ಟ್ರೋಲೈಟ್ ನೀರಿನ ಆರೋಗ್ಯ ಪ್ರಯೋಜನಗಳು
ದೇಹವನ್ನು ಹೈಡ್ರೇಟ್ ಆಗಿಡುತ್ತದೆ: ಬಿಸಿಲಿಗೆ ದೇಹ ಹೆಚ್ಚು ಬೆವರುತ್ತದೆ. ಹೀಗಾಗಿ ದೇಹಕ್ಕೆ ಹೆಚ್ಚು ನೀರು ಬೇಕಾಗುತ್ತದೆ. ಇಂಥಾ ಸಂದರ್ಭದಲ್ಲಿ ಎಲೆಕ್ಟ್ರೋಲೈಟ್ ನೀರು ಕುಡಿದರೆ ದೇಹಕ್ಕೆ ಬೇಕಾದ ಎಲ್ಲಾ ಖನಿಜಗಳು, ಪೋಷಕಾಂಶಗಳು ದೊರಕುತ್ತವೆ. ದೇಹ ಆರೋಗ್ಯಕರವಾಗಿರುತ್ತದೆ.
ಹೀಟ್ ಸ್ಟ್ರೋಕ್ ಅಪಾಯ ಕಡಿಮೆ ಮಾಡುತ್ತದೆ: ಬಿಸಿಲಿನ ತಾಪಮಾನದಿಂದ ಸುಸ್ತು, ರಾಶಸ್, ಸ್ಟ್ರೋಕ್ ಮೊದಲಾದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಎಲೆಕ್ಟ್ರೋಲೈಟ್ ವಾಟರ್ ಹೀಟ್ ಸ್ಟ್ರೋಕ್ ಅಪಾಯವನ್ನು ಬಹುತೇಕ ಕಡಿಮೆ ಮಾಡುತ್ತದೆ. ಹೀಗಾಗಿಯೇ ಬೇಸಿಗೆಯಲ್ಲಿ ಕಾಫಿ, ಟೀ, ಸಾದಾ ನೀರು ಕುಡಿಯುವ ಬದಲು ಎಲೆಕ್ಟ್ರೋಲೈಟ್ ನೀರನ್ನು ಕುಡಿಯಲು ಸಲಹೆ ನೀಡಲಾಗುತ್ತದೆ.
ದೇಹವನ್ನು ತಂಪಾಗಿಡುತ್ತದೆ: ಎಲೆಕ್ಟ್ರೋಲೈಟ್ ನೀರು ಬಿಸಿಲಿನ ಝಳಕ್ಕೆ ದೇಹವನ್ನು ತಂಪಾಗಿರಿಸುತ್ತದೆ. ಮಾತ್ರವಲ್ಲ ಇದು ರಕ್ತದಲ್ಲಿನ ಪಿಹೆಚ್ ಮಟ್ಟದ ಸಮತೋಲನವನ್ನು ಕಾಪಾಡುತ್ತದೆ. ಹೀಗಾಗಿ ಸಮ್ಮರ್‌ನಲ್ಲಿ ದೇಹಕ್ಕೆ ಅಗತ್ಯವಾದಷ್ಟು ಎಲೆಕ್ಟ್ರೋಲೈಟ್ ನೀರನ್ನು ಕುಡಿಯೋ ಅಭ್ಯಾಸ ರೂಢಿಸಿಕೊಳ್ಳಿ.
ವ್ಯಾಯಾಮವನ್ನು ಸುಲಲಿತಗೊಳಿಸುತ್ತದೆ: ಬೇಸಗೆಯಲ್ಲಿ ವ್ಯಾಯಾಮ ಮಾಡುವಾಗ ಬೇಗನೇ ಸುಸ್ತಾಗುತ್ತದೆ. ಹೀಗೆ ಆಗದೇ ಇರಬೇಕಾದರೆ ಎಲೆಕ್ಟ್ರೋಲೈಟ್ ನೀರನ್ನು ಕುಡಿಯೋದು ಒಳ್ಳೆಯದು. ಇದು ದೈಹಿಕ ಚಟುವಟಿಕೆಯ ಸಮಯದಲ್ಲಿ, ದೇಹದಲ್ಲಿ ಬೆವರಿನಿಂದ ನಷ್ಟವಾದ ನೀರನ್ನು ಮತ್ತೆ ಸೇರಿಸುತ್ತದೆ. ಹೆಚ್ಚು ಆಯಾಸದ ಅನುಭವವಾಗುವುದಿಲ್ಲ.