Health Tips: ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್ನಲ್ಲಿ ಪ್ರಕಟವಾದ ವರದಿಯಲ್ಲಿ, ಕೆಲವರು ಸದಾ ಚಳಿ ಅನುಭವಿಸಲು ಇರುವ ಕಾರಣಗಳ ಬಗ್ಗೆ ವಿವರಿಸಿದ್ದಾರೆ. ನಿಮಗೂ ಇತರರಿಗಿಂತ ಹೆಚ್ಚು ಚಳಿಯಾಗುತ್ತಿದ್ದರೆ, ಅದಕ್ಕೆ ಏನೆಲ್ಲ ಕಾರಣಗಳಿರಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಚಳಿಗಾಲ ಬಂದಾಗ ಚಳಿ ಅನುಭವಿಸುವುದು ಸಹಜ. ಆದರೆ, ಚಳಿಗಾಲ ಆರಂಭವಾಗುವ ಮೊದಲೇ ಕೆಲವರಿಗೆ ಚಳಿಯಾಗಲು ಶುರುವಾಗುತ್ತದೆ. ಇನ್ನು ಕೆಲವರಿಗೆ ಸಾಮಾನ್ಯ ದಿನಗಳಲ್ಲಿಯೂ ಅತಿಯಾಗಿ ಚಳಿಯಾಗುತ್ತದೆ. ಇಂತಹವರ ಚಳಿಗಾಲದ ಬಟ್ಟೆಗಳು ಎಲ್ಲರಿಗಿಂತ ಮೊದಲೇ ಹೊರಬರುತ್ತವೆ ಮತ್ತು ಎಲ್ಲರಿಗಿಂತ ಕೊನೆಯದಾಗಿ ಮತ್ತೆ ಬಟ್ಟೆಪೆಟ್ಟಿಗೆ ಸೇರುತ್ತವೆ. ಆದರೆ, ಹೀಗೆ ಕೆಲವರಿಗೆ ಇತರರಿಗಿಂತ ಹೆಚ್ಚು ಚಳಿಯಾಗುವುದೇಕೆ? ಚಳಿಯನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಅವರಲ್ಲಿ ಕಡಿಮೆ ಇರುವುದಕ್ಕೆ ಕಾರಣವೇನು ಎಂದು ಎಂದಾದರೂ ಯೋಚಿಸಿದ್ದೀರಾ? ಇದಕ್ಕೆ ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್ನಲ್ಲಿ ಪ್ರಕಟವಾದ ವರದಿಯಲ್ಲಿ ಉತ್ತರ ನೀಡಿದೆ. ಅದು ಏನು ಹೇಳಿದೆ ನೋಡಿ.
27
ದೇಹದ ತೂಕ ಕಡಿಮೆ ಇರುವುದು
ದೇಹದಲ್ಲಿರುವ ಕೊಬ್ಬು ಮತ್ತು ಸ್ನಾಯುಗಳ ಪ್ರಮಾಣವು ದೇಹಕ್ಕೆ ಬೆಚ್ಚನೆಯ ಅನುಭವ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ನಾಯುಗಳು ಶಾಖವನ್ನು ಉತ್ಪಾದಿಸಿದರೆ, ಕೊಬ್ಬು ದೇಹದ ಉಷ್ಣತೆಯನ್ನು ಕಾಪಾಡುವ ಇನ್ಸುಲೇಷನ್ನಂತೆ ಕಾರ್ಯನಿರ್ವಹಿಸುತ್ತದೆ. ನೀವು ಇತ್ತೀಚೆಗೆ ಇದ್ದಕ್ಕಿದ್ದಂತೆ ಹೆಚ್ಚು ತೂಕ ಕಳೆದುಕೊಂಡಿದ್ದರೆ ಅಥವಾ ಮೊದಲಿನಿಂದಲೂ ತುಂಬಾ ತೆಳ್ಳಗಿದ್ದರೆ, ಇದೇ ಕಾರಣದಿಂದ ನಿಮಗೆ ಇತರರಿಗಿಂತ ಹೆಚ್ಚು ಚಳಿಯಾಗಬಹುದು. ದೇಹವು ಚಳಿಗೆ ಹೆಚ್ಚು ಸೂಕ್ಷ್ಮವಾಗಿರಬಹುದು.
37
ಊಟವನ್ನು ಬಿಟ್ಟುಬಿಡುವುದು
ಅನೇಕ ಜನರು ಊಟವನ್ನು ಬಿಟ್ಟುಬಿಟ್ಟಾಗ ಅಥವಾ ಕಡಿಮೆ ಕ್ಯಾಲೊರಿಗಳನ್ನು ಸೇವಿಸಿದಾಗ ಹೆಚ್ಚು ಚಳಿಯನ್ನು ಅನುಭವಿಸುತ್ತಾರೆ. ಹೀಗಾದಾಗ ದೇಹವು ತನ್ನ ಶಕ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇದರಿಂದ ದೇಹದಲ್ಲಿ ಶಾಖ ಉತ್ಪತ್ತಿಯಾಗುವ ಪ್ರಮಾಣ ಕಡಿಮೆಯಾಗುತ್ತದೆ. ಪರಿಣಾಮವಾಗಿ ಹೆಚ್ಚು ಚಳಿಯಾಗಲು ಪ್ರಾರಂಭವಾಗುತ್ತದೆ.
ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆ ಕಡಿಮೆಯಾಗುವುದನ್ನು ಹೈಪೋಥೈರಾಯ್ಡಿಸಮ್ (Hypothyroidism) ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯ ಸಾಮಾನ್ಯ ಲಕ್ಷಣಗಳಲ್ಲಿ ಅತಿಯಾಗಿ ಚಳಿ ಅನುಭವಿಸುವುದೂ ಒಂದು. ಈ ಸಮಸ್ಯೆಯನ್ನು ಖಚಿತಪಡಿಸಿಕೊಳ್ಳಲು ರಕ್ತ ಪರೀಕ್ಷೆ ಮಾಡಿಸಬಹುದು.
57
ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾಗಿರುವುದು
ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾದರೆ ವ್ಯಕ್ತಿಯು ರಕ್ತಹೀನತೆ ಅಥವಾ ಅನೀಮಿಯಾ (Anemia) ಸಮಸ್ಯೆಗೆ ಒಳಗಾಗಬಹುದು. ಅನೀಮಿಯಾ ಇರುವವರಿಗೆ ಚಳಿಯಾಗಬಹುದು. ಆದರೆ, ಈ ಸಮಸ್ಯೆ ಇದ್ದರೆ ಪ್ರತಿಯೊಬ್ಬರಿಗೂ ಸಾಮಾನ್ಯಕ್ಕಿಂತ ಹೆಚ್ಚು ಚಳಿಯಾಗಲೇಬೇಕು ಎಂದೇನಿಲ್ಲ. ಪರೀಕ್ಷೆ ಮಾಡಿಕೊಳ್ಳೋದು ಮುಖ್ಯ.
67
ರೇನಾಡ್ಸ್ ಫಿನಾಮಿನನ್ ಕೂಡ ಕಾರಣವಾಗಿರಬಹುದು
ಅತಿಯಾಗಿ ಚಳಿ ಅನುಭವಿಸಲು ರೇನಾಡ್ಸ್ ಫಿನಾಮಿನನ್ (Raynaud's Phenomenon) ಕೂಡ ಒಂದು ಕಾರಣವಾಗಿರಬಹುದು ಎಂದು ತಜ್ಞರು ವಿವರಿಸುತ್ತಾರೆ. ಸಾಮಾನ್ಯವಾಗಿ ವಾತಾವರಣದ ಉಷ್ಣತೆ ಕಡಿಮೆಯಾದಾಗ, ದೇಹವು ಚರ್ಮದ ಭಾಗಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಇದರಿಂದ ಆಂತರಿಕ ಅಂಗಗಳು ಬೆಚ್ಚಗಿರಲು ಸಹಾಯವಾಗುತ್ತದೆ. ಆದರೆ, ರೇನಾಡ್ಸ್ ಫಿನಾಮಿನನ್ ಸಮಸ್ಯೆ ಇರುವವರಲ್ಲಿ ಈ ಸಹಜ ಪ್ರತಿಕ್ರಿಯೆ ಅತಿಯಾಗಿ ಕಂಡುಬರುತ್ತದೆ. ಸಣ್ಣ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ಚರ್ಮದ ಭಾಗಗಳಿಗೆ ರಕ್ತದ ಹರಿವು ಹಠಾತ್ತನೆ ಕಡಿಮೆಯಾಗುತ್ತದೆ. ಈ ಸಮಸ್ಯೆ ಹೆಚ್ಚಾಗಿ ಕೈ ಮತ್ತು ಕಾಲುಗಳ ಬೆರಳುಗಳಲ್ಲಿ ಕಂಡುಬರುತ್ತದೆ. ಇಂತಹ ಸಮಸ್ಯೆ ಇರುವವರು ತಾಪಮಾನ ಸ್ವಲ್ಪ ಕಡಿಮೆಯಾದರೂ ತೀವ್ರವಾದ ಚಳಿಯನ್ನು ಅನುಭವಿಸುತ್ತಾರೆ.
77
ಅತಿಯಾಗಿ ಚಳಿಯಾಗುತ್ತಿದ್ದರೆ ಏನು ಮಾಡಬೇಕು?
ನಿಮಗೆ ಅಸಹಜ ರೀತಿಯಲ್ಲಿ ಹೆಚ್ಚು ಚಳಿಯಾಗುತ್ತಿದ್ದರೆ ಮತ್ತು ಇದರಿಂದ ಆರಾಮವಾಗಿ ಇರಲು ಸಾಧ್ಯವಾಗದಿದ್ದರೆ ವೈದ್ಯರ ಸಲಹೆ ಪಡೆಯಬಹುದು. ವೈದ್ಯರು ಅಗತ್ಯ ತಪಾಸಣೆ ನಡೆಸಿ ಸಮಸ್ಯೆಗೆ ನಿಖರವಾದ ಕಾರಣವನ್ನು ಪತ್ತೆಹಚ್ಚಬಹುದು. ಇದಲ್ಲದೇ ಚಳಿ ಹೆಚ್ಚಾಗುತ್ತಿದ್ದರೆ, ಲೇಯರ್ ಡ್ರೆಸ್ ಮಾಡಿ. ಅಲ್ಲದೇ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಊಟವನ್ನು ಸ್ಕಿಪ್ ಮಾಡುವ ಅಭ್ಯಾಸ ಬಿಡಿ. ಇದಲ್ಲದೇ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಪ್ರತಿದಿನ ವಾಕಿಂಗ್, ಸ್ಟ್ರೆಚಿಂಗ್ ಅಥವಾ ರಕ್ತ ಪರಿಚಲನೆ ಹೆಚ್ಚಿಸುವ ಇತರ ವ್ಯಾಯಾಮಗಳನ್ನು ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.