
ಧರ್ಮ, ಆಯುರ್ವೇದ, ವಿಜ್ಞಾನ ಎಲ್ಲದರಲ್ಲೂ ತುಳಸಿ (basil) ಸ್ಥಾನ ಪಡೆದಿದೆ. ಹಿಂದೂ ಧರ್ಮದಲ್ಲಿ ತುಳಸಿಯನ್ನು ತಾಯಿ ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತೆ. ಆಯುರ್ವೇದ ಗಿಡಮೂಲಿಕೆಯಾಗಿ ತುಳಸಿಯನ್ನು ನೋಡುತ್ತದೆ. ತುಳಸಿ ಆರೋಗ್ಯಕ್ಕೆ ಉತ್ತಮ ಎನ್ನುವ ಕಾರಣಕ್ಕೆ ಅನೇಕರು ತುಳಸಿ ಗಿಡ ಕಾಣ್ತಿದ್ದಂತೆ ಎಲೆಯನ್ನು ಕೀಳ್ತಾರೆ. ಅದನ್ನು ಜಗಿದು, ರಸವನ್ನು ನುಂಗ್ತಾರೆ. ನೀವೂ ಈ ಹವ್ಯಾಸ ಹೊಂದಿದ್ರೆ ಇಂದೇ ಬಿಟ್ಬಿಡಿ. ತುಳಸಿ ಎಲೆಯನ್ನು ಜಗಿಯೋದು ಆಯುರ್ವೇದ ಹಾಗೂ ಧರ್ಮ ಎರಡರಿಂದಲೂ ತಪ್ಪು.
ವೈದ್ಯರು ತುಳಸಿ ಎಲೆ ಅಗೆಯದಂತೆ ಸಲಹೆ ನೀಡ್ತಾರೆ. ತುಳಸಿ ಎಲೆಗಳು ಪಾದರಸ ಅಥವಾ ಪಾದರಸದ ಆಮ್ಲದಂತಹ ಅಂಶಗಳನ್ನು ಹೊಂದಿರುತ್ತವೆ. ಇದು ಹಲ್ಲಿನ ದಂತಕವಚಕ್ಕೆ ಹಾನಿಕಾರಕವಾಗಿದೆ. ತುಳಸಿ ಎಲೆಗಳನ್ನು ಅಗಿಯುವುದರಿಂದ ಈ ಅಂಶಗಳು ಹಲ್ಲುಗಳಿಗೆ ಅಂಟಿಕೊಳ್ಳುತ್ತದೆ. ಕ್ರಮೇಣ ನಿಮ್ಮ ಹಲ್ಲುಗಳ ಕವಚಕ್ಕೆ ಹಾನಿ ಮಾಡುತ್ತದೆ. ಇಷ್ಟೇ ಅಲ್ಲ ತುಳಸಿ ಎಲೆಗಳು ಉಷ್ಣತೆಯನ್ನು ಹೊಂದಿವೆ. ನೀವು ಅವುಗಳನ್ನು ಅಗೆಯುವುದ್ರಿಂದ ಆಮ್ಲೀಯತೆ ಹೆಚ್ಚಾಗುವ ಸಾಧ್ಯತೆ ಇದೆ. ಪದೇ ಪದೇ ತುಳಸಿ ಎಲೆ ಜಗಿಯುವುದ್ರಿಂದ ಬಾಯಿ ಮತ್ತು ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗುತ್ತದೆ. ತುಳಸಿ ಎಲೆಗಳು ಬಹಳ ಕಡಿಮೆ ಪ್ರಮಾಣದ ಆರ್ಸೆನಿಕ್ ಹೊಂದಿವೆ. ನೀವು ಅದನ್ನು ಪದೇ ಪದೇ ಅಗೆಯೋದ್ರಿಂದ ನಿಮ್ಮ ದೇಹದಲ್ಲಿ ವಿಷ ಸಂಗ್ರಹವಾಗುವ ಸಂಭವ ಹೆಚ್ಚಿದೆ.
ಹಿಂದೂ ಧರ್ಮದಲ್ಲಿ ತುಳಸಿಗೆ ಪವಿತ್ರ ಸ್ಥಾನವಿದೆ. ಅದನ್ನು ತಾಯಿ ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸಲಾಗುತ್ತದೆ. ತುಳಸಿ ಗಿಡ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ, ಆರೋಗ್ಯ ವೃದ್ಧಿಸುತ್ತದೆ, ಮನೆಗೆ ಸದಾ ಸಂಪತ್ತು, ಖುಷಿ ನೆಲೆಸಿರುತ್ತದೆ ಅಂತ ಜನ ನಂಬಿದ್ದಾರೆ. ತುಳಸಿಗೆ ದೇವರ ಸ್ಥಾನವನ್ನು ನೀಡಿರುವುದ್ರಿಂದ ಅದರ ಎಲೆ ಅಗೆಯುವುದು ಅಗೌರವದ ಸೂಚನೆಯಾಗುತ್ತದೆ. ಲಕ್ಷ್ಮಿ ದೇವಿ ಪ್ರತಿಯೊಂದು ತುಳಸಿ ಎಲೆಯಲ್ಲಿ ವಾಸ ಮಾಡ್ತಾಳೆ. ಅದನ್ನು ಜಗಿದಾಗ ತಾಯಿಗೆ ಅವಮಾನ ಮಾಡಿದಂತೆ, ಲಕ್ಷ್ಮಿ ದೇವಿಯ ಮುನಿಸಿಗೆ ಇದು ಕಾರಣವಾಗುತ್ತದೆ. ಇದೇ ಕಾರಣಕ್ಕೆ ಹಾಳಾದ ತುಳಸಿ ಎಲೆಯನ್ನು ಪೂಜೆಗೂ ಬಳಕೆ ಮಾಡುವುದಿಲ್ಲ.
ತುಳಸಿ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಆಯುರ್ವೇದ ಮತ್ತು ವಿಜ್ಞಾನದ ಪ್ರಕಾರ, ತುಳಸಿ ಹಲವಾರು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಆಯುರ್ವೇದದಲ್ಲಿ ಇದರ ಸೇವನೆಯನ್ನು ಶಿಫಾರಸು ಮಾಡಲಾಗಿದೆ. ಇದನ್ನು ರಾಮಬಾಣವೆಂದು ಪರಿಗಣಿಸಲಾಗುತ್ತದೆ. ಕೆಮ್ಮು ಮತ್ತು ಕಫಕ್ಕೆ ಇದು ಒಳ್ಳೆಯ ಮದ್ದು. ತುಳಸಿಯಲ್ಲಿ ಪಾದರಸ ಇರುವ ಕಾರಣ ತಜ್ಞರು ತುಳಸಿ ಎಲೆಯನ್ನು ಅಗೆಯುವ ಬದಲು ನುಂಗಲು ಸಲಹೆ ನೀಡ್ತಾರೆ. ತುಳಸಿ ಎಲೆಗಳನ್ನು ತೆಗೆದು ಸ್ವಚ್ಛಗೊಳಿಸಿ ಅದನ್ನು ನುಂಗಿ ನೀರು ಕುಡಿಯಬೇಕು. ನೀವು ಅದನ್ನು ಕಷಾಯ, ಟೀ ರೂಪದಲ್ಲಿಯೂ ಸೇವನೆ ಮಾಡಬಹುದು. ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯಬಹುದು. ಇಲ್ಲವೇ ಶುಂಠಿ, ತುಳಸಿ ಎಲೆಯನ್ನು ಕುದಿಸಿ ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಬಹುದು.
ತುಳಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಆತಂಕ ಕಡಿಮೆ ಆಗುತ್ತದೆ. ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಗೆ ಉತ್ತಮ.ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದಲ್ಲದೆ ಚರ್ಮ ಸಮಸ್ಯೆಗೆ ಇದು ಮದ್ದು. ಆದ್ರೆ ಗರ್ಭಿಣಿಯರು, ಥೈರಾಯ್ಡ್ ನಿಂದ ಬಳಲುತ್ತಿರುವ ಜನರು ಹಾಗೇ ಶಸ್ತ್ರಚಿಕಿತ್ಸೆಗೆ ಒಳಗಾದ, ಆಯುರ್ವೇದ ಔಷಧಿ ತೆಗೆದುಕೊಳ್ಳುತ್ತಿರುವವರು ಇದನ್ನು ಸೇವಿಸಬಾರದು.