ಸ್ಲಿಮ್‌ ಆಗಿದ್ದೇನೆಂಬ ಬೀಗುತ್ತಿದ್ದೀರಾ? ಅಂಥವರಿಗೆ ಟೈಪ್ 4 ಮಧುಮೇಹದ ಅಪಾಯ ಹೆಚ್ಚು!

First Published Sep 6, 2022, 4:48 PM IST

ಮಧುಮೇಹವು ಅತಿದೊಡ್ಡ ಆರೋಗ್ಯ (Health) ಸಮಸ್ಯೆಯಾಗಿ ಮಾರ್ಪಟ್ಟಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ,  ಎಲ್ಲರೂ ಈ ಸಮಸ್ಯೆಯೊಂದಿಗೆ ಹೆಣಗಾಡುತ್ತಿದ್ದಾರೆ. ಸಕ್ಕರೆ ಖಾಯಿಲೆಯಿಂದ ಜನರು ತುಂಬಾನೆ ಕಷ್ಟ ಪಡ್ತಾರೆ. ಮಧುಮೇಹವು ದೇಹದ ಎಲ್ಲಾ ಅಂಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಅಷ್ಟೇ ಅಲ್ಲ, ಮಧುಮೇಹದ ಕಾರಣದಿಂದಾಗಿ, ಹೃದ್ರೋಗ (Heart Disease) , ಮಾನಸಿಕ ಸಮಸ್ಯೆಗಳು (Psychological problem) ಸೇರಿದಂತೆ ಇತರ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಡಯಾಬಿಟೀಸ್ ನಲ್ಲಿ ಎಷ್ಟು ವಿಧಗಳಿವೆ. ಅವುಗಳ ಲಕ್ಷಣಗಳೇನು ತಿಳಿಯೋಣ. 

ಜಗತ್ತನ್ನು ಕಾಡುವ ಒಂದು ಸಾಮಾನ್ಯ ಕಾಯಿಲೆ ಎಂದರೆ ಅದು ಮಧುಮೇಹ. ಮಧುಮೇಹದಲ್ಲಿ ಅನೇಕ ವಿಧಗಳಿವೆ. ಹೆಚ್ಚಿನ ಜನರು ಟೈಪ್ 2 ಮತ್ತು ಟೈಪ್ 1 ಮಧುಮೇಹ(Diabetes) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವು ಜನರು ಟೈಪ್ 3 ಮತ್ತು ಟೈಪ್ 4 ಮಧುಮೇಹದಿಂದ ಬಾಧಿತರಾಗುತ್ತಾರೆ. ಟೈಪ್ 4 ಡಯಾಬಿಟಿಸ್ ಬಗ್ಗೆ ನಿಮಗೆ ತಿಳಿದಿದ್ಯಾ? ಈ ಮಧುಮೇಹದಿಂದ ಯಾವ ವಯಸ್ಸಿನ ಜನರು ಹೆಚ್ಚು ಬಾಧಿತರಾಗುತ್ತಾರೆ ಮತ್ತು ಈ ಸಮಸ್ಯೆಗೆ ಕಾರಣವೇನು ಎಂಬುದು ಇಲ್ಲಿದೆ ನೋಡಿ.

ಎಲ್ಲಾ ರೀತಿಯ ಮಧುಮೇಹದಿಂದಾಗಿ, ದೇಹದಲ್ಲಿ ಇನ್ಸುಲಿನ್(Insulin) ರೆಸಿಸ್ಟೆನ್ಸಿ ಉಂಟಾಗುತ್ತದೆ ಮತ್ತು ರಕ್ತದ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ವಿವಿಧ ರೀತಿಯ ಮಧುಮೇಹವನ್ನು ವಿಭಿನ್ನವಾಗಿ ಚಿಕಿತ್ಸೆ ನೀಡಲಾಗುತ್ತದೆ. ಅದರಲ್ಲೂ ಟೈಪ್ 4 ಮಧುಮೇಹದ ಬಗ್ಗೆ ನೀವು ತಿಳಿದು ಕೊಳ್ಳಬೇಕಾದ್ದು ಬಹಳಷ್ಟಿದೆ. ಹಾಗಾದ್ರೆ ಬನ್ನಿ ಟೈಪ್ 4 ಮಧುಮೇಹ ಎಂದರೇನು ಮತ್ತು ಅದರ ರೋಗ ಲಕ್ಷಣಗಳು ಯಾವುವು ಎಂದು ತಿಳಿಯಿರಿ.

ಟೈಪ್ 4 ಡಯಾಬಿಟಿಸ್(Type 4 diabetes) ಎಂದರೇನು?

ಟೈಪ್ 4 ಮಧುಮೇಹವು ವಯಸ್ಸಾದವರಲ್ಲಿ ಇನ್ಸುಲಿನ್ (Insulin) ಪ್ರತಿರೋಧದಿಂದ ಉಂಟಾಗುವ ಒಂದು ಸಾಮಾನ್ಯ ರೋಗ. ಈ ರೋಗವು ಕಡಿಮೆ ತೂಕ (Low Wieght) ಇರುವಂತಹ ಮತ್ತು ತೆಳ್ಳಗಿರುವ ವಯಸ್ಸಾದ ಜನರಲ್ಲಿ ಕಂಡುಬರುತ್ತೆ. 

ಟೈಪ್ 2 ಮಧುಮೇಹ ಸಮಸ್ಯೆಯ ಹಿಂದಿನ ಪ್ರಮುಖ ಕಾರಣವೆಂದರೆ ಸ್ಥೂಲಕಾಯ (Obesity), ಆದರೆ ಟೈಪ್ 4 ರಲ್ಲಿ ಅದು ಹಾಗಲ್ಲ. ವಿಜ್ಞಾನಿಗಳು ಪ್ರಸ್ತುತ ಇದಕ್ಕೆ ನಿಖರವಾದ ಕಾರಣ ಕಂಡು  ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ವಯಸ್ಸಿನ ಕಾರಣದಿಂದಲೂ ಈ ರೋಗ ಉಂಟಾಗಬಹುದು ಎಂದು ತಜ್ಞರು ನಂಬುತ್ತಾರೆ. 2015 ರ ಒಂದು ಅಧ್ಯಯನವು ಟೈಪ್ 4 ಮಧುಮೇಹವು ಪ್ರತಿರಕ್ಷಣಾ ಕೋಶಗಳ ಅತಿಯಾದ ರಚನೆಯಿಂದ ಉಂಟಾಗಬಹುದು ಎಂದು ತಿಳಿಸಿದೆ. ಈ ಅಧ್ಯಯನವನ್ನು ಇಲಿಗಳ ಮೇಲೆ ಮಾಡಲಾಗಿತ್ತು.

ಟೈಪ್ 4 ಮಧುಮೇಹದ ಲಕ್ಷಣಗಳು(Symptoms)

ಟೈಪ್ 4 ಮಧುಮೇಹದ ರೋಗಲಕ್ಷಣಗಳು ಇತರ ರೀತಿಯ ಮಧುಮೇಹವನ್ನು ಹೋಲುತ್ತವೆ. ಇದು ಕಡಿಮೆ ತೂಕದ ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತೆ, ಆದ್ದರಿಂದ ಇದನ್ನು ಊಹಿಸಲು ಸ್ವಲ್ಪ ಕಷ್ಟ. ಈ ರೋಗದಲ್ಲಿ ಇತರ ರೋಗಗಳಂತೆ ಕಾಣುವ ಕೆಲವು ರೋಗ ಲಕ್ಷಣಗಳಿವೆ, ಆದ್ದರಿಂದ ನಿಖರವಾದ ಪತ್ತೆಹಚ್ಚಬೇಕಾದ್ರೆ ವೈದ್ಯಕೀಯ ಪರೀಕ್ಷೆ ಮಾಡಿಸಲೇಬೇಕು.  

ಟೈಪ್ 4 ಮಧುಮೇಹದ ಕೆಲವು ಪ್ರಮುಖ ರೋಗಲಕ್ಷಣಗಳನ್ನು ನೋಡೋಣ-
ಅತಿಯಾದ ಆಯಾಸ
ಅತಿಯಾದ ಹಸಿವು ಮತ್ತು ಬಾಯಾರಿಕೆ
ದೃಷ್ಟಿ ಮಸುಕಾಗುವುದು
ಗಾಯ 
ಆಗಾಗ್ಗೆ ಮೂತ್ರವಿಸರ್ಜನೆ(Frequent urination)
ಹಠಾತ್ ತೂಕ ನಷ್ಟ
ಇವೆಲ್ಲವೂ ನಿಮಗೆ ಕಂಡು ಬಂದರೆ ತಿಳಿದುಕೊಳ್ಳಬೇಕು, ನಿಮಗೆ ಟೈಪ್ 4 ಮಧುಮೇಹ ಸಮಸ್ಯೆ ಕಾಡುತ್ತಿದೆ ಎಂದು ಹಾಗೂ ವೈದ್ಯಕೀಯ ನೆರವನ್ನು ಪಡೆಯಬೇಕು.

ಚಿಕಿತ್ಸೆ(Treatment) ಏನು?

ಇಲ್ಲಿಯವರೆಗೆ, ಟೈಪ್ 4 ಮಧುಮೇಹಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ಆಂಟಿಬಾಡಿ ಔಷಧವನ್ನು ಸಂಶೋಧಕರು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇದು ದೇಹದಲ್ಲಿ ನಿಯಂತ್ರಕ ಟಿ-ಕೋಶಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಟೈಪ್ 4 ಮಧುಮೇಹಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತೆ. ಈ ಔಷಧಿಯನ್ನು ಅಭಿವೃದ್ಧಿಪಡಿಸುವವರೆಗೆ, ವೈದ್ಯರು ಟೈಪ್ 2 ಡಯಾಬಿಟಿಸ್ ಔಷಧಿಗಳೊಂದಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
 

click me!