ಮಧುಮೇಹದ ಜೊತೆಗೆ ಥೈರಾಯ್ಡ್ ಕೂಡ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಈ ಕಾಯಿಲೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಥೈರಾಯ್ಡ್ ಯಾವುದೇ ವಯಸ್ಸಿನಲ್ಲಿ ಬರಬಹುದು. ಆದರೆ ಈ ಕಾಯಿಲೆಯಿಂದಾಗಿ ದೇಹವು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮುಖ್ಯವಾಗಿ ಅನಾರೋಗ್ಯಕರ ಜೀವನಶೈಲಿಯಿಂದಲೇ ಈ ಕಾಯಿಲೆ ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಈ ಕಾಯಿಲೆ ಇರುವವರು ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಉತ್ತಮ ಪೌಷ್ಟಿಕ ಆಹಾರವನ್ನು ಸಹ ಸೇವಿಸಬೇಕು. ಜೊತೆಗೆ ಜೀವನಶೈಲಿಯನ್ನು ಸುಧಾರಿಸಿಕೊಳ್ಳಬೇಕು.
ನಮ್ಮ ದೇಹಕ್ಕೆ ಯಾವುದೇ ಸಮಸ್ಯೆ ಬಂದರೂ ಅದು ಗುಣವಾಗಲು ನಮ್ಮ ದೇಹಕ್ಕೆ ಶಕ್ತಿಯನ್ನು, ಪೋಷಣೆಯನ್ನು ನೀಡುವ ಆಹಾರ ಬಹಳ ಮುಖ್ಯ. ಇಂತಹ ಕೆಲವು ಆಹಾರ ಪದಾರ್ಥಗಳನ್ನು ನೀವು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ಥೈರಾಯ್ಡ್ ಅನ್ನು ಕಡಿಮೆ ಮಾಡಿಕೊಳ್ಳಬಹುದು. ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿಡುವ ಕೆಲವು ಆಹಾರಗಳ ಬಗ್ಗೆ ಈಗ ತಿಳಿದುಕೊಳ್ಳೋಣ ಬನ್ನಿ.
ತೆಂಗಿನಕಾಯಿ: ಥೈರಾಯ್ಡ್ ಇರುವವರಿಗೆ ತೆಂಗಿನಕಾಯಿ ತುಂಬಾ ಒಳ್ಳೆಯದು. ಇದು ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ತೆಂಗಿನಕಾಯಿಯನ್ನು ನಿಮ್ಮ ಆಹಾರದಲ್ಲಿ ಯಾವುದೇ ರೀತಿಯಲ್ಲಿ ಸೇರಿಸಿಕೊಳ್ಳಬಹುದು. ಇದನ್ನು ಹಸಿಯಾಗಿ ಅಥವಾ ಚಟ್ನಿ ಅಥವಾ ಲಡ್ಡುಗಳಂತಹ ಹಲವು ರೂಪಗಳಲ್ಲಿ ಸೇವಿಸಬಹುದು. ತೆಂಗಿನಕಾಯಿಯನ್ನು ತಿನ್ನುವುದರಿಂದ ನಿಮ್ಮ ಮೆಟಬಾಲಿಸಂ ಸರಿಯಾಗಿರುತ್ತದೆ. ದೇಹ ಕೂಡ ಆರೋಗ್ಯವಾಗಿರುತ್ತದೆ.
ನೆಲ್ಲಿಕಾಯಿ: ನೆಲ್ಲಿಕಾಯಿಯಲ್ಲಿ ವಿಟಮಿನ್ -ಸಿ ಹೇರಳವಾಗಿದೆ. ಈ ನೆಲ್ಲಿಕಾಯಿ ಥೈರಾಯ್ಡ್ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಥೈರಾಯ್ಡ್ ನಿಯಂತ್ರಣದಲ್ಲಿಡಲು ನೆಲ್ಲಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಬೆಳಿಗ್ಗೆ ಸೇವಿಸಿ. ಅಥವಾ ಬಿಸಿ ನೀರಿನಲ್ಲಿ ನೆಲ್ಲಿ ಪುಡಿಯನ್ನು ಹಾಕಿ ಕುಡಿಯಿರಿ. ನೆಲ್ಲಿಕಾಯಿಯನ್ನು ತಿನ್ನುವುದರಿಂದ ಥೈರಾಯ್ಡ್ ಗ್ರಂಥಿಯು ನಿಯಂತ್ರಣದಲ್ಲಿರುತ್ತದೆ.
ಮೊಟ್ಟೆಗಳು: ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಮೊಟ್ಟೆಗಳಲ್ಲಿ ಟ್ರಿಪ್ಟೊಫಾನ್ ಮತ್ತು ಟೈರೋಸಿನ್ ಹೇರಳವಾಗಿದೆ. ಇವು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಮೊಟ್ಟೆಗಳನ್ನು ಪ್ರತಿದಿನ ತಿನ್ನುವುದರಿಂದ ಕ್ಯಾನ್ಸರ್ ಬರುವ ಅಪಾಯ ಕಡಿಮೆಯಾಗುತ್ತದೆ. ಮೊಟ್ಟೆಗಳಲ್ಲಿ ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು, ಸೆಲೆನಿಯಮ್, ಉತ್ಕರ್ಷಣ ನಿರೋಧಕಗಳು ಮತ್ತು ಅಯೋಡಿನ್ ನಂತಹ ಪೋಷಕಾಂಶಗಳು ಹೇರಳವಾಗಿವೆ. ಇವು ನಿಮ್ಮ ಇಡೀ ದೇಹವನ್ನು ಆರೋಗ್ಯವಾಗಿಡುತ್ತದೆ.
ಕುಂಬಳಕಾಯಿ ಬೀಜಗಳು: ಕುಂಬಳಕಾಯಿ ಬೀಜಗಳು ಥೈರಾಯ್ಡ್ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಕುಂಬಳಕಾಯಿ ಬೀಜಗಳನ್ನು ಪ್ರತಿದಿನ ತಿನ್ನುವುದರಿಂದ ಥೈರಾಯ್ಡ್ ನಿಯಂತ್ರಣದಲ್ಲಿರುತ್ತದೆ. ಏಕೆಂದರೆ ಕುಂಬಳಕಾಯಿ ಬೀಜಗಳಲ್ಲಿ ಸತು ಹೇರಳವಾಗಿದೆ. ಇದು ಥೈರಾಯ್ಡ್ ಹಾರ್ಮೋನುಗಳು ಸರಿಯಾಗಿ ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ.
ಸೇಬು : ಸೇಬು ಹಣ್ಣುಗಳು ನಮ್ಮನ್ನು ಅನೇಕ ಕಾಯಿಲೆಗಳಿಂದ ದೂರವಿಡುತ್ತದೆ. ನಾರಿನಂಶ ಮತ್ತು ಪೆಕ್ಟಿನ್ ಅಂಶ ಹೇರಳವಾಗಿರುವ ಸೇಬು ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹವು ಚೆನ್ನಾಗಿ ನಿರ್ವಿಷಗೊಳ್ಳುತ್ತದೆ. ಅಷ್ಟೇ ಅಲ್ಲ, ಇದು ಥೈರಾಯ್ಡ್ ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.