ಬೇಸಿಗೆಯಲ್ಲಿ ಕೂದಲಿನ ರಕ್ಷಣೆಗೆ ಇಲ್ಲಿದೆ ಸೂಪರ್ ಟಿಪ್ಸ್
ಬೇಸಿಗೆಯ ಬಿಸಿಲು ಹಾಗೂ ಧೂಳಿನಿಂದ ಕೂದಲನ್ನು ರಕ್ಷಿಸಲು ಸಿಂಪಲ್ ಟಿಪ್ಸ್ ಇಲ್ಲಿವೆ.
ಬೇಸಿಗೆಯ ಬಿಸಿಲು ಹಾಗೂ ಧೂಳಿನಿಂದ ಕೂದಲನ್ನು ರಕ್ಷಿಸಲು ಸಿಂಪಲ್ ಟಿಪ್ಸ್ ಇಲ್ಲಿವೆ.
ಬೇಸಿಗೆಯಲ್ಲಿ ಕೂದಲಿನ ಆರೈಕೆ ಸಲಹೆಗಳು: ದಟ್ಟವಾದ, ಹೊಳೆಯುವ ಮತ್ತು ಆರೋಗ್ಯಕರ ಕೂದಲು ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಈ ಬೇಸಿಗೆ ಕಾಲ ನಮ್ಮ ಚರ್ಮದ ಮೇಲೆ ಮಾತ್ರವಲ್ಲ, ಕೂದಲಿನ ಮೇಲೂ ಸಹ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಸುಡುವ ಬಿಸಿಲಿನಿಂದ ಕೂದಲು ನಿರ್ಜೀವವಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ ಕೂದಲಿಗೆ ಹೆಚ್ಚಿನ ಕಾಳಜಿ ಬೇಕು. ಸೂರ್ಯನ ಬೆಳಕು, ಮಾಲಿನ್ಯ, ಧೂಳು, ಕೊಳಕು ಮತ್ತು ಕಳಪೆ ಆಹಾರ ಪದ್ಧತಿಯಿಂದ ಕೂದಲು ನಿರ್ಜೀವವಾಗುತ್ತದೆ. ಆದ್ದರಿಂದ ಬೇಸಿಗೆಯ ಸುಡುವ ಬಿಸಿಲಿನಿಂದ ಕೂದಲನ್ನು ಹೇಗೆ ರಕ್ಷಣೆ ಮಾಡುವುದು ಎಂಬ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ.
ಬೇಸಿಗೆಯಲ್ಲಿ ತೀವ್ರವಾದ ಸೂರ್ಯನ ಬೆಳಕಿನಿಂದ ನಿಮ್ಮ ಕೂದಲು ಹಾನಿಯಾಗದಂತೆ ತಡೆಯಲು, ನಿಮ್ಮ ಕೂದಲನ್ನು ಟೋಪಿ, ಕರವಸ್ತ್ರ ಅಥವಾ ಸ್ಟೋಲ್‌ನಿಂದ ಮುಚ್ಚಬೇಕು.
ಕೂದಲನ್ನು ಸ್ವಚ್ಛವಾಗಿಡಿ:
ಬೇಸಿಗೆಯಲ್ಲಿ ನಿಮ್ಮ ಕೂದಲಿನಲ್ಲಿ ಹೆಚ್ಚು ಕೊಳೆ ಮತ್ತು ಬೆವರು ಸೇರಿಕೊಳ್ಳುತ್ತದೆ. ಇದರಿಂದ ಕೂದಲು ಹೆಚ್ಚಾಗಿ ಉದುರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೂದಲನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ವಿಶೇಷವಾಗಿ ಎಣ್ಣೆಯುಕ್ತ ಕೂದಲು ಹೊಂದಿರುವವರು ಮತ್ತು ಹೆಚ್ಚು ಬೆವರು ಇರುವವರು ತಮ್ಮ ತಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದಕ್ಕಾಗಿ ಆಗಾಗ ತಲೆಗೆ ಸ್ನಾನ ಮಾಡಬಹುದು.
ತಲೆಗೆ ಶಾಂಪೂ ಹಾಕುವ ಮೊದಲು ತೆಂಗಿನ ಎಣ್ಣೆ ಅಥವಾ ನಿಮಗೆ ಇಷ್ಟವಾದ ಬೇರೆ ಯಾವುದೇ ಎಣ್ಣೆಯಿಂದ ಕೂದಲನ್ನು ಚೆನ್ನಾಗಿ ಮಸಾಜ್ ಮಾಡಬೇಕು. ಎಣ್ಣೆ ಹಚ್ಚಿ ಮಸಾಜ್ ಮಾಡಿದ ನಂತರ ಸುಮಾರು ಒಂದು ಗಂಟೆಯ ನಂತರ ತಲೆಗೆ ಶಾಂಪೂ ಹಾಕಬೇಕು. ಒಂದು ವೇಳೆ ನಿಮ್ಮ ಕೂದಲು ತುಂಬಾ ಒಣಗಿದ್ದರೆ ಹಿಂದಿನ ದಿನ ರಾತ್ರಿ ಎಣ್ಣೆ ಮಸಾಜ್ ಮಾಡಿ ನಂತರ ಮರುದಿನ ಶಾಂಪೂ ಹಾಕಬಹುದು. ಹೀಗೆ ಮಾಡುವುದರಿಂದ ನಿಮ್ಮ ಕೂದಲಿಗೆ ಉತ್ತಮ ತೇವಾಂಶ ಸಿಗುತ್ತದೆ.
ಉತ್ತಮ ಶಾಂಪೂ ಮತ್ತು ಕಂಡೀಷನರ್:
ಬೇಸಿಗೆ ಕಾಲವಿರಲಿ, ಇಲ್ಲದಿರಲಿ ಕೂದಲಿಗೆ ಉತ್ತಮ ಶಾಂಪೂ ಮತ್ತು ಕಂಡೀಷನರ್ ಬಳಸಬೇಕು. ವಿಶೇಷವಾಗಿ ರಾಸಾಯನಿಕಗಳು ಇರಬಾರದು. ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಶಾಂಪೂ ಮತ್ತು ಕಂಡೀಷನರ್ ಕೂದಲನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದರಿಂದ ಕೂದಲಿನಲ್ಲಿ ಶುಷ್ಕತೆ ಉಂಟಾಗುವುದಿಲ್ಲ. ಮತ್ತು ಕೂದಲನ್ನು ತೇವಾಂಶದಿಂದ ಇಡುತ್ತದೆ.
ಹೇರ್ ಸ್ಟ್ರೈಟ್ನರ್, ಡ್ರೈಯರ್ ಮುಂತಾದ ಯಾವುದೇ ಉಪಕರಣಗಳನ್ನು ಕೂದಲಿಗೆ ಬಳಸಬೇಡಿ. ಇದರಿಂದ ಕೂದಲು ಒಡೆಯುತ್ತದೆ. ಅವು ನಿಮ್ಮ ಕೂದಲನ್ನು ಹಾನಿಗೊಳಿಸುತ್ತವೆ, ದುರ್ಬಲಗೊಳಿಸುತ್ತವೆ ಮತ್ತು ಒಣಗಿಸುತ್ತವೆ. ಆದ್ದರಿಂದ ಈ ರೀತಿಯ ಉಪಕರಣಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸಲು ಪ್ರಯತ್ನಿಸಿ.
ಕೂದಲನ್ನು ತೇವವಾಗಿಡಿ:
ಬೇಸಿಗೆಯ ಬಿಸಿಲಿನಿಂದ ಕೂದಲು ಒಣಗುತ್ತದೆ. ಆದ್ದರಿಂದ ಒಣಗಿದ ಕೂದಲನ್ನು ಆಗಾಗ ತೇವಗೊಳಿಸುವುದು ಬಹಳ ಮುಖ್ಯ. ಇದಕ್ಕಾಗಿ ಅಂಗಡಿಯಲ್ಲಿ ಸ್ಪ್ರೇ ಬಾಟಲ್ ಒಂದನ್ನು ಖರೀದಿಸಿ ಅದರಲ್ಲಿ ನೀರಿಗೆ ಲ್ಯಾವೆಂಡರ್ ಎಣ್ಣೆಯನ್ನು ಬೆರೆಸಿ ಇಟ್ಟುಕೊಳ್ಳಿ. (ಲ್ಯಾವೆಂಡರ್ ಎಣ್ಣೆಯನ್ನು ಹೆಚ್ಚಾಗಿ ಸೇರಿಸಬೇಡಿ). ಕೂದಲು ಯಾವಾಗ ಒಣಗುತ್ತದೆಯೋ ಆಗ ಈ ನೀರನ್ನು ನಿಮ್ಮ ಕೂದಲಿನ ಮೇಲೆ ಸಿಂಪಡಿಸಿ. ಇದರಿಂದ ಕೂದಲು ಒಣಗುವುದಿಲ್ಲ. ಇದು ಕೂದಲಿಗೆ ಮಾಯಿಶ್ಚರೈಸರ್ ರೀತಿ ಕೆಲಸ ಮಾಡುತ್ತದೆ.
ಪ್ರಸ್ತುತ ಅಂಗಡಿಗಳಲ್ಲಿ ಸೀರಮ್ ಲಭ್ಯವಿದೆ ಇದು ಕೂದಲಿಗೆ ಹಾನಿ ಮಾಡುವುದಿಲ್ಲ. ಏಕೆಂದರೆ ಇದು ಒಂದು ರೀತಿಯ ಎಣ್ಣೆ. ಅಂದರೆ ಎಣ್ಣೆಯಿಂದ ಕೊಬ್ಬನ್ನು ತೆಗೆದು ನಂತರ ಪಡೆಯುವುದು ಸೀರಮ್. ಇದನ್ನು ನೀವು ಪ್ರತಿದಿನ ಹಚ್ಚಿದರೂ ಕೂದಲಿಗೆ ಯಾವುದೇ ಸಮಸ್ಯೆ ಬರುವುದಿಲ್ಲ. ಎಲ್ಲಾ ವಯಸ್ಸಿನವರೂ ಇದನ್ನು ಬಳಸಬಹುದು ಇದು ನಿಮ್ಮ ಕೂದಲನ್ನು ಬಿಸಿಲಿನಿಂದ ರಕ್ಷಿಸುತ್ತದೆ. ವಿಶೇಷವಾಗಿ ಇದು ಕೂದಲಿನ ಬಣ್ಣವನ್ನು ಬದಲಾಯಿಸುವುದಿಲ್ಲ.
ಹೇರ್ ಮಾಸ್ಕ್:
ಬೇಸಿಗೆಯಲ್ಲಿ ವಾರಕ್ಕೆ ಎರಡು ಬಾರಿ ಸ್ನಾನ ಮಾಡಬೇಕು. ನೀವು ಸ್ನಾನ ಮಾಡುವ ಮೊದಲು ಹೇರ್ ಮಾಸ್ಕ್ ಹಾಕಬೇಕು. ಮಾಸ್ಕ್ ಹಾಕಿದ ನಂತರ 10-15 ನಿಮಿಷ ಹಾಗೆಯೇ ಬಿಟ್ಟು ನಂತರ ಶಾಂಪೂ ಹಾಕಿ ಸ್ನಾನ ಮಾಡಿ. ಹೇರ್ ಮಾಸ್ಕ್ ಹಾಕಿದರೆ ಬೇಸಿಗೆಯ ಬಿಸಿಲಿನಿಂದ ಕೂದಲು ಡ್ಯಾಮೇಜ್ ಆಗುವುದಿಲ್ಲ.