ಭಾರತದಲ್ಲಿ ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಸ್ಟ್ರೋಕ್ (stroke) ಕೂಡ ಒಂದಾಗಿದೆ. ವರ್ಷದಲ್ಲಿ ಬರೋಬ್ಬರಿ1.8 ದಶಲಕ್ಷಕ್ಕೂ ಹೆಚ್ಚು ಜನರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಪ್ರಕರಣಗಳು ಹೆಚ್ಚುತ್ತಲಿವೆ. ಅದರಲ್ಲೂ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ರಕ್ತ ಹೆಪ್ಪುಗಟ್ಟುವಿಕೆ (blood clot)ಅಥವಾ ರಕ್ತಸ್ರಾವದಿಂದಾಗಿ ಮೆದುಳಿಗೆ ರಕ್ತ ಪೂರೈಕೆಗೆ ಅಡ್ಡಿಯಾಗುವ ಸ್ಥಿತಿ ಯನ್ನು ಸ್ಟ್ರೋಕ್ ಎನ್ನಲಾಗುತ್ತೆ. ಇದು ಮೆದುಳಿನ ಹಾನಿಗೆ ಕಾರಣವಾಗುತ್ತದೆ. ಸ್ಟ್ರೋಕ್ ನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ, ಇಸ್ಕೀಮಿಕ್ ಸ್ಟ್ರೋಕ್ ಮತ್ತು ಹೆಮರಾಜಿಕ್ ಸ್ಟ್ರೋಕ್.
ಪಾರ್ಶ್ವವಾಯುವಿನ ಎರಡು ವಿಧಗಳು
ಮೆದುಳಿಗೆ ರಕ್ತವನ್ನು ಸಾಗಿಸುವ ಅಪಧಮನಿಯಲ್ಲಿನ ತಡೆಯಿಂದ ಇಸ್ಕೀಮಿಕ್ ಸ್ಟ್ರೋಕ್ (ischemic stroke) ಉಂಟಾಗುತ್ತದೆ, ಆದರೆ ಹೆಮರಾಜಿಕ್ ಸ್ಟ್ರೋಕ್ (hemorrhagic stroke) ಉಂಟಾದ ಸಂದರ್ಭದಲ್ಲಿ ಮೆದುಳಿನ ಕೆಲವು ಸ್ಥಳಗಳಲ್ಲಿ ರಕ್ತಸ್ರಾವವಾಗುತ್ತದೆ. ಪಾರ್ಶ್ವವಾಯುವಿನ ಮಾರಣಾಂತಿಕ ಪರಿಣಾಮಗಳಿಂದಾಗಿ, ವ್ಯಕ್ತಿಯ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗಬಹುದು.
ಪಾರ್ಶ್ವವಾಯು ರೋಗದ ಲಕ್ಷಣಗಳು
ಸ್ಟ್ರೋಕ್ ದಾಳಿಯ ಮೊದಲು, ರೋಗಿಯಲ್ಲಿ ಕೆಲವು ರೋಗಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ, ಅವುಗಳ ಬಗ್ಗೆ ಗಮನ ಹರಿಸುವುದು ಮುಖ್ಯ. ಒಬ್ಬರ ಜೀವವನ್ನು ಉಳಿಸುವ ಮೊದಲ ಹೆಜ್ಜೆಯೆಂದರೆ ಪಾರ್ಶ್ವವಾಯುವಿನ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಗುರುತಿಸುವುದು. ಯಾವೆಲ್ಲಾ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ನೋಡೋಣ.
ತಲೆನೋವು (headache)
ಅಸಾಮಾನ್ಯ ಮತ್ತು ತೀವ್ರವಾದ ತಲೆನೋವು ಪಾರ್ಶ್ವವಾಯುವಿನ ಪ್ರಮುಖ ಚಿಹ್ನೆಯಾಗಿರಬಹುದು. ಹಲವಾರು ದಿನಗಳವರೆಗೆ ನಿರಂತರ ತಲೆನೋವು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬಾರದು. ಈ ನೋವು ಕೆಲವು ಕಾರಣಗಳಿಗಾಗಿ ಸಂಭವಿಸುತ್ತದೆ. ರೋಗಿಯು ತಲೆನೋವಿನ ಜೊತೆಗೆ ವಾಂತಿ, ತಲೆತಿರುಗುವಿಕೆ ಮತ್ತು ತಲೆನೋವಿನ ಜೊತೆಗೆ ಪ್ರಜ್ಞೆ ಕಳೆದುಕೊಳ್ಳುವಂತಹ ಇತರ ರೋಗಲಕ್ಷಣಗಳನ್ನು ಸಹ ಅನುಭವಿಸಬಹುದು.
ದೃಷ್ಟಿ ಸಮಸ್ಯೆಗಳು (eye problem)
ದೃಷ್ಟಿ ಕಡಿಮೆಯಾಗುವುದು ಅಥವಾ ಮಸುಕಾಗಿ ಕಾಣುವುದು ಸಹ ಸ್ಟ್ರೋಕ್ ನ ಒಂದು ಲಕ್ಷಣವೇ ಆಗಿದೆ. ಸ್ಟ್ರೋಕ್ ನಿಂದಾಗಿ, ಮೆದುಳಿಗೆ ರಕ್ತ ಪೂರೈಕೆಯಲ್ಲಿ ಅಡಚಣೆ ಉಂಟಾಗುತ್ತದೆ, ಇದು ದೃಷ್ಟಿ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮಗೂ ಸ್ಟ್ರೋಕ್ ಉಂಟಾಗುವ ಸಾಧ್ಯತೆ ಇದ್ದರೆ, ಸಡನ್ ಆಗಿ ಕಣ್ಣು ಮಂಜಾಗುವುದು ಅಥವಾ ಬರೀ ಕತ್ತಲು ತುಂಬಿದ ಅನುಭವ ಇವೆಲ್ಲವೂ ಕಾಣಿಸಿಕೊಳ್ಳುತ್ತೆ.
ವೀಕ್ ನೆಸ್ (weakness)
ತೋಳುಗಳು ಅಥವಾ ಕಾಲುಗಳೆರಡರಲ್ಲೂ ವೀಕ್ ಆದ ಅನುಭವ ಹೊಂದುತ್ತಾನೆ. ರೋಗಿಯು ಒಂದು ತೋಳಿನಲ್ಲಿ ಮರಗಟ್ಟಿದಂತಹ ಅನುಭವ ಆಗುತ್ತದೆ ಅಥವಾ ಅವರ ಒಂದು ಕೈ ಇನ್ನೊಂದು ಕೈಗಿಂತ ದುರ್ಬಲವಾಗಬಹುದು. ಕೆಲವು ಜನರು ತಮ್ಮ ಕೈಗಳನ್ನು ಎತ್ತುವಾಗ ತೊಂದರೆ ಅನುಭವಿಸಬಹುದು.
ಮಾತನಾಡಲು ಸಮಸ್ಯೆ (speech problem)
ಪಾರ್ಶ್ವವಾಯುವಿನಿಂದ ಬಳಲುತ್ತಿರುವ ವ್ಯಕ್ತಿಯು ಹೆಚ್ಚು ಗೊಂದಲಕ್ಕೊಳಗಾಗುತ್ತಾರೆ, ಅಸ್ಪಷ್ಟ ಪದಗಳನ್ನು ಮಾತನಾಡಬಹುದು. ವ್ಯಕ್ತಿ ತಮ್ಮ ಭಾಷೆಯನ್ನು ಸರಿಯಾಗಿ ಮಾತನಾಡಲು ಅಥವಾ ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ನೀವು ಅಂತಹ ಭಾಷೆಗೆ ಸಂಬಂಧಿಸಿದ ಸಮಸ್ಯೆಯನ್ನು ಅನುಭವಿಸಿದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು ಇದರಿಂದ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆಯನ್ನು ಮಾಡಬಹುದು.
ನಡೆಯಲು ತೊಂದರೆ ಉಂಟಾಗೋದು (problem in walking)
ಸ್ಟ್ರೋಕ್ ನಿಂದಾಗಿ, ಮೆದುಳಿನ ಒಂದು ಭಾಗ ಸಂಪೂರ್ಣವಾಗಿ ಅಥವಾ ಭಾಗಶಃ ಪರಿಣಾಮ ಬೀರಬಹುದು, ಇದು ವ್ಯಕ್ತಿಯ ಸಮತೋಲನ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ವ್ಯಕ್ತಿಯು ನಡೆಯಲು ಸಾಧ್ಯವಾಗರುವ ಪರಿಸ್ಥಿತಿ ಉಂಟಾಗಬಹುದು.