ಜೀವನಶೈಲಿ (lifestyle) ನಮ್ಮ ಜೀವನದ ಮೇಲೆ ಬಹಳ ಆಳವಾದ ಪರಿಣಾಮ ಬೀರುತ್ತೆ. ಕಳಪೆ ಜೀವನಶೈಲಿ ಅನೇಕ ರೋಗಗಳಿಗೆ ಕಾರಣವಾಗಬಹುದು, ಇದರಿಂದಾಗಿ ಅಕಾಲಿಕ ಮರಣದ ಸಾಧ್ಯತೆಯೂ ಹೆಚ್ಚುತ್ತಿದೆ. ಆದರೆ ರಾತ್ರಿ ಬೇಗ ಊಟ ಮಾಡುವುದರಿಂದ ನೀವು ಹೆಚ್ಚು ಕಾಲ ಬದುಕುತ್ತೀರಿ ಎಂದು ಅಧ್ಯಯನವೊಂದು ಕಂಡು ಹಿಡಿದಿದೆ. ರಾತ್ರಿ ಬೇಗನೆ ಊಟ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳಿ.
ಇತ್ತೀಚೆಗೆ, ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಬೇಗ ಊಟ ಮಾಡೋದು ನಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಎಂದು ಕಂಡು ಹಿಡಿದಿದೆ. ಈ ಅಧ್ಯಯನದಲ್ಲಿ, ಇಟಲಿಯ ಹಳ್ಳಿಯೊಂದರ ಜನರ ಮೇಲೆ ಸಂಶೋಧನೆ ನಡೆಸಲಾಯಿತು. ಆ ಸ್ಥಳದಲ್ಲಿ 90 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರು ಸಂಜೆ 7 ಗಂಟೆ ಸುಮಾರಿಗೆ ಊಟ ಮಾಡುತ್ತಾರೆ.. ಅಲ್ಲದೆ, ಅವರು ಕಡಿಮೆ ಕ್ಯಾಲೊರಿ ಆಹಾರವನ್ನು (low calorie food) ತಿನ್ನುತ್ತಾರೆ. ಇದಲ್ಲದೆ, ಈ ಜನರ ಆಹಾರವು ಸಸ್ಯ ಆಧಾರಿತವಾಗಿದೆ. ಅವರ ಆಹಾರದಲ್ಲಿ ಹೆಚ್ಚು ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಬೇಳೆಕಾಳುಗಳು ಸೇರಿವೆ.
ಇಟಲಿಯ ಈ ಗ್ರಾಮದ ಜನರ ಜೀವನಶೈಲಿಯೂ ತುಂಬಾ ಸಕ್ರಿಯವಾಗಿದೆ. ಹಾಗಾಗಿ ಅವರು 90 ವರ್ಷ ವಯಸ್ಸಲ್ಲೂ ಆರೋಗ್ಯವಾಗಿರೋದು ಕಂಡು ಬಂದಿದೆ. ಜೀವನಶೈಲಿ ನಮ್ಮ ಜೀವನದ ಗುಣಮಟ್ಟದ (quality life) ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಇದರಿಂದ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ಬೇಗನೆ ಊಟ ಮಾಡುವುದರಿಂದ ಆಗುವ ಪ್ರಯೋಜನಗಳು ಯಾವುವು ಎಂದು ತಿಳಿಯೋಣ.
ಜೀರ್ಣಕ್ರಿಯೆಗೆ ಪ್ರಯೋಜನಕಾರಿ
ಬೇಗನೆ ಊಟ ಮಾಡುವುದು ಜೀರ್ಣಕ್ರಿಯೆಯನ್ನು (digestion) ಉತ್ತಮಗೊಳಿಸುತ್ತೆ. ಸಂಜೆ ಏಳು ಗಂಟೆಯ ಸುಮಾರಿಗೆ ಊಟ ಮಾಡುವುದರಿಂದ ಮಲಗುವ ಮೊದಲು ಸಾಕಷ್ಟು ಸಮಯ ಸಿಗುತ್ತದೆ, ಇದರಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಒಂದು ವೇಳೆ ನೀವು ರಾತ್ರಿ ಊಟವನ್ನು ತಡವಾಗಿ ತಿನ್ನುತ್ತಿದ್ದರೆ ಆಮ್ಲೀಯತೆ (acidity), ಗ್ಯಾಸ್, ಉಬ್ಬರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು ಏಕೆಂದರೆ ನಮ್ಮ ದೇಹದ ಕಾರ್ಯಗಳು ನಿಧಾನವಾಗುತ್ತವೆ. ಆದ್ದರಿಂದ, ಬೇಗನೆ ಊಟ ಮಾಡುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ.
ಉತ್ತಮ ನಿದ್ರೆ
ರಾತ್ರಿ ಊಟ ಮತ್ತು ನಿದ್ರೆಯ ನಡುವೆ ಹೆಚ್ಚಿನ ಸಮಯವನ್ನು ಹೊಂದಿರುವುದು ನಿಮಗೆ ಉತ್ತಮ ನಿದ್ರೆಯನ್ನು ನೀಡುತ್ತದೆ. ಆಹಾರವು ಸುಲಭವಾಗಿ ಜೀರ್ಣವಾಗುವುದರಿಂದ ಬೇಗನೆ ನಿದ್ರೆ ಮಾಡಲು (good sleep) ಸಾಧ್ಯವಾಗುತ್ತೆ. ಅಜೀರ್ಣದ ಕಡಿಮೆ ಸಮಸ್ಯೆಯಿಂದಾಗಿ, ಉತ್ತಮ ನಿದ್ರೆ ಬರುತ್ತದೆ.
ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ
ಬೇಗನೆ ಊಟ (early dinner) ಮಾಡುವುದರಿಂದ ತೂಕ ಹೆಚ್ಚಾಗುವ ಸಮಸ್ಯೆ ಕಡಿಮೆಯಾಗುತ್ತದೆ. ಸಂಜೆ ಊಟ ಮಾಡುವುದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಮಲಗುವ ಮೊದಲು ನಿಮ್ಮ ಆಹಾರವು ಹೆಚ್ಚಿನ ಪ್ರಮಾಣದಲ್ಲಿ ಜೀರ್ಣವಾಗುತ್ತದೆ. ರಾತ್ರಿಯಲ್ಲಿ ಅತಿಯಾಗಿ ತಿನ್ನುವ ಹಂಬಲ ಸಹ ಉಂಟಾಗೋದಿಲ್ಲ.
ರಕ್ತದಲ್ಲ ಸಕ್ಕರೆಯನ್ನು ನಿಯಂತ್ರಿಸುತ್ತದೆ
ರಾತ್ರಿ ಬೇಗ ಆಹಾರ ತಿಂದ್ರೆ ದೇಹವು ಆಹಾರವನ್ನು ಒಡೆಯಲು ಸಮಯವನ್ನು ಪಡೆಯುತ್ತದೆ ಮತ್ತು ಎಲ್ಲಾ ಪೋಷಕಾಂಶಗಳು ಚೆನ್ನಾಗಿ ಹೀರಲ್ಪಡುತ್ತವೆ. ಬೇಗನೆ ತಿನ್ನೋದ್ರಿಂದ ದೇಹವು ಇನ್ಸುಲಿನ್ ಅನ್ನು ಉತ್ತಮವಾಗಿ ಬಳಸಲು ಸಾಧ್ಯವಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು (blood sugar level) ಹೆಚ್ಚಾಗುವುದಿಲ್ಲ, ಇದು ಮಧುಮೇಹ, ಹೃದ್ರೋಗಗಳು ಇತ್ಯಾದಿಗಳ ಅಪಾಯವನ್ನು ಹೆಚ್ಚಿಸುವುದಿಲ್ಲ.