ತರಕಾರಿಗಳ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ ಬೆಲೆ ಹೆಚ್ಚಾದರೂ ಎಲ್ಲರೂ ತರಕಾರಿ ಖರೀದಿಸಿ ಆಹಾರದಲ್ಲಿ ಬಳಸಿಕೊಳ್ತಾರೆ. ಸಾಮಾನ್ಯವಾಗಿ 10, 20 ರೂಪಾಯಿಯಿಂದ ಹಿಡಿದು ಕೆಜಿಗೆ ಐನೂರು, ಸಾವಿರ ರೂಪಾಯಿ ವರೆಗೂ ಬೆಲೆಯಿರುವ ತರಕಾರಿಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಸುಲಭವಾಗಿ ಬೆಳೆಯುವ ಕೆಲವು ತರಕಾರಿಗೆ ಕಡಿಮೆ ಬೆಲೆಯಾದರೆ, ಕೆಲವೊಂದು ಸ್ಪೆಷಲ್ ತರಕಾರಿಗಳು ಹೆಚ್ಚು ಬೆಲೆ ಬಾಳುತ್ತವೆ. ಆದರೆ ತರಕಾರಿಯೊಂದು ಲಕ್ಷ ಬೆಲೆ ಬಾಳುತ್ತೆ ಅಂದ್ರೆ ನೀವ್ ನಂಬ್ತೀರಾ ?
ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಯುರೋಪಿಯನ್ ದೇಶಗಳಲ್ಲಿ ಜನಪ್ರಿಯವಾಗಿರುವ ಹಾಪ್‌ಶೂಟ್ಸ್ ತರಕಾರಿ ಬೆಲೆ ಭರ್ತಿ 85 ಸಾವಿರದಿಂದ 1 ಲಕ್ಷದ ವರೆಗಿದೆ. ಹಾಪ್ಸ್ ಶೂಟ್ಸ್ ಅಥವಾ ಹಾಪ್ ಚಿಗುರು ವಿಶ್ವದ ಅತ್ಯಂತ ದುಬಾರಿ ತರಕಾರಿಯೆಂದು ಕರೆಸಿಕೊಂಡಿದೆ. ನೋಡಲು ಪುಟ್ಟ ತರಕಾರಿ. ಇದರ ಬೆಲೆ ಮಾತ್ರ ಬರೋಬ್ಬರು 85 ಸಾವಿರದಿಂದ 1 ಲಕ್ಷದವರೆಗಿದೆ.
ಈ ತರಕಾರಿ ಹಲವು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಆದರೆ ಈ ತರಕಾರಿಯನ್ನು ಸದ್ಯ ಭಾರತದಲ್ಲಿ ಬೆಳೆಸಲಾಗುವುದಿಲ್ಲ. ಆದರೆ ಅಧ್ಯಯನಗಳ ಪ್ರಕಾರ, ಈ ತರಕಾರಿಯನ್ನು ಮೊತ್ತ ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಬೆಳೆಸಲಾಯ್ತಂತೆ. ಇದು ಮಧ್ಯಮ ದರದಲ್ಲಿ 6 ಮೀ (19 ಅಡಿ 8 ಇಂಚು) ವರೆಗೆ ಬೆಳೆಯುತ್ತಿದೆ. ಅಷ್ಟೇ ಅಲ್ಲದೆ 20 ವರ್ಷಗಳವರೆಗೆ ಜೀವಿಸುತ್ತದೆ ಎಂದು ತಿಳಿದುಬಂದಿದೆ.
ಹಾಪ್ ಚಿಗುರು ಸಾಮಾನ್ಯವಾಗಿ ದುಬಾರಿಯಾಗಿದ್ದರೂ ಇವು ಕಡಿಮೆ ಬೆಲೆಗೂ ಸಿಗುತ್ತದೆ ಎಂದು ಹೇಳಲಾಗಿದೆ. ಹಾಪ್ ಶೂಟ್ಸ್ ಬೆಲೆ ಅವುಗಳ ಗುಣಮಟ್ಟದೊಂದಿಗೆ ಬದಲಾಗುತ್ತದೆ ಎಂದು ತಿಳಿದುಬಂದಿದೆ. ಮಾತ್ರವಲ್ಲ ಈ ತರಕಾರಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವುದಿಲ್ಲ. ವಿಶ್ವದ ಅತ್ಯಂತ ದುಬಾರಿ ತರಕಾರಿ ಹಾಪ್-ಶೂಟ್ಸ್ ಎಷ್ಟು ದುಬಾರಿಯಾಗಿದೆ ಎಂದರೆ ಒಬ್ಬರು ಅದೇ ಬೆಲೆಗೆ ಬೈಕ್ ಅಥವಾ ಚಿನ್ನದ ಆಭರಣಗಳನ್ನು ಖರೀದಿಸಬಹುದಾಗಿದೆ.
ವೈಜ್ಞಾನಿಕವಾಗಿ Humulus lupulus ಎಂದು ಕರೆಯಲ್ಪಡುವ ಹಾಪ್‌ಶೂಟ್ಸ್ ದೀರ್ಘಕಾಲಿಕ ಕ್ಲೈಂಬರ್ ಸಸ್ಯವಾಗಿದೆ. ಯುರೋಪ್ ಮತ್ತು ಉತ್ತರ ಅಮೆರಿಕಾದ ಸ್ಥಳೀಯರು ಇದನ್ನು ಬೆಳೆಯುತ್ತಾರೆ. ಪ್ರಪಂಚದ ಅತ್ಯಂತ ದುಬಾರಿ ತರಕಾರಿಯನ್ನು ಆರಂಭದಲ್ಲಿ ಕಳೆ ಎಂದು ಹೇಳಲಾಗಿತ್ತು. ಏಕೆಂದರೆ ಇದು ಸೆಣಬಿನ ಕುಟುಂಬ, ಕ್ಯಾನಬೇಸಿಯಲ್ಲಿ ಹೂಬಿಡುವ ಸಸ್ಯದ ಜಾತಿಯಾಗಿದೆ.
ಹಾಪ್ ಶೂಟ್ಸ್ ಕೊಯ್ಲಿಗೆ ಸಿದ್ಧವಾಗುವ ಮೊದಲು ಮೂರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಸಸ್ಯವನ್ನು ಕೊಯ್ಲು ಮಾಡಲು ಕಾರ್ಮಿಕರ ಅಗತ್ಯವಿರುತ್ತದೆ. ಏಕೆಂದರೆ ಸಸ್ಯದ ಸಣ್ಣ ಹಸಿರು ತುದಿಗಳನ್ನು ಕೀಳುವಾಗ ಸಾಕಷ್ಟು ಕಾಳಜಿಯ ಅಗತ್ಯವಿರುತ್ತದೆ. ಅದೇನೆ ಇರ್ಲಿ ತರಕಾರಿಯೊಂದರ ಬೆಲೆ 85 ಸಾವಿರದಿಂದ 1 ಲಕ್ಷದ ವರೆಗಿದೆ ಅನ್ನೋದನ್ನು ಕೇಳಿ ಜನ್ರು ಈ ದುಡ್ಡಲ್ಲಿ ಇತರ ತರಕಾರಿಗಳನ್ನು ಪೂರ್ತಿ ವರ್ಷಕ್ಕಾಗುವಷ್ಟು ತಂದು ಕೂಡಿಡ್ಬೋದು ಅಂತಿದ್ದಾರೆ.
ಇತ್ತಿಚಿಗೆ ಐಎಎಸ್ ಅಧಿಕಾರಿಯೊಬ್ಬರು ಹಾಪ್‌ಶಾಟ್ಸ್‌ನ ಎರಡು ಫೋಟೋಗಳ ಕೊಲಾಜ್ ಅನ್ನು ಟ್ವೀಟ್ ಮಾಡಿ ಕಾಸ್ಟ್ಲೀಯೆಸ್ಟ್ ತರಕಾರಿಯ ಬಗ್ಗೆ ಮಾಹಿತಿ ನೀಡಿದ್ದರು. ಈ ತರಕಾರಿಯ ಒಂದು ಕಿಲೋಗ್ರಾಂ ಬೆಲೆ ಸುಮಾರು 1 ಲಕ್ಷ ಎಂದಿದ್ದರು. ಅಂದಿನಿಂದ ಸೋಷಿಯಲ್ ಮೀಡಿಯಾದಲ್ಲಿ ಈ ದುಬಾರಿ ತರಕಾರಿಯ ಫೋಟೋಸ್ ವೈರಲ್ ಆಗ್ತಿದೆ.