ಟೊಮೆಟೋ ಬೆಲೆ ಏರಿಕೆಯ ಚಿಂತೆ ಬಿಡಿ, ಅಡುಗೇಲಿ ಪರ್ಯಾಯವಾಗಿ ಇವನ್ನು ಬಳಸ್ಬೋದು

First Published | Jun 28, 2023, 10:54 AM IST

ಭಾರತೀಯ ಅಡುಗೆ ಮನೆಯಲ್ಲಿ ಟೊಮೆಟೋಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಯಾವುದೇ ಅಡುಗೆಯಾದರೂ ಟೊಮೆಟೋ ಇಲ್ಲದೆ ಅಪೂರ್ಣವೇ. ಆದ್ರೆ ಸದ್ಯ ಟೊಮೆಟೋ ಬೆಲೆ ಗಗನಕ್ಕೇರಿದೆ. ಹೀಗಿರುವಾಗ ಟೊಮೆಟೋಗೆ ಪರ್ಯಾಯವಾಗಿ ಅಡುಗೆಯಲ್ಲಿ ಮತ್ತೇನನ್ನು ಬಳಸಬಹುದು. ಇಲ್ಲಿದೆ ಮಾಹಿತಿ.

ಬಹು ಉಪಯೋಗಿ ತರಕಾರಿಯ ಬೆಲೆ ಈಗ ಕೆಜಿಗೆ ಬರೋಬ್ಬರಿ 100 ರೂಪಾಯಿ ಆಗಿದೆ. ಅಡುಗೆ ಕೋಣೆಯಲ್ಲಿ ಅಗತ್ಯ ತರಕಾರಿಯಾಗಿರುವ ಟೊಮೆಟೋ ಬೆಲೆ ಗಗನಕ್ಕೇರಿರುವುದರಿಂದ ಮಹಿಳೆಯರು ಕಂಗಾಲಾಗಿದ್ದಾರೆ. ಯಾಕೆಂದರೆ ಟೊಮೆಟೋ ಅಡುಗೆಯಲ್ಲಿ ಅಗತ್ಯವಾಗಿ ಬಳಸುವ ಒಂದು ತರಕಾರಿ. ಬಾತ್‌, ರಸಂ, ಸಾಂಬಾರ್‌ ಹೀಗೆ ಎಲ್ಲಾ ಆಹಾರ ಪದಾರ್ಥದಲ್ಲೂ ಟೊಮೆಟೋ ಬಳಸುತ್ತಾರೆ. 

ಭಾರತೀಯರ ಅಡುಗೆ ಮನೆಯಲ್ಲಿ ಟೊಮೆಟೋ ಇಲ್ಲದೇ ಬಹುತೇಕ ಯಾವುದೇ ಆಹಾರ ತಯಾರಾಗುವುದು ಅಪರೂಪ. ಆರೋಗ್ಯಕ್ಕೂ ಟೊಮೆಟೋ ತುಂಬಾ ಒಳ್ಳೆಯದು. ವಿಟಮಿನ್ ಎ, ಸಿ ಬಿ6 ನಿಂದ ಸಮೃದ್ಧವಾಗಿರುವ ಟೊಮೆಟೋನಲ್ಲಿ ಕ್ಯಾಲ್ಸಿಯಮ್, ಪೊಟಾಶಿಯಮ್, ಬಿಟಾ ಕರೋಟೀನ್, ಫೊಲೆಟ್ ಹಾಗೂ ಆರೋಗ್ಯಕರ ಉತ್ಕರ್ಷಣ ನಿರೋಧಕಗಳು ಹೇರಳವಾಗಿದೆ.

Latest Videos


ಆದರೆ ಈಗ ಟೊಮೆಟೋ ಬೆಲೆ ಏರಿಕೆಯಾಗಿರುವುದರಿಂದ ಅನಿವಾರ್ಯವಾಗಿ ಬೇರೆ ಪದಾರ್ಥಗಳನ್ನು ಇದರ ಬದಲು ಬಳಸಿಕೊಳ್ಳಬೇಕಿದೆ. ಅಂಥಾ ಪದಾರ್ಥಗಳು ಯಾವುವು ಅನ್ನೋ ಮಾಹಿತಿ ಇಲ್ಲಿದೆ.

ವಿನೇಗರ್‌ 
ಟೊಮೆಟೊಗಳ ರುಚಿಯನ್ನು ವಿನೇಗರ್‌, ಸಂಪೂರ್ಣವಾಗಿ ಪುನರಾವರ್ತಿಸದಿದ್ದರೂ, ಇದು ಅತ್ಯುತ್ತಮ ಬದಲಿಯಾಗಿ ಕಾರ್ಯನಿರ್ವಹಿಸುತ್ತದೆ. ವಿನೇಗರ್ ಆಹಾರಕ್ಕೆ ಬೇಕಾದ ಹುಳಿಯನ್ನು ಸೇರಿಸುತ್ತದೆ. ಹೀಗಾಗಿ ಟೊಮೆಟೋದ ಬದಲಿಗೆ ನೀವು ವಿನೇಗರ್‌ನ್ನು ಅಡುಗೆ ತಯಾರಿಯ ಸಂದರ್ಭ ಹಿಂಜರಿಕೆಯಿಲ್ಲದೆ ಬಳಸಬಹುದು. 

ಮ್ಯಾಂಗೋ ಪೌಡರ್
ಮ್ಯಾಂಗೋ ಪೌಡರ್ ಅಥವಾ ಅಮಚೂರ್ ಪೌಡರ್‌ ಟೊಮೆಟೋಗೆ ಅತ್ಯುತ್ತಮ ಪರ್ಯಾಯವಾಗಿದೆ. ಇದು ಕರಿಗಳು, ರಾಜ್ಮಾ ಚೋಲೆ ಮತ್ತು ಒಣ ಆಲೂ ಸಬ್ಜಿಗಳಂತಹ ವಿವಿಧ ಭಕ್ಷ್ಯಗಳ ಪರಿಮಳವನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ. ಟೊಮೆಟೊಗಳು ಲಭ್ಯವಿಲ್ಲದಿದ್ದಾಗ, ಮ್ಯಾಂಗೋ ಪೌಡರ್‌ ಊಟಕ್ಕೆ ಅಗತ್ಯವಾದ ಆಮ್ಲೀಯತೆ ಮತ್ತು ಹುಳಿಯನ್ನು ಒದಗಿಸುತ್ತದೆ. 

Image: Getty Images

ಹುಣಸೆಹಣ್ಣು
ಹುಣಸೆಹಣ್ಣು, ಪಾಕವಿಧಾನಗಳಲ್ಲಿ ಟೊಮೆಟೊಗಳಿಗೆ ಅತ್ಯುತ್ತಮ ಪರ್ಯಾಯವಾಗಿದೆ. ಆದರೆ ಇದರ ಬಳಕೆ ಕೆಲವು ಆಹಾರಗಳ ಬಣ್ಣವನ್ನು ಬದಲಾಯಿಸಬಹುದು ಎಂಬುದು ತಿಳಿದಿರಲಿ. ಆದ್ದರಿಂದ ಹುಣಸೇಹಣ್ಣನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬುದರ ಬಗ್ಗೆ ಎಚ್ಚರಿಕೆ ವಹಿಸಬೇಕು.

ಹುಳಿ ಮೊಸರು
ತಾಜಾ ಮೊಸರನ್ನು ತಂದು ಸ್ವಲ್ಪ ಗಂಟೆಗಳ ಹಾಗೆಯೇ ಇಟ್ಟು ಉಂಟಾಗುವ ಹುಳಿ ಮೊಸರನ್ನು ನೀವು ಅಡುಗೆಯಲ್ಲಿ ಬಳಸಿಕೊಳ್ಳಬಹುದು.  ಪಾಕವಿಧಾನಗಳಲ್ಲಿ ಹೆಚ್ಚಿನ ಪ್ರಮಾಣದ ಹುಳಿ ಮೊಸರನ್ನು ಬಳಸುವುದರ ಮೂಲಕ, ನೀವು ಟೊಮೆಟೊಗಳ ಅನುಪಸ್ಥಿತಿಯನ್ನು ಸರಿದೂಗಿಸಬಹುದು 

ಬೆಲ್ ಪೆಪರ್ಸ್
ಟೊಮೆಟೊಗಳಂತೆಯೇ ಕೆಂಪು ಬಣ್ಣದಲ್ಲಿರುವ ಬೆಲ್‌ ಪೆಪರ್ಸ್‌ನ್ನು ಪರ್ಯಾಯವಾಗಿ ಬಳಸಬಹುದು. ಹುರಿದ ಕೆಂಪು ಬೆಲ್ ಪೆಪರ್ಸ್‌ ನೋಡಲು ಟೊಮೆಟೋದಂತೆಯೇ ಕಾಣುತ್ತದೆ ಮತ್ತು ಅಡುಗೆಯ ರುಚಿಯನ್ನು ಸಹ ಹೆಚ್ಚಿಸುತ್ತದೆ. ಅಥವಾ ಬೆಲ್‌ ಪೆಪರ್ ಪೇಸ್ಟ್ ಸಹ ಬಳಸಬಹುದು.

ನೆಲ್ಲಿಕಾಯಿ
ವಿಟಮಿನ್ ಸಿಯನ್ನು ಎಥೇಚ್ಛವಾಗಿ ಹೊಂದಿರುವ ನೆಲ್ಲಿಕಾಯಿಯನ್ನು ಸಹ ಟೊಮೆಟೋಗೆ ಪರ್ಯಾಯವಾಗಿ ಬಳಸಬಹುದು. ಬೇಕಾದರೆ ಇದನ್ನು ಮೊದಲೇ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬಹುದು. ಇದರಿಂದ ಅಡುಗೆಯ ಸಂದರ್ಭದಲ್ಲಿ ಬಳಸಲು ಸುಲಭವಾಗುತ್ತದೆ. ಇದು ಚರ್ಮ, ಕೂದಲಿನ ಆರೋಗ್ಯಕ್ಕೂ ಒಳ್ಳೆಯದು.

click me!