ಬಿರಿಯಾನಿ
ಬಿರಿಯಾನಿ ಅಂದ್ರೆ ಸಾಕು ಎಲ್ಲರ ಬಾಯಲ್ಲಿ ನೀರೂರುತ್ತದೆ. ಚಿಕನ್, ಫಿಶ್, ಮೀನು, ತರಕಾರಿ ಹೀಗೆ ಹಲವು ಬಗೆಯ ಬಿರಿಯಾನಿಗಳು ಬಹುತೇಕ ಫೇವರಿಟ್.ಬಿರಿಯಾನಿಯು ಆರೊಮ್ಯಾಟಿಕ್ ಮಸಾಲೆಗಳು, ಮಾಂಸ, ಮತ್ತು ಬಾಸ್ಮತಿ ಅಕ್ಕಿಯಿಂದ ಮಾಡುವ ಜನಪ್ರಿಯ ಅಕ್ಕಿಯ ಭಕ್ಷ್ಯವಾಗಿದೆ. ಆದ್ರೆ ನಮ್ಮದೇ ನಾಡಿನ ಭಕ್ಷ್ಯ ಎಂದು ಅಂದುಕೊಂಡಿರುವ ಈ ತಿನಿಸು ನಮ್ಮದಲ್ಲ ಅನ್ನೋದು ನಿಮಗೆ ಗೊತ್ತಿದ್ಯಾ? ಬಿರಿಯಾನಿ ಮೂಲತಃ ಪರ್ಷಿಯಾದಲ್ಲಿ (ಇಂದಿನ ಇರಾನ್) ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಮೊಘಲರು ಇದನ್ನು ಮೊತ್ತ ಮೊದಲಿಗೆ ಭಾರತಕ್ಕೆ ಪರಿಚಯಿಸಿದರು.
ಗುಲಾಬ್ ಜಾಮೂನ್
ಅತ್ಯಂತ ಮೃದುವಾದ, ಬಾಯಿಗಿಟ್ಟರೆ ಕರಗುವಂತಹ ರುಚಿಕರವಾದ ಗುಲಾಬ್ ಜಾಮೂನ್ ಯಾರಿಗೆ ಇಷ್ಟ ಇಲ್ಲ ಹೇಳಿ? ಭಾರತದ ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಗುಲಾಬ್ ಜಾಮೂನ್ ಕೂಡಾ ಒಂದು. ಆದರೆ ಇದು ಮೂಲತಃ ಭಾರತದ್ದಲ್ಲ ಅನ್ನೋದು ನಿಮ್ಗೆ ಗೊತ್ತಿದ್ಯಾ? ಇದರ ಮೂಲ 'ಲುಕ್ಮತ್ ಅಲ್-ಖಾದಿ' ಎಂಬ ಪರ್ಷಿಯನ್ ಸಿಹಿತಿಂಡಿಯಾಗಿದೆ.
ಚಹಾ
ಚಾಯ್ ಅಥವಾ ಮಸಾಲೆಯುಕ್ತ ಚಹಾ, ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಭಾರತೀಯ ಹೊತ್ತುಗೊತ್ತಿನ ಪರಿವೆಯಿಲ್ಲದೆ ಚಹಾ ಕುಡಿಯುತ್ತಾರೆ.ಚಹಾವನ್ನು ವಸಾಹತುಶಾಹಿ ಅವಧಿಯಲ್ಲಿ ಬ್ರಿಟಿಷರು ಭಾರತಕ್ಕೆ ಪರಿಚಯಿಸಿದರು. ಭಾರತೀಯರು ಇದನ್ನು ಅಳವಡಿಸಿಕೊಂಡರು. ಏಲಕ್ಕಿ, ದಾಲ್ಚಿನ್ನಿ, ಶುಂಠಿ ಮತ್ತು ಲವಂಗಗಳಂತಹ ಮಸಾಲೆಗಳೊಂದಿಗೆ ಕುದಿಸುವ ಮೂಲಕ ತಮ್ಮದೇ ಆದ ಟ್ವಿಸ್ಟ್‌ನ್ನು ಸೇರಿಸಿದರು ಎಂದು ತಿಳಿದುಬರುತ್ತದೆ.
ಜಿಲೇಬಿ
ಭಾರತದ ಎಲ್ಲಾ ಹಬ್ಬ-ಹರಿದಿನಗಳಲ್ಲಿ, ಸಮಾರಂಭಗಳಲ್ಲಿ ಸ್ವೀಟ್ಸ್‌ಗೆ ಪ್ರಮುಖ ಸ್ಥಾನವಿದೆ. ಇದರಲ್ಲಿ ಜಿಲೇಬಿ ಕೂಡಾ ಸೇರಿದೆ. ಜಿಲೇಬಿಯು ಗೋಧಿ ಹಿಟ್ಟನ್ನು ಸುರುಳಿಯಾಕಾರದಲ್ಲಿ ಹುರಿಯುವ ಮೂಲಕ ತಯಾರಿಸಿದ ಸಿಹಿ ಭಕ್ಷ್ಯವಾಗಿದೆ. ನಂತರ ಇದನ್ನು ಸಕ್ಕರೆ ಪಾಕದಲ್ಲಿ ನೆನೆಸಿ ಸಿದ್ಧಪಡಿಸಲಾಗುತ್ತದೆ. ಇದು ಮಧ್ಯಪ್ರಾಚ್ಯದಲ್ಲಿ ಹುಟ್ಟಿಕೊಂಡಿದೆ ಮತ್ತು ಪರ್ಷಿಯನ್ ಆಕ್ರಮಣಕಾರರಿಂದ ಭಾರತಕ್ಕೆ ತರಲಾಯಿತು ಎಂದು ತಿಳಿದುಬಂದಿದೆ.
ಸಮೋಸಾ
ಸಂಜೆಯ ಟೀ, ಕಾಫಿ ಜೊತೆಗೆ ಬಿಸಿ ಬಿಸಿ ಸಮೋಸಾ ಸವಿಯೋದು ಎಷ್ಟು ಚೆನ್ನಾಗಿರುತ್ತದೆ ಅಲ್ವಾ. ಫ್ರೈ ಅಥವಾ ಸ್ಟೀಮ್ ಮಾಡಿ, ಎರಡೂ ರೀತಿಯಲ್ಲಿ ಸಮೋಸಾಗಳು ದೊರೆಯುತ್ತವೆ. ಇಂಥಾ ಸಮೋಸಾಗಳು ಬಟಾಣಿ, ಆಲೂಗಡ್ಡೆ, ಕ್ಯಾರೆಟ್ ಹೀಗೆ ವಿವಿಧ ತರಕಾರಿಗಳು ಮತ್ತು ಮಸಾಲೆಗಳಿಂದ ತುಂಬಿರುತ್ತವೆ. ಆದ್ರೆ ಎಲ್ಲರೂ ಇಷ್ಟಪಟ್ಟು ತಿನ್ನೋ ಸಮೋಸಾ ಭಾರತದ್ದಲ್ಲ. ಬದಲಿಗೆ ಮಧ್ಯ ಏಷ್ಯಾದ್ದು. ಮಧ್ಯಪ್ರಾಚ್ಯದ ವ್ಯಾಪಾರಿಗಳಿಂದ ಭಾರತೀಯ ಉಪಖಂಡಕ್ಕೆ ಪರಿಚಯಿಸಲಾಯಿತು.
ಕಬಾಬ್
ಕಬಾಬ್ ಅಂದ್ರೆ ಸಾಕು ಊಟ ಸ್ಪಲ್ಪ ಜಾಸ್ತಿನೇ ಹೊಟ್ಟೆಗಿಳಿಯುತ್ತೆ. ಭಾರತದ ಗಲ್ಲಿ ಗಲ್ಲಿಗಳಲ್ಲಿ ರುಚಿಕರವಾದ ಚಿಕನ್, ಮಟನ್ ಕಬಾಬ್‌ಗಳು ಸಿಗುತ್ತವೆ. ಆದರೆ ಈ ಆಹಾರ ಮೂಲತಃ ಭಾರತದ್ದಲ್ಲ. ಮಾಂಸವನ್ನು ಹೀಗೆ ಮ್ಯಾರಿನೇಟ್ ಮಾಡುವ ಮತ್ತು ಗ್ರಿಲ್ ಮಾಡುವ ಪರಿಕಲ್ಪನೆಯನ್ನು ಮಧ್ಯಪ್ರಾಚ್ಯ ಮತ್ತು ಮಧ್ಯ ಏಷ್ಯಾದಲ್ಲಿ ಮೊದಲಿಗೆ ಗುರುತಿಸಲಾಯಿತು.
ಫಲೂಡಾ
ಫಲೂಡಾ ಎಂಬುದು ಸಿಹಿಯಾದ ಹಾಲು, ವರ್ಮಿಸೆಲ್ಲಿ ನೂಡಲ್ಸ್, ತುಳಸಿ ಬೀಜಗಳು, ಗುಲಾಬಿ ಸಿರಪ್ ಮತ್ತು ಕೆಲವೊಮ್ಮೆ ಐಸ್ ಕ್ರೀಂನಿಂದ ಮಾಡಿದ ಸಿಹಿ ಪಾನೀಯವಾಗಿದೆ. ಇದು ಪರ್ಷಿಯಾದಲ್ಲಿ ಹುಟ್ಟಿಕೊಂಡಿದೆ ಮತ್ತು ಮೊಘಲ್ ಯುಗದಲ್ಲಿ ಭಾರತಕ್ಕೆ ತರಲಾಯಿತು ಎಂದು ನಂಬಲಾಗಿದೆ