ಉತ್ತರ ಕರ್ನಾಟಕ ಶೈಲಿಯ ರುಚಿಕರ ಚಟ್ನಿ ಪುಡಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಶೇಂಗಾ, ಕೊಬ್ಬರಿ ಬಳಸಿ ಮಾಡುವ ಈ ಪುಡಿಯನ್ನು ತಿಂಗಳುಗಟ್ಟಲೆ ಸಂಗ್ರಹಿಸಿಡಬಹುದು ಹಾಗೂ ಇದು ದೋಸೆ, ಇಡ್ಲಿ, ಚಪಾತಿ ಮತ್ತು ಬಿಸಿ ಅನ್ನದೊಂದಿಗೆ ಸವಿಯಲು ಅತ್ಯುತ್ತಮವಾಗಿದೆ.
ಬೇಸಿಗೆಯಲ್ಲಿ ಯಾವುದೇ ಅಡುಗೆಯಾದ್ರೂ ಬೇಗನೇ ಹಾಳಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿಯ ಕೆಲವೊಂದು ಚಟ್ನಿ ಪುಡಿಗಳನ್ನು ಮಾಡುತ್ತಾರೆ. ಈ ಚಟ್ನಿಪುಡಿಗಳನ್ನು ತಿಂಗಳುಗಟ್ಟಲೇ ಸ್ಟೋರ್ ಮಾಡಬಹುದು. ಬೇಸಿಗೆಯಲ್ಲಿ ಈ ರೀತಿ ಚಟ್ನಿ ಮಾಡಿಟ್ಟುಕೊಂಡ್ರೆ ದೋಸೆ, ಇಡ್ಲಿ, ಚಪಾತಿ, ಅಕ್ಕಿರೊಟ್ಟಿ, ಬಿಸಿಅನ್ನಕ್ಕೂ ಒಳ್ಳೆಯ ಕಾಂಬಿನೇಷನ್ ಆಗುತ್ತದೆ.
25
ಬೇಕಾಗುವ ಸಾಮಾಗ್ರಿಗಳು
ಶೇಂಗಾ (ಕಡಲೆಬೀಜ): 200 ಗ್ರಾಂ, ಬೆಳ್ಳುಳ್ಳಿ ಎಸಳು: 10 ರಿಂದ 15, ಜೀರಿಗೆ: 2 ಟೀ ಸ್ಪೂನ್, ಅಚ್ಚಖಾರದ ಪುಡಿ: 2 ಟೀ ಸ್ಪೂನ್, ಕರೀಬೇವು: 20 ರಿಂದ 10 ಎಲೆ, ಒಣಕೊಬ್ಬರಿ: 50 ಗ್ರಾಂ, ಹುರಿಗಡಲೆ: 50 ಗ್ರಾಂ, ಕೋತಂಬರಿ ಸೊಪ್ಪು, ಉಪ್ಪು: ರುಚಿಗೆ ತಕ್ಕಷ್ಟು, ಒಣಶುಂಠಿ: 1/2 ಇಂಚು
35
ಚಟ್ನಿ ಮಾಡುವ ವಿಧಾನ
ಮೊದಲಿಗೆ ಶೇಂಗಾವನ್ನು ಚೆನ್ನಾಗಿ ಹುರಿದುಕೊಂಡು ಸಿಪ್ಪೆ ಬಿಡಿಸಿಕೊಂಡು ಎತ್ತಿಟ್ಟುಕೊಳ್ಳಿ. ಈಗ ಒಲೆ ಆನ್ ಮಾಡ್ಕೊಂಡು ಕಡಿಮೆ ಉರಿಯಲ್ಲಿ ಸಣ್ಣದಾಗಿ ಕತ್ತರಿಸಿಕೊಂಡಿರುವ ಕೊಬ್ಬರಿಯನ್ನು ಹುರಿದುಕೊಳ್ಳಿ. ನಂತರ ಇದೇ ಬಾಣಲೆಯಲ್ಲಿ ಕರಿಬೇವು ಸಹ ಗರಿಗರಿಯಾಗುವಂತೆ ಹುರಿದುಕೊಳ್ಳಿ. ಇದಾದ ಬಳಿಕ ಒಣಶುಂಠಿಯನ್ನು ತರಿತರಿಯಾಗಿ ಜಜ್ಜಿಟ್ಟುಕೊಳ್ಳಿ.
ನಂತರ ಮಿಕ್ಸಿ ಜಾರ್‌ಗೆ ಹುರಿದಿಟ್ಟುಕೊಂಡಿರುವ ಶೇಂಗಾ, ಬೆಳ್ಳುಳ್ಳಿ, ಜೀರಿಗೆ, ಕರೀಬೇವು, ಒಣಕೊಬ್ಬರಿ, ಹುರಿಗಡಲೆ, ಒಣಶುಂಠಿ ಸೇರಿಸಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಕೋತಂಬರಿ ಸೊಪ್ಪು, ಅಚ್ಚಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಂಡ್ರೆ ಉತ್ತರ ಕರ್ನಾಟಕ ಶೈಲಿಯ ಮಿಕ್ಸ್ ಚಟ್ನಿ ಸವಿಯಲು ಸಿದ್ಧವಾಗುತ್ತದೆ.
ಗಮನಿಸಿ: ಚಟ್ನಿ ಪುಡಿ ರುಬ್ಬಿಕೊಳ್ಳುವಾಗ ಯಾವುದೇ ಕಾರಣಕ್ಕೂ ನೀರು ತಾಗದಂತೆ ನೋಡಿಕೊಳ್ಳಿ. ಇನ್ನು ಕೋತಂಬರಿ ಸೊಪ್ಪಿನಲ್ಲಿನ ನೀರಿನಂಶ ಕಡಿಮೆಯಾದ್ಮೇಲೆಯೇ ಚಟ್ನಿಗೆ ಸೇರಿಸಿಕೊಳ್ಳಬೇಕು. ಬಿಸಿಅನ್ನಕ್ಕೆ ಚಟ್ನಿಪುಡಿ ಮತ್ತು ಅರ್ಧ ಟೀ ಸ್ಪೂನ್ ಎಣ್ಣೆ ಅಥವಾ ತುಪ್ಪ ಹಾಕಿಕೊಂಡ್ರೆ ತಿಂದ್ರೆ ಸ್ವರ್ಗಕ್ಕೆ ಮೂರೇ ಗೇಣು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.