ಯಾರು ಈ ದಿಯಾ ಕುಮಾರಿ ರಾಜಸ್ಥಾನದ ನೂತನ ಡಿಸಿಎಂ, ಜೈಪುರದ ಮಹಾರಾಣಿ ಬಹುಕೋಟಿ ಆಸ್ತಿ ಒಡತಿ

First Published | Dec 14, 2023, 4:49 PM IST

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಸೋಲಿಸಿ ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಅಲ್ಲಿ ನೂತನ ಯುವ ನಾಯಕರಿಗೆ ಮಣೆ ಹಾಕಿದೆ. ಹಾಗಾಗಿ ಅಲ್ಲಿ ದಿಯಾಕುಮಾರಿ ರಾಜ್ಯದ ನೂತನ ಡಿಸಿಎಂ ಆಗಿ ನೇಮಕವಾಗಿದ್ದು, ಜೈಪುರದ ರಾಜಮನೆತದವರಾಗಿರುವ ದಿಯಾಕುಮಾರಿ ಬಗ್ಗೆ ನಿಮಗೆ ಗೊತ್ತಿರದ ಕೆಲ ಡಿಟೇಲ್ಸ್ ಇಲ್ಲಿದೆ. 
 

ಜೈಪುರ ರಾಜಮನೆತನದವರಾಗಿರುವ ದಿಯಾ ಕೇವಲ ರಾಜಮನೆತನದ ಕುಟುಂಬದಲ್ಲಿ ಜನಿಸಿದ ಕಾರಣಕ್ಕೆ ಹೆಸರಾಗದೇ  ರಾಜಕೀಯ ಜಗತ್ತಿನಲ್ಲಿ ತಮ್ಮದೇ ಚಾಪು ಮೂಡಿಸಿದವರು. ಅವರು ಬರೀ ರಾಜಕಾರಣಿ ಮಾತ್ರವಲ್ಲ, ಓರ್ವ ಸಮಾಜವಾದಿ ನಾಯಕಿ ಕೊಡುಗೈ ದಾನಿ ಕೂಡ.   ಜೈಪುರದ ಕೊನೆಯ ಆಡಳಿತ ಮಹಾರಾಜರಾಗಿದ್ದ ಮಹಾರಾಜ ಮಾನ್‌ಸಿಂಗ್  II ಅವರ ಕುಟುಂಬದ ಕುಡಿ.


ಮಹಾರಾಣಿ ದಿಯಾ ಕುಮಾರಿ ಅವರು  2013ರಲ್ಲಿ ಬಿಜೆಪಿ ಸೇರಿದ್ದು, ಸವೈ ಮಾದೋಪುರ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ 2018ರಲ್ಲಿ ಅವರು ಸ್ಪರ್ಧೆ ಮಾಡಿರಲಿಲ್ಲ, 2019ರಲ್ಲಿ ಅವರು ರಾಜಸಮಂದ್ ಕ್ಷೇತ್ರದಿಂದ ಮತ್ತೆ ಲೋಕಸಭೆಗೆ ಸ್ಪರ್ಧಿಸಿ ಸಂಸದೆಯಾಗಿದ್ದರು. ಈ ಬಾರಿ ಮತ್ತೆ ವಿಧಾಸಭೆಗೆ ಸ್ಪರ್ಧಿಸಿ ಡಿಸಿಎಂ ಆಗಿದ್ದಾರೆ. 

Latest Videos


ಇದರ ಜೊತೆ ದಿಯಾಕುಮಾರಿ ಅವರು ರಾಜಸ್ಥಾನ ಸರ್ಕಾರದ ಯೋಜನೆಯಾದ ಹೆಣ್ಣು ಮಕ್ಕಳ ಉಳಿಸಿ ಯೋಜನೆಯ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಪ್ರಸ್ತುತ ರಾಜಸ್ಥಾನ ಸಿಂಎ ಭಜನ್ ಲಾಲ್ ಶರ್ಮಾ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ ದಿಯಾ.

ರಾಜಸ್ಥಾನದಲ್ಲಿ ಹಲವು ಆಸ್ತಿಗಳನ್ನು ದಿಯಾ ಹೊಂದಿದ್ದು, ಹಲವು ಸಂಸ್ಥೆಗಳು, ಉದ್ಯಮ, ಶಾಲೆ ಟ್ರಸ್ಟ್‌ಗನ್ನು ನಿರ್ವಹಿಸುತ್ತಿದ್ದಾರೆ. ಜೈಪುರ ನಗರದ ಸಿಟಿ ಪ್ಯಾಲೇಸ್, ಜೈಗರ್ ಫೋರ್ಟ್, ಮಹರಾಜ್ ಸಾವೈ ಮಾನ್ ಸಿಂಗ್ II ಮ್ಯೂಸಿಯಂ ಟ್ರಸ್ಟ್,  ಪ್ಯಾಲೇಸ್ ಸ್ಕೂಲ್, ಮಹರಾಜ ಸಾವೈ ಭವಾನಿ ಸಿಂಗ್ ಶಾಲೆ, ರಾಜ್‌ಮಹಲ್ ಪ್ಯಾಲೇಸ್ ಸೇರಿದಂತೆ ಹಲವು ಆಸ್ತಿಯನ್ನು ಹೊಂದಿದ್ದು ಕೋಟ್ಯಾಧಿಪತಿ ಎನಿಸಿದ್ದಾರೆ ಈ ರಾಜಕುಮಾರಿ.

ಇದರ ಜೊತೆಗೆ ಹಲವು ಐಷಾರಾಮಿ ವಾಹನಗಳನ್ನು ದಿಯಾ ಕುಮಾರಿ ಅವರು ಹೊಂದಿದ್ದಾರೆ. 1937 ಬೆಂಟ್ಲಿ ಕಾರು ಅವರ ಬಳಿ ಇದೆ ಕೆಲ ವರದಿಗಳ ಪ್ರಕಾರ ಅವರ ಅಂದಾಜು ಆಸ್ತಿ ಮೌಲ್ಯ 2.8 ಮಿಲಿಯನ್ ಯುಸ್ ಡಾಲರ್ 

ಇನ್ನು ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಬ್ರಿಗೇಡಿಯರ್ ಸವಾಯಿ ಭವಾನಿ ಸಿಂಗ್ ಮತ್ತು ಮಹಾರಾಣಿ ಪದ್ಮಿನಿ ದೇವಿ ಪುತ್ರಿಯಾಗಿ ಜನವರಿ 30, 1971  ಜನಿಸಿದ  ದಿಯಾ ಕುಮಾರಿ ಅವರು,  ತಂದೆ ಸೇನೆಯಲ್ಲಿ ಅಧಿಕಾರಿಯಾಗಿದ್ದರಿಂದ ಭಾರತದ ವಿವಿಧೆಡೆ  ತಮ್ಮ ಶಿಕ್ಷಣವನ್ನು ಪಡೆದಿದ್ದಾರೆ. ಸೇನಾಧಿಕಾರಿಯೊಬ್ಬರ ಪುತ್ರಿಯಾದ ಕಾರಣ ಅವರ ಬಾಲ್ಯ ಬಹಳ ಶಿಸ್ತಿನಿಂದ ಕೂಡಿತ್ತು.

ಅಪ್ಪನ ಸೇನಾ ವರ್ಗಾವಣೆಯ ಕಾರಣಕ್ಕೆ ಅವರು ಬರೀ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ದೇಶದ ವಿವಿಧೆಡೆ ಪಡೆದಿದ್ದಾರೆ. ದೆಹಲಿಯ ಮಾಡರ್ನ್ ಸ್ಕೂಲ್, ಮುಂಬೈನ ಜಿಡಿ ಸೋಮಾನಿ ಮೆಮೋರಿಯಲ್ ಸ್ಕೂಲ್ ಮತ್ತು ಜೈಪುರದ ಮಹಾರಾಣಿ ಗಾಯತ್ರಿ ದೇವಿ ಗರ್ಲ್ಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಓದಿದ್ದು,  ನಂತರ ಅವರು ಜೈಪುರದ ಮಹಾರಾಣಿ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಇದಾದ ನಂತರ ಅವರು ಲಂಡನ್‌ನ ಪಾರ್ಸನ್ಸ್ ಆರ್ಟ್ ಅಂಡ್ ಡಿಸೈನ್ ಸ್ಕೂಲ್‌ನಿಂದ ಫೈನ್ ಆರ್ಟ್ಸ್ ಡೆಕೊರೇಟಿವ್ ಪೇಂಟಿಂಗ್‌ನಲ್ಲಿ ಡಿಪ್ಲೊಮಾ ಮುಗಿಸಿದ್ದಾರೆ. 

ಶಿಕ್ಷಣದ ನಂತರ ರಾಜಮನೆತನದವರು ರಾಜಮನೆತನದವರನ್ನೇ ಮದುವೆಯಾಗಬೇಕೆಂಬ ನಿಯಮವನ್ನು ಮೀರಿ ದೀಯಾ, ಸಾಮಾನ್ಯ ವ್ಯಕ್ತಿಯೊಬ್ಬನನ್ನು ಮದುವೆಯಾಗುತ್ತಾರೆ. ವೃತ್ತಿಯಲ್ಲಿ ಸಿಎ ಆಗಿದ್ದ ನರೇಂದ್ರ ಸಿಂಗ್ ರಾವತ್ ಅವರನ್ನು ಪ್ರೀತಿಸಿ  ಮದುವೆಯಾಗುತ್ತಾರೆ. ದೀಯಾ ರಾಜಮನೆತನದಲ್ಲದವರ ಜೊತೆ ಮದುವೆಯಾದ ಕಾರಣಕ್ಕೆ ಈ ಮದುವೆ ಆ ಕಾಲದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಆದರೆ ತಮ್ಮ 21 ವರ್ಷಗಳ ದಾಂಪತ್ಯದ ನಂತರ ದುರಾದೃಷ್ಟವಶಾತ್ ಈ ಜೋಡಿ ವಿಚ್ಛೇದನ ಪಡೆದಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. 

ತಮಗೆ ಗಂಡು ಮಕ್ಕಳಿಲ್ಲದ ಕಾರಣ ದಿಯಾ ಅವರ ಹಿರಿಯ ಪುತ್ರ ಪದ್ಮನಾಭ ಸಿಂಗ್ ಅವರನ್ನೇ ದಿಯಾ ಅವರ ತಂದೆ ಭವಾನಿ ಸಿಂಗ್ ಅವರು ತನ್ನ ಕುಟುಂಬದ ಉತ್ತರಾಧಿಕಾರಿಯಾಗಿ ದತ್ತು ತೆಗೆದುಕೊಂಡಿದ್ದರು. ಹೀಗಾಗಿ ಭವಾನಿ ಸಿಂಗ್ ಅವರ ನಿಧನದ ನಂತರ ತಮ್ಮ 13ನೇ ವಯಸ್ಸಿನಲ್ಲಿ ದಿಯಾ ಅವರ ಪುತ್ರ ಪದ್ಮನಾಭ್ ಸಿಂಗ್ ಅವರು ಜೈಪುರದ ರಾಜವಂಶದ ಉತ್ತರಾಧಿಕಾರಿಯಾಗಿದ್ದಾರೆ.

ರಾಷ್ಟ್ರಮಟ್ಟದ ಪೊಲೋ ಪ್ಲೇಯರ್ ಆಗಿರುವ ಪದ್ಮನಾಭ್  ಅವರು ಫ್ಯಾಷನ್ ಲೋಕದಲ್ಲಿ ಉತ್ತಮ ಹೆಸರು ಹೊಂದಿದ್ದು, ಏರ್‌ಬಿಎನ್‌ಬಿ  ಸಂಸ್ಥೆಯಲ್ಲಿ ಖಾಸಗಿ ಜಾಗ ಪಡೆದ ಮೊದಲ ರಾಜಕುಮಾರ ಆಗಿದ್ದಾರೆ. ತನ್ನ ತಂದೆ ಭವಾನಿ ಸಿಂಗ್ ನಿಧನದ ನಂತರ ದಿಯಾ ಅವರೇ ರಾಜಕುಟುಂಬದ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ. 

ಪ್ರಿನ್ಸಸ್‌ ದಿಯಾಕುಮಾರಿ ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿರುವ  ರಾಕುಮಾರಿ ದಿಯಾ, ಕೊಡುಗೈ ದಾನಿಯೂ ಹೌದು,  ಈ ಪಿಡಿಕೆಎಫ್ ಸಂಸ್ಥೆಯ ಮೂಲಕ ಹಿಂದುಳಿದ ಸಮುದಾಯಗಳ ನೂರಾರು ಮಹಿಳೆಯರಿಗೆ ಆದಾಯ ಗಳಿಕೆಗೆ ನೆರವಾಗುವಂತಹ ಉದ್ಯಮಶೀಲ ತರಬೇತಿಯನ್ನು ನೀಡಲಾಗುತ್ತಿದೆ.
ದಿಯಾ ಕುಮಾರಿ ಪುತ್ರಿ ಜೈಪುರದ ರಾಜಕುಮಾರಿ ಗೌರವಿ ಕುಮಾರಿ  ಅವರು ಈ ಫೌಂಡೇಶನ್‌ನ ಕಾರ್ಯದರ್ಶಿಯಾಗಿದ್ದು, ನ್ಯೂಯಾರ್ಕ್‌ ವಿವಿಯಲ್ಲಿ ಮಾಧ್ಯಮ ಹಾಗೂ ಸಂವಹನ ವಿಚಾರದಲ್ಲಿ ಪದವಿ ಪಡೆದಿದ್ದಾರೆ. 

ದಿಯಾಕುಮಾರಿ ಅವರ ಕಿರಿಯ ಪುತ್ರ ರಾಜಕುಮಾರ ಲಕ್ಷ್‌ರಾಜ್ ಪ್ರಕಾಶ್ ಸಿಂಗ್ ಅವರನ್ನು ಅವರು ಕೇವಲ 9 ವರ್ಷದವರಿರುವಾಗ  2013 ರಲ್ಲಿ ಸಿರ್ಮೌರ್‌ನ ಪಟ್ಟದ ಮಹಾರಾಜರಾಗಿ ಅಧಿಕಾರ ಸ್ವೀಕರಿಸಿದ್ದು, ನಹಾನ್ ಅರಮನೆಯಲ್ಲಿ ಅಜ್ಜಿ ರಾಜಮತೆ ಪದ್ಮಿನಿ ದೇವಿ ಸಮ್ಮುಖದಲ್ಲಿ ಈ ಪಟ್ಟಾಭಿಷೇಕ ನಡೆದಿತ್ತು,.

click me!