ನ್ಯೂಜಿಲೆಂಡ್‌ನ 27 ವರ್ಷದ ಮಾಜಿ ಪೊಲೀಸ್ ಅಧಿಕಾರಿ ನವಜೋತ್ ಕೌರ್ ಪ್ರತಿಷ್ಠಿತ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾಳೆ.
ನ್ಯೂಜಿಲೆಂಡ್‌ನಲ್ಲಿ ಹುಟ್ಟಿ ಬೆಳೆದ ನವಜೋತ್ ಬೇರುಗಳು ಪಂಜಾಬ್‌ನ ಜಲಂಧರ್‌ನಲ್ಲಿವೆ, ಏಕೆಂದರೆ ಆಕೆಯ ಪೋಷಕರು ಭಾರತ ಮೂಲದವರು.
ಆಕೆ ಭಾರತದಲ್ಲಿ ನ್ಯೂಜಿಲೆಂಡ್ ಪ್ರತಿನಿಧಿಸಿ ಸ್ಪರ್ಧಿಸುತ್ತಿದ್ದಾಳೆ. ಭಾರತದ ಮಾಜಿ ವಿಶ್ವ ಸುಂದರಿಯರಾದ ನಟಿ ಸುಶ್ಮಿತಾ ಸೇನ್, ಐಶ್ವರ್ಯಾ ರೈ ಮತ್ತು ಪ್ರಿಯಾಂಕಾ ಚೋಪ್ರಾರ ಅಭಿಮಾನಿಯಾಗಿರುವ ಕೌರ್, ಇವರೇ ನನಗೆ ಸ್ಪೂರ್ತಿ ಎಂದಿದ್ದಾಳೆ.
ದಕ್ಷಿಣ ಆಕ್ಲೆಂಡ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಆಕೆ ಹೊಸ ಹಾರಿಜಾನ್‌ಗಳನ್ನು ಅನ್ವೇಷಿಸುವ ಬಯಕೆಯಿಂದಾಗಿ ಸೌಂದರ್ಯ ಸ್ಪರ್ಧೆಗಳ ಜಗತ್ತಿಗೆ ಕಾಲಿಟ್ಟಳು. ಕಡೆಗೆ ಅದರಲ್ಲಿ ಯಶಸ್ಸನ್ನು ಕಂಡಳು.
ತಾಯಿಯೊಂದಿಗೆ ಬೆಳೆದ ನವಜೋತ್ ತನ್ನ ಕುಟುಂಬ ತನ್ನಲ್ಲಿ ತುಂಬಿದ ಮೌಲ್ಯಗಳನ್ನು ಸಾಕಾರಗೊಳಿಸಲು ಮತ್ತು ಜಗತ್ತಿಗೆ ಅರ್ಥಪೂರ್ಣ ಕೊಡುಗೆ ನೀಡಲು ಆಶಿಸಿರುವುದಾಗಿ ಹೇಳುತ್ತಾಳೆ.
ಮಾರ್ಚ್‌ನಲ್ಲಿ ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆಗಾಗಿ ದೆಹಲಿ ಮತ್ತು ಮುಂಬೈನಲ್ಲಿ ಸುಮಾರು 90 ಇತರ ಸ್ಪರ್ಧಿಗಳೊಂದಿಗೆ ಸೇರಿಕೊಂಡಿರುವ ಆಕೆ ರಾಜ್‌ಘಾಟ್‌ಗೆ ಭೇಟಿ ನೀಡಿದ್ದಾಳೆ.
ಇನ್ನು ತನ್ನ ಪೋಷಕರ ಮೂಲ ಸ್ಥಳವಾದ ಜಲಂಧರ್‌ಗೆ ಭೇಟಿ ನೀಡಲು ಬಯಸಿರುವ ಆಕೆ ಈ ಭಾರತ ಪ್ರವಾಸದಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ ಹಾಗೂ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಲು ಇಚ್ಚಿಸಿದ್ದಾಳೆ.
ಹಿಂದಿ ಮತ್ತು ಪಂಜಾಬಿ ಭಾಷೆ ಮಾತನಾಡಬಲ್ಲ ಕೌರ್, ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ಸ್ಪರ್ಧೆಗಾಗಿ ಬರುವ ಸುಂದರಿಯರಿಗೆ ಪಾನಿಪುರಿಯನ್ನು ತಿನ್ನಿಸಬೇಕೆಂದುಕೊಂಡಿದ್ದಾಳಂತೆ.
ಬಹು ಸಂಸ್ಕೃತಿಗೆ ತೆರೆದುಕೊಳ್ಳುವ ಹಾಗೂ ಕಾಳಜಿ ತೋರುವ ತನ್ನ ವ್ಯಕ್ತಿತ್ವವೇ 2024ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವರವಾಗಬಹುದೆಂಬುದು ಕೌರ್ ನಂಬಿಕೆ.