ಬೆಂಗಳೂರಿನಲ್ಲೂ ನಡೆದಿತ್ತು ಮಿಸ್‌ ವರ್ಲ್ಡ್‌ ಸ್ಪರ್ಧೆ! ಕಿರೀಟ ಗೆದ್ದ ಭಾರತದ ಸುಂದರಿಯರು ಈಗ ಹೇಗಿದ್ದಾರೆ ನೋಡಿ

First Published | Feb 20, 2024, 4:34 PM IST

71ನೇ ಆವೃತ್ತಿಯ 2023ರನೇ ಸಾಲಿನ ಮಿಸ್‌ ವರ್ಲ್ಡ್‌ ಸ್ಪರ್ಧೆ ಮಂಗಳವಾರ ದೆಹಲಿಯಲ್ಲಿ ಆರಂಭವಾಗಲಿದೆ. ಈ ಸ್ಪರ್ಧೆ ಎರಡು ದಶಕಗಳ ಬಳಿಕ ಭಾರತದಲ್ಲಿ ನಡೆಯುತ್ತಿದ್ದು, ದೆಹಲಿಯ ಅಶೋಕ ಹೋಟೆಲ್‌ ವಿಜೃಂಭಣೆಯ ಸ್ವಾಗತಕ್ಕೆ ಸಿದ್ಧವಾಗಿದೆ. ಭಾರತದಲ್ಲಿ 1996ರಲ್ಲಿ ಕಡೆಯ ಬಾರಿ ಮಿಸ್‌ ವರ್ಲ್ಡ್‌ ಸ್ಪರ್ಧೆ ನಡೆದಿತ್ತು. ವಿಶೇಷವೆಂದರೆ ಅದು ಬೆಂಗಳೂರಿನಲ್ಲಿ ನಡೆದಿತ್ತು. 

ಡಾ. ರೀಟಾ ಫರಿಯಾ ಪೊವೆಲ್ ಭಾರತೀಯ ವೈದ್ಯೆ, ಮಾಜಿ ಮಾಡೆಲ್ ಮತ್ತು ವಿಶ್ವ ಸುಂದರಿ 1966 ಮಿಸ್‌ ವಲ್ಡ್‌ ಸ್ಪರ್ಧೆಯ ವಿಜೇತೆ.  ಭಾರತಕ್ಕೆ ಮೊದಲ ವಿಶ್ವ ಸುಂದರಿ ಕಿರೀಟ ತಂದು ಕೊಟ್ಟಾಕೆ ಮಾತ್ರವಲ್ಲ  1966 ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದ ಮೊದಲ ಏಷ್ಯನ್ ಆಗಿ ಇತಿಹಾಸ  ನಿರ್ಮಿಸಿದ್ದರು. ಆಗ ಆಕೆ 23 ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು. ಸಿನೆಮಾ ಆಫರ್ ಗಳು ಬಂದರೂ ಅದನ್ನೆಲ್ಲ ತಿರಸ್ಕರಿಸಿ ವೈದ್ಯರಾಗಿ ಸೇವೆ ಸಲ್ಲಿಸಿದರು. ಈಗ ಅವರಿಗೆ 80 ವರ್ಷವಾಗಿದೆ.

ದಕ್ಷಿಣ ಆಫ್ರಿಕಾದ ಸನ್ ಸಿಟಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಐಶ್ವರ್ಯಾ ರೈ 1994 ರ ವಿಶ್ವ ಸುಂದರಿ ಕಿರೀಟ ಪಡೆದುಕೊಂಡರು. ಅವರು ತನ್ನ ಸೌಂದರ್ಯ ಮತ್ತು ಸಮಚಿತ್ತದಿಂದ ತೀರ್ಪುಗಾರರನ್ನು ಮೆಚ್ಚಿಸಿದರು. ವಿಶ್ವ ಸುಂದರಿ ಗುಣಗಳ ಕುರಿತಾದ ಪ್ರಶ್ನೆಗೆ ತಕ್ಕನಾದ ಉತ್ತರ ನೀಡಿದರು. ಅವರಿಗೆ ಆಗ 21 ವರ್ಷ ವಯಸ್ಸಾಗಿತ್ತು. ವಾಸ್ತುಶಿಲ್ಪದ ಬಗ್ಗೆ ಪದವಿ ಮಾಡುತ್ತಿದ್ದರು. ಈಗ 50 ವರ್ಷ. ಈಕೆ ಕನ್ನಡತಿ ಅನ್ನುವುದು ಹೆಮ್ಮೆ. 

Tap to resize

 ಹೈದರಾಬಾದ್ ಮೂಲದ ಡಯಾನಾ ಹೇಡನ್ ಒಬ್ಬ ಭಾರತೀಯ ನಟಿ,  ನಿರೂಪಕಿ, ರೂಪದರ್ಶಿ ಮತ್ತು ವಿಶ್ವ ಸುಂದರಿ 1997 ವಿಜೇತೆ. ಅವರು ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ಮೂರನೇ ಭಾರತೀಯ ಮಹಿಳೆ. ಪ್ರಸ್ತುತ ಆಕೆಗೆ 51 ವರ್ಷ ವಯಸ್ಸು. ವಿಶ್ವ ಸುಂದರಿ ಗೆದ್ದಾಗ 24 ವರ್ಷವಾಗಿತ್ತು. 

ಯುಕ್ತಾ ಇಂದರ್‌ಲಾಲ್ ಮುಖಿ 1999 ವಿಶ್ವಸುಂದರಿ ಸ್ಪರ್ಧೆಯ ವಿಜೇತರು. ಈ ಕಿರೀಟ ಗೆದ್ದ ನಾಲ್ಕನೇ ಭಾರತೀಯ ಮಹಿಳೆ ಮತ್ತು   1999 ರಲ್ಲಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಕೂಡ ಗೆದ್ದಿದ್ದರು.  ಮಾಜಿ ಮಾಡೆಲ್ ಮತ್ತು ನಟಿ, ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಮಹಾರಾಷ್ಟ್ರದ ಮೂಲದ ಈಕೆ ಬೆಂಗಳೂರಿನಲ್ಲಿ ಹುಟ್ಟಿದ್ದರು. ಕಿರೀಟ ಗೆದ್ದಾಗ ಆಕೆಗೆ 20 ವರ್ಷ ವಯಸ್ಸಾಗಿತ್ತು. ಈಗ ಆಕೆಗೆ 46 ವರ್ಷವಾಗಿದೆ.

ಹಾಲಿವುಡ್‌ ನಲ್ಲಿ ಹೆಸರು ಮಾಡಿರುವ ಭಾರತೀಯ ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ವಿಶ್ವ ಸುಂದರಿ ಗೆದ್ದ ಐದನೇ ಭಾರತೀಯ ಸ್ಪರ್ಧಿಯಾಗಿದ್ದಾರೆ.  ಪಿಗ್ಗಿ ಕಿರೀಟ ಗೆದ್ದಾಗ ಅವರಿಗೆ 18 ವರ್ಷವಾಗಿತ್ತು. ಜಾರ್ಖಂಡ್‌ ಮೂಲದ ನಟಿ ಅತೀ ಹೆಚ್ಚು ಸಂಭಾವನೆ ಪಡೆಯುವ ತಾರೆ ಎನಿಸಿಕೊಂಡಿದ್ದಾರೆ. ಲಂಡನ್‌ನಲ್ಲಿ ಈ ಸ್ಪರ್ಧೆ ನಡೆದಿತ್ತು. 

ನಟಿ ಪ್ರಿಯಾಂಕ ಚೋಪ್ರಾ ವಿಶ್ವ ಸುಂದರಿ ಗೆದ್ದ ಬರೋಬ್ಬರಿ 17 ವರ್ಷಗಳ ನಂತರ ಅಂದರೆ 2017ರಲ್ಲಿ ಹರ್ಯಾಣ ಮೂಲದ ಮಾನುಷಿ ಚಿಲ್ಲರ್‌ ಮಿಸ್‌ ವಲ್ಡ್ ಗೆದ್ದ 6 ನೇ ಭಾರತೀಯ ಎನಿಸಿಕೊಂಡಿದ್ದಾರೆ. ಮೂಲತಃ ಈಕೆ ವೈದ್ಯೆಯಾಗಿದ್ದು, ಸದ್ಯ ನಟಿ ಮತ್ತು ಮಾಡೆಲ್‌ ಆಗಿದ್ದಾರೆ. ಇತ್ತೀಚೆಗೆ ಬಾಲಿವುಡ್‌ ಗೆ ಕಾಲಿಟ್ಟಿದ್ದಾರೆ. ಈ ಸೌಂದರ್ಯ ಸ್ಪರ್ಧೆ ಗೆದ್ದಾಗ ಮಾನುಷಿಗೆ 20 ವರ್ಷವಾಗಿತ್ತು. ಈಗ 26 ವರ್ಷ. 

ಇಂದು ಸಂಜೆ ಈ ಸ್ಪರ್ಧೆಗೆ 120 ದೇಶಗಳ ಬೆಡಗಿಯರು ಆಗಮಿಸಿದ್ದು, ದೆಹಲಿ ಹಾಗೂ ಮುಂಬೈನಲ್ಲಿ ಸ್ಪರ್ಧೆಗಳು ನಡೆಯಲಿದೆ. 19 ದಿನಗಳಲ್ಲಿ ವೇಷಭೂಷಣ, ಕ್ರೀಡೆ ಸೇರಿ ಹಲವು ವಿಭಾಗಗಳು ಇರಲಿದೆ. 120 ದೇಶಗಳಿಂದ ಸ್ಪರ್ಧಿಗಳು ಅಂತಿಮ ಕಿರೀಟಕ್ಕೆ ಹಣಾಹಣೆ ನಡೆಸಲಿದ್ದಾರೆ. missworld.com ನಲ್ಲಿ ಲೈವ್‌ ವೀಕ್ಷಿಸಬಹುದಾಗಿದೆ. 1996 ರಲ್ಲಿ 46ನೇ ಆವೃತ್ತಿಯ ಮಿಸ್‌ ವಲ್ಡ್ ಸ್ಪರ್ಧೆ ನಡೆದಿತ್ತು.  ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜನೆಯಾಗಿತ್ತು. ಆಗ ಭಾರೀ ಟೀಕೆ ಕೂಡ ವ್ಯಕ್ತವಾಗಿತ್ತು. ಈ ಸ್ಪರ್ಧೆ ಭಾರತದ ಸಂಸ್ಕೃತಿಗೆ  ವಿರುದ್ಧ ಮತ್ತು ಸೌಂದರ್ಯದ ಪಾಶ್ಚಿಮಾತ್ಯೀಕರಿಸಿದ ಕಲ್ಪನೆಗಳ ಹೇರಿಕೆ ಎಂದು ವಿರೋಧ ವ್ಯಕ್ತವಾಗಿತ್ತು.

ಈ ಬಾರಿಯ ಮತ್ತೊಂದು ವಿಶೇಷವೇನೆಂದರೆ, ನಮ್ಮ ಕರಾವಳಿಯ ಬೆಡಗಿ ಉಡುಪಿಯ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಫೆ.20ರಿಂದ ನಡೆಯುವ ಈ ಸ್ಪರ್ಧೆ ಮಾ.9ರವರೆಗೆ ನಡೆಯಲಿದೆ. ಮುಂಬೈನ ಜಿಯೋ ವರ್ಲ್ಡ್‌ ಸೆಂಟರ್‌ನಲ್ಲಿ ಸ್ಪರ್ಧೆಗೆ ತೆರೆಬೀಳಲಿದೆ. ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಆಯೋಜಿಸಿದೆ.

Latest Videos

click me!