ಮುಂಬೈನಲ್ಲಿ ನಡೆದ 71 ನೇ ವಿಶ್ವ ಸುಂದರಿ ಅಂತಿಮ ಸ್ಪರ್ಧೆಯಲ್ಲಿ ಭಾರತದ ಸಿನಿ ಶೆಟ್ಟಿ ತಮ್ಮ ಅದ್ಬುತ ಪ್ರದರ್ಶನಗಳೊಂದಿಗೆ ಅಂತಿಮ 8ನ್ನು ಪ್ರವೇಶಿಸಿದ್ದರು. ಪ್ರಶ್ನೋತ್ತರ ಸುತ್ತಿನಲ್ಲಿ 22 ವರ್ಷದ ಸಿನಿಯ ಉತ್ತರ ಎಲ್ಲರ ಮನಸ್ಸನ್ನು ಗೆದ್ದಿತು.
ಪ್ರಶ್ನೋತ್ತರ ಸುತ್ತಿನಲ್ಲಿ ಕರಣ್ ಜೋಹರ್ ಅವರು ಸಿನಿ ಶೆಟ್ಟಿ ಅವರನ್ನು, 'ಸಾಮಾಜಿಕ ಮಾಧ್ಯಮದ ಮೂಲಕ ಮಹಿಳೆಯರು ಸಬಲರಾಗುವ ಮಾರ್ಗವನ್ನು ನೀವು ಸೂಚಿಸಬಹುದೇ?' ಎಂದು ಕೇಳಿದರು.
ಇದಕ್ಕೆ ಸಿನಿ ಶೆಟ್ಟಿ, ಉತ್ತರಿಸಿ, 'ಇಂದು ನಾವು ಎಂಥ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆಂದರೆ, ಸಾಮಾಜಿಕ ಮಾಧ್ಯಮವು ಪ್ರಭಾವಿಯಾಗಿದ್ದು, ಸಂಭಾಷಣೆ ಮತ್ತು ಅರಿವಿನಲ್ಲಿ ಬದಲಾವಣೆ ತರುವ ಶಕ್ತಿ ಹೊಂದಿದೆ. '
ಜನರೇಷನ್ Z ನಲ್ಲಿ ವಾಸಿಸುವ ಮತ್ತು ಅದರ ಭಾಗವಾಗಿರುವ ಜಗತ್ತನ್ನು ಬದಲಾಯಿಸುವ ಶಕ್ತಿಯನ್ನು ಸಾಮಾಜಿಕ ಮಾಧ್ಯಮ ಹೊಂದಿದೆ ಎಂದು ನಾನು ನಂಬುತ್ತೇನೆ. ಮಹಿಳಾ ಸಬಲೀಕರಣವನ್ನು ಪ್ರಗತಿಪರ ಮತ್ತು ಪರಿಪೂರ್ಣತೆಯ ಕಡೆಗೆ ಕೊಂಡೊಯ್ಯುವ ಶಕ್ತಿ ಅದಕ್ಕಿದೆ.
ಮಿಸ್ ವರ್ಲ್ಡ್ ವೇದಿಕೆಯಲ್ಲಿ ನಿಂತು ಸಾಮಾಜಿಕ ಮಾಧ್ಯಮವನ್ನು ಅತ್ಯಂತ ಉಪಯುಕ್ತ ರೀತಿಯಲ್ಲಿ ಬದಲಾವಣೆ ತರುವ ಭಾಗವಾಗಿ ಬಳಸುವ ಅಂಶದ ಬಗ್ಗೆ ಬೆಳಕು ಚೆಲ್ಲಲು ಬಯಸುತ್ತೇನೆ' ಎಂದು ಉತ್ತರಿಸಿದರು.
ಸಿನಿ ಶೆಟ್ಟಿಯ ಈ ಪ್ರಭಾವಶಾಲಿ ಉತ್ತರ ಬಹಳಷ್ಟು ಜನರಿಗೆ ಸಂತಸ ತಂದಿತು. ಮುಂಬೈನಲ್ಲಿ ಹುಟ್ಟಿ ಬೆಳೆದ 22 ವರ್ಷ ವಯಸ್ಸಿನ ಭರತನಾಟ್ಯ ನೃತ್ಯಗಾರ್ತಿ ಶೆಟ್ಟಿ, 2022 ರಲ್ಲಿ ಮಿಸ್ ಇಂಡಿಯಾ ವರ್ಲ್ಡ್ ಕಿರೀಟವನ್ನು ಪಡೆದಿದ್ದಾರೆ.
ಮುಂಬೈನಲ್ಲಿ ಶನಿವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟೈನಾ ಪಿಸ್ಕೋವಾ ಅವರು ಮಿಸ್ ವರ್ಲ್ಡ್ 2024 ಪ್ರಶಸ್ತಿಯನ್ನು ಗೆದ್ದಿದ್ದಾರೆ.
Sini Shetty
ಭಾರತವು ಇದುವರೆಗೆ ಆರು ಬಾರಿ ಮಿಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದಿದೆ -- ರೀಟಾ ಫರಿಯಾ ಪೊವೆಲ್ (1966), ಐಶ್ವರ್ಯಾ ರೈ ಬಚ್ಚನ್ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ ಜೋನಾಸ್ (2000), ಮತ್ತು ಮಾನುಷಿ ಚಿಲ್ಲರ್ (2017) ಈ ಕಿರೀಟ ಪಡೆದವರು.