ಇಡ್ಲಿ-ವಡೆ ಸಾಂಬಾರ್. ಈ ಕಾಂಬಿನೇಷನ್ ನಾಲಗೆ ಚಪ್ಪರಿಸುವಂತೆ ಮಾಡುವ ಆರೋಗ್ಯ ಉಪಾಹಾರ. ದಕ್ಷಿಣಭಾರತದ ಈ ಫುಡ್ ಸದ್ಯ ವರ್ಲ್ಡ್ ಫೇಮಸ್. ಹಾಗೆಯೇ ಇಡ್ಲಿಗಾಗಿಯೇ ಒಂದು ವಿಶೇಷ ದಿನವಿದೆ ಅನ್ನೋದು ನಿಮ್ಗೆ ಗೊತ್ತಿದ್ಯಾ? ವಿಶ್ವ ಇಡ್ಲಿ ದಿನಾಚರಣೆಯ ವಿಶೇಷತೆ, ಮಹತ್ವದ ಬಗ್ಗೆ ಮಾಹಿತಿ ಇಲ್ಲಿದೆ.
ಬಹುಶಃ ತಿಂಡಿಯ ರಾಜ ಯಾವುದು ಎಂದರೆ ಇಡ್ಲಿ ಎಂದು ಸುಲಭವಾಗಿ ಹೇಳಬಹುದು. ನಗರ ಪ್ರದೇಶದಲ್ಲಿ ಅತಿ ಹೆಚ್ಚು ಜನರು ಬಳಸಬಹುದಾದ ಆಹಾರ ಪದಾರ್ಥವೆಂದರೆ ಅದು ಇಡ್ಲಿ-ವಡೆ-ಸಾಂಬಾರು-ಚಟ್ನಿ. ಈ ಕಾಂಬಿನೇಶನ್ ನೆನಪಿಸಿಕೊಂಡರೇ ಎಷ್ಟೋ ಜನರಿಗೆ ಹಸಿವೆ ಮತ್ತೆ ಭುಗಿಲೇಳುತ್ತದೆ. ಕರ್ನಾಟಕ, ತಮಿಳುನಾಡು, ಕೇರಳ ಹೀಗೆ ದಕ್ಷಿಣ ಭಾರತದ ಯಾವುದೇ ಮೂಲೆಗೆ ಹೋದರೂ ಸುಲಭವಾಗಿ ದೊರಕುತ್ತದೆ. ಮಾಮೂಲಿ ಇಡ್ಲಿ, ಉದುರುದುರು ಇಡ್ಲಿ, ಗಟ್ಟಿ ಇಡ್ಲಿ, ಬಟ್ಟಲಿನಲ್ಲಿ ಕೊಡುವ ಅಗಲ ಇಡ್ಲಿ, ಬಿಡದಿಯ ತಟ್ಟೆ ಇಡ್ಲಿ, ನವಿರಾದ ಮಲ್ಲಿಗೆ ಇಡ್ಲಿ, ರವೆ ಇಡ್ಲಿ, ರಾಗಿ ಇಡ್ಲಿ ಹೀಗೆ ಇಡ್ಲಿಯಲ್ಲಿ ಇರೋ ವೆರೈಟಿ ಒಂದೆರಡಲ್ಲ.
ದಕ್ಷಿಣ ಭಾರತದ (South Indian) ಸಾಂಪ್ರದಾಯಿಕ ತಿಂಡಿಯಾಗಿ ಅಡುಗೆ ಮನೆ (Kitchen)ಯೊಂದರಲ್ಲಿ ಹುಟ್ಟಿಬೆಳೆದ ಇಡ್ಲಿಗೆ ಇಂದು ದೇಶವ್ಯಾಪ್ತಿ ಜನಪ್ರಿಯತೆಯಿದೆ. ಮಾತ್ರವಲ್ಲ, ಇಂದು ಇದು ವಿಶ್ವಮಾನ್ಯ. ಸ್ಪೇನ್‌ನಂತಹ ಯುರೋಪ್‌ನ ದೂರದ ದೇಶದಲ್ಲಿಯೂ ಇಡ್ಲಿ ಸಿಗುತ್ತದೆ. ವಿದೇಶಕ್ಕೆ ಕಾಲಿಟ್ಟಪ್ರತಿಯೊಬ್ಬ ಭಾರತೀಯರೂ ಊಟಕ್ಕಾಗಿ ಅಲ್ಲಿನ ಹೋಟೆಲ್‌ನಲ್ಲಿ ಹುಡುಕಾಡುವಾಗ ಮೊದಲು ನೆನಪಾಗುವುದೇ ಇಡ್ಲಿ.
ಬೀದಿಬದಿ ಪಾನಿಪುರಿ ತಿಂದ ಕೊರಿಯನ್ ಯೂಟ್ಯೂಬರ್ ಏನು ಹೇಳಿದ ನೋಡಿ: ವೈರಲ್
ಹಳೆಗನ್ನಡ ಲೇಖಕ ಶಿವಕೋಟ್ಯಾಚಾರ್ಯನ ಬರಹಗಳಲ್ಲಿ ಇಡ್ಲಿಯ ಪ್ರಸ್ತಾಪ
ಇಂತಹ ಇಡ್ಲಿಗೆ ದೊಡ್ಡ ಇತಿಹಾಸವಿದೆ. ಹಳೆಗನ್ನಡ ಲೇಖಕ ಶಿವಕೋಟ್ಯಾಚಾರ್ಯನ (ಕ್ರಿ.ಶ. 920) ಬರಹಗಳಲ್ಲಿ ಇಡ್ಲಿಯ ಪ್ರಸ್ತಾಪವಿದೆ. ಆ ಕಾಲದಲ್ಲಿ ಇಡ್ಲಿಯನ್ನು ಮಾಡಲು ಉದ್ದಿನ ಬೇಳೆಯನ್ನು ಮಾತ್ರ ಉಪಯೋಗಿಸುತ್ತಿದ್ದರೆಂಬುದು ಕಂಡು ಬರುತ್ತದೆ. ಕ್ರಿ.ಶ. 1025 ರ ಒಂದು ದಾಖಲೆಯಂತೆ ಉದ್ದಿನ ಬೇಳೆಯನ್ನು ಮಜ್ಜಿಗೆಯಲ್ಲಿ ನೆನೆಸಿ, ರುಬ್ಬಿ, ಮೆಣಸು, ಕೊತ್ತಂಬರಿ, ಇಂಗು ಮೊದಲಾದವನ್ನು ಸೇರಿಸಿ ಇಡ್ಲಿ ಹಿಟ್ಟನ್ನು ಸಿದ್ಧ ಪಡಿಸುತ್ತಿದ್ದರು. ಮೂರನೆಯ ಸೋಮೇಶ್ವರ ತನ್ನ ಸಂಸ್ಕೃತ ಗ್ರಂಥವಾದ ಮಾನಸೋಲ್ಲಾಸದಲ್ಲಿ (ಕ್ರಿ.ಶ. 1130) ಇಡ್ಲಿ ತಯಾರಿಸುವ ವಿಧಾನವನ್ನು ವರ್ಣಿಸಿದ್ದಾನೆ. ಇಡ್ಲಿ ತಯಾರಿಕೆಯಲ್ಲಿ ಅಕ್ಕಿಯನ್ನು (Rice) ಉಪಯೋಗಿಸುವ ಪ್ರಸ್ತಾಪ 17ನೇ ಶತಮಾನದವರೆಗೆ ಯಾವ ದಾಖಲೆಗಳಲ್ಲೂ (Record) ಲಭ್ಯವಾಗಿಲ್ಲ ಎಂಬುದು ಕುತೂಹಲಕರ ಸಂಗತಿ.
20 ಮತ್ತು 21ನೇ ಶತಮಾನದಲ್ಲಿ ಪುರುಷ ಬಾಣಸಿಗರು ಮುನ್ನೆಲೆಗೆ ಬರುತ್ತಿದ್ದಂತೆ ಇದರಲ್ಲಿ ಹೆಚ್ಚು ಹೆಚ್ಚು ಪ್ರಯೋಗಗಳು ನಡೆದಿರಬೇಕು. ಹೀಗಾಗಿ ಇಡ್ಲಿಯಲ್ಲಿ ಇಂದು ತರೇಹವಾರಿಗಳಿವೆ. ಸಾವಿರಾರು ಬಗೆಗಳಿವೆ. ರೂಪ, ಬಣ್ಣ, ಗುಣಗಳಿಂದ ಭಿನ್ನ ರೂಪದಲ್ಲಿ ನಮ್ಮೆದುರಿನ ತಟ್ಟೆಯಲ್ಲಿ ಕುಳಿತಿವೆ. ಇಂತಹ ವಿಶ್ವಮಾನ್ಯ ಇಡ್ಲಿಗೂ ಒಂದು ದಿನ ಘೋಷಿಸಲ್ಪಟ್ಟಿದೆ. ಇಂದು ವಿಶ್ವ ಇಡ್ಲಿ ದಿನಾಚರಣೆ.
ಫುಡ್ಡೀಸ್‌ಗೆ ಗುಡ್‌ನ್ಯೂಸ್..ಬೆಂಗಳೂರಲ್ಲಿ ಆರಂಭವಾಗಲಿದೆ 2ನೇ ಫುಡ್ ಸ್ಟ್ರೀಟ್, ಎಲ್ಲಿ..ಯಾವಾಗ?
ಇಡ್ಲಿ ಅತ್ಯಂತ ಆರೋಗ್ಯಕರ ಆಹಾರ. ಇದರಿಂದ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳೆಲ್ಲವೂ ಸಿಗುತ್ತದೆ. ನೀವು ಬೆಳಗ್ಗೆ ಮೂರು ಇಡ್ಲಿ ತಿಂದರೆ ಅದರಲ್ಲಿ 230 ಕ್ಯಾಲೋರಿ ಶಕ್ತಿ, 50 ಗ್ರಾಂ ಕಾರ್ಬೋಹೈಡ್ರೇಟ್, ಏಳು ಗ್ರಾಂ ಪ್ರೋಟೀನ್, ಐದು ಗ್ರಾಂ ನಾರಿನ ಅಂಶ, ಮೂವತ್ತು ಗ್ರಾಂ ಕ್ಯಾಲ್ಸಿಯಂ ಸಿಗುತ್ತದೆ.
128 ಕೆ.ಜಿ. ತೂಕದ ಇಡ್ಲಿ ತಯಾರಿಸಿ ಗಿನ್ನೆಸ್ ದಾಖಲೆ ಮಾಡಿದ್ದ ವ್ಯಕ್ತಿ
2013ರಲ್ಲಿ ಕೊಯಂಬತ್ತೂರು ನಿವಾಸಿ ಇನಿಯುವನ್ 128 ಕೆ.ಜಿ. ತೂಕದ ಇಡ್ಲಿಯೊಂದನ್ನು ತಯಾರಿಸಿ ಗಿನ್ನೆಸ್ ದಾಖಲೆ ಮಾಡಿದ್ದರು. ಎರಡು ಸಾವಿರ ರೀತಿಯ ಇಡ್ಲಿಗಳನ್ನು ತಯಾರಿಸಿದ ಕೀರ್ತಿಗೆ ಭಾಜನರಾಗಿರುವ ಅವರಿಗೆ ಅಮೆರಿಕಾದ ವಿವಿಯೊಂದು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಇನಿಯುವನ್‌ಗೆ ಗೌರವ ಸೂಚಿಸುವ ಕಾರಣಕ್ಕಾಗಿ ಇವರು ಹುಟ್ಟಿದ ದಿನವಾದ ಮಾ.30 ರಂದು ವಿಶ್ವ ಇಡ್ಲಿ ದಿನವನ್ನಾಗಿ ಆಚರಿಸಲು ಘೋಷಿಸಲಾಯಿತು.