ಹಾಲು ಆರೋಗ್ಯಕ್ಕೆ ಒಳ್ಳೆಯದು. ಇದ್ರಲ್ಲಿ ಡೌಟ್ ಇಲ್ಲ. ಬರೀ ಹಾಲು ಕುಡಿಯೋಕೆ ಮಕ್ಕಳಿಗೆ ಹೋಗ್ಲಿ ದೊಡ್ಡವರಿಗೂ ಬೇಸರ. ಮಕ್ಕಳ ಹೊಟ್ಟೆಗೆ ಹಾಲು ಹೋದ್ರೆ ಸಾಕು ಎನ್ನುವ ಕಾರಣಕ್ಕೆ ಪಾಲಕರು ಅದ್ರ ಜೊತೆ ಒಂದಿಷ್ಟು ಬೇರೆ ಆಹಾರ ನೀಡ್ತಾರೆ. ಆದ್ರೆ ಕೆಲ ಆಹಾರ ಪೋಷಕಾಂಶ ನೀಡುವ ಬದಲು ಆರೋಗ್ಯ ಹಾಳು ಮಾಡುತ್ತೆ.
ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯೋದು ಒಳ್ಳೆಯದು. ಹಾಲಿನಲ್ಲಿ ಪ್ರೊಟೀನ್, ಕೊಬ್ಬು, ಕಾರ್ಬೋಹೈಡ್ರೇಟ್ ಮತ್ತು ಅನೇಕ ಜೀವಸತ್ವಗಳು ಹಾಗೂ ಖನಿಜಗಳಿವೆ. ಹಾಗಾಗಿಯೇ ಈ ಅಮೃತ ಸಮಾನವಾದ ಹಾಲನ್ನು ಸಂಪೂರ್ಣ ಆಹಾರ ಎಂದು ಕರೆಯಲಾಗುತ್ತದೆ. ಪ್ರತಿನಿತ್ಯ ಹಾಲನ್ನು ಕುಡಿಯುವುದರಿಂದ ದೇಹಕ್ಕೆ, ಚರ್ಮಕ್ಕೆ ಹಾಗೂ ಕೂದಲಿಗೆಒಳ್ಳೆಯ ಪೋಷಣೆ ಸಿಗುತ್ತದೆ.
ಹಾಲಿ (Milk) ನಲ್ಲಿ ಕ್ಯಾಲ್ಸಿಯಮ್, ಪ್ರೊಟೀನ್, ವಿಟಮಿನ್ ಡಿ ಮುಂತಾದ ಪೋಷಕಾಂಶ (Nutrient) ಗಳಿವೆ. ಇದರಿಂದ ಶರೀರದ ಜೊತೆಗೆ ಮಾನಸಿಕ ವಿಕಾಸ ಕೂಡ ಆಗುತ್ತೆ. ಆದ್ದರಿಂದಲೇ ಸಾಮಾನ್ಯವಾಗಿ ಎಲ್ಲರೂ ಪ್ರತಿದಿನ ಮಕ್ಕಳಿಗೆ ಹಾಲನ್ನು ಕೊಡುತ್ತಾರೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ದೇಹದ ಮೂಳೆಗಳನ್ನು ರಕ್ಷಿಸುತ್ತದೆ. ಹಾಲಿನಿಂದ ಹಲ್ಲು ಆರೋಗ್ಯ (Health) ವಾಗಿರುತ್ತದೆ. ನಾವು ಹೆಚ್ಚು ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಿ ಹೊಟ್ಟೆ ಉರಿಯ ಸಮಸ್ಯೆಯಿಂದ ಬಳಲುತ್ತಿದ್ದರೆ ಹಾಲನ್ನು ಕುಡಿಯಬೇಕು. ಅದರಿಂದ ಹೊಟ್ಟೆಉರಿಯ ಸಮಸ್ಯೆ ನಿವಾರಣೆಯಾಗುತ್ತದೆ. ಹಾಲಿನಲ್ಲಿರುವ ಲ್ಯಾಕ್ಟೋಸ್, ಯಕೃತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುವುದನ್ನು ತಡೆಗಟ್ಟುತ್ತದೆ. ಇಷ್ಟೆಲ್ಲ ಒಳ್ಳೆಯ ಅಂಶಗಳನ್ನು ಹೊಂದಿರುವ ಹಾಲನ್ನು ನಾವು ಸರಿಯಾದ ವಿಧಾನದಲ್ಲಿ ಮಕ್ಕಳಿಗೆ ನೀಡಿದರೆ ಅದರಿಂದ ಆರೋಗ್ಯಕರ ಬೆಳವಣಿಗೆಯಾಗುತ್ತದೆ. ಇಲ್ಲವಾದಲ್ಲಿ ಕೆಲವು ವಿರುದ್ಧ ಆಹಾರ (Food) ಗಳಿಂದ ಆರೋಗ್ಯ ಹದಗೆಡುತ್ತದೆ. ಹಾಗೆಯೇ ಹಾಲಿನ ಜೊತೆ ಕೆಲವು ಆಹಾರಗಳನ್ನು ಸೇವಿಸುವುದು ಶರೀರಕ್ಕೆ ಹಾನಿಕರವಾಗಿದೆ. ಮಕ್ಕಳು ಹಾಲು ಕುಡಿಯುವುದು ಎಷ್ಟು ಮುಖ್ಯವೋ ಹಾಗೆಯೇ ಹಾಲಿನ ಜೊತೆ ನಾವು ಏನು ನೀಡ್ತೇವೆ ಎಂಬುದು ಕೂಡ ಮುಖ್ಯ.
Healthy Food: ಇಷ್ಟ ಅಂತಾ ಬದನೆಕಾಯಿ ಬೇಕಾಬಿಟ್ಟಿ ತಿನ್ಬೇಡಿ
ಈ ಆಹಾರದ ಜೊತೆ ಹಾಲನ್ನು ನೀಡ್ಬೇಡಿ :
ಹುಳಿ ಹಣ್ಣಿನ ಜೊತೆ ಹಾಲು : ಮಕ್ಕಳಿಗೆ ಹಾಲು ಕೊಡುವಾಗ ಕಿತ್ತಳೆ, ನಿಂಬು ಮುಂತಾದ ಸಿಟ್ರಸ್ ಹಣ್ಣುಗಳನ್ನು ನೀಡಬಾರದು. ಏಕೆಂದರೆ ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಎಸಿಡ್ ಇರುವುದರಿಂದ ಹಾಲಿನಲ್ಲಿರುವ ಪ್ರೊಟೀನ್ ಹೆಪ್ಪುಗಟ್ಟುತ್ತದೆ. ಹಾಗೆ ಹೆಪ್ಪುಗಟ್ಟಿದಾಗ ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಾಲು ಮತ್ತು ಹುಳಿಯ ಸಂಯೋಜನೆಯಿಂದ ಗ್ಯಾಸ್, ಹೊಟ್ಟೆ ಉಬ್ಬರ, ಕಿಬ್ಬೊಟ್ಟೆಯ ನೋವು ಮುಂತಾದ ಜೀರ್ಣಸಂಬಂಧಿ ತೊಂದರೆಗಳು ತಲೆದೋರಬಹುದು.
ಹಾಲಿನ ಜೊತೆ ಉಪ್ಪಿನಂಶ ಹೊಂದಿರುವ ಸ್ನ್ಯಾಕ್ಸ್ : ಮಕ್ಕಳಿಗೆ ಹಾಲಿನ ಜೊತೆ ತಿನ್ನಲು ಏನಾದರೂ ಬೇಕೇ ಬೇಕು. ಚಿಪ್ಸ್, ಚಾಟ್ಸ್ ಮುಂತಾದವುಗಳಿದ್ದರೆ ಮಾತ್ರ ಮಕ್ಕಳು ಹಾಲನ್ನು ಕುಡಿಯುತ್ತಾರೆ. ಉಪ್ಪಿನಂಶ ಹೊಂದಿರುವ ಸ್ನ್ಯಾಕ್ಸ್ ನಿಂದ ಡಿಹೈಡ್ರೇಶನ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ಹಾಲು ಶರೀರದಲ್ಲಿ ಜೀರ್ಣವಾಗುವುದಿಲ್ಲ. ಇದರಿಂದ ಜಠರಗರುಳಿನ ತೊಂದರೆಯಾಗುತ್ತದೆ.
Health Tips: ಒಂದೇ ಲೋಟದಲ್ಲಿ ಮತ್ತೆ ಮತ್ತೆ ನೀರು ಕುಡಿಯೋದು ಒಳ್ಳೇದಲ್ಲವೇಕೆ?
ಕಲ್ಲಂಗಡಿ ಹಣ್ಣಿನ ಜೊತೆ ಹಾಲು : ಹಾಲಿನಲ್ಲಿ ಪ್ರೊಟೀನ್ ಮತ್ತು ಫ್ಯಾಟ್ ಪ್ರಮಾಣವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಎಸಿಡ್ ಇರುವುದರಿಂದ ಇದು ಹಾಲು ಒಡೆಯುವಂತೆ ಮಾಡುತ್ತದೆ ಅಂದರೆ ಹಾಲು ಮೊಸರಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಮತ್ತು ಶಾರೀರಿಕ ಸಮಸ್ಯೆಗಳು ಉದ್ಭವವಾಗುತ್ತದೆ.
ಹಾಲು (Milk) ಮತ್ತು ದ್ರಾಕ್ಷಿ (Grapes) : ನೀವು ಮಕ್ಕಳಿಗೆ ಹಾಲು ಮತ್ತು ದ್ರಾಕ್ಷಿಯನ್ನು ಒಂದೇ ಸಮಯದಲ್ಲಿ ನೀಡುತ್ತಿದ್ದರೆ ಅದನ್ನು ಇಂದೇ ನಿಲ್ಲಿಸಿಬಿಡಿ. ಏಕೆಂದರೆ ಅದರಿಂದ ಜಠರಗರುಳಿನ ಸಮಸ್ಯೆ, ಹೊಟ್ಟೆ ನೋವು ಮತ್ತು ಅತಿಸಾರದ ಉಂಟಾಗಬಹುದು.
ಎಲ್ಲ ಆಹಾರಗಳಿಗೂ ಅದಕ್ಕೆ ಪೂರಕ ಮತ್ತು ವಿರುದ್ಧ ಆಹಾರಗಳು ಇರುತ್ತವೆ. ಕೆಲವರಿಗೆ ರಾತ್ರಿಯ ಸಮಯದಲ್ಲಿ ಹಾಲಿನ ಸೇವನೆ ಮಾಡುವುದರಿಂದ ಕಫದ ಸಮಸ್ಯೆ ಉದ್ಭವವಾಗುತ್ತದೆ. ಇಂತಹ ಸಮಸ್ಯೆಗಳು ಕಂಡು ಬಂದಾಗ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಆಹಾರದ ಪ್ರಮಾಣ ಹಾಗೂ ಸೇವನೆಯ ರೀತಿ, ವಿಧಾನಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಮುಂದುವರೆದರೆ ಅದರಿಂದ ಆರೋಗ್ಯಕ್ಕೆ ಉತ್ತಮ ಪ್ರಯೋಜನವಾಗಲಿದೆ. ಹಿಂದಿನವರು ಹೇಳಿದಂತೆ ಆಕಳ ಹಾಲನು ಕುಡಿಯೋಣ ಆನೆಯ ಕಸುವನು ಪಡೆಯೋಣ ಎಂಬ ಮಾತು ಆಗ ನಿಜವಾಗುತ್ತದೆ.